Family Pension: ಪಿಂಚಣಿದಾರ ಮಹಿಳೆಯ ಅಕೌಂಟ್ ಬ್ಲಾಕ್ – ಬ್ಯಾಂಕ್ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ಆದೇಶ
Canara Bank: ಹೆಚ್ಚಿನ ಪಿಂಚಣಿ ಪಾವತಿಸಿ, ನಂತರ ವೃದ್ಧೆಯ ಬ್ಯಾಂಕ್ ಅಕೌಂಟ್ ಸ್ಥಗಿತಗೊಳಿಸಿದ (ಬ್ಲಾಕ್ ಮಾಡಿದ) ಕೆನರಾ ಬ್ಯಾಂಕ್ ನ ಅಧಿಕಾರಿಗಳನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಹೆಚ್ಚುವರಿಯಾಗಿ ಪಾವತಿಸಿದ 2,34,158 ರೂಪಾಯಿ ಹಣವನ್ನು ಅಧಿಕಾರಿಗಳ ಸಂಬಳದಿಂದಲೇ ವಸೂಲು ಮಾಡುವಂತೆಯೂ ಆದೇಶ ನೀಡಿದೆ!
ಪೊಲೀಸ್ ಇಲಾಖೆಯ ದ್ವಿತೀಯ ದರ್ಜೆ ನೌಕರರಾಗಿದ್ದ ಸಿ. ಸುಧಾಕರ್ ಅವರು ಕರ್ತವ್ಯದಲ್ಲಿದ್ದಾಗ 2004ರಲ್ಲಿ ಮರಣ ಹೊಂದಿದ್ದರು. ಸುಧಾಕರ್ ಮರಣಾನಂತರ ಅವರ ಪತ್ನಿ, 73 ವರ್ಷದ ನಳಿನಿ ದೇವಿ ಕೌಟುಂಬಿಕ ಪಿಂಚಣಿ (Family Pension) ಪಡೆಯುತ್ತಿದ್ದರು. ಆದರೆ 2016 ರ ನವೆಂಬರ್ 7 ರಂದು ನಳಿನಿ ದೇವಿಯವರ (woman) ಪಿಂಚಣಿ ಅಕೌಂಟ್ ಅನ್ನು ಬ್ಲಾಕ್ ಮಾಡಲಾಗಿತ್ತು. ಸಂಬಂಧಪಟ್ಟ ಕೆನರಾ ಬ್ಯಾಂಕ್ (Canara Bank) ಸಿಬ್ಬಂದಿಯನ್ನು (ಹಿಂದಿನ ಸಿಂಡಿಕೇಟ್ ಬ್ಯಾಂಕ್) ವಿಚಾರಿಸಿದಾಗ 50 ಸಾವಿರ ರೂಪಾಯಿ ಹೆಚ್ಚುವರಿಯಾಗಿ ನಿಮ್ಮ ಪಿಂಚಣಿ ಅಕೌಂಟಿಗೆ ಸಂದಾಯವಾಗಿದೆ. ಹೀಗಾಗಿ ಅಕೌಂಟ್ ಬ್ಲಾಕ್ ಮಾಡಲಾಗಿದೆ ಎಂದು ಉತ್ತರಿಸಿದ್ದರು.
ಹೆಚ್ಚುವರಿಯಾಗಿ ಸಂದಾಯವಾಗಿರುವ ಪಿಂಚಣಿ ಮೊತ್ತವನ್ನು ಕಡಿತ ಮಾಡಿಕೊಂಡು ಪಿಂಚಣಿ ಅಕೌಂಟ್ ನಿರ್ಬಂಧ ತೆರವುಗೊಳಿಸಬೇಕೆಂದು ನಳಿನಿ ದೇವಿ ಮನವಿ ಸಲ್ಲಿಸಿದರೂ ಬ್ಯಾಂಕ್ ಸಿಬ್ಬಂದಿ ಕ್ಯಾರೇ ಅನ್ನಲಿಲ್ಲ. ಬದಲಿಗೆ ಹೆಚ್ಚುವರಿ ಪಾವತಿ ಮುಂದುವರಿಸುತ್ತಲೇ ಹೋಯಿತು. ನಂತರ ಬ್ಯಾಂಕ್ ಓಂಬುಡ್ಸ್‌ಮನ್ ಗೆ ದೂರು ನೀಡಿದಾಗ, 2011 ರಿಂದ ಹೆಚ್ಚುವರಿ ಪಿಂಚಣಿ ನಳಿನಿ ದೇವಿಯವರ ಖಾತೆಗೆ ಸಂದಾಯವಾಗಿದೆ. ಹೀಗಾಗಿ 2,34,158 ರೂಪಾಯಿ ಮರಳಿಸಬೇಕೆಂದು ಉತ್ತರಿಸಲಾಗಿದೆ. ಆಗಲೂ ಪ್ರತಿ ತಿಂಗಳೂ ತಮ್ಮ ಖಾತೆಯಿಂದ ಹಣ ಕಡಿತ ಮಾಡಿಕೊಳ್ಳುವಂತೆ ನಳಿನಿ ದೇವಿ ಮನವಿ ಮಾಡಿದರೂ ಬ್ಯಾಂಕ್ ಪ್ರತಿಕ್ರಯಿಸುವ ಗೋಜಿಗೆ ಹೋಗಿಲ್ಲ, ಬ್ಯಾಂಕ್ ಅಕೌಂಟ್ ನಿರ್ಬಂಧವನ್ನೂ ತೆರವುಗೊಳಿಸಲಿಲ್ಲ. 2016 ರಿಂದ ಸತತವಾಗಿ ಹಲವು ಬಾರಿ ಕೆನರಾ ಬ್ಯಾಂಕ್ ನ ಕಚೇರಿಗೆ ಅಲೆದರೂ ಪ್ರಯೋಜನವಾಗಿಲ್ಲ.
ಹೆಚ್ಚುವರಿ ಪಿಂಚಣಿ ಪಾವತಿಯಲ್ಲಿ ತಮ್ಮ ತಪ್ಪಿಲ್ಲದಿದ್ದರೂ ತಮ್ಮ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಲಾಗಿದೆ. ಹೆಚ್ಚುವರಿಯಾಗಿ ಪಾವತಿಯಾದ 2,34,158 ರೂಪಾಯಿ ಪಿಂಚಣಿ ಹಣವನ್ನು ಒಂದೇ ಬಾರಿಗೆ ಹಿಂತಿರುಗಿಸುವಂತೆ ಕೇಳುವ ಬದಲು ಪ್ರತಿ ತಿಂಗಳೂ ಪಿಂಚಣಿಯಿಂದ 3 ಸಾವಿರದಂತೆ ಕಡಿತ ಮಾಡುವಂತೆ ಮನವಿ ಮಾಡಿದ್ದಾರೆ. ಇವರ ಮನವಿಗೆ ಬ್ಯಾಂಕ್ ಸ್ಪಂದಿಸದ ಕಾರಣ ನಳಿನಿ ದೇವಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ (Karnataka High court) ಪಿಂಚಣಿದಾರ ಮಹಿಳೆಯ ನೆರವಿಗೆ ಧಾವಿಸಿದ್ದು ಬ್ಯಾಂಕ್ ಖಾತೆಯ ನಿರ್ಬಂಧ ತೆರವುಗೊಳಿಸಿ ಪಿಂಚಣಿ ಪಾವತಿಸುವಂತೆ ಆದೇಶಿಸಿದೆ.
ಅಲ್ಲದೇ ಹೆಚ್ಚುವರಿಯಾಗಿ ಪಾವತಿಯಾದ ರೂ. 2,34,158 ರೂಪಾಯಿಯನ್ನು ಪಿಂಚಣಿದಾರಳಿಂದ ವಸೂಲು ಮಾಡುವ ಬದಲು ಹೆಚ್ಚುವರಿ ಮೊತ್ತ ಪಾವತಿಗೆ ಕಾರಣರಾದ ಬ್ಯಾಂಕ್ ಅಧಿಕಾರಿಗಳಿಂದಲೇ ಹಣ ವಸೂಲಿಗೆ ಆದೇಶ ನೀಡಿದೆ. ಕಾನೂನು ಪ್ರಕಾರವೇ ಬ್ಯಾಂಕ್ ಅಧಿಕಾರಿಗಳ ಮೇಲೆ ಹೊಣೆಗಾರಿಕೆ ನಿಗದಿಪಡಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಯಾವುದೇ ಹಣವನ್ನೂ ವಸೂಲು ಮಾಡದಂತೆ ಬ್ಯಾಂಕ್ ಗೆ ನಿರ್ದೇಶನ ನೀಡಿದೆ. ಸಮಾಜದಲ್ಲಿ ಇಂದು ಯಾರಿಗಾದರೂ ಕಾಳಜಿ ಹಾಗೂ ಸಹಾನುಭೂತಿ ಅಗತ್ಯವಿದೆ ಎಂದರೆ ಅದು ಹಿರಿಯ ನಾಗರಿಕರ ಬಗೆಗೆ ಹೆಚ್ಚಿದೆ. ಕಠಿಣ ಮಾತುಗಳು, ನಡವಳಿಕೆ ತೋರಿದಾಕ್ಷಣ ವೃದ್ದರ ಕೆನ್ನೆಯ ಮೇಲೆ ಕಣ್ಣೀರು ಹರಿಯುತ್ತದೆ. ಸರ್ಕಾರಿ ಸಂಸ್ಥೆಗಳು ಹಿರಿಯ ನಾಗರಿಕರು, ವಿಧವೆಯರ ಪಿಂಚಣಿ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಅವರು ನರಳದಂತೆ ನೋಡಿಕೊಳ್ಳಬೇಕು. ವೃದ್ಧರ, ಪಿಂಚಣಿದಾರರ ದುರ್ಬಲ ಧ್ವನಿಗೆ ಸರ್ಕಾರಿ ಸಂಸ್ಥೆಗಳ ಕಿವಿಗಳು ಕಿವುಡಾಗಬಾರದು, ಸಮಸ್ಯೆಗಳಿಗೆ ಕಣ್ಣು ಕುರುಡಾಗಬಾರದು. ಪಿಂಚಣಿದಾರ ವಿಧವೆ ಮಹಿಳೆಯ ಸಮಸ್ಯೆಗೆ ನಿರ್ಲಕ್ಷ್ಯ ತೋರಿದ ಬ್ಯಾಂಕ್ ಅಧಿಕಾರಿಗಳ ನಡವಳಿಕೆಯನ್ನು ಹೈಕೋರ್ಟ್ ಖಂಡಿಸುತ್ತದೆ ಎಂದಿದೆ.
ಇಂತಹ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಲಾಗುವುದೆಂದೂ ಹೈಕೋರ್ಟ್ ಎಚ್ಚರಿಕೆ ನೀಡಿದೆ. ನಾವು ಡಿಜಿಟಲ್ ಯುಗದಲ್ಲಿದ್ದೇವೆ. ಹೆಚ್ಚುವರಿ ಹಣ ಸಂದಾಯದ ಮಾಹಿತಿ ಹಣ ಪಾವತಿಸುವ ಅಧಿಕಾರಿಯ ಕಂಪ್ಯೂಟರ್ ಪರದೆಯಲ್ಲಿರುತ್ತದೆ. ಹೀಗಾಗಿ ಇದಕ್ಕೆ ಸಾಫ್ಟ್ ವೇರ್ ಅಥವಾ ಹಾರ್ಡ್ ವೇರ್ ಹೊಣೆಯಲ್ಲ. ಹಣ ವರ್ಗಾಯಿಸಿದವನ ಹಾರ್ಡ್ ವೇರ್ ಸರಿಯಿದ್ದರೆ ಈ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ. ಆರಂಭದಲ್ಲೇ ಸಮಸ್ಯೆ ಬಗೆಹರಿಸಿದ್ದರೆ ಇಷ್ಟು ದೊಡ್ಡ ಮೊತ್ತ ಪಿಂಚಣಿದಾರ ಮಹಿಳೆಯ ಖಾತೆ ಸೇರುತ್ತಿರಲಿಲ್ಲ. ಸಮಸ್ಯೆಯನ್ನು ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ ವಹಿಸಿರುವುದರಿಂದ ಸಮಸ್ಯೆಗೆ ಅವರೇ ಹೊಣೆ ಹೊರಬೇಕು. ತೆರಿಗೆದಾರರ ಹಣ ವ್ಯರ್ಥವಾಗದಂತೆ ನೋಡಿಕೊಳ್ಳಬೇಕಾದ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಬ್ಯಾಂಕ್ ಕ್ರಮ ಕೈಗೊಳ್ಳಬೇಕೆಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.