ಕೋಲಾರ: ಪಿಂಚಣಿ ದಾಖಲಾತಿಗೆ ಆಧಾರ್​ ಲಿಂಕ್ ಮಾಡಲು ಬಂದು ಪರದಾಡುತ್ತಿರುವ ವೃದ್ಧರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 04, 2022 | 5:54 PM

ಮಾಸಿಕ ಪಿಂಚಣಿ ಹಣವನ್ನೇ ನಂಬಿಕೊಂಡು ಬದುಕುತ್ತಿರುವ ಹಿರಿಯ ಜೀವಗಳು, ಪಿಂಚಣಿ ದಾಖಲಾತಿಗೆ ಆಧಾರ್​ ನಂಬರ್​ ಲಿಂಕ್​ ಮಾಡಿ ಎನ್ನುವ ಸರ್ಕಾರದ ಆದೇಶ ಕೇಳಿ ತಾಲೂಕು ಕಚೇರಿಯ ಮುಂದೆ ಪರದಾಡುತ್ತಿದ್ದಾರೆ.

ಕೋಲಾರ: ಪಿಂಚಣಿ ದಾಖಲಾತಿಗೆ ಆಧಾರ್​ ಲಿಂಕ್ ಮಾಡಲು ಬಂದು ಪರದಾಡುತ್ತಿರುವ ವೃದ್ಧರು
ಆಧಾರ ಲಿಂಕ್​ ಮಾಡಲು ಕಾದು ಕುಳಿತಿರುವ ವೃದ್ಧರು
Follow us on

ಕೋಲಾರ: ಇತ್ತೀಚೆಗೆ ಸರ್ಕಾರ ಎಲ್ಲಾ ರೀತಿಯ ಪಿಂಚಣಿದಾರರಿಗೆ ನಿಮ್ಮ ಪಿಂಚಣಿ(Pension)ಗೆ ಈ ತಿಂಗಳ ಒಳಗಾಗಿ ಆಧಾರ್​ ಲಿಂಕ್​ ಮಾಡಿಸುವಂತೆ ಆದೇಶ ಹೊರಡಿಸಿದೆ, ಒಂದು ವೇಳೆ ನೀವು ಆಧಾರ್​ ಲಿಂಕ್​ ಮಾಡಿಸಿಲ್ಲ ಎಂದರೆ ನಿಮಗೆ ಮಾಸಿಕ ಪಿಂಚಣಿ ಬರುವುದಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ಗಾಬರಿಗೊಂಡಿರುವ ವೃದ್ದಾಪ್ಯ ವೇತನ ಪಡೆಯುವ ವೃದ್ಧರು, ವಿಧವಾ ವೇತನ ಪಡೆಯುವ ಮಹಿಳೆಯರು, ವಿಕಲಚೇತನರು ನೂರಾರು ಸಂಖ್ಯೆಯಲ್ಲಿ ಕೆಜಿಎಫ್​ ತಾಲೂಕು ಕಚೇರಿಗೆ ಬೆಳಿಗ್ಗೆ 6ಗಂಟೆಗೆ ಬಂದು ಕ್ಯೂನಲ್ಲಿ ನಿಂತುಕೊಂಡು ತಮ್ಮ ಪಿಂಚಣಿ ಖಾತೆಗೆ ಆಧಾರ್​ ಲಿಂಕ್​ ಮಾಡಿಸಲು ಪರದಾಡುತ್ತಿದ್ದಾರೆ.

ಎಲ್ಲಿ ನಮಗೆ ಬರುವ 1000 ರೂಪಾಯಿ ಪಿಂಚಣಿ ಹಣವೂ ನಿಂತು ಹೋಗುತ್ತದೆಯೋ ಎನ್ನುವ ಭಯದಲ್ಲಿ ಬೆಳಿಗ್ಗೆ ಆರು ಗಂಟೆಗೆ ಬರುವ ಜನರು ಊಟ, ತಿಂಡಿ, ಕುಡಿಯಲು ನೀರಿಲ್ಲದಿದ್ದರೂ ಮೊದಲು ನಮಗಿರುವ ಒಂದೇ ಒಂದು ಆಧಾರ ಪಿಂಚಣಿ ಅದಕ್ಕಾಗಿ ಮೊದಲು ಆಧಾರ್ ಲಿಂಕ್​ ಮಾಡಿಸೋಣ ಎಂದು ಪರದಾಡುತ್ತಿದ್ದಾರೆ. ತಾಲೂಕು ಕಚೇರಿಯ ಮೆಟ್ಟಲುಗಳು ಹಾಗೂ ಮುಂದಿನ ಕಟ್ಟೆಯ ಆವರಣದಲ್ಲಿ ಹೀಗೆ ಎಲ್ಲೆಂದರಲ್ಲಿ ಕಾದು ಕುಳಿತು ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಆ ಹಿರಿಯ ಜೀವಗಳನ್ನು ಕಂಡರೆ ನಿಜಕ್ಕೂ ಅಯ್ಯೋ ಎನಿಸುತ್ತಿದೆ. ನಮಗೆ ಇಲ್ಲಿ ಬಂದು ಕಾಯೋದು ಕಷ್ಟವಾಗುತ್ತಿದೆ ಇಲ್ಲಿ ಕುಡಿಯೋದಕ್ಕೆ ಕನಿಷ್ಠ ನೀರು ಇಲ್ಲ ಎಂದು ಹೇಳುವ ಇಲ್ಲಿನ ವೃದ್ದರು ನಮಗೆ ನಮ್ಮ ಏರಿಯಾಗಳಲ್ಲಿಯೇ ಬಂದು ಆಧಾರ್ ಲಿಂಕ್​ ಮಾಡಿಕೊಟ್ಟರೆ, ಅನುಕೂಲವಾಗುತ್ತದೆ ಎನ್ನುತ್ತಿದ್ದಾರೆ.

ಇನ್ನು ಕಳೆದ ಹದಿನೈದು ದಿನಗಳಿಂದ ನಿತ್ಯ ತಾಲೂಕು ಕಚೇರಿ ಬಳಿಗೆ ಬೆಳಿಗ್ಗೆ 6ಗಂಟೆಗೆ ಬಂದು ಟೋಕನ್​ ಪಡೆಯಲು ಬಂದು ನಿಲ್ಲುತ್ತಿದ್ದಾರೆ ಹಿರಿಯ ಜೀವಗಳು ಒಂದು ವೇಳೆ ಟೋಕನ್​ ಸಿಗದಿದ್ದರೆ, ನಿರಾಸೆಯಿಂದ ವಾಪಸ್ಸಾಗುತ್ತಿದ್ದಾರೆ. ತಾಲೂಕು ಕಚೇರಿಯಿಂದ ದಿನಕ್ಕೆ 100-120 ಜನರಿಗೆ ಟೋಕನ್​ ನೀಡಿ ಪಿಂಚಣಿ ಖಾತೆಗೆ ಆಧಾರ್​ ಲಿಂಕ್​ ಮಾಡಿಕೊಡುತ್ತಿದ್ದಾರೆ. ಇದರಿಂದ ಸಾವಿರಾರು ಜನ ಪಿಂಚಣಿದಾರರಿಗೆ ಶೀಘ್ರವಾಗಿ ಆಧಾರ್​ ಲಿಂಕ್​ ಮಾಡಿಕೊಡುವುದು ಸಾಧ್ಯವಾಗುತ್ತಿಲ್ಲ, ಇದರಿಂದ ಪಿಂಚಣಿದಾರರು ಆತಂಕದಲ್ಲೇ ತಾಲೂಕು ಕಚೇರಿ ಬಳಿ ಪರದಾಡುತ್ತಿದ್ದಾರೆ.

ಈ ವೇಳೆ ತಾಲೂಕು ಕಚೇರಿಗೆ ಬಂದಿದ್ದ ಕೆಜಿಎಫ್​ ಶಾಸಕಿ ರೂಪಕಲಾ ಕಚೇರಿ ಬಳಿ ಸಾವಿರಾರು ವೃದ್ದರು ಅಂಗವಿಕಲರು, ಮಹಿಳೆಯರನ್ನು ಕಾಯಿಸುವ ಬದಲು ನಗರಸಭೆ ವ್ಯಾಪ್ತಿಯಲ್ಲಿ ವಾರ್ಡ್​ಗಳಲ್ಲಿ ಕಂದಾಯ ಇಲಾಖೆ ಸಿಬ್ಬಂದಿಯೇ ಅವರಿರುವ ಸ್ಥಳಕ್ಕೆ ಹೋಗಿ ಪಿಂಚಣಿಗೆ ಆಧಾರ್​ ಲಿಂಕ್​ ಮಾಡಿಕೊಡುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಶಾಸಕಿ ತಿಳಿಸಿದ್ದಾರೆ.

ಇದನ್ನೂ ಓದಿ:Family Pension: ಪಿಂಚಣಿದಾರ ಮಹಿಳೆಯ ಅಕೌಂಟ್ ಬ್ಲಾಕ್‌ – ಬ್ಯಾಂಕ್ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಹೈಕೋರ್ಟ್‌ ಆದೇಶ

ಒಟ್ಟಾರೆ ತಿಂಗಳಿಗೆ ಸರ್ಕಾರ ಕೊಡುವ ಸಾವಿರ ರೂಪಾಯಿ ಅವರಿಗೆ ಕನಿಷ್ಠವೇ ಇದ್ದರು, ಅದನ್ನೇ ನಂಬಿಕೊಂಡು ಗಂಜಿ ಕುಡಿಯುವ ಜೀವಕ್ಕೆ ಅದೊಂದು ದೊಡ್ಡದು, ಈ ಹಿರಿಯ ಜೀವಗಳಿಗೆ ಕೂಡಲೇ ಸರ್ಕಾರ ಶೀಘ್ರ ಆಧಾರ್​ ಲಿಂಕ್​ ಮಾಡಿಸಿಕೊಡುವ ಮೂಲಕ ಆತಂಕ ನಿವಾರಿಸಬೇಕಾಗಿದೆ.

ವರದಿ: ರಾಜೇಂದ್ರಸಿಂಹ ಟಿವಿ9 ಕೋಲಾರ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ