ಕೋಲಾರ: ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ಗ್ರಾಮಗಳಲ್ಲಿ ಅಳವಡಿಸಿದ ಸೋಲಾರ್ ಬೀದಿ ದೀಪಗಳು ಸಮರ್ಪಕವಾಗಿ ನಿರ್ವಹಿಸದ ಪರಿಣಾಮ, ಬಹುತೇಕ ಕಡೆಗಳಲ್ಲಿ ದೀಪಗಳು ಇದ್ದೂ ಇಲ್ಲದಂತಾಗಿವೆ.
ರಾತ್ರಿ ವೇಳೆ ಗ್ರಾಮದ ಜನರ ಅನುಕೂಲಕ್ಕಾಗಿ ಗ್ರಾಮ ಪಂಚಾಯಿತಿ ವತಿಯಿಂದ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಅದರಂತೆ ವಿದ್ಯುತ್ ವ್ಯತ್ಯಯವಾದ ಸಂದರ್ಭದಲ್ಲಿ ಜನರಿಗೆ ಸೋಲಾರ ಬೀದಿ ದೀಪ ಅನುಕೂಲವಾಗುತ್ತಿದೆ. ಆದರೆ, ಗ್ರಾಮಗಳಲ್ಲಿ ಅಳವಡಿಕೆ ಮಾಡಿರುವ ಸೋಲಾರ್ ಬೀದಿ ದೀಪದ ಪ್ಯಾನಲ್‌ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ದೀಪಗಳು ಉರಿಯುತ್ತಿಲ್ಲ. ಇದರಿಂದ ದೀಪಗಳು ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಸೋಲಾರ್ ಬೀದಿ ದೀಪದ ಮೇಲೆ ಅಳವಡಿಸುವಂತಹ ಪ್ಯಾನಲ್‌ಗಳನ್ನು ನಿಯಮಿತವಾಗಿ ನಿರ್ವಹಣೆ ಮಾಡಬೇಕಾಗುತ್ತದೆ. ಅದರಂತೆ ಪ್ಯಾನಲ್ ಮೇಲಿರುವಂತಹ ಧೂಳು ತೆಗೆಯುವುದು, ಪ್ಯಾನಲ್ ಒಳಗೆ ನೀರು ಹೋಗಿದ್ದರೆ ತೆಗೆಯುವ ಕೆಲಸ ಮಾಡಬೇಕಾಗುತ್ತದೆ. ಇದರೊಂದಿಗೆ ಸಮರ್ಪಕವಾಗಿ ಬ್ಯಾಟರಿ ಚಾರ್ಟ್ ಆಗುತ್ತಿದೆಯೇ ಎಂಬುದು ಆಗಿಂದಾಗೆ ಪರಿಶೀಲಿಸಿಕೊಳ್ಳಬೇಕಾಗುತ್ತದೆ.
ಸೋಲಾರ್ ನಿರ್ವಹಣೆ ಇಲ್ಲದಿರುವುದು ಸಮಸ್ಯೆ
ಅಧಿಕಾರಿಗಳು ಒಮ್ಮೆ ಬೀದಿ ದೀಪ ಅಳವಡಿಸಿದ ಬಳಿಕ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಹೀಗಾಗಿ ಬಹುತೇಕ ಕಡೆಗಳಲ್ಲಿ ದೀಪಗಳು ಉರಿಯುತ್ತಿಲ್ಲ. ಇನ್ನು ಬಹುತೇಕ ಗ್ರಾಮಗಳಲ್ಲಿ ಇಂಥಹದ್ದೇ ಪರಿಸ್ಥಿತಿ ಇರುವ ಕಾರಣ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದರಿಂದ ಗ್ರಾಮಪಂಚಾಯ್ತಿಗಳಲ್ಲಿ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಗ್ರಾ. ಪಂಗಳನ್ನು ವಿದ್ಯುತ್ ಮುಕ್ತ ಕಟ್ಟಡಗಳಾಗಿ ಪರಿವರ್ತಿಸಲು ಸರಕಾರ ಮುಂದಾಗಿದೆ. ಅದರಂತೆ ಜಿಲ್ಲೆಯ 156 ಗ್ರಾ.ಪಂ. ಕಟ್ಟಡಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕ ಕೊಡಿಸಲು ಮುಂದಾಗಿದ್ದು, ಗ್ರಾ.ಪಂ. ಕಟ್ಟಡಗಳ ಮೇಲ್ಭಾಗದಲ್ಲಿ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಕೆ ಮಾಡುವ ಮೂಲಕ ಗ್ರಾ.ಪಂ.ಗಳಿಗೆ ಅಗತ್ಯ ವಿದ್ಯುತ್ ಉತ್ಪಾದಿಸಿ ಬಳಸಲು ಯೋಜನೆ ರೂಪಿಸಲಾಗಿದೆ. ಅದರಂತೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸೋಲಾರ್ ವ್ಯವಸ್ಥೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಸೋಲಾರ್ ಪ್ಯಾನಲ್‌ಗಳ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಆ ಮೂಲಕ ಸಾರ್ವಜನಿಕ ಹಣ ಪೋಲಾಗದಂತೆ ಅಕಾರಿಗಳು ಎಚ್ಚರ ವಹಿಸಬೇಕಿದೆ.
ಸಾರ್ವಜನಿಕರ ಸೇವೆಗಳು ಅಡ್ಡಿಯಾಗುವುದಿಲ್ಲ
ಗ್ರಾ.ಪಂ.ಗಳ ಪ್ರತಿಯೊಂದು ಸೇವೆಯನ್ನೂ ಆನ್‌ಲೈನ್‌ಗೊಳಿಸಿರುವ ಹಿನ್ನೆಲೆಯಲ್ಲಿ ಕಂಪ್ಯೂಟರ್‌ಗಳ ಬಳಕೆಗೆ ವಿದ್ಯುತ್ ಅನಿವಾರ್ಯವಾಗಿದೆ. ಆದರೆ, ಗ್ರಾಪಂಗಳಲ್ಲಿ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಕೆಲಸ ಸ್ಥಗಿತಗೊಳಿಸುವ ಪರಿಸ್ಥಿತಿಯಿದ್ದು, ಸೋಲಾರ್ ಅಳವಡಿಕೆಯಿಂದ ಸಮಸ್ಯೆಗೆ ಪರಿಹಾರ ಪಡೆಯಬಹುದೆಂಬುದು ಇನೊಂದು ಅನುಕೂಲ. ಗ್ರಾ.ಪಂ ಬರುವ ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ ವಿದ್ಯುತ್ ನೆಪವೊಡ್ಡಿ ದಿನಗಟ್ಟಲೆ ಕಾಯಿಸುವ ಕೆಲಸ ತಪ್ಪುತ್ತದೆ ಅನ್ನೋದು ಅಧಿಕಾರಿಗಳ ಅಭಿಪ್ರಾಯ.
ವಿದ್ಯುತ್ ಮುಕ್ತ ಕಟ್ಟಡಗಳನ್ನಾಗಿಸಬೇಕು
ಗ್ರಾ.ಪಂ.ಗಳಿಗೆ ಅಗತ್ಯವಿರುವ 2 ಕಿಲೋ ವ್ಯಾಟ್ ವಿದ್ಯುತ್ ಆಧಾರದ ಮೇಲೆ ಸೋಲಾರ್ ಪ್ಯಾನಲ್ ಅಳವಡಿಕೆ ವೆಚ್ಚ ತೀರ್ಮಾನವಾಗಲಿದೆ. ಅದರಂತೆ 1.5 ರಿಂದ 2 ಲಕ್ಷ ರೂ. ವೆಚ್ಚದಲ್ಲಿ 2 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಉಪಕರಣಗಳನ್ನು ಅಳವಡಿಸಬಹುದಾಗಿದೆ. ಗ್ರಾ.ಪಂ. ಕಚೇರಿಯಲ್ಲಿರುವ ಕಂಪ್ಯೂಟರ್, ಫ್ಯಾನ್, ವಿದ್ಯುತ್ ದೀಪಗಳಿಗೆ ವಿದ್ಯುತ್ ಬಳಕೆ ಮಾಡಬಹುದಾಗಿದೆ. ಹೀಗೆ ಎಲ್ಲವೂ ಸೋಲಾರಿಕರಣವಾದಲ್ಲಿ ವಿದ್ಯುತ್ ಮುಕ್ತ ಕಟ್ಟಡಗಳಾಗಿ ಗ್ರಾ.ಪಂ. ಮಾರ್ಪಾಟಾಗುತ್ತದೆ. ಇನ್ನು ವಿದ್ಯುತ್ ಬಳಕೆಯಲ್ಲಿ ಗ್ರಾ.ಪಂಗಳು ಸ್ವಾವಲಂಬನೆ ಉದ್ದೇಶದಿಂದ ಗ್ರಾ.ಪಂ. ಕಚೇರಿ ಮೇಲ್ಛಾವಣಿ ಮೇಲೆ ಸೋಲಾರ್ ಪ್ಯಾನಲ್ ಅಳವಡಿಸುವಂತೆ ಸೂಚಿಸಲಾಗಿದೆ. ಅದರಂತೆ ಈಗಾಗಲೇ 24 ಗ್ರಾ.ಪಂ.ಗಳಲ್ಲಿ ಸೋಲಾರ್ ವ್ಯವಸ್ಥೆ ಅನುಷ್ಟಾನಗೊಳಿಸಿದ್ದು, ಬೀದಿ ದೀಪಗಳ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಉಕೇಶ್ ಕುಮಾರ್ ತಿಳಿಸಿದ್ದಾರೆ.
ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ
ಇದನ್ನೂ ಓದಿ: ಅಮೃತ ಗ್ರಾಮ ಯೋಜನೆಗೆ ಧಾರವಾಡದ 17 ಗ್ರಾಮಗಳ ಆಯ್ಕೆ; ಹೈಟೆಕ್ ಆಗಲಿವೆ ಹಳ್ಳಿಗಳು