
ಕೋಲಾರ, (ಜೂನ್ 23): ಉದ್ಟಾಟನೆಗೆ ಸಿದ್ದವಾಗಿರುವ ಚೆನೈ-ಬೆಂಗಳೂರು ಎಕ್ಸ್ ಪ್ರೆಸ್ ವೇನಲ್ಲಿ (Bengaluru- Chennai expressway) ದಿನೇ ದಿನೇ ಅಪಘಾತಗಳು ಸಂಭವಿಸುತ್ತಲೇ ಇವೆ. ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ 3 ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ಭೀಕರ ರಸ್ತೆ ಅಪಘಾತದಲ್ಲಿ ಸುಮಾರು 15ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ಉದ್ಘಾಟನೆಗೂ ಮುನ್ನವೆ ನೂತನ ಚೆನೈ-ಬೆಂಗಳೂರು ಎಕ್ಸ್ಪ್ರೆಕ್ಸ್ ಹೈವೇಯಲ್ಲಿ ಸಾವಿನ ಹೆದ್ದಾರಿಯಾಗಿ ಪರಿಣಮಿಸಿದೆ. ಪರಿಣಾಮ ಎಚ್ಚೆತ್ತ ಪೊಲೀಸ್ ಇಲಾಖೆ ಕೆಲವು ನಿರ್ಬಂಧಗಳ ಜೊತೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ನಡಡೆಸುವವರಿಗೆ ಬಿಸಿ ಮುಟ್ಟಿಸಿದ್ದಾರೆ. ಸ್ಪೀಡ್ ರೆಡಾರ್‌ಗಳ ಮೂಲಕ ಅತಿ ವೇಗವಾಗಿ ಚಾಲನೆ ಮಾಡುವ ಕಾರುಗಳಿಂದ ದಂಡ ವಸೂಲಿ ಮಾಡಲಾಗುತ್ತಿದೆ.
ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ ಪೊಲೀಸ್ ಕಾರ್ಯಾಚರಣೆ ನಡೆಸಿ ವೇಗವಾಗಿ ವಾಹನ ಚಲಾಯಿಸುವವರಿಗೆ ದಂಡ ವಿಧಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಅಪಘಾತಗಳನ್ನು ತಪ್ಪಿಸುವ ಹಿನ್ನಲೆಯಲ್ಲಿ ಅತಿವೇಗವಾಗಿ ಚಲಿಸುವ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಪ್ರಾಯೋಗಿಕವಾಗಿ ವಾಹನಗಳ ಸಂಚಾರಕ್ಕೆ ಪ್ರಾಧಿಕಾರ ಅನುಮತಿ ನೀಡಿದೆ.
ಸುಸಜ್ಜಿತವಾಗಿ ನಿರ್ಮಾಣವಾಗಿರುವ ಈ ರಸ್ತೆಯಲ್ಲಿ ವೇಗಕ್ಕೆ ಕಡಿವಾಣ ಇಲ್ಲದ ಕಾರಣ ಹೈ ಸ್ಪೀಡ್ ನಲ್ಲಿ ಚಲಿಸುವ ಕಾರುಗಳು ಕಂಟ್ರೋಲ್ ಸಿಗದೆ ಸರಣಿ ಅಪಘಾತಗಳು ಸಂಭವಿಸಿ ಸಾವು ನೋವುಗಳು ಹೆಚ್ಚಾಗುತ್ತಿವೆ. ಹಾಗಾಗಿ ಪೊಲೀಸ್ ಕಾರ್ಯಾಚರಣೆ ನಡೆಸುತ್ತಾ ಕಾರುಗಳ ವೇಗಕ್ಕೆ ಕಡಿವಾಣ ಹಾಕಿ ಅಪಘಾತಗಳನ್ನು ಕಂಟ್ರೋಲ್‌ಗೆ ತರಲು ವಾಹನಗಳ ವೇಗವನ್ನು ಪತ್ತೆ ಮಾಡುತ್ತಿರುವ ಪೊಲೀಸ್ ತಂಡ ಅತಿವೇಗವಾಗಿ ಬರುವ ಕಾರುಗಳನ್ನು ತಡೆದು ದಂಡ ಹಾಕುವ ಕಾರ್ಯಾಚರಣೆಗೆ ಇಳಿದಿದ್ದಾರೆ.
ಇನ್ನೂ ಕಳೆದ 10 ದಿನದಲ್ಲಿ 70 ಪ್ರಕರಣಗಳನ್ನು ದಾಖಲಿಸಿದ್ದು, 70 ಅತಿವೇಗ ಪ್ರಕರಣದಲ್ಲಿ 70 ಸಾವಿರ ದಂಡ ವಸೂಲಿ ಮಾಡಲಾಗಿದೆ. ಬಂಗಾರಪೇಟೆ, ಬೇತಮಂಗಲ, ಬೆಮೆಲ್‌ನಗರ ಠಾಣೆ ಹಾಗೂ ಮಾಲೂರು ಪೊಲೀಸರಿಂದ ದಂಡ ವಸೂಲಿ ಮಾಡಿದ್ದು, ಸ್ಟೀಡ್ ರೆಡಾರ್ ಗನ್ ಬಳಸಿ ಐಎಂವಿ ಕೇಸು ದಾಖಲು, ಮಾಡಲಾಗಿದೆ. ಇತ್ತೀಚೆಗೆ ಎಕ್ಸ್ಪ್ರೆಸ್ ಹೈ ವೇ ನಲ್ಲಿ ಸರಣಿ ಅಪಘಾತಗಳಿಗೆ ರಾಬರಿ ಗ್ಯಾಂಗ್ ಕಾರಣ ಹೆದ್ದಾರಿಯಲ್ಲಿ ರಾಬರಿ ಗ್ಯಾಂಗ್ ಕೆಲಸ ಮಾಡುತ್ತಿದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತರಾಗಿರುವ ಪೊಲೀಸರು ಈಗಾಗಲೇ ಹೆದ್ದಾರಿಯಲ್ಲಿ ಸಂಭವಿಸಿರುವ ಅಪಘಾತಗಳ ತನಿಖೆ ನಡೆಸಿದ್ದಾರೆ. ಅಲ್ಲಿ ಯಾವುದಾದರೂ ರಾಬರಿ ಆಗಿದ್ಯಾ ಅನ್ನೋದನ್ನು ಪರಿಶೀಲನೆ ನಡೆಸಿ ನಂತರ ಅಪಘಾತಕ್ಕೆ ಮಿತಿಮೀರಿದ ವೇಗವೇ ಕಾರಣ ಅನ್ನೋದು ಕಂಡು ಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದಾರೆ.
ಇನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸಂಸದ ಮಲ್ಲೇಶ್ಬಾಬು ಸಹ ಹೆದ್ದಾರಿಯಲ್ಲಿ ಸಂಚರಿಸಿ ಅಪಘಾತಗಳನ್ನು ತಡೆಯಲು ಬೇಕಾದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಅಪಘಾತ ಸಂಭವಿಸಿದಾಗ ಬೇಕಾದ ತುರ್ತು ಕ್ರಮಗಳಿಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ವೇಗ ನಿಯಂತ್ರಣಕ್ಕೆ ರೆಡಾರ್ ಗನ್ ಗಳ ಬಳಕೆ ಜೊತೆಗೆ ಹೆದ್ದಾರಿ ಗಸ್ತು ವಾಹನಗಳನ್ನು ಸಂಚಾರ, ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಂಬ್ಯುಲೆನ್ಸ್ ಸಂಚಾರಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ ಅನ್ನೋದು ಸಂಸದರ ಮಾತು.
ಒಟ್ಟಾರೆ ಚೆನ್ನೈ- ಬೆಂಗಳೂರು ಕಾರಿಡಾರ್ ರಸ್ತೆಯಲ್ಲಿ ಸರಣಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪೊಲೀಸರು ಅತಿವೇಗದ ವಾಹನಗಳಿಗೆ ದಂಡ ವಿಧಿಸಲು ಮುಂದಾಗಿದ್ದು, ಈ ಮೂಲಕ ಅತಿವೇಗದಿಂದಾಗುತ್ತಿರುವ ಅಪಘಾತಗಳನ್ನ ತಡೆಯುವ ಕೆಲಸ ಮಾಡಲಾಗುತ್ತಿದೆ.