ಕೋಲಾರ: ಶ್ರೀರಾಮ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ 6 ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಟಿವಿ9ಗೆ ಉನ್ನತ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಮೊಬೈಲ್, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ತಡರಾತ್ರಿವರೆಗೂ ಮೊಬೈಲ್, ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮಾಡಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರ ತಲಾಶ್ ಮುಂದುವರಿದಿದೆ. ಘಟನೆಯ ಬಳಿಕ ಇದೀಗ ಕೋಲಾರ ಜಿಲ್ಲೆ ಮುಳಬಾಗಿಲು ಸಹಜ ಸ್ಥಿತಿಗೆ ಮರಳುತ್ತಿದೆ. ಪಟ್ಟಣದಲ್ಲಿ ಕಿಡಿಗೇಡಿಗಳು ನಿನ್ನೆ ರಾತ್ರಿ ಕಲ್ಲು ತೂರಾಟ ನಡೆಸಿದ್ದರು. ಕಾರುಗಳು, ಅಂಗಡಿಗಳು, ಸವಾರರ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಕಲ್ಲು ತೂರಾಟ ನಡೆಸಿ ಕಿಡಿಗೇಡಿಗಳು ಬೈಕ್ಗೆ ಬೆಂಕಿ ಹಚ್ಚಿದ್ದರು. ಇದೇ ವೇಳೆ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿತ್ತು.
ಘಟನಾ ಸ್ಥಳಕ್ಕೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಎಸ್ಪಿಯಿಂದ ಐಜಿಪಿ ಮಾಹಿತಿ ಪಡೆದಿದ್ದಾರೆ. ಪಟ್ಟಣದಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಹೆಚ್ಚುವರಿಯಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಕಲ್ಲು ತೂರಾಟದ ವೇಳೆ ಪವರ್ ಕಟ್ ಕುರಿತು ಪರಿಶೀಲನೆ ಮಾಡಲಾಗುತ್ತಿದೆ. ಎಲ್ಲವೂ ತನಿಖೆ ಹಂತದಲ್ಲಿದೆ ಎಂದು ಘಟನಾ ಸ್ಥಳಕ್ಕೆ ಭೇಟಿ ಬಳಿಕ ಕೇಂದ್ರ ವಲಯ ಐಜಿಪಿ ಎಂ. ಚಂದ್ರಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ.
ಶೋಭಾಯಾತ್ರೆ ವೇಳೆ ಕಲ್ಲು ತೂರಾಟ ಪ್ರಕರಣ ಹಿನ್ನೆಲೆ ಕೋಲಾರ ಜಿಲ್ಲೆ ಮುಳುಬಾಗಿಲು ತಾಲೂಕಿನಲ್ಲಿ ಟೈಟ್ ಸೆಕ್ಯೂರಿಟಿ ನೀಡಲಾಗಿದೆ. ಅಹಿತಕರ ಘಟನೆಗಳು ನಡೆಯಂತೆ ಪೊಲೀಸ್ ಬಂದೋಬಸ್ತ್ ಇದೆ. 6 DAR, 2 ಕೆಎಸ್ಆರ್ಪಿ ತುಕಡಿ, 6 ಪಿಐ, ಇಬ್ಬರು DySP ಹಾಗೂ ಕೋಲಾರ ಎಸ್ಪಿ ಘಟನಾ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಕಲ್ಲು ತೂರಾಟ ಪ್ರಕರಣದಲ್ಲಿ ಲಾಠಿ ಚಾರ್ಜ್ ನಡೆದ ರಸ್ತೆಯಲ್ಲಿ ಅಂಗಡಿಗಳ ಗಾಜು ಪುಡಿ ಆಗಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಆಟೋ ಮೊಬೈಲ್ ಶಾಪ್, 2 ಕಾರುಗಳ ಗಾಜು ಪುಡಿಪುಡಿ ಆಗಿದೆ. ಮುಳಬಾಗಿಲು ಸೋಮೇಶ್ವರ ಪಾಳ್ಯ ರಸ್ತೆಯಲ್ಲಿರುವ ಮಳಿಗೆಗಳಿಗೆ ಕಲ್ಲೆಸೆದು ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ. ಇದೀಗ ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕುತ್ತಿರುವ ಪೊಲೀಸರು ಎಲ್ಲಾ ಆರೋಪಿಗಳನ್ನು ಪತ್ತೆಹಚ್ಚಲು ಕಾರ್ಯೋನ್ಮುಖರಾಗಿದ್ದಾರೆ.
ಇದನ್ನೂ ಓದಿ: ಶ್ರೀರಾಮ ಶೋಭಾಯಾತ್ರೆ ವೇಳೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ; ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಾಠಿ ಪ್ರಹಾರ
ಇದನ್ನೂ ಓದಿ: ಕರಗ ದರ್ಗಾಗೆ ಹೋಗುವ ಸಂಪ್ರದಾಯಕ್ಕೆ ತೀವ್ರ ವಿರೋಧ; 300 ವರ್ಷಗಳ ನಂಟನ್ನು ಮುರಿಯಲು ಮುಂದಾದ ಹಿಂದೂ ಪರ ಸಂಘಟನೆಗಳು
Published On - 8:02 am, Sat, 9 April 22