ಧಾರವಾಡದಲ್ಲಿ ಅಚ್ಚರಿ ಮೂಡಿಸಿದ ಮಗುವಿನ ನೆನಪಿನ ಶಕ್ತಿ; ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ಸ್ಥಾನ ಪಡೆದ ಗರಿಮೆ

TV9 Digital Desk

| Edited By: shruti hegde

Updated on: Oct 13, 2021 | 9:07 AM

ರೇವಾ ಒಂದು ವರ್ಷ ಎರಡು ತಿಂಗಳು ಇರುವಾಗಲೇ 30 ಥರದ ಹಣ್ಣು, 5 ಥರದ ತರಕಾರಿ, 15 ಪ್ರಾಣಿಗಳು, 10 ಪ್ರಕಾರದ ವಸ್ತುಗಳು ಹಾಗೂ 30 ಬಗೆಯ ಆಟಿಕೆಗಳನ್ನು ಗುರುತಿಸಬಲ್ಲವಳಾಗಿದ್ದಳು.

ಧಾರವಾಡದಲ್ಲಿ ಅಚ್ಚರಿ ಮೂಡಿಸಿದ ಮಗುವಿನ ನೆನಪಿನ ಶಕ್ತಿ; ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ಸ್ಥಾನ ಪಡೆದ ಗರಿಮೆ
ರೇವಾ ರಾಜಪುರೋಹಿತ್​

Follow us on

ಧಾರವಾಡ: ಎಲ್ಲ ಮಕ್ಕಳಲ್ಲಿಯೂ ಒಂದೊಂದು ಬಗೆಯ ಪ್ರತಿಭೆ ಇರುತ್ತದೆ. ಆದರೆ ಆ ಪ್ರತಿಭೆಯನ್ನು ಗುರುತಿಸುವ ಕಲೆ ಪೋಷಕರಿಗೆ ಇರಬೇಕಾಗುತ್ತದೆ. ಅಂದಾಗ ಮಾತ್ರ ಮಕ್ಕಳಲ್ಲಿನ ಪ್ರತಿಭೆ ಅನಾವರಣಗೊಂಡು, ಅದು ಹೊರ ಜಗತ್ತಿಗೆ ತಿಳಿಯುತ್ತದೆ. ವಿದ್ಯಾಕಾಶಿ ಧಾರವಾಡದಲ್ಲಿನ ಚಿಕ್ಕ ಮಗುವೊಂದು ಇದೀಗ ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದಿದೆ. ಆ ಮಗುವಿನ ಜ್ಞಾನವನ್ನು ನೋಡಿದರೆ ಎಂಥವರಿಗೂ ಅಚ್ಚರಿಯಾಗುತ್ತದೆ. ಇದೇ ಕಾರಣಕ್ಕೆ ಮಗುವಿನ ಜ್ಞಾನ ಕಂಡು ರಾಷ್ಟ್ರಮಟ್ಟದ ದಾಖಲೆಯ ಪುಸ್ತಕದಲ್ಲಿ ಹೆಸರು ದಾಖಲಾಗಿದೆ. 

ಧಾರವಾಡದ ಮಾಳಮಡ್ಡಿ ಬಡಾವಣೆಯ ವೈಭವ್ ರಾಜಪುರೋಹಿತ್ ಮತ್ತು ರಮ್ಯಶ್ರೀ ರಾಜಪುರೋಹಿತ್ ದಂಪತಿಯ ಮಗು ರೇವಾಳ ವಯಸ್ಸು ಒಂದು ವರ್ಷ ನಾಲ್ಕು ತಿಂಗಳು ಮಾತ್ರ. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಈ ಮಗು ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ಸ್ಥಾನ ಪಡೆದಿದ್ದಾಳೆ. ಈ ಸಣ್ಣ ವಯಸ್ಸಿನಲ್ಲಿಯೇ ರೇವಾ ಅನೇಕ ವಸ್ತುಗಳನ್ನು ಗುರುತಿಸುವ ಶಕ್ತಿ ಹೊಂದಿದ್ದಾಳೆ. ಇದನ್ನು ಗಮನಿಸಿ ರೇವಾ ರಾಜಪುರೋಹಿತ್​ಳಿಗೆ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ’ ಸ್ಥಾನ ನೀಡಲಾಗಿದೆ. ರೇವಾ ಆರಂಭದಿಂದಲೂ ಅಚ್ಚರಿ ಅನ್ನುವಂತೆ ವರ್ತಿಸುತ್ತಿದ್ದಳು. ಪೋಷಕರಿಗೆ ಆಕೆಯ ಜ್ಞಾನವನ್ನು ನೋಡಿ ಅಚ್ಚರಿಯಾಯಿತು. ರೇವಾ ಎರಡು ತಿಂಗಳ ಮಗು ಇರುವಾಗಲೇ ಮಾತನಾಡೋದಕ್ಕೆ ಶುರು ಮಾಡಿದ್ದಳಂತೆ. ಇದು ಪೋಷಕರ ಅಚ್ಚರಿಗೆ ಕಾರಣವಾಗಿತ್ತು. ದಿನಗಳೆದಂತೆ ವಿವಿಧ ವಸ್ತುಗಳ ಹೆಸರು ಉಚ್ಛರಿಸಲು ಶುರು ಮಾಡಿದ ರೇವಾ, ಬಳಿಕ ಅನೇಕ ಬಗೆಯ ಹಣ್ಣು, ತರಕಾರಿಗಳನ್ನು ಗುರುತಿಸಲು ಶುರು ಮಾಡಿದಳು.

30 ಥರದ ಹಣ್ಣು, 30 ಬಗೆಯ ಆಟಿಕೆ ಗುರುತಿಸಬಲ್ಲಳು ಒಂದು ವರ್ಷದವಳಿದ್ದಾಗಲೇ ರೇವಾ ದೇವರ ಭಾವಚಿತ್ರಗಳನ್ನು ಗುರುತಿಸಬಲ್ಲ, ಸಾಕು ಪ್ರಾಣಿಗಳ ದನಿಗಳನ್ನು ಅನುಕರಿಸಬಲ್ಲ ಸಾಮರ್ಥ್ಯ ಹೊಂದಿದ್ದಳು. ಹೀಗಾಗಿ ಆಗ ಆಕೆಯ ಪಾಲಕರು ವಿವಿಧ ಹಣ್ಣು, ಕಾಯಿಪಲ್ಲೆ, ಪ್ರಾಣಿಗಳು, ಆಟಿಕೆಗಳನ್ನು ಮತ್ತು ಸುತ್ತಮುತ್ತಲಿನ ವಿವಿಧ ವಸ್ತುಗಳ ಬಗ್ಗೆ ತಿಳಿಸಿಕೊಡಲು ಪ್ರಾರಂಭಿಸಿದರು. ರೇವಾ ಒಂದು ವರ್ಷ ಎರಡು ತಿಂಗಳು ಇರುವಾಗಲೇ 30 ಥರದ ಹಣ್ಣು, 5 ಥರದ ತರಕಾರಿ, 15 ಪ್ರಾಣಿಗಳು, 10 ಪ್ರಕಾರದ ವಸ್ತುಗಳು ಹಾಗೂ 30 ಬಗೆಯ ಆಟಿಕೆಗಳನ್ನು ಗುರುತಿಸಬಲ್ಲವಳಾಗಿದ್ದಳು. ಮಗುವಿನ ಶಕ್ತಿಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿ ಪಾಲಕರು ಸಾಮಾಜಿಕ ಜಾಲತಾಣಕ್ಕೆ ಹಾಕುತ್ತಿದ್ದರು. ಆಗ ಕೆಲವರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಇದನ್ನೆಲ್ಲಾ ಕಳಿಸುವಂತೆ ಸಲಹೆ ನೀಡಿದರು. ಪಾಲಕರು ಮಗುವಿನ ಜ್ಞಾನದ ದಾಖಲೆಗಳನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್​ಗೆ ಕಳಿಸಿದರು. ಮಗುವಿನ ಜ್ಞಾನವನ್ನು ಗುರುತಿಸಿ, ಇದೀಗ ಮಗುವಿನ ಹೆಸರನ್ನು ‘ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ’ ಸೇರ್ಪಡೆ ಮಾಡಲಾಗಿದೆ.

Dharwad India Book of Record

ಪೋಷಕರೊಂದಿಗೆ ರೇವಾ ರಾಜಪುರೋಹಿತ್​

ಎರಡು ತಿಂಗಳಿದ್ದಾಗ ಮಾತನಾಡಲು ಶುರು ಮಾಡಿದ್ದಳು : ವೈಭವ್ ರಾಜಪುರೋಹಿತ್ ರೇವಾ ಎರಡು ತಿಂಗಳಿದ್ದಾಗ ಅಪ್ಪ, ಅಮ್ಮ ಅನ್ನುವ ಶಬ್ದಗಳನ್ನು ಆಡಲು ಶುರು ಮಾಡಿದ್ದಳು. ಇದನ್ನು ನೋಡಿ ನಮಗೆಲ್ಲಾ ಅಚ್ಚರಿಯಾಗಿತ್ತು. ನಿಧಾನವಾಗಿ ಆಕೆ ಅನೇಕ ಹಣ್ಣು, ತರಕಾರಿಗಳನ್ನು ಗುರುತಿಸಲು ಶುರು ಮಾಡಿದಳು. ಇದೀಗ ಆಕೆಯ ಸಾಧನೆಯು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಇದರಿಂದಾಗಿ ನಮಗೆ ಖುಷಿಯಾಗಿದೆ ಅನ್ನುತ್ತಾರೆ ತಂದೆ ವೈಭವ್ ರಾಜಪುರೋಹಿತ್.

ಪಾಲಕರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು – ಡಾ. ಆನಂದ ಪಾಂಡುರಂಗಿ ಈ ಮಗುವಿನ ಜಾಣತನದ ಬಗ್ಗೆ ಟಿವಿ9 ಡಿಜಿಟಲ್ ಜೊತೆಗೆ ಮಾತನಾಡಿದ ಧಾರವಾಡದ ಖ್ಯಾತ ಮನೋತಜ್ಞ ಡಾ. ಆನಂದ ಪಾಂಡುರಂಗಿ, ಇಂಥ ಮಕ್ಕಳನ್ನು ನಾವು ಸೂಪರ್ ಜೀನಿಯಸ್ ಅನ್ನುತ್ತೇವೆ. ಇಂಥ ಮಕ್ಕಳು ಜೀವನದಲ್ಲಿ ಅತ್ಯಂತ ಯಶಸ್ವಿಯಾಗಬಹುದು. ಆದರೆ ಕೆಲವೊಮ್ಮೆ ಇದು ವ್ಯತಿರಿಕ್ತವೂ ಆಗಬಹುದು. ಏಕೆಂದರೆ ಇದು ಮಗುವಿನ ಮೆದುಳಿಗೆ ಹೆಚ್ಚಿನ ಭಾರ ಕೊಡಬಹುದು. ಹೀಗಾಗಿ ಪಾಲಕರು ಇಂಥ ಮಗುವಿನ ಬಗ್ಗೆ ಸಾಕಷ್ಟು ಕಾಳಜಿ ವಹಿಸಬೇಕು. ಮಗುವಿಗೆ ಜೀವನದ ಬಗ್ಗೆ ಎಲ್ಲವನ್ನೂ ಹೇಳಿಕೊಡಬೇಕು. ಜೀವನ ಶೈಲಿ, ಧ್ಯಾನವನ್ನು ಹೇಳಿಕೊಡಬೇಕು. ಕೇವಲ ಜಾಣ್ಮೆಯಿಂದಷ್ಟೇ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಬದುಕಿನ ಎಲ್ಲ ಬಗೆಯ ವಿಚಾರಗಳನ್ನು ಕೂಡ ಮಗುವಿಗೆ ಕಲಿಸಿಕೊಡಬೇಕು. ಅದರಲ್ಲೂ ಮನಸ್ಸು ರಿಲ್ಯಾಕ್ಸ್ ಆಗುವಂಥ ಕೌಶಲ್ಯ ಹೇಳಿಕೊಡಬೇಕು. ಇಂಥ ಮಕ್ಕಳ ಜಾಣ್ಮೆಯನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದ್ದಾರೆ.

ವಿಶೇಷ ವರದಿ: ನರಸಿಂಹಮೂರ್ತಿ ಪ್ಯಾಟಿ ಟಿವಿ9, ಧಾರವಾಡ

ತಾಜಾ ಸುದ್ದಿ

Related Stories

Click on your DTH Provider to Add TV9 Kannada