ಕೋಲಾರ: ನಾಪತ್ತೆಯಾಗಿದ್ದ ಶಿಕ್ಷಕಿ ಕೆರೆಯಲ್ಲಿ ಶವವಾಗಿ ಪತ್ತೆ; ಗಣತಿ ಒತ್ತಡದಿಂದ ಆತ್ಮಹತ್ಯೆ ಶಂಕೆ?

ಕೋಲಾರದಲ್ಲಿ ಜಾತಿ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ನಿಗೂಢವಾಗಿ ನಾಪತ್ತೆಯಾಗಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಮೀಕ್ಷಾ ಕಾರ್ಯದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಶಿಕ್ಷಕಿ ಆತ್ಮಹತ್ಯೆ ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ.

ಕೋಲಾರ: ನಾಪತ್ತೆಯಾಗಿದ್ದ ಶಿಕ್ಷಕಿ ಕೆರೆಯಲ್ಲಿ ಶವವಾಗಿ ಪತ್ತೆ; ಗಣತಿ ಒತ್ತಡದಿಂದ ಆತ್ಮಹತ್ಯೆ ಶಂಕೆ?
ಮೃತ ಶಿಕ್ಷಕಿ ಅಖ್ತರಿ ಬೇಗಂ
Updated By: ಗಂಗಾಧರ​ ಬ. ಸಾಬೋಜಿ

Updated on: Oct 16, 2025 | 12:14 PM

ಕೋಲಾರ, ಅಕ್ಟೋಬರ್​ 16: ರಾಜ್ಯ ಸರ್ಕಾರದಿಂದ ನಡೆಸಲಾಗುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ (caste survey) ತೆರಳಿದ್ದ ಶಿಕ್ಷಕಿ ನಿಗೂಢವಾಗಿ ನಾಪತ್ತೆಯಾಗಿದ್ದು, ಬಳಿಕ ಕೆರೆಯಲ್ಲಿ ಶವವಾಗಿ (death) ಪತ್ತೆ ಆದ ಘಟನೆ ಜಿಲ್ಲೆಯ ಕೆಜಿಎಫ್ ತಾಲೂಕಿನ ಐಪಲ್ಲಿ ಗ್ರಾಮದ ಬಳಿ ನಡೆದಿದೆ. ಅಖ್ತರಿ ಬೇಗಂ (53) ಮೃತ ಶಿಕ್ಷಕಿ. ಗಣತಿ ಕಾರ್ಯ ಒತ್ತಡದಿಂದ ಬೇಸತ್ತು ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಕೋಲಾರ ನಗರದ ಮಹಾಲಕ್ಷ್ಮಿ ಬಡಾವಣೆಯ ನಿವಾಸಿಯಾಗಿದ್ದ ಶಿಕ್ಷಕಿ ಬೇಗಂ ಅವರಿಗೆ ಕೆಬಿ ಹೊಸಹಳ್ಳಿ ಗ್ರಾಮದ ಶಿಕ್ಷಕಿಗೆ ನರಸಾಪುರ ಗ್ರಾಮದಲ್ಲಿ ಗಣತಿ ಕಾರ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಜಾತಿ ಗಣತಿ ಕಾರ್ಯದ ಒತ್ತಡದಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ಕಳೆದ ಮೂರು ದಿನಗಳಿಂದ ಗಣತಿ ಕಾರ್ಯಕ್ಕೂ ಹೋಗಿರಲಿಲ್ಲ. ಇತ್ತ ಮನೆಯಲ್ಲಿ ತನ್ನ ಮೊಬೈಲ್​ ಫೋನ್​​ ಹಾಗೂ ಮೈಮೇಲಿದ್ದ ಒಡವೆಗಳನ್ನು ಬಿಚ್ಚಿಟ್ಟಿದ್ದರು. ತನ್ನ ಐಡಿ ಕಾರ್ಡ್​ ಮಾತ್ರ ತೆಗೆದುಕೊಂಡು ಯಾರಿಗೂ ಹೇಳದೆ ಸೋಮವಾರ ಬೆಳಿಗ್ಗೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು.

ಇದನ್ನೂ ಓದಿ: ಬೆಂಗಳೂರು: ಜಾತಿ ಸಮೀಕ್ಷೆಗೆಂದು ಹೋದ ಶಿಕ್ಷಕಿಗೆ ಹೃದಯಾಘಾತ; ಶಿಕ್ಷಕರಿಗೆ ಗಣತಿಯ ಹೆಸರಿನಲ್ಲಿ ಒತ್ತಡದ ಶಿಕ್ಷೆ

ಶಿಕ್ಷಕಿ ಕುಟುಂಬಸ್ಥರು ಎಷ್ಟೇ ಹುಡುಕಾಡಿದರು ಪತ್ತೆಯಾಗದ ಹಿನ್ನೆಲೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇನ್ನು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಶಿಕ್ಷಕಿ ಅಖ್ತರಿ ಬೇಗಂ ತಾನು ಮನೆ ಬಿಡುವ ಮೊದಲು ಕೆಜಿಎಫ್​ ತಾಲೂಕಿನ ಬೇತಮಂಗಲದ ತನ್ನ ಸ್ನೇಹಿತೆ ಗೀತಾ ಎಂಬುವರಿಗೆ ಕರೆ ಮಾಡಿ ಬೇತಮಂಗಲ ಕೆರೆ ತುಂಬಿದೆಯಾ ಎಂದು ಕೇಳಿದ್ದರು. ಸ್ನೇಹಿತರ ಕುಟುಂಬವೊಂದು ಬರುವರಿದ್ದಾರೆ ಅದಕ್ಕಾಗಿ ಕೇಳಿದ್ದರು ಎನ್ನಲಾಗಿದೆ.

ಈ ಜಾಡು ಹಿಡಿದು ಪೊಲೀಸರು ಹುಡುಕಾಟಕ್ಕೆ ಮುಂದಾಗಿದ್ದರು. ಕೋಲಾರ ನಗರ ಬಸ್ ನಿಲ್ದಾಣದ ಸಿಸಿಟಿವಿ ಪರೀಕ್ಷೆ ನಡೆಸಿದಾಗ, ಅಲ್ಲಿಂದ ಬೇತಮಂಗಲ ಕಡೆಗೆ ಹೋಗುವ ಬಸ್​ ಹತ್ತಿ ಹೋಗಿರುವುದು ಖಚಿತವಾಗಿತ್ತು. ಹೀಗಾಗಿ ನಿನ್ನೆ ಬೇತಮಂಗಲ ಹಾಗೂ ಸುತ್ತಮುತ್ತಲ ಕೆರೆಗಳ ಬಳಿ ಪೊಲೀಸರು ಹುಡುಕಾಟ ನಡೆಸಿದ್ದು, ಈ ವೇಳೆ ನಿನ್ನೆ ಮಧ್ಯಾಹ್ನ ಸುಮಾರಿಗೆ ಶಿಕ್ಷಕಿಯ ಶವ ಕೆಜಿಎಫ್ ತಾಲೂಕಿನ ಐಪಲ್ಲಿ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿತ್ತು.

ಸ್ನೇಹಿತೆಯವರು ಹೇಳಿದ್ದಿಷ್ಟು

ಅಖ್ತರಿ ಬೇಗಂ ಸಾವಿಗೆ ಸಹೋದ್ಯೋಗಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಗಣತಿ ಕಾರ್ಯದ ಒತ್ತಡ ಹೆಚ್ಚಾಗಿದೆ, ಆದರೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟಲ್ಲ, ಶಿಕ್ಷಕಿ ಅಖ್ತರಿ ಬೇಗಂ ಸಹ ಹಟವಾದಿ, ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವರಲ್ಲ. ಆತ್ಮಹತ್ಯೆಗೆ ಬೇರೆಯ ಕಾರಣ ಇರಬಹುದು ಎಂದು ಸ್ನೇಹಿತೆಯರಾದ ಸವಿತಾ ಮತ್ತು ಜಯಶ್ರೀ ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ಜಾತಿಗಣತಿ ಕಾರ್ಯ ವೇಳೆ ಇದುವರೆಗೂ ಮೂವರು ಶಿಕ್ಷಕರು ಸಾವು, ಪರಿಹಾರ ಘೋಷಿಸಿದ ಸಿಎಂ

ಗಣತಿ ಕಾರ್ಯ ಆರಂಭವಾದಾಗಿನಿಂದ ಅಖ್ತರಿ ಬೇಗಂ ಅವರಿಗೆ ಒಟ್ಟು 132 ಮನೆಗಳ ಜವಾಬ್ದಾರಿ ನೀಡಲಾಗಿತ್ತು. ಅವರು ಈಗಾಗಲೇ ಶೇ 60 ರಿಂದ 70 ರಷ್ಟು ಅಂದರೆ ಸುಮಾರು 85 ಮನೆಯ ಗಣತಿ ಕಾರ್ಯ ಮುಗಿಸಿದ್ದಾರೆ. ಇನ್ನು ಇವರ ಮೇಲ್ವಿಚಾರಕರಾಗಿದ್ದ ಪ್ರಕಾಶ್​ ಎಂಬುವರ ಬಳಿ ಸಹ ಅವರು ಯಾವುದೇ ಮಾನಸಿಕ ಒತ್ತಡ ಅಥವಾ ಕೆಲಸದ ಒತ್ತಡದ ಬಗ್ಗೆ ಹೇಳಿಕೊಂಡಿಲ್ಲ. ಆದರೆ ಕಳೆದ ಮೂರು ದಿನಗಳಿಂದ ಗಣತಿ ಕಾರ್ಯಕ್ಕೆ ಗೈರಾಗಿದ್ದರು. ಸೋಮವಾರ ಕೂಡ ಬೇಗಂ ಶಾಲೆಗೆ ಹೋಗುವುದಾಗಿ ಹೇಳಿ ತನ್ನ ಮಗನಿಂದ ಬಸ್ ನಿಲ್ದಾಣಕ್ಕೆ ಡ್ರಾಪ್​ ಪಡೆದುಕೊಂಡಿದ್ದಾರೆ. ಬಳಿಕ ನಾಪತ್ತೆಯಾಗಿದ್ದ ಅವರು ಶವವಾಗಿ ಪತ್ತೆ ಆಗಿದ್ದಾರೆ.

ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣ ಶಂಕೆ?

ಇನ್ನು ಶವಗಾರದ ಬಳಿ ಹೆಚ್ಚುವರಿ ಜಿಲ್ಲಾಧಿಕಾರಿ ಮಂಗಳ, ತಹಶೀಲ್ದಾರ್ ನಯನ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಮಾತುಕತೆ ಮಾಡಿದ್ದಾರೆ. ಆದರೆ ಸದ್ಯ ಬೇಗಂ ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣ ಇರಬಹುದು, ಅವರ ಆತ್ಮಹತ್ಯೆಗೂ ಗಣತಿ ಕಾರ್ಯಕ್ಕೂ ಯಾವುದೇ ಸಂಬಂಧವಿಲ್ಲ ಅನ್ನೋದು ಅಧಿಕಾರಿಗಳ ಮಾತಾಗಿದೆ. ಪೊಲೀಸರ ತನಿಖೆಯಿಂದ  ಆತ್ಮಹತ್ಯೆಗೆ ನಿಖರ ಕಾರಣ ಏನು ಅನ್ನೋದು ತಿಳಿಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 12:11 pm, Thu, 16 October 25