ಕೋಲಾರ: ಇಲ್ಲಿನ ಕ್ಲಾಕ್‌ಟವರ್‌ನಲ್ಲಿ ತ್ರಿವರ್ಣಧ್ವಜ ಹಾರಿಸುವ ವಿಚಾರಕ್ಕೆ ಸಂಬಂಧಿಸಿ ಮೌನಪ್ರತಿಭಟನೆಗೆ ನಿರ್ಧರಿಸಿದ್ದ ಸಂಸದ ಮುನಿಸ್ವಾಮಿ ಏಕಾಂಗಿ ಪ್ರತಿಭಟನೆಗೆ ಮುಂದಾದ ಹಿನ್ನೆಲೆ ಕೋಲಾರದ ಕ್ಲಾಕ್ ಟವರ್ ಬಳಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ತ್ರಿವರ್ಣ ಧ್ವಜ ಹಾರಿಸಲು ಮುನಿಸ್ವಾಮಿ ಪ್ರತಿಭಟನೆಗೆ ಜಿಲ್ಲಾಡಳಿತ ಅನುಮತಿ ನಿರಾಕರಣೆ ಮಾಡಿತ್ತು. ಅನುಮತಿ ನಿರಾಕರಣೆ ನಡುವೆಯೂ ಪ್ರತಿಭಟನೆ ಸಾಧ್ಯತೆ ಇರುವ ಕಾರಣ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ.
ಏನಿದು ಕ್ಲಾಕ್ ಟವರ್ ವಿವಾದ? ಈ ವಿವಾದ ಸೃಷ್ಟಿಯಾಗಿರೋದು ಏಕೆ?
ಕೋಲಾರ ನಗರದ ಹೃದಯ ಭಾಗದಲ್ಲಿರುವ ಕ್ಲಾಕ್ ಟವರ್ ಅನ್ನೋ ಪ್ರದೇಶಕ್ಕೆ ದೊಡ್ಡ ಇತಿಹಾಸವೇ ಇದೆ, ಕೋಲಾರದಲ್ಲಿ 1930 ರ ಆಸುಪಾಸಿನಲ್ಲಿ ಚರ್ಮದ ರಪ್ತು ವ್ಯವಹಾರ ಹಾಗೂ ಅರಣ್ಯ ಇಲಾಖೆ ಗುತ್ತಿಗೆದಾರರಾಗಿದ್ದ ಕೋಲಾರದ ಶ್ರೀಮಂತ ವ್ಯಕ್ತಿ ಹಾಜಿ ಮೊಹಮದ್ ಮುಸ್ತಾಫಾ ಸಾಬ್ ಕ್ಲಾಕ್ ಟವರ್ ನಿರ್ಮಾಣ ಮಾಡಿದ್ದಾರೆ. ಕೋಲಾರದ ಪ್ರವೇಶ ದ್ವಾರದಂತಿದ್ದ ಕ್ಲಾಕ್ ಟವರ್ ಪ್ರದೇಶ ಹಾಗೂ ಹಳೇ ಬಸ್ ನಿಲ್ದಾಣ ಎರಡು ಸ್ಥಳಗಳಲ್ಲಿ ನಿರ್ಮಾಣ ಮಾಡಿದ್ದರು. ಇಲ್ಲಿ ಕ್ಲಾಕ್ ಟವರ್ ನಿರ್ಮಾಣ ಮಾಡಲು ಮೂಲ ಕಾರಣ ಕೋಲಾರ ನಗರಕ್ಕೆ ಬರುವ ಜನರಿಗೆ ಸಮಯ ತಿಳಿಯಬೇಕು ಅನ್ನೋದು ಒಂದು ಕಾರಣವಾದರೆ, ಈ ಪ್ರದೇಶದಲ್ಲಿ ಹೆಚ್ಚಾಗಿ ಕೂಲಿ ಕೆಲಸ ಮಾಡುವ ಜನರಿದ್ದರು ಅವರಿಗೆ ಸಮಯ ತಿಳಿಯಬೇಕು. ಜೊತೆಗೆ ಹೋಗಿ ಬರುವ ಜನರಿಗೆ ಒಂದು ಸ್ಥಳದ ಗುರುತು ಇರಲಿ ಅನ್ನೋ ಕಾರಣಕ್ಕೆ ಇದನ್ನು ನಿರ್ಮಾಣ ಮಾಡಲಾಗಿತ್ತು. ಕಾಲ ಕ್ರಮೇಣ ಇದೊಂದು ಕೋಲಾರಕ್ಕೆ ಪ್ರಮುಖ ಸ್ಥಳವಾಗಿ ಇಲ್ಲಿ ಹೆಚ್ಚಾಗಿ ವ್ಯಾಪಾರ ವಹಿವಾಟು ನಡೆಯುವ ಸ್ಥಳವಾಗಿ ಮಾರ್ಪಾಟಾಗಿ ಹೋಯಿತು.
ಕ್ಲಾಕ್ ಟವರ್ ವಿವಾದದ ಕೇಂದ್ರವಾಗಿದ್ದು ಏಕೆ?
ಹೀಗೆ ಕ್ಲಾಕ್ ಟವರ್ ಮೊದಲಿನಿಂದಲೂ ಕೋಲಾರ ನಗರದ ಪ್ರಮುಖ ಸರ್ಕಲ್ಗಳಲ್ಲಿ ಒಂದಾಗಿ ಒಳ್ಳೆಯ ವ್ಯಾಪಾರ ನಡೆಯುವ ಸ್ಥಳವಾಗಿ ಬೆಂಗಳೂರು-ಚೆನೈ ಹೆದ್ದಾರಿಯಾಗಿ ಕೂಡಾ ಇದು ಇತ್ತು, ಕಾಲ ಕ್ರಮೇಣ ಕ್ಲಾಕ್ ಟವರ್ ಕೋಮು ಭಾವನೆಗಳನ್ನು ಕದಡುವ ಪ್ರದೇಶವಾಗಿ ಬದಲಾವಣೆಯಾಗುತ್ತಾ ಬಂದಿತ್ತು, ಹಿಂದುಗಳು ಗಣೇಶನ ಮೆರವಣಿಗೆ ಬಂದಾಗ ಇಲ್ಲಿ ಘೋಷಣೆಗಳನ್ನು ಕೂಗುವುದು ಹಾಗೂ ಇಲ್ಲಿ ಹೆಚ್ಚು ಹೊತ್ತು ಮೆರವಣಿಗೆ ನಿಲ್ಲಿಸಿ ಟ್ರಾಫಿಕ್ ಸಮಸ್ಯೆ ಉಂಟುಮಾಡುವುದು ಮಾಡುತ್ತಾರೆ ಎಂದು ತಗಾದೆ ತೆಗೆಯಲು ಆರಂಭ ಮಾಡಿ, ಕೆಲವು ಬಾರಿ ಮೆರವಣಿಗೆ ಮೇಲೆ ಕಲ್ಲು ಎಸೆದಿರುವ ಘಟನೆ ಕೂಡಾ ನಡೆಯಿತು. ಇದಕ್ಕೆ ಪ್ರತಿಯಾಗಿ ಈದ್ ಮಿಲಾದ್ ವೇಳೆ ಕೋಲಾರದ ಕ್ಲಾಕ್ ಟವರ್ ನಿಂದ ಡೂಂ ಲೈಟ್ ಸರ್ಕಲ್ ಮಾರ್ಗವಾಗಿ ಎಂ.ಜಿ.ರಸ್ತೆ ಮುಖಾಂತರ ಮೆರವಣಿಗೆ ಹೋಗುವಾಗ ಮುಸ್ಲಿಂ ಸಮುದಾಯದವರು ಘೋಷಣೆಗಳನ್ನು ಕೂಗುವುದು ಜೊತೆಗೆ ಟ್ರಾಫಿಕ್ ಸಮಸ್ಯೆ ಉಂಟುಮಾಡುತ್ತಾರೆ ಅನ್ನೋ ದೂರುಗಳು ಕೇಳಿಬಂದವು ಆಗ ಅಂದಿನ ಜಿಲ್ಲಾಧಿಕಾರಿ ಆಗಿದ್ದ ಮನೋಜ್ ಕುಮಾರ್ ಮೀನಾ ಅವರು ಹಿಂದು ಮೆರವಣಿಗೆಗಳು ಕ್ಲಾಕ್ ಟವರ್ಗೆ ಹೋಗದಂತೆ, ಮುಸ್ಲಿಮರ ಮೆರವಣಿಗೆಗಳು ಎಂ.ಜಿ.ರಸ್ತೆ ಭಾಗಕ್ಕೆ ಬಾರದಂತೆ ನಿರ್ಭಂದ ವಿಧಿಸಿದರು. ಇದು ಕಾಲ ಕ್ರಮೇಣ ನೋಡುವವರಿಗೆ ಬೇರೆಯೇ ಅರ್ಥ ಕಲ್ಪಿಸುತ್ತಾ ವಿವಾದದ ಕೇಂದ್ರವಾಗಿ ಮಾರ್ಪಾಟಾಗಿದೆ.
ಕ್ಲಾಕ್ ಟವರ್ ಇವತ್ತಿನ ಪರಿಸ್ಥಿತಿ ಏನು?
ಮುಸ್ತಾಫಾ ಸಾಬ್ ಕ್ಲಾಕ್ ಟವರ್ ನಿರ್ಮಾಣ ಮಾಡಿ ನಂತರ ಅದರ ನಿರ್ವಹಣೆಯನ್ನು ಕೋಲಾರ ನಗರಸಭೆಗೆ ವಹಿಸಿದ್ದರು, ನಂತರ ಅದನ್ನು ಮುಸ್ತಾಫಾ ಸಾಬ್ ಮೊಮ್ಮಗ ಹಾಗೂ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಜಮೀರ್ ಅಹಮದ್ ಪಡೆದಿದ್ದ ಅದರ ನಿರ್ವಹಣೆಯನ್ನು ಅವರೇ ಮಾಡುತ್ತಿದ್ದಾರೆ. ಸದ್ಯ ಹಿಂದೆ ಮಾಡಿದ್ದ ನಿಭಂದನೆ ರೀತಿಯಲ್ಲಿ ಹಿಂದೂ ಮೆರವಣಿಗೆಗಳು ಕ್ಲಾಕ್ ಟವರ್ಗೆ ಹೋಗದಂತೆ, ಮುಸ್ಲಿಂರ ಈದ್ ಮಿಲಾದ್ ಸೇರಿದಂತೆ ಯಾವುದೇ ಮೆರವಣಿಗೆಗಳು ಡೂಂ ಲೈಟ್ ಸರ್ಕಲ್ಗೆ ಬಾರದಂತೆ ನೋಡಿಕೊಳ್ಳಲಾಗುತ್ತಿದೆ. ಹಾಗಾಗಿ ಸಂಸದ ಮುನಿಸ್ವಾಮಿ ಅದನ್ನು ಪ್ರತ್ಯೇಕವಾಗಿ ನೋಡಲಾಗುತ್ತಿದೆ ಹಾಗಾಗಿ ಅಲ್ಲಿ ರಾಷ್ಟ್ರದ್ವಜ ಹಾರಿಸಬೇಕು ಕ್ಲಾಕ್ ಟವರ್ಗೆ ರಾಷ್ಟ್ರದ್ವಜದ ಬಣ್ಣ ಹಚ್ಚಬೇಕು ಅದಕ್ಕಾಗಿ ನಾನು ಹೋರಾಟ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಜಮೀರ್ ಅಹಮದ್ ನಾವು ಭಾರತೀಯರು ಅಲ್ಲಿ ರಾಷ್ಟ್ರದ್ವಜ ಹಾರಿಸಲು ನಮ್ಮದೇನು ಅಭ್ಯಂತರವಿಲ್ಲ ಅದಕ್ಕಾಗಿ ಹೋರಾಟ ಮಾಡುವ ಅಗತ್ಯವಿಲ್ಲ, ನಾವೇ ಅಲ್ಲಿ ದ್ವಜ ಹಾರಿಸುತ್ತೇವೆ, ಸಂಸದ ಮುನಿಸ್ವಾಮಿ ರಾಜಕೀಯ ಉದ್ದೇಶದಿಂದ ಹೀಗೆ ಮಾಡುತ್ತಿದ್ದಾರೆ ಎಂದು ಟಿವಿ9ಗೆ ಹೇಳಿಕೆ ನೀಡಿದ್ದಾರೆ.
ಕ್ಲಾಕ್ ಟವರ್ ಮೇಲೆ ತ್ರಿವರ್ಣ ಧ್ವಜ ಹಾರಿಸೋದು ನೂರಕ್ಕೆ ನೂರು ಸತ್ಯ: ಸಂಸದ ಎಸ್.ಮುನಿಸ್ವಾಮಿ
ಎರಡು ದಿನದಲ್ಲಿ ಕ್ಲಾಕ್ ಟವರ್ನಲ್ಲಿ ತ್ರಿವರ್ಣ ಧ್ವಜ ಹಾರಿಸಿ ಇತಿಹಾಸ ಸೃಷ್ಟಿಯಾಗುತ್ತೆ. ಎರಡು ದಿನಗಳ ಕಾಲ ಪ್ರತಿಭಟನೆಯನ್ನ ಮುಂದೂಡಲಾಗಿದೆ. ಕ್ಲಾಕ್ ಟವರ್ನಲ್ಲಿ ತ್ರಿವರ್ಣ ಧ್ವಜ ಹಾರಿಸಬೇಕೆಂದು ಗೃಹ ಸಚಿವರು, ಮುಖ್ಯಮಂತ್ರಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ. ಅವರು ಸಹ ಎರಡು ದಿನ ಕಾಲವಾಕಾಶ ಕೇಳಿದ್ದಾರೆ. ಸರ್ಕಾರದಿಂದಲೇ ಎರಡು ದಿನದಲ್ಲಿ ಧ್ವಜ ಹಾರಿಸುವ ಬಗ್ಗೆ ಮೌಕಿಕ ಭರವಸೆ ನೀಡಿದ್ದಾರೆ. ಕ್ಲಾಕ್ ಟವರ್ ಮೇಲೆ ತ್ರಿವರ್ಣ ಧ್ವಜ ಹಾರಿಸೋದು ನೂರಕ್ಕೆ ನೂರು ಸತ್ಯ. 144 ಸೆಕ್ಷನ್ ಜಾರಿ ಇರೋದ್ರಿಂದ ಕಾನೂನಿಗೆ ತಲೆ ಬಾಗುವ ಕೆಲಸ ಮಾಡಿದ್ದೇನೆ. ಇದರಿಂದ ಕೋಲಾರ ಜಿಲ್ಲೆಯ ಜನತೆಯ ಹಲವು ವರ್ಷಗಳ ಕನಸ್ಸು ನನಸ್ಸಾಗುತ್ತೆ. ಎರಡು ದಿನದಲ್ಲಿ ಕ್ಲಾಕ್ ಟವರ್ನಲ್ಲಿ ತ್ರಿವರ್ಣ ಧ್ವಜ ಹಾರಿಸೇ ತೀರುತ್ತೇವೆ. ಎರಡು ದಿನದೊಳಗೆ ಧ್ವಜ ಹಾರಿಸಿಲ್ಲ ಅಂದ್ರೆ, ಪ್ರತಿಭಟನೆಗೆ ಯಾವುದೇ ಅನುಮತಿ ಬೇಕಿಲ್ಲ ಪ್ರತಿಭಟನೆ ನಡೆಸುತ್ತೇನೆ. ದೇಶಪ್ರೇಮಿಗಳಿಗೆ ಈಗಾಗಲೇ ಕರೆ ಕೊಟ್ಟಿದ್ದೇನೆ. ಎರಡು ದಿನದಲ್ಲಿ ರಾಷ್ಟ್ರಧ್ವಜ ಕ್ಲಾಕ್ ಟವರ್ನಲ್ಲಿ ಹಾರಿಸಲಿಲ್ಲ ಅಂದ್ರೆ, 21 ರ ನಂತರ ಸಾವಿರಾರು ದೇಶಭಕ್ತರು ಸೇರಿ ಪ್ರತಿಭಟನೆ ನಡೆಸುತ್ತೇವೆ. ಬಜರಂಗದಳ, ವಿಶ್ವ ಹಿಂದೂಪರಿಷತ್, ಶ್ರೀರಾಮ ಸೇನೆ ದೇಶಭಕ್ತ ತ್ರಿವರ್ಣ ಧ್ವಜ ಹಾರಿಸುವ ಬಗ್ಗೆ ಹೋರಾಟ ಮಾಡಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೋಲಾರದಲ್ಲಿ ನಷ್ಟ ಅನುಭವಿಸಿದ್ದ ರೈತನ ಕೈ ಹಿಡಿದ ಬೆಳೆ; ನಿರೀಕ್ಷೆಗೂ ಮೀರಿ ಲಾಭ ಪಡೆದು ಹಸನಾದ ಬದುಕು
ಇದನ್ನೂ ಓದಿ: ಕೋಲಾರ: ಜಾನಪದ ಗೀತಗಾಯನ ಮೂಲಕ ವಿನೂತನ ರೀತಿಯಲ್ಲಿ ವಾಯುಮಾಲಿನ್ಯ ಜಾಗೃತಿ ಅಭಿಯಾನ; ಅಧಿಕಾರಿಗಳು ಭಾಗಿ
Published On - 3:04 pm, Fri, 18 March 22