Antara Gange: ಚಾರಣಿಗರನ್ನು ಆಕರ್ಷಿಸುತ್ತಿದೆ ಅಂತರ ಗಂಗೆ ಬೆಟ್ಟ; ಗೈಡ್​ಗಳ ಹಣದಾಹಕ್ಕೆ ಬಲಿಯಾಗುತ್ತಿದೆ ಪ್ರವಾಸಿ ತಾಣ!

ದಕ್ಷಿಣ ಕಾಶಿ ಕೋಲಾರದ ಎಂದೇ ಕರೆಯುವ ಅಂತರ ಗಂಗೆಗೆ ನಿತ್ಯ ನೂರಾರು ಜನ ಪ್ರವಾಸಿಗರು ಬರುತ್ತಾರೆ. ಆದರೆ, ಇಲ್ಲಿನ ಗೈಡ್​ಗಳು ಹಾಗೂ ಮೂಲ ಸೌಕರ್ಯಗಳ ಕೊರತೆ ಬರುವ ಪ್ರವಾಸಿಗರನ್ನು ಸೆಳೆಯುವಲ್ಲಿ ಪ್ರವಾಸೋದ್ಯಮ ಇಲಾಖೆ ವಿಫಲವಾಗುತ್ತಿದೆ.

Antara Gange: ಚಾರಣಿಗರನ್ನು ಆಕರ್ಷಿಸುತ್ತಿದೆ ಅಂತರ ಗಂಗೆ ಬೆಟ್ಟ; ಗೈಡ್​ಗಳ ಹಣದಾಹಕ್ಕೆ ಬಲಿಯಾಗುತ್ತಿದೆ ಪ್ರವಾಸಿ ತಾಣ!
ಅಂತರ ಗಂಗೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Dec 11, 2021 | 9:02 PM

ಕೋಲಾರ: ಬೆಂಗಳೂರು ನಗರಿಗರನ್ನು ಆಕರ್ಷಿಸುವ ಚಿಕ್ಕಬಳ್ಳಾಪುರದ ನಂದಿ ಬೆಟ್ಟದಂತೆ (Nandi Hills) ಕೋಲಾರ ಜಿಲ್ಲೆಯಲ್ಲೂ ಕಾಶಿ ವಿಶ್ವೇಶ್ವರ ಸಹಿತ ನಂದಿಯ ಬೆಟ್ಟವಿದೆ. ಅದೇ ದಕ್ಷಿಣಕಾಶಿ ಅಂತರಗಂಗೆ ಬೆಟ್ಟ. ವರ್ಷದ 365 ದಿನಗಳು ಬಸವನ ಬಾಯಿಂದ ಬರುವ ನೀರು ಇಲ್ಲಿನ ವಿಶೇಷ. ಬಸವನ ಬಾಯಿಂದ ಬರುವ ನೀರು ಸಾಕ್ಷಾತ್​ ಕಾಶಿಯಿಂದಲೇ ಇಲ್ಲಿಗೆ ಹರಿದು ಬರುತ್ತದೆ ಅನ್ನೋ ಪ್ರತೀತಿ ಹಾಗೂ ನಂಬಿಕೆ ಭಕ್ತರಲ್ಲಿದೆ. ಹಾಗಾಗಿಯೇ ಕೋಲಾರದ ದಕ್ಷಿಣ ಕಾಶಿ ಎಂದೇ ಕರೆಯುವ ಅಂತರ ಗಂಗೆಗೆ ನಿತ್ಯ ನೂರಾರು ಜನ ಪ್ರವಾಸಿಗರು ಬರುತ್ತಾರೆ. ಆದರೆ, ಇಲ್ಲಿನ ಗೈಡ್​ಗಳು ಹಾಗೂ ಮೂಲ ಸೌಕರ್ಯಗಳ ಕೊರತೆ ಬರುವ ಪ್ರವಾಸಿಗರನ್ನು ಸೆಳೆಯುವಲ್ಲಿ ಪ್ರವಾಸೋದ್ಯಮ ಇಲಾಖೆ ವಿಫಲವಾಗುತ್ತಿದೆ.

ಕೋಲಾರದ ಅಂತರ ಗಂಗೆ ಬೆಟ್ಟಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಅದರ ಜೊತೆಗೆ ಈ ಬೆಟ್ಟದ ಮೇಲೆ ಕಾನೂನು ಬಾಹಿರ ಚುಟುವಟಿಕೆಗಳು ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ. ಇತ್ತೀಚಿನ ವರ್ಷಗಳಲ್ಲಿ ಕೋಲಾರ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಬೆಟ್ಟ-ಗುಡ್ಡಗಳು ಸಣ್ಣ ಪುಟ್ಟ ಜರಿ-ಜಲಪಾತಗಳಿಂದ ಜನರನ್ನು ಆಕರ್ಷಿಸುತ್ತಿದೆ. ಜೊತೆಗೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಅದರಲ್ಲಿಯೂ ಪ್ರಮುಖವಾಗಿ ಜಿಲ್ಲಾ ಕೇಂದ್ರದ ಪಕ್ಕದಲ್ಲಿರುವ ಅಂತರಗಂಗೆಗೆ ಪ್ರವಾಸಿಗರು ಆಕರ್ಷಿತರಾಗುತ್ತಿದ್ದಾರೆ. ನಿತ್ಯ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ನೂರಾರು ಜನ ತಂಡಗಳಾಗಿ ಬರುವಂತಹ ಪ್ರವಾಸಿಗರು ಇಲ್ಲಿನ ಮನಸೂರೆಗೊಳಿಸುವ ಪೋಟೋಗಳನ್ನು ಪ್ರವಾಸಿತಾಣಗಳಿಗೆ ಸಂಭಂದಿಸಿದ ಗ್ರೂಪ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಕಾರಣ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದು ದಿನದ ಪ್ರವಾಸಕ್ಕೆ ಅಂತರಗಂಗೆ ಹೇಳಿ ಮಾಡಿಸಿದಂತ ಸ್ಥಳ ಅದಕ್ಕಾಗಿಯೇ ವೀಕೆಂಡ್​ಗೆ ರಜೆ ಸಿಕ್ಕರೆ ಹೆಚ್ಚಿನ ಸಂಖ್ಯೆಯಲ್ಲಿ ಯುವ ಪ್ರವಾಸಿಗರು ಬೆಟ್ಟಕ್ಕೆ ಬರುತ್ತಿದ್ದಾರೆ. ಅದರಲ್ಲಿಯೂ ಸರ್ಕಾರಿ ರಜೆಯ ದಿನಗಳಂದು ಸಾವಿರಾರು ಸಂಖ್ಯೆಯಲ್ಲಿ ಜಿಲ್ಲೆಯತ್ತ ಯುವಕರು ಮುಖ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಚಾರಣಕ್ಕೆ ಹೇಳಿ ಮಾಡಿಸಿದ ಸ್ಥಳ ಅಂತರಗಂಗೆ ಬೆಟ್ಟ: ಅಂತರಗಂಗೆ ಬೆಟ್ಟದಲ್ಲಿ ಪ್ರಮುಖವಾಗಿ ಮೊದಲ ಆಕರ್ಷಣೆಯಾದ ಕಾಶಿ ವಿಶ್ವೇಶ್ವರ ಸ್ವಾಮಿ ಹಾಗೂ ಬಸವಣ್ಣನ ಬಾಯಿಂದ ಬರುವ ಗಂಗೆಯನ್ನು ನೋಡಿ ನೋಡಿ ಪುಳಕಿತರಾಗುವಂತಹ ಪ್ರವಾಸಿಗರು ಹಾಗೇ ಮುಂದೆ ಚಾರಣಕ್ಕೆ ಮುಂದಾಗುತ್ತಿದ್ದಾರೆ. ಬೆಟ್ಟದ ಚಾರಣಕ್ಕೆ ಪ್ರವಾಸೋದ್ಯಮ ಇಲಾಖೆಯು ಒಬ್ಬರಿಗೆ 250 ರೂ.ಗಳನ್ನು ನಿಗದಿಪಡಿಸಿದೆ. ಅದರಂತೆ ಪ್ರವಾಸಿಗರ ಅನುಕೂಲಕ್ಕಾಗಿ ಪ್ರವಾಸಿ ಮಾರ್ಗದರ್ಶಕರನ್ನು ನಿಯೋಜನೆ ಮಾಡಲಾಗಿದೆ. ಆದರೆ, ಸರ್ಕಾರದ ಬೊಕ್ಕಸಕ್ಕೆ ಹೋಗಬೇಕಾದ ಹಣವನ್ನು ಅಲ್ಲಿರುವ ಗೈಡ್‌ಗಳೆ ನುಂಗಿ ಹಾಕುತ್ತಿದ್ದಾರೆ. ಅಂತರಗಂಗೆಗೆ ಬರುವಂತಹ ಹೆಚ್ಚಿನ ಸಂಖ್ಯೆಯ ಪ್ರವಾಸಿಗರಿಗೆ ಚಾರಣದ ವ್ಯವಸ್ಥೆಯಿರುವ ಬಗ್ಗೆ ಮಾಹಿತಿಯಿರುವುದಿಲ್ಲ. ಇಲ್ಲಿಗೆ ಬಂದಾಗ ಚಾರಣದ ಬಗ್ಗೆ ತಿಳಿದು ಚಾರಣಕ್ಕೆ ಹೋಗಲು ಮುಂದಾಗುತ್ತಾರೆ. ಈ ವೇಳೆ ಅಲ್ಲಿ ನಿಷೇಧಿತ ಪ್ರದೇಶ ಎಂದು ಹೆದರಿಸಿ ಅವರಿಂದ ಹಣ ವಸೂಲಿ ಮಾಡುವುದು ಹಾಗೂ ಅವರಿಂದ 250ರಿಂದ 500 ರೂ.ವರೆಗೆ ಪಡೆಯುವ ಗೈಡ್‌ಗಳು ಅವರಿಗೆ ಯಾವುದೇ ರೀತಿಯ ರಸೀದಿಯನ್ನು ನೀಡದೆ ಹಣವನ್ನು ತಮ್ಮ ಜೇಬಿಗೆ ಬಿಟ್ಟುಕೊಳ್ಳುತ್ತಾರೆ.

ಚಾರಣ ಕೈಗೊಳ್ಳುವ ವೇಳೆ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ. ಅಲ್ಲಿ ಬೆಟ್ಟ ಏರುವ ವೇಳೆಯಲ್ಲಿ ಕೆಲವೊಂದು ಅಪಾಯಕಾರಿ ಸ್ಥಳಗಳಲ್ಲಿ ಮುಂಜಾಗ್ರತೆ ವಹಿಸುವಂತೆ ತಿಳಿಸಬೇಕು. ಆದರೆ, ಗೈಡ್‌ಗಳು ಯಾವುದೇ ರೀತಿಯ ಮಾಹಿತಿ ನೀಡುವುದಿಲ್ಲ. ತಮ್ಮ ಪಾಡಿಗೆ ತಾವು ದಾರಿ ತೋರಿಸಿ ತಮ್ಮ ಕೆಲಸ ಮುಗಿಯಿತು ಎಂದು ಕೈತೊಳೆದುಕೊಳ್ಳುತ್ತಾರೆ. ಜೊತೆಗೆ ಕೆಲವೊಂದು ಅಚ್ಚರಿಯ ಸ್ಥಳ ತೋರಿಸಿದಾಗಲೂ ಹಣ ಕೊಡುವಂತೆ ಪ್ರವಾಸಿಗರನ್ನು ಪೀಡಿಸುತ್ತಾರೆ. ಇದು ಪ್ರವಾಸಿಗರಿಗೆ ಮುಜುಗರ ಉಂಟುಮಾಡುತ್ತದೆ. ಹೀಗೆ ಚಾರಣಕ್ಕೆ ಬಂದು ಚಾರಣದ ಅನುಭವ ಪಡೆದು ಪ್ರವಾಸಿಗರೊಬ್ಬರು ಹೇಳುವಂತೆ ಕೋಲಾರ ಬೆಂಗಳೂರಿಗೆ ಸಮೀಪವಿರುವುದರಿಂದ ಒಂದು ದಿನ ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳ. ಅದರಲ್ಲೂ ಒಳ್ಳೆಯ ಮಳೆಯಿಂದ ಬೆಟ್ಟಗಳು ಸುಂದರವಾಗಿ ಕಾಣುತ್ತಿವೆ. ಅದಕ್ಕಾಗಿ ಬೆಂಗಳೂರಿನ ಹೆಚ್ಚಿನ ಪ್ರವಾಸಿಗರು ಕೋಲಾರದ ಸ್ಥಳಗಳಿಗೆ ಬರುತ್ತಿದ್ದು, ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಜಿಲ್ಲಾಡಳಿತ ಹೆಚ್ಚಿನ ಆದ್ಯತೆ ನೀಡಬೇಕಿದೆ. ಅದರಲ್ಲಿಯೂ ಪ್ರಮುಖವಾಗಿ ಅಂತರಗಂಗೆ ಕ್ಷೇತ್ರ ಅಭಿವೃದ್ಧಿಪಡಿಸುವ ಜೊತೆಗೆ ಚಾರಣಕ್ಕೆ ಹೆಚ್ಚಿನ ಒತ್ತು ನೀಡಿದರೆ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಬಹುದಾಗಿದೆ ಎಂಬುದು ಚಾರಣಿಗ ಆನೇಕಲ್​ ಮಂಜುನಾಥ್​ ಅಭಿಪ್ರಾಯ.

ಚಾರಣಕ್ಕೆ ಬುಕ್ಕಿಂಗ್​ ಹೇಗೆ?: ಬೆಂಗಳೂರು ಸುತ್ತಮುತ್ತಲಿನ ಚಾರಣ ಸ್ಥಳಗಳ ಕುರಿತು ಮೈಕೋಟ್ರಿಪ್ ವೆಬ್‌ಸೈಟ್ ಮೂಲಕ ಮಾಹಿತಿ ಪಡೆದು ಚಾರಣಕ್ಕೆ ಬರುವ ಚಾರಣಿಗರು ಹಾಗೂ ಪ್ರವಾಸಿಗರು ಆನ್‌ಲೈನ್ ಮೂಲಕವೇ ಹಣ ಪಾವತಿ ಮಾಡಬಹುದಾಗಿದೆ. ಅದರಂತೆ ಅಂತರಗಂಗೆ ಬೆಟ್ಟದ ಚಾರಣಕ್ಕೆ ಪ್ರತ್ಯೇಕ 250 ರೂ.ಗಳನ್ನು ನಿಗದಿಪಡಿಸಿದ್ದು, ಗೈಡ್‌ಗಳು ಪ್ರವಾಸಿಗರಿಗೆ ಮಾರ್ಗದರ್ಶನ ನೀಡಬೇಕಾಗುತ್ತದೆ.

ಭಯ ಹುಟ್ಟಿಸುತ್ತದೆ ಅನೈತಿಕ ಚಟುವಟಿಕೆಗಳು!: ಇತ್ತೀಚಿನ ದಿನಗಳಲ್ಲಿ ಅಂತರಗಂಗೆ ಬೆಟ್ಟದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿರುವುದು ಪ್ರವಾಸಿಗರಿಗೆ ಭಯ ಹಾಗೂ ಆತಂತಕಕ್ಕೆ ಕಾರಣವಾಗಿದೆ. ಬೆಟ್ಟದ ಮೇಲೆ ಮದ್ಯ ಸೇವನೆ ಮಾಡುವ ಯುವಕರ ಗುಂಪು ಹಾಗೂ ಎಲ್ಲೆಂದರಲ್ಲಿ ಬಾಟಲಿಗಳನ್ನು ಎಸೆದಿರುವುದು, ಬೀಡಿ ಸಿಗರೇಟ್​ ಸೇದಿಕೊಂಡು ಓಡಾಡುವ ಪುಂಡು- ಪೋಕರಿಗಳ ಗುಂಪು ಇಲ್ಲಿಗೆ ಬರುವ ಪ್ರೇಮಿಗಳು ಹಾಗೂ ಕುಟುಂಬಸ್ಥರಿಗೆ ಈ ಸ್ಥಳ ಸುರಕ್ಷಿತವೇ ಎನ್ನುವ ಪ್ರಶ್ನೆ ಹುಟ್ಟಿಹಾಕುತ್ತದೆ. ಹಾಗಾಗಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಇನ್ನು, ಅಂತರಗಂಗೆಯ ಬಗ್ಗೆ ಜಿಲ್ಲಾಧಿಕಾರಿ ಡಾ.ಆರ್​. ಸೆಲ್ವಮಣಿ ಹಾಗೂ ಎಸ್ಪಿ ಡಿ. ಕಿಶೋರ್​ ಬಾಬು ಹೇಳೋದು ಹೀಗೆ. ಈಗಾಗಲೇ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮಪ್ತಿಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ ಬೆಟ್ಟದ ಎರಡೂ ಸ್ಥಳಗಳಲ್ಲಿ ಪೊಲೀಸ್​ ಚೌಕಿ ನಿರ್ಮಾಣ ಮಾಡಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುತ್ತಿದೆ. ಪ್ರವಾಸಿಗರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

(ವರದಿ: ರಾಜೇಂದ್ರ ಸಿಂಹ)

ಇದನ್ನೂ ಓದಿ: ದತ್ತಜಯಂತಿ ಹಿನ್ನೆಲೆ: 3 ದಿನಗಳ ಕಾಲ ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

ಶನಿವಾರ, ಭಾನುವಾರ ನಂದಿಗಿರಿಧಾಮಕ್ಕೆ ಪ್ರವೇಶ ಇಲ್ಲ! ನಿರಾಸೆಯಿಂದ ವಾಪಸ್ ಹೋಗುತ್ತಿರುವ ಪ್ರವಾಸಿಗರು

Published On - 8:30 pm, Sat, 11 December 21