ಕೋಲಾರ: ಸ್ಮಶಾನ ಹಬ್ಬ; ಸಕಲ ಸಂತರ ದಿನದ ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ಕೆಜಿಎಫ್

| Updated By: preethi shettigar

Updated on: Nov 03, 2021 | 3:08 PM

ಕೋಲಾರ ಜಿಲ್ಲೆ ಕೆಜಿಎಫ್​ನಲ್ಲಿ ಸ್ಮಶಾನ ಹಬ್ಬ ಎನ್ನುವ ಒಂದು ವಿಶಿಷ್ಟ ಆಚರಣೆ ನಡೆಯುತ್ತದೆ. ಅದನ್ನು ಸಕಲ ಸಂತರ ದಿನ ಅಥವಾ ಆಲ್ ಸೋಲ್ಸ್ ಡೇ ಎಂದು ಕರೆಯುತ್ತಾರೆ. ವಿಶೇಷವಾಗಿ ಇಂಗ್ಲೆಂಡ್​ನ ಪ್ರಭಾವ ಹೊಂದಿರುವ ರಾಜ್ಯದ ಮಿನಿ ಇಂಗ್ಲೆಂಡ್ ಕೆಜಿಎಫ್​ನಲ್ಲಿ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಸ್ಮಶಾನ ಹಬ್ಬ ಎಂದು ಆಚರಣೆ ಮಾಡಲಾಗುತ್ತದೆ.

ಕೋಲಾರ: ಸ್ಮಶಾನ ಹಬ್ಬ; ಸಕಲ ಸಂತರ ದಿನದ ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ಕೆಜಿಎಫ್
ಆತ್ಮಗಳನ್ನು ಪೂಜಿಸುವ ವಿಶೇಷ ಆಚರಣೆ
Follow us on

ಕೋಲಾರ: ಸಾಮಾನ್ಯವಾಗಿ ನಮ್ಮನ್ನಗಲಿರುವ ನಮ್ಮವರು, ಸತ್ತ ನಂತರ ನಮ್ಮಿಂದ ದೂರ ಉಳಿದಿರುವ ಆತ್ಮಗಳು, ಮತ್ತೆ ಹುಟ್ಟಿಬರುತ್ತಾರೆ ಎನ್ನುವ ನಂಬಿಕೆ ಇದೆ. ಮತ್ತೆ ಹುಟ್ಟದಿದ್ದರು ನಾವು ಅವರನ್ನು ಸೇರುತ್ತೇವೆ ಎನ್ನುವ ವಿಶ್ವಾಸ ಮಾತ್ರ ಇನ್ನು ಉಳಿದಿದೆ. ಹೀಗೆ ಅಗಲಿದವರ ಆತ್ಮಗಳನ್ನು ಪೂಜಿಸುವ ವಿಶೇಷ ಆಚರಣೆಯೊಂದು ಚಿನ್ನದ ನಾಡು ಕೋಲಾರದಲ್ಲಿದೆ. ಅದುವೇ ಸ್ಮಶಾನ ಹಬ್ಬ ಅಥವಾ ಆಲ್​ ಸೋಲ್ಸ್​ ಡೇ . ಈ ದಿನದ ವಿಶೇಷದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಸ್ಮಶಾನ ಹಬ್ಬ
ಸತ್ತಾಗ ಸಮಾಧಿಗೆ ಹೂವಿನ ಅಲಂಕಾರ ಮಾಡುವುದು ಸಹಜ. ಜೊತೆಗೆ ಮಹಾಲಯ ಅಮಾವಾಸ್ಯೆ ದಿನ ಮೃತರ ಸಮಾಧಿಗೆ ಪೂಜೆ ಮಾಡಿ ಬರುವುದು ನಮ್ಮ ಹಿಂದೂ ಸಂಪ್ರದಾಯ ಹಾಗೂ ನಂಬಿಕೆ. ಆದರೆ ಇಡೀ ಸ್ಮಶಾನಕ್ಕೆ ಅಲಂಕಾರ ಮಾಡಿ, ಸಮಾಧಿಗಳನ್ನು ಸಿಂಗಾರ ಮಾಡಿ ಪೂಜೆ ಮಾಡುವ ವಿಶಿಷ್ಟ ಸಂಪ್ರಯದಾಯ ಕೂಡ ಇದೆ. ಕೆಜಿಎಫ್ ಇದು​ ಆಂಧ್ರ ಹಾಗೂ ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ನಗರ ಅದರ ಜೊತೆಗೆ ನೂರಾರು ವರ್ಷಗಳ ಕಾಲ ಬ್ರಿಟಿಷ್​ರ ಆಳ್ವಿಕೆಯಲ್ಲಿ ಅಂದರೆ ಇಂಗ್ಲೆಂಡ್​ನ ಸಂಪ್ರದಾಯವನ್ನು ಸಹ ಹೊಂದಿರುವ ಪ್ರದೇಶ. ಹಾಗಾಗಿ ಇಲ್ಲಿ ಹಲವಾರು ಸಂಪ್ರದಾಯ, ಸಂಸ್ಕೃತಿಗಳ ಸಮ್ಮಿಲನವಿದೆ. ಇಲ್ಲಿನ ವಿಭಿನ್ನ ಆಚರಣೆಗಳು ಗಮನ ಸೆಳೆಯುತ್ತವೆ.

ಬಹಳ ಅದ್ದೂರಿಯಾಗಿ ನಡೆಯುತ್ತದೆ ಸತ್ತವರನ್ನು ಸ್ಮರಿಸುವ ಸ್ಮಶಾನ ಹಬ್ಬ
ಕೋಲಾರ ಜಿಲ್ಲೆ ಕೆಜಿಎಫ್​ನಲ್ಲಿ ಸ್ಮಶಾನ ಹಬ್ಬ ಎನ್ನುವ ಒಂದು ವಿಶಿಷ್ಟ ಆಚರಣೆ ನಡೆಯುತ್ತದೆ. ಅದನ್ನು ಸಕಲ ಸಂತರ ದಿನ ಅಥವಾ ಆಲ್ ಸೋಲ್ಸ್ ಡೇ ಎಂದು ಕರೆಯುತ್ತಾರೆ. ವಿಶೇಷವಾಗಿ ಇಂಗ್ಲೆಂಡ್​ನ ಪ್ರಭಾವ ಹೊಂದಿರುವ ರಾಜ್ಯದ ಮಿನಿ ಇಂಗ್ಲೆಂಡ್ ಕೆಜಿಎಫ್​ನಲ್ಲಿ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಸ್ಮಶಾನ ಹಬ್ಬ ಎಂದು ಆಚರಣೆ ಮಾಡಲಾಗುತ್ತದೆ. ಹಿರಿಯರು, ತಂದೆ, ತಾಯಿ, ಸೋದರ, ಸೋದರಿಯರು ಹೀಗೆ ನಮ್ಮನ್ನಗಲಿದ ರಕ್ತ ಸಂಬಂಧಿಗಳ ಆತ್ಮಗಳಿಗೆ ಪೂಜೆ ಮಾಡುವ ಈ ದಿನವನ್ನು ಸಕಲ ಸಂತರ ದಿನ ಎಂದು ಪ್ರಮುಖವಾಗಿ ಆಚರಣೆ ಮಾಡೋದು ಕ್ರಿಶ್ಚಿಯನ್ ಸಮುದಾಯ. ಆದರೆ ವಿಶೇಷವಾಗಿ ಕೆಜಿಎಫ್​ನಲ್ಲಿ ಎಲ್ಲಾ ಧರ್ಮಿಯರು ವಿಶೇಷವಾಗಿ ಈ ಸ್ಮಶಾನ ಹಬ್ಬದಲ್ಲಿ ಭಾಗವಹಿಸುತ್ತಾರೆ.

ಪ್ರಮುಖವಾಗಿ ಕೆಜಿಎಫ್​ನ ಕ್ರಿಶ್ಚಿಯನ್ ಧರ್ಮದಲ್ಲಿ ಸ್ಮಶಾನಗಳಲ್ಲಿ ತಮ್ಮ ಕುಟುಂಬಗಳಲ್ಲಿ ಮೃತರಾದವರನ್ನು ಒಂದೇ ಸಮಾಧಿಗಳಲ್ಲಿ ಹಾಕಿ ಅಂತ್ಯಸಂಸ್ಕಾರ ಮಾಡೋದು ಪದ್ದತಿ. ಒಂದು ತಲೆ ಮಾರಿನ ಜನರಿಗೆ ಒಂದರಂತೆ ಸಮಾಧಿಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅವರು ಸತ್ತಾಗ ಅವರನ್ನು ಅದೇ ಸಮಾಧಿಗಳಲ್ಲಿ ಹಾಕಲಾಗುತ್ತದೆ, ಹೀಗೆ ಮಾಡಿ ಪ್ರತಿ ವರ್ಷ ಅವರ ಆತ್ಮಗಳಿಗೆ ಪೂಜೆ ಮಾಡುವ ಸಲುವಾಗಿ ಸ್ಮಶಾನ ಹಬ್ಬ ಎಂದು ಆಚರಣೆ ಮಾಡುತ್ತಾರೆ ಎಂದು ಫಾದರ್​ ಜಾನ್​ ಹೇಳಿದ್ದಾರೆ.

ಆಲ್ ಸೋಲ್ಸ್ ಡೇ

ಸತ್ತವರು ಮತ್ತೆ ಹುಟ್ಟಿ ಬರುತ್ತಾರೆ ಎನ್ನುವ ನಂಬಿಕೆ
ಸಾಮಾನ್ಯವಾಗಿ ಎಲ್ಲಾ ಧರ್ಮಗಳಲ್ಲಿ ಇರುವಂತೆ ಸತ್ತವರು ಮತ್ತೆ ಹುಟ್ಟಿ ಬರುತ್ತಾರೆ ಎನ್ನುವ ನಂಬಿಕೆಯನ್ನು ಕ್ರಿಶ್ಚಿಯನ್ ಧರ್ಮದಲ್ಲಿ ಬಲವಾಗಿ ನಂಬಲಾಗುತ್ತದೆ. ಈ ಸಲುವಾಗಿ ಸ್ಮಶಾನ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಹಾಗೆ ಮೃತರ ಆತ್ಮಗಳಿಗೆ ಪೂಜೆ ಸಲ್ಲಿಸಿ, ಬಲಿಪೂಜೆ ಮಾಡಿ ಕೃತಜ್ಞತೆ ಸಲ್ಲಿಸುತ್ತಾರೆ. ಈ ದಿನದಂದು ಕುಟುಂಬದ ಎಲ್ಲಾ ಸದಸ್ಯರು ಒಂದೆಡೆ ಸೇರಿ ಸಮಾಧಿಗಳಿಗೆ ಬಗೆ ಬಗೆಯಾಗಿ ಅಲಂಕಾರ ಮಾಡಿ, ಮೃತರು ಬದುಕಿದ್ದಾಗ ಇಷ್ಟಪಡುತ್ತಿದ್ದ ಊಟ, ಉಪಚಾರಗಳನ್ನು ಸಮಾಧಿಯ ಮುಂದಿಟ್ಟು ಪಾದ್ರಿಯು ಹೇಳಿಕೊಡುವ ಪ್ರಾರ್ಥನೆಯನ್ನು ಮಾಡಿ ಮೃತರ ಆತ್ಮಗಳಿಗೆ ಪೂಜೆ ಸಲ್ಲಿಸುತ್ತಾರೆ.

ಇನ್ನು ಸ್ಮಶಾನ ಹಬ್ಬವನ್ನು ಇಲ್ಲಿ ಬಹಳ ಪ್ರಾಮುಖ್ಯತೆ ಹಾಗೂ ಅತೀವ ಭಕ್ತಿಯಿಂದ ಆಚರಣೆ ಮಾಡುತ್ತಾರೆ. ಈ ದಿನದಂದು ಕುಟುಂಬಕ್ಕೆ ಸೇರಿದ ಎಲ್ಲರೂ ಕಡ್ಡಾಯವಾಗಿ ಇಲ್ಲಿಗೆ ಬಂದು ತಮ್ಮ ಹಿರಿಯರಿಗೆ ಪೂಜೆ ಸಲ್ಲಿಸುತ್ತಾರೆ. ಎಷ್ಟೇ ದೂರದ ಊರುಗಳಲ್ಲಿ ಅಥವಾ ಯಾವುದೇ ದೇಶಗಳಲ್ಲಿ ಇರಲಿ ಕಡ್ಡಾಯವಾಗಿ ಬಂದೇ ಬರುತ್ತಾರೆ. ಎಷ್ಟೋ ಬಾರಿ ಕೆಲವೊಂದು ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರು ಕೂಡಾ ಈ ದಿನಗಳಲ್ಲಿ ಸ್ಮಶಾನ ಪೂಜೆಗೆ ಬರುತ್ತಾರೆ ಎಂದು ಕಾದು ಕುಳಿತು ಅವರನ್ನು ಬಂಧಿಸಿರುವ ಉದಾಹರಣೆಗಳು ಇವೆ.

ಒಟ್ಟಾರೆ ಮನುಷ್ಯ ಸತ್ತ ಮೇಲೆ ಅವನ ಆತ್ಮ ಸಾಯುವುದಿಲ್ಲ ಎನ್ನುವ ಮಾತಿದೆ. ಹಾಗಾಗಿನೆ ಎಲ್ಲಾ ಧರ್ಮಗಳಲ್ಲೂ ಕೂಡಾ ಮೃತರಿಗೆ ಪೂಜೆ ಸಲ್ಲಿಸುವ ಪದ್ಧತಿ ಇದೆ. ಆದರೆ ಇಲ್ಲಿ ವಿಶೇಷವಾಗಿ ಮೃತರು ಮತ್ತೆ ಹುಟ್ಟಿಬರಬಹುದು ಇಲ್ಲವಾದಲ್ಲಿ ಮೃತರ ಬಳಿಗೆ ನಾವೇ ಸೇರಿಕೊಳ್ಳುತ್ತೇವೆ ಎನ್ನುವ ನಂಬಿಕೆ ಕೂಡಾ ಬಲವಾಗಿದೆ. ಹಾಗಾಗಿನೆ ಸ್ಮಶಾನ ದಿನದಂದು ಮೃತರ ಆತ್ಮಗಳಿಗೆ ಪೂಜೆ ಮಾಡಿ ಹಿರಿಯರನ್ನು ಸಂತೈಸಲಾಗುತ್ತದೆ.

ವರದಿ : ರಾಜೇಂದ್ರ ಸಿಂಹ

ದೀಪಾವಳಿ ಹಬ್ಬದ ಖರೀದಿಯಲ್ಲಿ ಜನ ಫುಲ್ ಬ್ಯುಸಿ, ಮಾರ್ಕೆಟ್‌ನಲ್ಲಿ ಹೂವು, ಹಣ್ಣು ಖರೀದಿಗೆ ಮುಗಿಬಿದ್ದ ಜನ

ದಾವಣಗೆರೆ: ಅಜ್ಜಿ ಹಬ್ಬದ ವಿಶೇಷತೆ ಏನು? ಮಳೆಗಾಲದಲ್ಲಿಯೇ ಈ ಹಬ್ಬ ಆಚರಿಸಲು ಅನೇಕ ಕಾರಣಗಳಿವೆ