ಕೋಲಾರ, ಸೆ.19: ಧಾರ್ಮಿಕ ತಾಣ ಜೊತೆಗೆ ಸಾಹಸಮಯ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ತಾಣ ಕೋಲಾರದ ಬಳಿ ಇರುವ ಅಂತರಗಂಗೆ ಬೆಟ್ಟ(Antara Gange Hills). ಕೋಲಾರದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಈ ಬೆಟ್ಟಕ್ಕೆ ಪ್ರತಿ ದಿನ ಸಾವಿರಾರು ಜನ ಭೇಟಿ ನೀಡುತ್ತಾರೆ. ಸದ್ಯ ಈಗ ಅಂತರಗಂಗೆ ಬೆಟ್ಟದಲ್ಲಿ ವಿವಾದಾತ್ಮಕ ಘಟನೆ ನಡೆದಿದೆ. ಅಂತರಗಂಗೆ ಬೆಟ್ಟದ ಮೇಲೆ ಹಸಿರು ಬಣ್ಣ ಬಳಿದು ವಿವಾದಾತ್ಮಕ ಬರಹ ಬರೆಯಲಾಗಿದೆ.
ಕೆಲ ಕಿಡಿಗೇಡಿಗಳು ಕೋಲಾರದ ಅಂತರಗಂಗೆ ಬೆಟ್ಟದ ಮೇಲೆ ಪಾಕ್ ಧ್ವಜದ ರೀತಿ ಹಸಿರು ಬಣ್ಣದ ಚಿತ್ರ ಬಿಡಿಸಿದ್ದಾರೆ ಹಾಗೂ 786 ಎಂದು ಬರೆದಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಕೋಲಾರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬರಹದ ಮೇಲೆ ಬಿಳಿ ಬಣ್ಣ ಬಳಿದು ಅಳಿಸಿದ್ದಾರೆ. ಸದ್ಯ ಕೋಲಾರದ ಅಂತರಗಂಗೆ ಬೆಟ್ಟದ ಮೇಲೆ ಬರೆಯಲಾಗಿದ್ದ ವಿವಾದಾತ್ಮಕ ಬರಹ ಅಳಿಸಲಾಗಿದೆ. ಆದರೆ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: Antara Gange: ಚಾರಣಿಗರನ್ನು ಆಕರ್ಷಿಸುತ್ತಿದೆ ಅಂತರ ಗಂಗೆ ಬೆಟ್ಟ; ಗೈಡ್ಗಳ ಹಣದಾಹಕ್ಕೆ ಬಲಿಯಾಗುತ್ತಿದೆ ಪ್ರವಾಸಿ ತಾಣ!
ಸಾವಿರಾರು ವರ್ಷಗಳ ಹಿಂದೆ ಮುಚ್ಚುಕುಂದ ಮಹರ್ಷಿಗಳು ಸ್ಥಾಪಿಸಿದ್ದಾರೆಂದು ಹೇಳಲಾಗಿರುವ ಶ್ರೀ ವಿಶ್ವನಾಥ ಸ್ವಾಮಿಯ ಸಣ್ಣ ದೇವಾಲಯವಿದ್ದು ಆ ದೇವಸ್ಥಾನಕ್ಕೆ ಹೋಗುವ ಮೊದಲು ಒಂದು ಸಣ್ಣದಾದ ಕಲ್ಯಾಣಿ ಇದೆ. ಅಂತರಗಂಗೆಯಲ್ಲಿರುವ ಬಸವನ ಬಾಯಿಯಿಂದ ವರ್ಷಪೂರ್ತಿ ನಿರಂತರವಾಗಿ ಪವಿತ್ರ ಗಂಗೆ ಹರಿಯುತ್ತದೆ. ಈ ನೀರು ಹರಿಯುವ ಮೂಲ ಇದುವರೆಗೂ ಯಾರಿಗೂ ತಿಳಿದಿಲ್ಲ. ಈ ನೀರಿನ ಕುರಿತಾಗಿ ಮತ್ತು ಈ ಕ್ಷೇತ್ರಕ್ಕೆ ಅಂತರಗಂಗೆ ಎಂಬ ಹೆಸರು ಬರಲು ಒಂದು ಕುತೂಹಲಕಾರಿಯಾದ ಪೌರಾಣಿಕ ಕಥೆ ಇದೆ. ಹಾಗಾಗಿ ಈ ದೇವಸ್ಥಾನಕ್ಕೆ ಬರುವ ಬರುವ ಬಹುತೇಕ ಭಕ್ತಾದಿಗಳು ಬಸವನ ಬಾಯಿಯಿಂದ ಬರುವ ನೀರಿನಲ್ಲಿ ಮಿಂದು ಈ ಕಲ್ಯಾಣಿಯಲ್ಲಿ ಸ್ನಾನ ಮಾಡಿ ನಂತರ ದೇವಸ್ಥಾನಕ್ಕೆ ಪ್ರವೇಶಿಸುವುದು ಇಲ್ಲಿನ ಸಂಪ್ರದಾಯವಾಗಿದೆ. ಈ ಪವಿತ್ರವಾದ ನೀರು ಔಷದೀಯ ಗುಣಗಳನ್ನು ಹೊಂದಿದ್ದು ಅದರಲ್ಲಿ ಸ್ನಾನ ಮಾಡುವುದರಿಂದ ಅನೇಕ ರೋಗ ರುಜಿನಗಳು ನಿವಾರಣೆಯಾಗುತ್ತದೆ ಎನ್ನುವುದು ಇಲ್ಲಿನ ಭಕ್ತಾದಿಗಳ ನಂಬಿಕೆಯಾಗಿದೆ.
ಕೋಲಾರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:46 pm, Tue, 19 September 23