ಕೋಲಾರ: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕೋಲಾರದಿಂದ (Kolar) ಸ್ಪರ್ಧಿಸುವುದಾಗಿ ಘೋಷಿಸಿದ ಬೆನ್ನಲ್ಲೇ ವರುಣ ಕ್ಷೇತ್ರದ ಶಾಸಕ, ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಕೋಲಾರ ರೌಂಡ್ಸ್ ಹಾಕುತ್ತಿದ್ದಾರೆ. ಅತಿಹೆಚ್ಚು ಕುರುಬ ಸಮುದಾಯದ ಜನರಿರುವ ಕೋಲಾರ ತಾಲ್ಲೂಕು ಬಸವನತ್ತ, ಕೋಡಿರಾಮಸಂದ್ರ, ಹೊನ್ನೇನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ನಂತರ ಸಿದ್ದರಾಮಯ್ಯ ವಾಸಿಸುವ ಬಾಡಿಗೆ ಮನೆ ವೀಕ್ಷಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮನೆ ನೋಡಿಕೊಂಡು ಹೋಗಲು ಬಂದಿರುವೆ, ಅಪ್ಪನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಕೈ ಜೋಡಿಸಬೇಕಾಗಿದೆ. ಮನೆ ಚೆನ್ನಾಗಿದೆ, ಸಿದ್ದರಾಮಯ್ಯ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ. ನನಗೆ ಹಾಗೂ ತಂದೆ ಸಿದ್ದರಾಮಯ್ಯಗೆ ವಾಸ್ತು ಮೇಲೆ ನಂಬಿಕೆ ಇಲ್ಲ. ಅನಿಲ್ಕುಮಾರ್, ಸುದರ್ಶನ್ ನಿವಾಸದ ವಾಸ್ತುವನ್ನು ನೋಡಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಈಗಾಗಲೇ ಚುನಾವಣೆ ಕೆಲಸ ಆರಂಭಿಸಿದ್ದೇವೆ ಎಂದು ಹೇಳಿದರು.
ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಅನೇಕರು ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡಲ್ಲ ಎಂಬ ಹೇಳಿಕೆ ನೀಡಿರುವ ವಿಚಾರವಾಗಿ ಮಾತನಾಡಿದ ಅವರು ನಮ್ಮ ಪಕ್ಷದ ನಾಯಕರು ಎಲ್ಲಿ ನಿಂತುಕೊಳ್ಳತ್ತಾರೆ ಎಂಬುದು ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಬೇರೆ ಪಕ್ಷದವರಿಗೆ ಏನು ಗೋತ್ತು. ಹೈಕಮಾಂಡ್ ಹೇಳಿದೆ ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. ಅದಕ್ಕಾಗಿ ಕೋಲಾರದಲ್ಲಿ ಕೆಲಸ ಆರಂಭ ಮಾಡಲಾಗಿದೆ. ನಾನು ಸಹ ವರುಣದಲ್ಲಿ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಿದ್ದೆ, ಆದರೆ ಅವರ ಮನಸ್ಸು ಬೇರೆ ಕೆಡೆ ಇದೆ. ಕೊನೆ ಕ್ಷಣದಲ್ಲಿ ಸಿದ್ದತೆಗಳು ಮಾಡಿಕೊಳ್ಳಲು ಕಷ್ಟ. ಆ ಹಿನ್ನಲೆಯಲ್ಲಿ ಕೋಲಾರದಲ್ಲಿ ಚುನಾವಣೆ ಕೆಲಸ ಆರಂಭ ಮಾಡಲಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ 2 ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ದೈವದ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಆ ದೇವರು ನಮ್ಮ ಮನೆ ದೇವರಲ್ಲ, ನಾನು ಪ್ರಶ್ನೆ ಕೇಳಲು ಹೋಗಿಲ್ಲ. ಯಾರೋ ಹೇಳಿದ್ದಾರೆ ಅಂತ ತೀರ್ಮಾನ ಕೈಗೊಳ್ಳಲು ಬರುವುದಿಲ್ಲ. ದೇವರು ಹೇಳಿದ್ದಾರೆಂದು ರಾಜಕೀಯ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ