ಧಾರವಾಡ: ಭಾರತ ಹಳ್ಳಿಗಳ ದೇಶ. ಹಳ್ಳಿಗಳು ಉದ್ಧಾರವಾದರೆ ದೇಶ ಉದ್ಧಾರವಾದಂತೆ ಎಂಬುದು ಮಹಾತ್ಮಾ ಗಾಂಧಿ ಅವರ ಮಾತು. ಇದನ್ನೇ ಗಮನದಲ್ಲಿಟ್ಟುಕೊಂಡು ಗ್ರಾಮ ಪಂಚಾಯತ್ ಎಂಬ ಪರಿಕಲ್ಪನೆ ಜಾರಿಗೆ ಬಂದಿದೆ. ಗ್ರಾಮ ಪಂಚಾಯತ್ಗಳ ಮೂಲಕ ಜನರಿಗೆ ಅಧಿಕಾರ ನೀಡುವುದು ಇದರ ಹಿಂದಿರುವ ಉದ್ದೇಶ. ಇಂಥ ಉದ್ದೇಶಗಳ ಪೈಕಿ ಇತ್ತೀಚಿಗೆ ಹೆಚ್ಚು ಗಮನ ಸೆಳೆದಿದ್ದು ಅಮೃತ ಗ್ರಾಮ ಪಂಚಾಯತ್ ಯೋಜನೆ. ಗ್ರಾಮೀಣ ಪ್ರದೇಶದಲ್ಲಿಯೂ ಇ-ಲೈಬ್ರರಿಯ ಪರಿಕಲ್ಪನೆ, ಸೋಲಾರ್ ಬೀದಿ ದೀಪಗಳ ಅಳವಡಿಕೆ ಸೇರಿದಂತೆ ಇತರ ಮೂಲ ಸೌಕರ್ಯಗಳನ್ನು ಉನ್ನತೀಕರಿಸಲು, 75 ನೇ ಸ್ವಾತಂತ್ರ್ಯೋತ್ಸವದ ಸವಿ ನೆನಪಿಗಾಗಿ ರಾಜ್ಯ ಸರಕಾರವು ಅಮೃತ ಗ್ರಾಮ ಪಂಚಾಯತ್ ಯೋಜನೆಗೆ ಜಾರಿಗೊಳಿಸಿದೆ. ಈ ಯೋಜನೆಯಡಿ ಧಾರವಾಡ ಜಿಲ್ಲೆಯಿಂದ 17 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.
ಈ ಹಿಂದೆ ಗ್ರಾಮಗಳ ಅಭಿವೃದ್ಧಿಗಾಗಿ ಸುವರ್ಣ ಗ್ರಾಮ, ಮುಖ್ಯಮಂತ್ರಿಗಳ ಗ್ರಾಮ ಯೋಜನೆ ಸೇರಿದಂತೆ ವಿವಿಧ ರೀತಿಯ ಯೋಜನೆಯ ಪ್ರಯೋಜನ ಪಡೆದಿರುವ ಗ್ರಾ.ಪಂ.ಗಳನ್ನು ಹೊರತುಪಡಿಸಿ ಹಿಂದಿನ ಯೋಜನೆಗಳಿಗೆ ಸೇರದೆ ಇರುವ ಮತ್ತು ಅಭಿವೃದ್ಧಿ ಅಗತ್ಯವಿರುವ ಗ್ರಾಮಗಳನ್ನು ಪರಿಗಣಿಸಿ ಆಯ್ಕೆ ಮಾಡಿರುವುದು ಈ ಯೋಜನೆಯ ವಿಶೇಷವಾಗಿದೆ. ಧಾರವಾಡ ತಾಲೂಕಿನಿಂದ 4, ಹುಬ್ಬಳ್ಳಿ, ಕಲಘಟಗಿ ಹಾಗೂ ಕುಂದಗೋಳ ತಾಲೂಕಿನಿಂದ ತಲಾ 3, ನವಲಗುಂದ ತಾಲೂಕಿನಿಂದ 2, ಅಳ್ನಾವರ ಹಾಗೂ ಅಣ್ಣಿಗೇರಿ ತಾಲೂಕಿನಿಂದ ತಲಾ 1 ಗ್ರಾಮ ಪಂಚಾಯತ್ ಗಳನ್ನು ಈ ಯೋಜನೆ ಆಯ್ಕೆ ಮಾಡಲಾಗಿದೆ. ಜಿಲ್ಲೆಯ ಶಾಸಕರು ತಮ್ಮ ಕ್ಷೇತ್ರದಲ್ಲಿನ ಅರ್ಹ ಗ್ರಾ.ಪಂ.ಗಳನ್ನು ಆಯ್ಕೆಗೊಳಿಸಿ ನೀಡಿರುವ ವರದಿ ಮೇರೆಗೆ ಇದೀಗ ಅಮೃತ ಗ್ರಾಮ ಪಂಚಾಯತ್ ಯೋಜನೆಗೆ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.
ಯೋಜನೆಯಿಂದ ಆಗುವ ಲಾಭವೇನು? ಈ ಯೋಜನೆಯಲ್ಲಿ ಆಯ್ಕೆಗೊಂಡ ಗ್ರಾಮ ಪಂಚಾಯತ್ ಗೆ 25 ಲಕ್ಷ ರೂಪಾಯಿ ವಿಶೇಷ ಅನುದಾನ ನೀಡಲಾಗುವುದು. ಯೋಜನೆಯು ಇ-ಲೈಬ್ರರಿಯ ಪರಿಕಲ್ಪನೆ ಹೊಂದಿದ್ದು, ಸೋಲಾರ್ ಬೀದಿ ದೀಪಗಳ ಅಳವಡಿಕೆ, ಪ್ರತಿ ಮನೆಗೆ ಕುಡಿಯುವ ನೀರಿನ ನಳದ ಸಂಪರ್ಕ ಕಲ್ಪಿಸುವುದು, ಶೇ 100 ರಷ್ಟು ಘನ ತ್ಯಾಜ್ಯ ವಿಂಗಡನೆ ಹಾಗೂ ವಿಲೇವಾರಿ, ತ್ಯಾಜ್ಯ ನೀರು ವೈಜ್ಞಾನಿಕವಾಗಿ ವಿಸರ್ಜಿಸುವುದು, ಗ್ರಾಮ ಪಂಚಾಯತಿ ಕಟ್ಟಡಗಳಿಗೆ ಸೌರ ವಿದ್ಯುತ್ ಅಳವಡಿಕೆ, ಅಮೃತ್ ಉದ್ಯಾನವನಗಳ ನಿರ್ಮಾಣ ಹಾಗೂ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸಲು ಉದ್ದೇಶಿಸಲಾಗಿದೆ. ಶಾಲೆ ಹಾಗೂ ಅಂಗನವಾಡಿಗಳಿಗೆ ಕುಡಿಯುವ ನೀರು, ಶೌಚಾಲಯಗಳ ಸೌಲಭ್ಯವನ್ನು ಕಲ್ಪಿಸಲು ಹಾಗೂ ಆಟದ ಮೈದಾನ, ಆವರಣ ಗೋಡೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಇದಲ್ಲದೇ ರೈತರ ಉಪಯೋಗಕ್ಕಾಗಿ ಗ್ರಾಮೀಣ ಗೋದಾಮಗಳ ನಿರ್ಮಾಣ ಹಾಗೂ ಕೆರೆ-ಬಾವಿಗಳ ಪುನಶ್ಚೇತನಕ್ಕೆ ಆದ್ಯತೆ ಕೊಡಲಾಗಿದೆ.
ಅನುಷ್ಠಾನದ ನಂತರ ಅನುದಾನ ಯೋಜನೆಯಡಿ ಆಯ್ಕೆಗೊಂಡ ಗ್ರಾ.ಪಂ.ಗಳು 2022 ರ ಮಾರ್ಚ್ ಅಂತ್ಯದೊಳಗೆ ಯೋಜನೆಯಡಿ ಕೈಗೊಂಡ ಕಾರ್ಯಗಳು ಪೂರ್ಣ ಅನುಷ್ಠಾನ ಕೈಗೊಳ್ಳಬೇಕು. ಆಗ ಮಾತ್ರವೇ ಹೆಚ್ಚುವರಿಯಾಗಿ 25 ಲಕ್ಷ ರೂಪಾಯಿಗಳ ಬೋನಸ್ ಅನುದಾನ ಸಿಗಲಿದೆ. ಅದೂ ಯೋಜನೆಯ ಅನುಷ್ಠಾನಕ್ಕೆ ನೀಡಿರುವ ಕಾಲಾವಕಾಶದಲ್ಲಿ ಪೂರ್ಣವಾದರೆ ಮಾತ್ರವೇ ಹೆಚ್ಚುವರಿಯಾಗಿ ೨೫ ಲಕ್ಷ ರೂಪಾಯಿಗಳ ಬೋನಸ್ ಸಿಗುತ್ತದೆ. ಹೀಗಾಗಿ ಮೊದಲು ಅನುಷ್ಠಾನ, ಆಮೇಲೆ ಅನುದಾನ.
ಆಯ್ಕೆಯಾಗಿರುವ 17 ಗ್ರಾಮ ಪಂಚಾಯತ್ಗಳು ಅಳ್ನಾವರ ತಾಲೂಕಿನಿಂದ ಬೆಣಚಿ, ಅಣ್ಣಿಗೇರಿ ತಾಲೂಕಿನಿಂದ ನಲವಡಿ, ಧಾರವಾಡ ತಾಲೂಕಿನಿಂದ ಬೇಲೂರು, ಕುರುಬಗಟ್ಟಿ, ಕೊಟಬಾಗಿ, ನಿಗದಿ, ಹುಬ್ಬಳ್ಳಿ ತಾಲೂಕಿನಿಂದ ಕೋಳಿವಾಡ, ಬ್ಯಾಹಟ್ಟಿ, ಅಂಚಟಗೇರಿ, ಕಲಘಟಗಿ ತಾಲೂಕಿನಿಂದ ದೇವಲಿಂಗೇಕೊಪ್ಪ, ಗಂಜಿಗಟ್ಟಿ, ಬೀರವಳ್ಳಿ, ಕುಂದಗೋಳ ತಾಲೂಕಿನಿಂದ ಗುರುವಿನಹಳ್ಳಿ, ಇಂಗಳಗಿ, ದೇವನೂರು ಹಾಗೂ ನವಲಗುಂದ ತಾಲೂಕಿನಿಂದ ಬೆಳವಟಗಿ, ಯಮನೂರು ಗ್ರಾ.ಪಂ.ಗಳನ್ನು ಆಯ್ಕೆ ಮಾಡಲಾಗಿದೆ.
ಇನ್ನು ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನದ ಬಗ್ಗೆ ಟಿವಿ9 ಡಿಜಿಟಲ್ ಜೊತೆಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ‘ಭಾರತದ 75 ನೇ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಸವಿ ನೆನಪಿಗಾಗಿ ರಾಜ್ಯ ಸರಕಾರವು ಗ್ರಾಮ ಪಂಚಾಯತಿಗಳ ಮೂಲ ಸೌಕರ್ಯಗಳನ್ನು ಉನ್ನತಿಕರಿಸಲು ಜಾರಿಗೊಳಿಸಲಾಗುತ್ತಿರುವ ಈ ಅಮೃತ ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಸರಕಾರದ ನಿರ್ದಿಷ್ಟ ಮಾರ್ಗಸೂಚಿಗಳ ಅನ್ವಯ ಹಾಗೂ ಶಾಸಕರ ಸಲಹೆಯ ಮೇರೆಗೆ ಅಮೃತ ಯೋಜನೆಗೆ ಗ್ರಾ.ಪಂ.ಗಳನ್ನು ಆಯ್ಕೆ ಮಾಡಲಾಗಿದೆ’ ಎಂದು ಹೇಳಿದರು.
ವರದಿ: ನರಸಿಂಹಮೂರ್ತಿ ಪ್ಯಾಟಿ
ಇದನ್ನೂ ಓದಿ:
100 ಸಿಸಿ ಬೈಕ್ನಲ್ಲಿ ಕಾಶ್ಮೀರಕ್ಕೆ ರೈಡ್; ಧಾರವಾಡದ ಯುವಕನಿಂದ ಕೊರೊನಾ ಜಾಗೃತಿ ಅಭಿಯಾನ
17 ವರ್ಷದಿಂದ ಕಾಡಲ್ಲೇ ವಾಸ, ಕಾರೇ ಮನೆ! ನಾಗರಿಕ ಸಮಾಜವನ್ನು ಧಿಕ್ಕರಿಸಿ ಬದುಕುತ್ತಿರುವ ಸುಳ್ಯದ ವ್ಯಕ್ತಿಯ ಕಥೆಯಿದು