ಕೋಲಾರ: ಆತ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಾ ಜೀವನ ಮಾಡುತ್ತಿದ್ದವರು ಆದರೆ ಆ ಬದುಕು ತೃಪ್ತಿ ಕೊಡದ ಹಿನ್ನೆಲೆ ಕೃಷಿ ಜೀವನಕ್ಕೆ ಕಾಲಿಟ್ಟು ಇಂದು ಕೃಷಿಯಲ್ಲಿ ಲಕ್ಷ ಲಕ್ಷ ಸಂಪಾದನೆ ಮಾಡುವ ಜೊತೆಗೆ ಸಾವಯವ ಪಂಡಿತರಾಗಿ ತನ್ನ ಕೃಷಿ ಭೂಮಿಯನ್ನೇ ಎರೆಹುಳುವಿನ ತವರು ಮನೆ ಎನ್ನವಂತೆ ಮಾಡಿದ್ದಾರೆ.
ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕೃಷಿ ಮಾಡಬೇಕೆಂಬ ಬಯಕೆ ಬಂದಿತ್ತು
ಕೋಲಾರ ತಾಲೂಕು ಚಿಟ್ನಹಳ್ಳಿ ಗ್ರಾಮದಲ್ಲಿ ರೈತ ನಾಗರಾಜ್ ಕಳೆದ ಹಲವು ವರ್ಷಗಳಿಂದ ಸಾವಯವ ಕೃಷಿ ಮಾಡುವ ಮೂಲಕ ಯಶಸ್ವಿ ರೈತರಾಗಿದ್ದಾರೆ. ಮೊದಲು ಕೈಗಾರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ ಕೃಷಿಯಲ್ಲಿ ಆಸಕ್ತರಾಗಿ ಅಲ್ಲೇ ಹೊಸ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿ ಕೆಲವು ವರ್ಷಗಳ ಕಾಲ ರಾಸಾಯನಿಕ ಕೃಷಿ ಮಾಡಲು ಶುರು ಮಾಡಿದರು. ಆದರೆ ರಾಸಾಯನಿಕ ಕೃಷಿಯಿಂದ ಬದುಕು ನಶ್ವರ ಅನ್ನೋದನ್ನ ಅರಿತ ನಾಗರಾಜ್ ಸಾಂಪ್ರದಾಯಿಕ ಹಾಗೂ ರಾಸಾಯನಿಕ ಮುಕ್ತ ಸಾವಯವ ಕೃಷಿ ಆರಂಭಿಸಿದ್ದಾರೆ.
ಸಾವಯವ ಕೃಷಿ ಆರಂಭಿಸಿದ್ದ ನಂತರವೇ ಅವರ ನಿಜವಾದ ಕೃಷಿ ಬದುಕು ಆರಂಭವಾಗಿದ್ದು
ಸಾವಯವ ಕೃಷಿ ಆರಂಭಿಸಿದ ನಾಗರಾಜ್ ಮೊದಲು ದೇಸಿ ತಳಿಯ ಹಸುಗಳನ್ನು ಸಾಕಾಣೆ ಮಾಡಲು ಆರಂಭಿಸಿದರು, ಅದರಿಂದ ಗಂಜಲ ಮತ್ತು ಸಗಣಿಯಿಂದ ಸಾವಯವ ಜೀವಾಂಮೃತ ತಯಾರು ಮಾಡಿ, ನಂತರ ಎರೆಹುಳು ತೊಟ್ಟಿಗಳನ್ನು ಮಾಡಿ ಅಲ್ಲಿ ಎರೆಹುಳು ಉತ್ಪಾದನೆ ಮಾಡುವ ಮೂಲಕ ಸಾವಯವ ಕೃಷಿ ಆರಂಭಿಸಿದ್ದಾರೆ. ಇದರಿಂದ ನಾಗರಾಜ್ ಅವರಿಗೆ ಖರ್ಚಿಲ್ಲದೆ, ತಮ್ಮ ಭೂಮಿಯಲ್ಲಿ ರೇಷ್ಮೆ ಸೇರಿದಂತೆ ಹಲವು ಬಗೆಯ ತರಕಾರಿ ಬೆಳೆಗಳನ್ನು ಬೆಳೆಯುತ್ತಾ ವಾರ್ಷಿಕ ಏಳೆಂಟು ಲಕ್ಷ ಸಂಪಾದನೆ ಮಾಡುವ ಮೂಲಕ ನೆಮ್ಮದಿಯ ಬದುಕು ಕಂಡುಕೊಂಡಿದ್ದೇನೆ ಅನ್ನೋದು ನಾಗರಾಜ್ ಅವರ ಮಾತು.
ಈ ರೈತನ ಕೃಷಿ ಭೂಮಿಯಲ್ಲಿ ಎರೆಹುಳು ತವರು ಮನೆಯಂತಿದೆ
ರೈತ ನಾಗರಾಜ್ ಅವರು ಎಷ್ಟರಮಟ್ಟಿಗೆ ಸಾವಯವ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ ಅನ್ನೋದಕ್ಕೆ ಅವರ ಎರಡು ಎಕರೆ ಭೂಮಿಯೇ ನಮಗೆ ಪ್ರಯೋಗಶಾಲೆ. ಯಾಕಂದ್ರೆ ಅವರ ಭೂಮಿಯ ಯಾವುದೇ ಭಾಗದಲ್ಲಿ ನೀವು ಭೂಮಿಯನ್ನು ಅಗೆದರೆ ಅಲ್ಲಿ ಸಮೃದ್ದವಾಗಿ ಎರೆಹುಳುಗಳು ಕಂಡುಬರುತ್ತದೆ, ಅಷ್ಟರ ಮಟ್ಟಿಗೆ ನಾಗರಾಜ್ ಸಾವಯವ ಕೃಷಿಯನ್ನು ಅನುಸರಿಸುತ್ತಿದ್ದಾರೆ. ಇವರ ತೋಟವನ್ನು ನೋಡಿದರಂತೂ ಇದೇನು ಎರೆಹುಳುವಿನ ತವರು ಮನೆನಾ ಎನ್ನುವರಷ್ಟರ ಮಟ್ಟಿಗೆ ಆಶ್ಚರ್ಯವಾಗುತ್ತೆ.
ನಾಗರಾಜ್ ಅವರ ತೋಟಕ್ಕೆ ಹೊರ ಜಿಲ್ಲೆ ಹೊರ ರಾಜ್ಯದ ರೈತರು ಬರ್ತಾರೆ
ಇವರ ಸಾವಯವ ಕೃಷಿಯನ್ನು ನೋಡಲು ಹೊರ ಜಿಲ್ಲೆ ಹೊರ ರಾಜ್ಯಗಳಿಂದಲೂ ನೂರಾರು ಜನ ರೈತರು ಇಲ್ಲಿಗೆ ಬರುತ್ತಾರೆ. ವಿಷವಿಲ್ಲದ ಆರೋಗ್ಯಕರವಾದ ಕೃಷಿ ಪದ್ದತಿಯನ್ನು ಕಂಡು ಸಂತೋಷ ಪಡುತ್ತಿದ್ದಾರೆ. ಇನ್ನು ಇವರ ಸರಳ ಸಾವಯವ ಕೃಷಿ ವಿಧಾನಗಳನ್ನು ಕಂಡು ಸ್ಥಳೀಯ ರೈತರು ಸಾವಯವ ಕೃಷಿ ಪಂಡಿತ ಎಂದೇ ಕರೆಯುತ್ತಾರೆ. ಅಲ್ಲದೆ ಇವರ ಕೃಷಿ ಪದ್ದತಿಯನ್ನು ಕಂಡು ಜಿಕೆವಿಕೆ, ಕೃಷಿ ವಿಜ್ನಾನ ಕೇಂದ್ರ, ಸೇರಿ ಹಲವು ಸಂಘ ಸಂಸ್ಥೆಗಳು ಇವರಿಗೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ನಾಗರಾಜ್ ಅವರ ಕಾರ್ಯಕ್ಕೆ ಸ್ಥಳೀಯರ ಪ್ರಶಂಸೆ ಕೂಡಾ ಇದೆ.
ಒಟ್ಟಾರೆ ರಾಸಾಯನಿಕ ಮುಕ್ತ ವ್ಯವಸಾಯ, ವಿಷ ಮುಕ್ತ ಆಹಾರ ಎನ್ನುವ ಮೂಲಕ ಸಾವಯವ ಕೃಷಿಯಿಂದ ಬದುಕು ಕಟ್ಟಿಕೊಂಡಿರುವ ನಾಗರಾಜ್ ಪ್ರಸಕ್ತ ಸಮಾಜಕ್ಕೆ ನಿಜಕ್ಕೂ ಮಾದರಿ, ವಿಷಮುಕ್ತ ಆಹಾರ ಆರೋಗ್ಯಕರ ಜೀವನಕ್ಕಾಗಿ ಇಡೀ ವಿಶ್ವವೇ ಹೋರಾಟ ಮಾಡುತ್ತಿರುವಾಗ ನಾಗರಾಜ್ ಅವರ ಕೃಷಿ ಬದುಕು ನಿಜಕ್ಕೂ ಎಲ್ಲರಿಗೂ ಮಾದರಿ ಅನ್ನೋದರಲ್ಲಿ ಎರಡು ಮಾತಿಲ್ಲ.
ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ
ಇದನ್ನೂ ಓದಿ: ಬೆಂಗಳೂರಿನಲ್ಲಿ ಚಿನ್ನದ ವ್ಯಾಪಾರಿಗೆ ಬೆದರಿಸಿ 1 ಕೋಟಿ ರೂಪಾಯಿಗೂ ಹೆಚ್ಚು ಹಣ ದರೋಡೆ ಮಾಡಿದ್ದ ಆರೋಪಿಗಳು ಅರೆಸ್ಟ್!