ಕೋಲಾರ: ಒಂದು ಕಾಲದಲ್ಲಿ ಬೇಕಾದಷ್ಟು ಚಿನ್ನವನ್ನು ಕೊಟ್ಟ ಚಿನ್ನದ ಗಣಿಗೆ 23 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ನಷ್ಟದ ನೆಪವೊಡ್ಡಿ ಬೀಗ ಹಾಕಿತು. ಆದರೆ ಇಂದಿಗೂ ಚಿನ್ನದ ಗಣಿಯಲ್ಲಿ ಕಳ್ಳತನ ಮಾತ್ರ ನಿಂತಿಲ್ಲ. ಗಣಿಯಲ್ಲಿ ಕಳ್ಳರ ಕಾಟ ತಪ್ಪಿಲ್ಲ. ಚಿನ್ನದ ಗಣಿಗೆ ಬೀಗ ಹಾಕಿ ಮಾರ್ಚ್-1 ಕ್ಕೆ 23 ವರ್ಷಗಳು ತುಂಬುತ್ತದೆ. ಈ ವೇಳೆ ಚಿನ್ನದ ಗಣಿಯಲ್ಲಿ ಇಂದಿನ ಪರಿಸ್ಥಿತಿ ಹೇಗಿದೆ ಅನ್ನೋದನ್ನು ಕಣ್ಣಿಗೆ ಕಟ್ಟಿಕೊಡಬಲ್ಲ ಗಣಿಕಳ್ಳರು ಗಣಿಯಾಳಕ್ಕೆ ಇಳಿದು ಕಳ್ಳತನ ಮಾಡುತ್ತಿರುವ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ.
ಕೆಜಿಎಫ್ ಚಿನ್ನದ ಗಣಿಯ ಇತಿಹಾಸ ಏನು?
ವಿಶ್ವ ಭೂಪಟದಲ್ಲಿ ದೇಶದ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದ ಚಿನ್ನದ ನೆಲ ಕೋಲಾರ ಜಿಲ್ಲೆಯ ಕೆಜಿಎಫ್. ಈ ನೆಲದಲ್ಲಿ ಎರಡು ಶತಮಾನಗಳ ಕಾಲ ಚಿನ್ನದ ಬೆಳೆಯನ್ನ ಬೆಳೆಯಲಾಗಿತ್ತು! 1880 ರಲ್ಲಿ ಜಾನ್ ಟೇಲರ್ ಎಂಬ ಬ್ರಿಟಿಷ್ ಅಧಿಕಾರಿಯಿಂದ ಆರಂಭವಾದ ಚಿನ್ನದ ಗಣಿ, ಮೈಸೂರು ಒಡೆಯರ್, ನಂತರ ಕೇಂದ್ರ ಸರ್ಕಾರದ ಒಡೆತನದಲ್ಲಿ ನೂರಾರು ವರ್ಷಗಳ ಕಾಲ ತನ್ನ ಒಡಲಿನಿಂದ ಸಾವಿರಾರು ಟನ್ ಗಟ್ಟಲೆ ಚಿನ್ನವನ್ನು ಬಗೆದು ಕೊಟ್ಟಿತ್ತು. ವಿಶ್ವಭೂಪಟದಲ್ಲಿ ಕೋಲಾರ ಮತ್ತು ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದು ಅಲ್ಲದೆ ಅಂದಿಗೆ ಸುಮಾರು ಮೂವತೈದು ಸಾವಿರ ಕಾರ್ಮಿಕರ ಕುಟುಂಬಗಳ ಜೀವನಕ್ಕೆ ಆಸರೆಯಾಗಿತ್ತು. ಚಿನ್ನದ ಗಣಿ ಇರುವ ಉದ್ದೇಶದಿಂದಲೇ ಆಗಿನ ಕಾಲದಲ್ಲೇ ಕರ್ನಾಟಕದಲ್ಲಿ ಮೊದಲ ಬಾರಿಗೆ ಶಿವನಸಮುದ್ರದಿಂದ ವಿದ್ಯುತ್ ಉತ್ಪಾದನೆ ಮಾಡಿ ಮೊದಲು ಚಿನ್ನದ ಗಣಿ ಪ್ರದೇಶಕ್ಕೆ ವಿದ್ಯುತ್ ನೀಡಲಾಗಿತ್ತು. ಇಂದಿಗೂ ಕರ್ನಾಟಕದಲ್ಲಿ ಮೊದಲು ವಿದ್ಯುತ್ ಪಡೆದ ನಗರ, ಮೊದಲು ರೈಲ್ವೆ ಸಂಪರ್ಕ ಪಡೆದುಕೊಂಡ ನಗರ ಎಂಬ ಹೆಗ್ಗಳಿಕೆ ಕೋಲಾರಕ್ಕಿದೆ.
ಕೆಜಿಎಫ್ ಚಿನ್ನದ ಗಣಿಗೆ ಬೀಗ ಬಿದ್ದಿದ್ದೇಕೆ?
ಸ್ವಾತಂತ್ರ್ಯಾನಂತರ 1956 ರಲ್ಲಿ ಬ್ರಿಟಿಷ್ ಕಂಪನಿಯಿಂದ ಚಿನ್ನದ ಗಣಿ ಕೇಂದ್ರ ಸರ್ಕಾರದ ಒಡೆತಕ್ಕೆ ಬಂದಿತ್ತು. ಆಗಿನ ಕೇಂದ್ರ ಸರ್ಕಾರಕ್ಕೆ ಚಿನ್ನದ ಗಣಿ ಒಳ್ಳೆಯ ಆದಾಯದ ಮೂಲವಾಗಿತ್ತು. ಆದರೆ ನಂತರ ಬಂದ ಸರ್ಕಾರಗಳ ನಿರ್ಲ್ಯಕ್ಷ, ಕೆಲವು ಅಧಿಕಾರಿಗಳ ದುರಾಡಳಿತ, ಭ್ರಷ್ಟಾಚಾರ, ರಾಜಕೀಯ ಮುಂತಾದ ಕಾರಣಗಳಿಂದ 1980 ರಿಂದ ಈಚೆಗೆ ಕೋಲಾರ ಚಿನ್ನದ ಗಣಿ ಅವನತಿಯ ಹಾದಿಯನ್ನು ತುಳಿಯುತ್ತಾ ಬಂದಿತ್ತು. ಕ್ರಮೇಣವಾಗಿ ಚಿನ್ನದ ಗಣಿಗೆ ಉಂಟಾದ ನಷ್ಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಲ್ಲಿನ ಕಾರ್ಮಿಕರಿಗೆ ಸ್ವಯಂ ನಿವೃತ್ತಿ ನೀಡಲು ಆರಂಭಿಸಿತು.
ಸುಳಿವೇ ಇಲ್ಲದೆ, 2001 ಮಾರ್ಚ್-1 ರಂದು ಗಣಿಗೆ ನಷ್ಟದ ನೆಪವೊಡ್ಡಿ ಬೀಗ ಹಾಕಲಾಯಿತು. ಪರಿಣಾಮ ಅಂದಿಗೆ 3,500 ಜನ ಕಾರ್ಮಿಕರು ಬೀದಿಪಾಲಾದರು. ನೂರಾರು ವರ್ಷಗಳ ಕಾಲ ವೈಭವದಿಂದ ಮೆರೆದ ಕೆಜಿಎಫ್ನಲ್ಲಿ ಬಡತನ, ನಿರುದ್ಯೋಗ, ವಸತಿ ಸಮಸ್ಯೆ, ಆರಂಭವಾದವು. ಅದ್ಬುತ ಚಿನ್ನದ ಗಣಿಯನ್ನು ಹೊಂದಿದ್ದ ಶ್ರೀಮಂತ ಯಂತ್ರೋಪಕರಣಗಳನ್ನು ಹೊಂದಿದ್ದ ಚಿನ್ನದ ನಾಡು ಲೂಟಿಕೋರರ ದಾಳಿಗೆ ಸಿಲುಕಿ ಅದು ಅಸ್ಥಿಪಂಜರದಂತಾಗಿ ಹೋಯಿತು. ಆದರೆ ಗಣಿಗೆ ಬೀಗ ಹಾಕಿ 23 ವರ್ಷಗಳೇ ಕಳೆದರೂ ಚಿನ್ನದ ಗಣಿಯಲ್ಲಿನ ಕಳ್ಳನ ಲೂಟಿ ಮಾತ್ರ ತಪ್ಪಿಲ್ಲ.
ಚಿನ್ನದ ಗಣಿಯಾಳದಲ್ಲಿ ನಡೆಯುವ ಕಳ್ಳತನದ ಲೈವ್ ವಿಡಿಯೋಗಳಿವೆ
ಕೆಜಿಎಫ್ ಚಿನ್ನದ ಗಣಿಯ ನೂರಾರು ಅಡಿ ಆಳಕ್ಕಿಳಿದು ಕಳ್ಳತನ ಮಾಡುತ್ತಿರುವ ಕಳ್ಳರ ಗುಂಪು, ಒಂದು ಕ್ಷಣ ಯಾಮಾರಿದ್ರು ದೇಹದ ಒಂದೇ ಒಂದು ಅಂಗವೂ ಸಿಗದಷ್ಟು ಆಳದ ಗಣಿ, ಕಗ್ಗತ್ತಲಲ್ಲೂ ಟಾರ್ಚ್ ಹಿಡಿದು ಚಿನ್ನದ ರೇಖೆಗಳನ್ನು ಹುಡುಕಿ ಅಗೆಯುತ್ತಿರುವ ಗಣಿ ಕಳ್ಳರ ತಂಡ, ಇಂಥಾದೊಂದು ದೃಶ್ಯಗಳು ಕೋಲಾರದ ಕೆಜಿಎಫ್ ಚಿನ್ನದ ಗಣಿಯಲ್ಲಿ ನಮಗೆ ಕಂಡು ಬರುತ್ತವೆ. ಗಣಿಗೆ ಬೀಗ ಬಿದ್ದು 23 ವರ್ಷಗಳೇ ಕಳೆದಿವೆ ಆದರೂ ಚಿನ್ನದ ಗಣಿಯ ಕಳ್ಳತನ ಮಾತ್ರ ಇಂದಿಗೂ ನಿಂತಿಲ್ಲ.
ಇತ್ತೀಚೆಗೆ ಕೆಜಿಎಫ್ ಚಿನ್ನದ ಗಣಿಯ ನೂರಾರು ಅಡಿ ಆಳಕ್ಕೆ ಇಳಿದು ಚಿನ್ನದ ಅದಿರನ್ನು ಕಳ್ಳತನ ಮಾಡುತ್ತಿರುವ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿದ್ದರು. ಗಣಿ ಕಳ್ಳರು ತಮ್ಮ ಜೀವದ ಹಂಗನ್ನು ತೊರೆದು ಗಣಿಯಾಳಕ್ಕಿಳಿದು ಕಳ್ಳತನ ಮಾಡುವ ವಿಡಿಯೋಗಳು ಲೀಕ್ ಆಗಿದ್ದವು. ಸದ್ಯ ಆ ವಿಡಿಯೋಗಳು ಟಿವಿ9ಗೆ ಲಭ್ಯವಾಗಿದೆ. ಇನ್ನು ಈ ಗಣಿಯಾಳಕ್ಕಿಳಿದು ಭಯಾನಕ ಕಳ್ಳತನ ಮಾಡುವ ವಿಡಿಯೋಗಳನ್ನು ನೋಡಿದ ಕೋಲಾರ ಎಸ್ಪಿ ದೇವರಾಜ್ ಕೂಡಾ ಒಂದು ಕ್ಷಣ ಚಕಿತರಾಗಿದ್ದರು. ಚಿನ್ನದ ಗಣಿಯ ರಕ್ಷಣೆಯ ಜವಾಬ್ದಾರಿ ಯನ್ನು ಬಿಜಿಎಂಎಲ್ ಖಾಸಗಿ ಏಜೆನ್ಸಿಗೆ ನೀಡಿದೆ. ಹಾಗಾಗಿ ಚಿನ್ನದ ಗಣಿ ಆಡಳಿತ ಮಂಡಳಿ ಜೊತೆಗೆ ಮಾತನಾಡಿ ಈ ಸಂಬಂಧ ಅವರು ದೂರು ಕೊಟ್ಟರೆ ಅದರ ಅಧಾರದ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ದೇವರಾಜ್ ಹೇಳಿದ್ದರು.
ಚಿನ್ನದ ಗಣಿ ಆಡಳಿತ ಮಂಡಳಿ ಹಾಗೂ ಭದ್ರತಾ ಸಿಬ್ಬಂದಿ ಕೈವಾಡ?!
ಕಳೆದ ಎರಡು ದಶಕಗಳಿಂದ ಕೆಜಿಎಫ್ ಚಿನ್ನದ ಗಣಿಯಲ್ಲಿ ಕಳ್ಳತನ ನಿರಂತವಾಗಿ ನಡೆಯುತ್ತಲೇ ಇದೆ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಯಂತ್ರೋಪಕರಣಗಳು ಸೇರಿದಂತೆ ಗಣಿಯಾಳದಲ್ಲಿ ಚಿನ್ನದ ಅದಿರುಗಳನ್ನು ಕಳ್ಳತನ ಮಾಡುವ ಗ್ಯಾಂಗ್ಗಳು ಕೆಜಿಎಫ್ ನಲ್ಲಿವೆ. ಅದರೆ ದಿನ ಕಳೆದಂತೆ ಗಣಿಯಾಳದಲ್ಲಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ಗಳನ್ನು ಪೊಲೀಸ್ ಇಲಾಖೆ ಮಟ್ಟಹಾಕುತ್ತಿದ್ದರು. ಆದರೆ ಕೇಂದ್ರ ಸರ್ಕಾರ ಚಿನ್ನದ ಗಣಿಯ ಭದ್ರತೆಯ ಹೊಣೆಯನ್ನು ಖಾಸಗಿ ಏಜೆನ್ಸಿಗೆ ನೀಡದ ನಂತರ ಪೊಲೀಸ್ ಇಲಾಖೆಯವರು ಗಣಿ ಪ್ರದೇಶದ ಹೊರಗೆ ಹಾಗೂ ದೂರು ಬಂದ ಪ್ರಕರಣಗಳನ್ನು ಮಾತ್ರ ತನಿಖೆ ಮಾಡುತ್ತಿದ್ದಾರೆ. ಹಾಗಾಗಿ ಈ ರೀತಿ ನಿರ್ಭಯವಾಗಿ ಗಣಿಯ ಆಳಕ್ಕೆ ಇಳಿದು ಕಳ್ಳತನ ಮಾಡುತ್ತಿದ್ದಾರೆ. ಅಂದರೆ ಈ ಕಳ್ಳತನದ ಹಿಂದೆ ಚಿನ್ನದ ಗಣಿ ಭದ್ರತಾ ಸಿಬ್ಬಂದಿ ಹಾಗೂ ಆಡಳಿತ ಅಧಿಕಾರಿಗಳ ಕೈವಾಡ ಇದೆ ಅನ್ನೋದು ಸ್ಥಳೀಯರ ಆರೋಪ.
ಕೆಜಿಎಫ್ ಎಸ್ಪಿ ಕಚೇರಿ ಸ್ಥಳಾಂತರ ನಂತರ ಶುರುವಾಯ್ತು ಕಳ್ಳತನ
ಇಷ್ಟು ದಿನ ಕೆಜಿಎಫ್ ನ್ನು ಪ್ರತ್ಯೇಕ ಪೊಲೀಸ್ ಜಿಲ್ಲೆ ಮಾಡಿ ಅಲ್ಲಿ ಪ್ರತ್ಯೇಕ ಎಸ್ಪಿ ನೇಮಕ ಮಾಡಲಾಗಿತ್ತು. ಆದರೆ ಕಳೆದ ಆರು ತಿಂಗಳಿಂದ ಎಸ್ಪಿ ಕಚೇರಿಯ ಸ್ಥಳಾಂತರ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಇದು ಕೂಡಾ ಹಳೆಯ ಗಣಿ ಕಳ್ಳರ ಗ್ಯಾಂಗ್ ಮತ್ತೆ ಕಾರ್ಯ ಪ್ರವೃತ್ತರಾಗಲು ಕಾರಣ ಎನ್ನಲಾಗುತ್ತಿದೆ. ಒಟ್ಟಾರೆ ಚಿನ್ನದ ಗಣಿಗೆ ಬೀಗ ಹಾಕಿ ಎರಡು ದಶಕಗಳು ಕಳೆದಿವೆ. ಆದರೆ ಗಣಿಯಾಳದಲ್ಲಿನ ಚಿನ್ನಕ್ಕೆ ತುಕ್ಕು ಹಿಡಿದಿಲ್ಲ. ಅದು ಈ ಕಳ್ಳಕಾಕರಿಗೆ ಅರ್ಥವಾಗುತ್ತಿದೆ. ಆದರೆ ಅರ್ಥವಾಗಬೇಕಾದ ಸರ್ಕಾರಗಳಿಗೆ ಅರ್ಥವಾಗದೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಚಿನ್ನ ಕಳ್ಳಕಾಕರ ಪಾಲಾಗುತ್ತಿದೆ ಅನ್ನೋದು ದುರಂತ.
ವಿಶೇಷ ವರದಿ: ರಾಜೇಂದ್ರ ಸಿಂಹ, ಟಿವಿ9, ಕೋಲಾರ
ಇದನ್ನೂ ಓದಿ: ಕೋಲಾರದಲ್ಲಿ ಮರಗಳನ್ನು ಕಡಿದು ಗಿಳಿ ಮರಿಗಳನ್ನ ಅನಾಥ ಮಾಡಿದ ಬಿಜಿಎಂಎಲ್ ಅಧಿಕಾರಿಗಳು! ಪರಿಸರ ಪ್ರೇಮಿಗಳು ಆಕ್ರೋಶ
ಇದನ್ನೂ ಓದಿ: ಕೋಲಾರದ ಕಾಲೇಜುಗಳಿಗೆ ಮತ್ತೆ ಸಿಗಲಿದೆ ಜೀವಕಳೆ, ಕಾಲೇಜುಗಳ ಅಭಿವೃದ್ಧಿಗೆ ₹18.7 ಕೋಟಿ ಬಿಡುಗಡೆ