ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಕೂರನಹೊಸಹಳ್ಳಿ ಗ್ರಾಮದ ತನ್ನ ಮನೆಯೊಂದರಲ್ಲಿ ಎಲ್ಲರೊಂದಿಗೆ ನಗುನಗುತಾ ಆಟವಾಡಿಕೊಂಡಿದ್ದ ಬಾಲಕಿಯೊಬ್ಬಳು, ಆಕೆಯ ತಂದೆ ಪಡಿತರ ಅಂಗಡಿಗೆ ಹೋಗಿ ತಮ್ಮ ಕುಟುಂಬದ ಪಾಲಿನ ಅಕ್ಕಿಯನ್ನು ಮನೆಗೆ ತರುವಷ್ಟರಲ್ಲಿ ಶವವಾಗಿ ಪತ್ತೆಯಾಗಿದ್ದು; ಆಕೆಯ ಸಾವು ಅಕಸ್ಮಿಕವೋ, ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವುದು ಶೋಕಸಾಗರದಲ್ಲಿ ಮುಳುಗಿರುವ ಆಕೆಯ ಕುಟುಂಬಕ್ಕೆ, ಊರಿನವರಿಗೆ ಮತ್ತು ಪೊಲೀಸರಿಗೂ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ. ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಭಾವಿಸಿದ ಪಾಲಕರು ಅಂತ್ಯಕ್ರಿಯೆಯನ್ನೂ ಮಾಡಿ ಮುಗಿಸಿದ್ದರು. ಆದರೆ, ಸಾವಿನ ಬಗ್ಗೆ ಆನುಮಾನಗಳು ಹುಟ್ಟಿದ ಮೇಲೆ ಹೂತಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ.
ಸ್ನೇಹ ಎಂದು ಗುರುತಿಸಲಾಗಿರುವ 14 ವರ್ಷದ ಮೃತ ಬಾಲಕಿ ನವೆಂಬರ್ 16 ರಂದು ಮನೆಯಲ್ಲಿ ಎಲ್ಲರೊಂದಿಗೆ ದೀಪಾವಳಿ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಿದ್ದಳು. ಮಾರನೇ ದಿನ ಆಕೆಯ ತಂದೆ ಶ್ರೀನಿವಾಸ ತಮ್ಮ ಎರಡನೇ ಮಗಳನ್ನು (ಸ್ನೇಹಳ ತಂಗಿ) ಪಡಿತರ ಆಂಗಡಿಗೆ ಕರೆದುಕೊಂಡು ಹೋಗುವ ಮುನ್ನ, ಮೊಬೈಲ್ನಲ್ಲಿ ಆಟವಾಡುತ್ತಿದ್ದ ಸ್ನೇಹಳಿಂದ ಫೋನನ್ನು ಇಸಿದುಕೊಂಡಿದ್ದರು.
ಅವರು ಅಕ್ಕಿ ತೆಗೆದುಕೊಂಡು ಮನೆಗೆ ಬಂದಾಗ ಸ್ನೇಹ ಮಂಚದ ಮೇಲೆ ನಿಶ್ಚೇಷ್ಟಿತಳಾಗಿ ಮಲಗಿರುವುದನ್ನು ಕಂಡು ಎಬ್ಬಿಸಲು ಹೋಗಿದ್ದಾರೆ. ಆದರೆ ಆಕೆಯ ಮೈಯೆಲ್ಲ ತಣ್ಣಗಾಗಿದ್ದು ಕಂಡು ಗಾಬರಿಗೊಂಡಿದ್ದಾರೆ. ಶ್ರೀನಿವಾಸ್, ಬಾಮ್ ಒಂದರಿಂದ ಆಕೆಯ ಕಾಲನ್ನು ತಿಕ್ಕಿ, ಸ್ನೇಹಳಿಂದ ಪ್ರತಿಕ್ರಿಯೆ ಬಾರದಿದ್ದಾಗ ಪಕ್ಕದೂರಿನ ಅಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಆಕೆ ಮೃತಪಟ್ಟಿರುವುದನ್ನು ದೃಢೀಕರಿಸಿದ್ದಾರೆ. ಆಕೆಯ ಕತ್ತಿನ ಮೇಲಿದ್ದ ಗಾಯದ ಗುರುತನ್ನು ನೋಡಿ, ಮೊಬೈಲ್ ಫೋನನ್ನು ತೆಗೆದುಕೊಂಡು ಹೋಗಿದ್ದಕ್ಕೆ ಬೇಜಾರಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಭಾವಿಸಿ ಶವಸಂಸ್ಕಾರ ನಡೆಸಿದ್ದಾರೆ.
ಆದರೆ, ಅಕೆಯ ಸೋದರಮಾವನಾಗಿರುವ ನಾಗೇಶ್ ಎನ್ನುವವರಿಗೆ; ಸ್ನೇಹ ಬುದ್ಧಿವಂತೆ, ವಿವೇಕಶೀಲೆ, ಓದಿನಲ್ಲಿ ಚುರುಕು ಎನ್ನುವ ವಿಷಯ ಗೊತ್ತಿತ್ತು. ಮೊಬೈಲ್ನಂಥ ಸಣ್ಣ ವಿಚಾರಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿರಲಾರಳು ಎಂಬುದನ್ನು ಗ್ರಹಿಸಿ ಮಾಸ್ತಿ ಪೊಲೀಸ್ ಠಾನಣೆಗೆ ದೂರು ನೀಡಿ ಆಕೆಯ ಸಾವಿನ ತನಿಖೆ ನಡೆಸುವಂತೆ ಕೋರಿದ್ದಾರೆ. ಅವರ ದೂರಿ ಆಧಾರದ ಮೇಲೆಯೇ, ಗುರುವಾರದಂದು ಪೊಲೀಸರು ಮಾಲೂರು ತಹಸಿಲ್ದಾರ್ ಅವರ ಸಮಕ್ಷಮದಲ್ಲಿ ಮೃತಳ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದರು. ವರದಿಯಲ್ಲೇನಿದೆ ಅನ್ನುವುದು ಇನ್ನೂ ಗೊತ್ತಾಗಿಲ್ಲ. ಸ್ನೇಹಳ ಆಕಸ್ಮಿಕ ಸಾವು ಹಲವು ಅನುಮಾನಗಳನ್ನು ಮೂಡಿಸಿದೆ. ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ಸಹ ನೀಡದೆ ಅಂತ್ಯಸಂಸ್ಕಾರ ನಡೆಸಿರೋದು, ಸಾವು ಹೇಗಾಯ್ತು ಅನ್ನೋದರ ಬಗ್ಗೆ ನಿಖರ ಮಾಹಿತಿ ಸಿಗದಿರುವುದು ಗೊಂದಲ ಮೂಡಿಸುತ್ತಿದೆ.
ಪೊಲೀಸರ ತನಿಖೆಯಿಂದಷ್ಟೆ ಸತ್ಯ ಬಯಲಿಗೆ ಬರಬೇಕು.