ಮತ್ತೆ ಕೆಜಿಎಫ್​ ಲಕಲಕ​! 22 ವರ್ಷ ನಂತರ ಕೆಜಿಎಫ್​ ಗಣಿಯಲ್ಲಿ ಚಿನ್ನ ತೆಗೆಯಲು ಟೆಂಡರ್ ಕರೆದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರದ ನಿರ್ಧಾರವನ್ನು ನೋಡಿದ್ರೆ 22 ವರ್ಷಗಳ ನಂತರ ಕೆಜಿಎಫ್​ಗೆ ಹಿಡಿದ ಗ್ರಹಣ ಬಿಡುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿದೆ. ಮತ್ತೆ ಕೆಜಿಎಫ್​ ನೆಲದಲ್ಲಿ ಚಿನ್ನದ ಕೃಷಿ ಆರಂಭವಾಗುವ ಮುನ್ಸೂಚನೆ ಸಿಕ್ಕಿದ್ದು, ಕೆಜಿಎಫ್​ ನಲ್ಲಿ ಸುವರ್ಣಯುಗ ಆರಂಭವಾಗೋದರಲ್ಲಿ ಅನುಮಾನವಿಲ್ಲ.

ಮತ್ತೆ ಕೆಜಿಎಫ್​ ಲಕಲಕ​! 22 ವರ್ಷ ನಂತರ ಕೆಜಿಎಫ್​ ಗಣಿಯಲ್ಲಿ ಚಿನ್ನ ತೆಗೆಯಲು ಟೆಂಡರ್ ಕರೆದ ಕೇಂದ್ರ ಸರ್ಕಾರ
22 ವರ್ಷ ನಂತರ ಕೆಜಿಎಫ್​ ಗಣಿಯಲ್ಲಿ ಚಿನ್ನ ತೆಗೆಯಲು ಟೆಂಡರ್ ಕರೆದ ಕೇಂದ್ರ ಸರ್ಕಾರ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 05, 2022 | 1:46 PM

22 ವರ್ಷಗಳ ನಂತರ ವಿಶ್ವ ಪ್ರಸಿದ್ದ ಕೆಜಿಎಫ್​ ಚಿನ್ನದ ಗಣಿಯಲ್ಲಿ (gold mining) ಮತ್ತೆ ಚಿನ್ನ ಹೊಳೆಯುವ ಸಾಧ್ಯತೆ ಗೋಚರವಾಗುತ್ತಿದೆ. ಕೆಜಿಎಫ್​ನಲ್ಲಿ ಚಿನ್ನ ತೆಗೆಯಲು ಮನಸ್ಸು ಮಾಡಿರುವ ಕೇಂದ್ರ ಸರ್ಕಾರ ಎರಡು ದಶಕಗಳ ನಂತರ ಕೆಜಿಎಫ್​ (Kolar Gold Fields -KGF) ಚಿನ್ನದ ಗಣಿಯ ಬಗ್ಗೆ ಆಸಕ್ತಿ ವಹಿಸಿರುವುದು ಸಂತಸ ತಂದಿದೆ. ಆದರೆ ಸರ್ಕಾರ ಕಾರ್ಮಿಕರ ಹಿತಾಸಕ್ತಿ ಮರೆತಿರುವುದು ಅಷ್ಟೇ ಬೇಸರ ಮೂಡಿಸಿದೆ..

ವಿಶ್ವಕ್ಕೆ ಚಿನ್ನವನ್ನು ಕೊಟ್ಟ ಹೆಗ್ಗಳಿಗೆ ಕೋಲಾರ ಜಿಲ್ಲೆಯ ಕೆಜಿಎಫ್​ ಚಿನ್ನದ ಗಣಿಗೆ ಸಲ್ಲುತ್ತದೆ, ನೂರಾರು ವರ್ಷಗಳ ಕಾಲ ಕೆಜಿಎಫ್​ ಚಿನ್ನದ ಬೆಳೆ ಬೆಳೆದು ವಿಶ್ವಕ್ಕೆ ಚಿನ್ನವನ್ನು ಕೊಟ್ಟಿದೆ. ಆದರೆ 2001 ರಲ್ಲಿ ಚಿನ್ನದ ಗಣಿಗೆ ಬೀಗ ಹಾಕಿದ ನಂತರ, ಕೇಂದ್ರ ಸರ್ಕಾರ ಕೆಜಿಎಫ್​ ಚಿನ್ನದ ಗಣಿಯನ್ನು, ಇಲ್ಲಿನ ಕಾರ್ಮಿಕರನ್ನು, ಅವರ ಸಂಕಷ್ಟಗಳನ್ನು… ಹೀಗೆ ಎಲ್ಲವನ್ನೂ ಮರೆತು ಹೋಗಿತ್ತು. ಚಿನ್ನದ ಗಣಿಗೆ ಬೀಗ ಹಾಕಿದ್ದ ಸರ್ಕಾರ ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ( labourers) ಯಾವುದೇ ಪರಿಹಾರ ನೀಡದೆ, ನಿವೃತ್ತಿ ಪರಿಹಾರವನ್ನೂ ನೀಡಿರಲಿಲ್ಲ. ಸುಮಾರು 3500 ಜನ ಕಾರ್ಮಿಕರಿಗೆ ಸುಮಾರು 52 ಕೋಟಿ ರೂಪಾಯಿ ಪರಿಹಾರ ನೀಡಬೇಕಿತ್ತು. ಯಾವುದನ್ನೂ ನೀಡದೆ ಚಿನ್ನದ ಗಣಿಗೆ ಬೀಗ ಹಾಕಿ ಸುಮ್ಮನಾಗಿತ್ತು.

ಅತ್ತ ಕಾರ್ಮಿಕ ಸಂಘಟನೆಗಳು ಹತ್ತಾರು ವರ್ಷಕಾಲ ನ್ಯಾಯಕ್ಕಾಗಿ ಸರ್ಕಾರಗಳ ಬಳಿ, ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಲೇ ಇದ್ದಾರೆ. ಇನ್ನು ಕಾರ್ಮಿಕರಿಗೆ ಪರಿಹಾರ ಸಿಕ್ಕಿಲ್ಲ, ಇದೆಲ್ಲದರ ನಡುವೆ ಏಕಾಏಕಿ ಸರ್ಕಾರ ಈಗ ಕೆಜಿಎಫ್​ನಲ್ಲಿ ಇರುವ ಚಿನ್ನವನ್ನು ತೆಗೆದ ನಂತರ ಹೊರ ಹಾಕಿರುವ ಮಣ್ಣಿನಲ್ಲಿ ಅಂದರೆ ಕೆಜಿಎಫ್​ನಲ್ಲಿರುವ 13 ಸೈನೈಡ್​ ಗುಡ್ಡಗಳಲ್ಲಿ ಚಿನ್ನವನ್ನು ಮತ್ತೊಮ್ಮೆ ಶೋಧಿಸುವ ಕೆಲಸಕ್ಕೆ ಟೆಂಡರ್​ (tender) ಕರೆದಿದೆ. ಕೆಜಿಎಫ್​ ನಗರದ ಸುತ್ತಮುತ್ತ 13 ಸೈನೈಡ್​ ಗುಡ್ಡಗಳಿದ್ದು ಅದರಲ್ಲಿ ಸುಮಾರು 35 ಲಕ್ಷ ಮಿಲಿಯನ್​ ಟನ್​ ಮಣ್ಣಿದೆ ಎಂದು ಅಂದಾಜಿಸಿದ್ದು, ಸಂಶೋಧನೆಗಳ ಪ್ರಕಾರ ಒಂದು ಟನ್​ ಮಣ್ಣಿನಲ್ಲಿ ಸರಾಸರಿ ಒಂದು ಟನ್​ ಚಿನ್ನ ಸಿಗುತ್ತದೆ ಎಂದು ಹೇಳಲಾಗುತ್ತಿದೆ.

ಅಂದರೆ ಸುಮಾರು 25 ಟನ್​ ಚಿನ್ನ ಸಿಗುವ ನಿರೀಕ್ಷೆ ಇದೆ. ಸದ್ಯ ಆ ಮಣ್ಣಿನಲ್ಲಿನ ಚಿನ್ನವನ್ನು ಹೊರತೆಗೆಯುವ ಕೆಲಸ ಆರಂಭಿಸಿದ್ದು ಮೊದಲ ಹಂತದ ಟೆಂಡರ್ ಪ್ರಕ್ರಿಯೆ ಶುರು ಮಾಡಿದೆ. ಆದರೆ ಇದು ಚಿನ್ನದ ಗಣಿ ವಿಚಾರವಾಗಿ ಸರ್ಕಾರ 22 ವರ್ಷಗಳ ನಂತರ ಒಂದೊಳ್ಳೆ ನಿರ್ಧಾರ ಮಾಡಿರೋದು ಸಂತೋಷದ ವಿಷಯವೇ ಆದರೂ, ಕೇಂದ್ರ ಸರ್ಕಾರದ ನಿಲುವಿಗೆ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಮೊದಲು 2006 ಕೇಂದ್ರ ಸರ್ಕಾರದ ಕ್ಯಾಬಿನೆಟ್​ ನಿರ್ಣಯದಂತೆ ಹಾಗೂ 2016ರ ಸುಪ್ರೀಂ ಕೋರ್ಟ್​ ನಿರ್ದೇಶನದಂತೆ ಇಲ್ಲಿ ಬಾಕಿ ಇರುವ ಗಣಿ ಕಾರ್ಮಿಕರ 52 ಕೋಟಿ ರೂಪಾಯಿ ಪರಿಹಾರ ನೀಡಿ ಮುಂದಿನ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿವೆ.

ಇನ್ನು 22 ವರ್ಷಗಳ ಹಿಂದೆ ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕೆಲಸ ಕಳೆದುಕೊಂಡ ನಂತರ ಸಾವಿರಾರು ಕಾರ್ಮಿಕರು ಕೆಲಸವಿಲ್ಲದೆ ಬೀದಿಗೆ ಬಿದ್ದರು. ಕಾರ್ಮಿಕರ ಕುಟುಂಬಗಳು ಬೀದಿಗೆ ಬಿದ್ದವು. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ಕಾರ್ಮಿಕರಿಗೆ ಯಾವುದೇ ರೀತಿಯ ಪರಿಹಾರ ರೂಪಿಸಲಿಲ್ಲ. ಕೊನೆಯ ಪಕ್ಷ ಕಾರ್ಮಿಕರಿಗೆ ಆರೋಗ್ಯ, ಶಿಕ್ಷಣ, ಉದ್ಯೋಗ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ.

Also Read: ಮರುಕಳಿಸಲಿದ್ಯಾ ಚಿನ್ನದ ನಾಡಿನ ಗತವೈಭವ..! ಸಿದ್ಧತೆ ಹೇಗಿದೆ ನೋಡಿ..

ಚಿನ್ನದ ಗಣಿಗೆ ಬೀಗ ಹಾಕಿದ ನಂತರ ಕೆಜಿಎಫ್​​ನ್ನು ಮರೆತೇ ಹೋಗಿತ್ತು. ಆದರೆ ಈಗ ಜಾಗತಿಕ ಮಟ್ಟದಲ್ಲಿ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇರುವ ಕಾರಣದಿಂದಾಗಿ ಕೇಂದ್ರ ಸರ್ಕಾರ ಇಷ್ಟು ದಿನ ಕಾರ್ಮಿಕರ ಹಿತಾಸಕ್ತಿಯನ್ನು ಕಡೆಗಣಿಸಿ ಈಗ ಏಕಾಏಕಿ ಚಿನ್ನಕ್ಕಾಗಿ ಕೆಜಿಎಫ್​ ಮೇಲೆ ಪ್ರೀತಿ ತೋರಿಸುವ ನಾಟಕ ಆಡುತ್ತಿದೆ ಎಂದು ಕೆಜಿಎಫ್​ ಶಾಸಕಿ ರೂಪಕಲಾ ಆರೋಪಿಸಿದ್ದಾರೆ.

ಸರ್ಕಾರ ಮೊದಲು ಚಿನ್ನದ ಗಣಿಯಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡಿದ ಕಾರ್ಮಿಕರ ಬಾಕಿ ಪರಿಹಾರದ ಹಣ ನೀಡಬೇಕು, ನಂತರ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ವ್ಯವಸ್ಥೆ, ಜೊತೆಗೆ ಕಾರ್ಮಿಕರು ಈಗ ವಾಸವಿರುವ ಮನೆಗಳನ್ನು ಕಾರ್ಮಿಕರಿಗೆ ಬಿಟ್ಟುಕೊಡಬೇಕು ಈ ಎಲ್ಲಾ ಬೇಡಿಕೆಗಳಿಗೆ ಒಪ್ಪಿಗೆ ನೀಡಿ ನಂತರ ಸರ್ಕಾರ ಚಿನ್ನದ ಗಣಿಯನ್ನು ಮುಟ್ಟಬೇಕು ಇಲ್ಲವಾದರೆ ಚಿನ್ನದ ಗಣಿಯನ್ನು ಮುಟ್ಟಲು ನಾವು ಬಿಡುವುದಿಲ್ಲ ಎಷ್ಟು ದೊಡ್ಡ ಮಟ್ಟಗಿನ ಹೋರಾಟಕ್ಕೂ ನಾವು ಸಿದ್ದ ಎಂದು ರೂಪಕಲಾ (ಕೆಜಿಎಫ್​ ಶಾಸಕಿ) ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ನೋಡಿದ್ರೆ 22 ವರ್ಷಗಳ ನಂತರ ಕೆಜಿಎಫ್​ಗೆ ಹಿಡಿದ ಗ್ರಹಣ ಬಿಡುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿದೆ. ಮತ್ತೆ ಕೆಜಿಎಫ್​ ನೆಲದಲ್ಲಿ ಚಿನ್ನದ ಕೃಷಿ ಆರಂಭವಾಗುವ ಮುನ್ಸೂಚನೆ ಸಿಕ್ಕಿದ್ದು, ಕೇಂದ್ರ ಸರ್ಕಾರ ಮೊದಲು ಚಿನ್ನದ ಗಣಿ ಕಾರ್ಮಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಹೆಜ್ಜೆ ಇಟ್ಟರೆ ಕೆಜಿಎಫ್​ ನಲ್ಲಿ ಸುವರ್ಣಯುಗ ಆರಂಭವಾಗೋದರಲ್ಲಿ ಅನುಮಾನವಿಲ್ಲ. (ವರದಿ- ರಾಜೇಂದ್ರ ಸಿಂಹ, ಟಿವಿ 9, ಕೋಲಾರ)

ಹೆಚ್ಚಿನ ಉದ್ಯಮ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ