ಬೆಲೆ ಕುಸಿತದಿಂದ ಕಂಗಾಲಾದ ಕೋಲಾರದ ಟೊಮೆಟೊ ಬೆಳೆಗಾರ, ಗುಣಮಟ್ಟದ ಸರಕಿಗೆ ಕಾಯುತ್ತಿರುವ ವ್ಯಾಪಾರಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 17, 2022 | 3:09 PM

ಕಷ್ಟಪಟ್ಟು ಬೆಳೆದ ಟೊಮೆಟೊ ಬೆಳೆಯನ್ನು ರೈತರು ರಸ್ತೆಬದಿಗೆ ತಂದು ಸುರಿಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಮಾರಾಟವಾಗದ ಕಾರಣ ಲೋಡ್​ಗಟ್ಟಲೆ ಟೊಮೆಟೊ ಹಾಗೆಯೇ ಉಳಿದಿದೆ.

ಬೆಲೆ ಕುಸಿತದಿಂದ ಕಂಗಾಲಾದ ಕೋಲಾರದ ಟೊಮೆಟೊ ಬೆಳೆಗಾರ, ಗುಣಮಟ್ಟದ ಸರಕಿಗೆ ಕಾಯುತ್ತಿರುವ ವ್ಯಾಪಾರಿ
ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಬಿಕರಿಗೆ ಕಾದಿರುವ ಟೊಮೆಟೊ
Follow us on

ಕೋಲಾರ: ಕರ್ನಾಟಕದ ವಿವಿಧೆಡೆ ಭರ್ಜರಿ ಮಳೆಯಾಗುತ್ತಿದೆ. ಉತ್ತರ ಭಾರತದಲ್ಲೂ ಕೂಡಾ ವರುಣನ ಆರ್ಭಟ ಜೋರಾಗಿದೆ. ಬಯಲುಸೀಮೆಯ ಜಿಲ್ಲೆಗಳಲ್ಲಿಯೂ ಇದೀಗ ಜಿಟಿಜಿಟಿ ಮಳೆ ಆರಂಭವಾಗಿದ್ದು, ಮೋಡಕವಿದ ವಾತಾವರಣ ಮುಂದುವರಿದಿದೆ. ಕೋಲಾರದಲ್ಲಿ ಟೊಮೆಟೊ ಬೆಲೆ (Tomato Price Crash in Kolar) ಕುಸಿದು ರೈತರು ಸಂಕಷ್ಟದಲ್ಲಿ ಸಿಲುಕಲು ಮಳೆಯೇ ಕಾರಣವಾಗಿರುವುದು ವಿಪರ್ಯಾಸ. ಕಷ್ಟಪಟ್ಟು ಬೆಳೆದ ಟೊಮೆಟೊ ಬೆಳೆಯನ್ನು ರೈತರು ರಸ್ತೆಬದಿಗೆ ತಂದು ಸುರಿಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಮಾರಾಟವಾಗದ ಕಾರಣ ಲೋಡ್​ಗಟ್ಟಲೆ ಟೊಮೆಟೊ ಹಾಗೆಯೇ ಉಳಿದಿದೆ. ಏಷ್ಯಾದ ಎರಡನೇ ಅತಿದೊಡ್ಡ ಎಪಿಎಂಸಿ ಮಾರುಕಟ್ಟೆ ಎನಿಸಿರುವ ಕೋಲಾರದಲ್ಲಿ ಇಂಥ ದೃಶ್ಯಗಳು ಸಾಮಾನ್ಯ ಎನಿಸಿವೆ. ಕೋಲಾರದ ರೈತರು ಟೊಮೆಟೊ ಬೆಳೆಯುವಲ್ಲಿ ಮುಂಚೂಣಿಯಲ್ಲಿದ್ದಾರೆ. ವಿವಿಧ ರಾಜ್ಯಗಳಿಗೆ ಮಾತ್ರವಲ್ಲ, ಹಲವು ದೇಶಗಳಿಗೂ ಇಲ್ಲಿಂದ ಟೊಮೆಟೊ ರಫ್ತಾಗುತ್ತದೆ.

ಚಿತ್ರ ಮತ್ತು ವರದಿ: ರಾಜೇಂದ್ರ ಸಿಂಹ

ಧಾರಾಕಾರ ಮಳೆಯ ಪರಿಣಾಮ ಸರಕು ಸಾಗಣೆಗೆ ಸಮಸ್ಯೆಯಾಗಿದ್ದು, ಟೊಮೆಟೊ ಬಿಕರಿಯಾಗುತ್ತಿಲ್ಲ. ಹೀಗಾಗಿ ಕೊಯ್ಲಾದ ಟೊಮೆಟೊಗೆ ಬೆಲೆ ಕುಸಿದಿದೆ. ಕೋಲಾರದಲ್ಲಿ ಈಗ ಟೊಮೆಟೊ ಸೀಸನ್. ಹೆಚ್ಚಿನ ರೈತರು ಟೊಮೆಟೊ ಬೆಳೆದಿದ್ದಾರೆ. ಮಳೆಯಿಂದಾಗಿ ಸೇತುವೆಗಳು ಕೊಚ್ಚಿಹೋಗಿ, ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಕೋಲಾರದಿಂದ ಹೊರ ರಾಜ್ಯಗಳಿಗೆ ಸರಕು ಸಾಗಿಸಲು ಕಷ್ಟವಾಗುತ್ತಿದೆ.

ಕರಾವಳಿ, ಮಲೆನಾಡು ಹಾಗೂ ಉತ್ತರ ಭಾರತದಲ್ಲಿ ಒಳ್ಳೆಯ ಮಳೆಯಾಗುತ್ತಿದೆ. ಕೋಲಾರದ ಜಿಟಿಜಿಟಿ ಮಳೆಯೊಂದಿಗೆ ಮೋಡ ಕವಿದ ವಾತಾವರಣ ಮುಂದುವರಿದಿದೆ. ಇದರ ಪರಿಣಾಮ ಟೊಮೆಟೊ ಗುಣಮಟ್ಟ ಕಳೆದುಕೊಂಡಿದೆ. ಟೊಮೆಟೊಗೆ ಮಾರುಟಕ್ಟೆಯಲ್ಲಿ ಸರಿಯಾದ ಬೆಲೆ ಸಿಗುತ್ತಿಲ್ಲ ಅನ್ನೋದು ಕೋಲಾರ ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ಅವರ ಮಾತು.

ಕೋಲಾರದಲ್ಲಿ ಸರಿಸುಮಾರು 15 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ರೈತರು ಟೊಮೆಟೊ ಬೆಳೆಯುತ್ತಾರೆ. ಪ್ರತಿವರ್ಷ ಏಪ್ರಿಲ್​ನಿಂದ ಸೆಪ್ಟಂಬರ್​ವರೆಗೆ ಕೋಲಾರದಲ್ಲಿ ಟೊಮೆಟೊ ಸೀಸನ್. ಪ್ರಸ್ತುತ ಎಪಿಎಂಸಿ ಮಾರುಕಟ್ಟೆಗೆ ಟೊಮ್ಯಾಟೊ ಆವಕ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇರುವ ಕಾರಣ, ಟೊಮೆಟೊ ಗುಣಮಟ್ಟ ಕಳೆದುಕೊಂಡಿದೆ. ಮೆತ್ತಗಾಗಿರು ಟೊಮೆಟೊ ರೋಗಕ್ಕೆ ತುತ್ತಾಗುತ್ತಿದೆ. ಹಾಗಾಗಿ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮ್ಯಾಟೋಗೆ ಬೆಲೆ ಇಲ್ಲದಂತಾಗಿದೆ.

ರಸ್ತೆ ಬದಿ ಟೊಮೆಟೊ ಸುರಿದಿರುವ ರೈತರು

ಎಪಿಎಂಸಿಯಲ್ಲಿ ಹೊರ ರಾಜ್ಯಗಳ ವ್ಯಾಪಾರಿಗಳು

ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಹೊರ ರಾಜ್ಯಗಳ ವ್ಯಾಪಾರಸ್ಥರು ಬಂದು ಟೊಮೆಟೊಗಾಗಿ ಕಾಯುತ್ತಿದ್ದಾರೆ. ಉತ್ತಮ ಗುಣಮಟ್ಟದ ಟೊಮೆಟೊ ಮಾರುಕಟ್ಟೆಗೆ ಬಾರದ ಹಿನ್ನೆಲೆಯಲ್ಲಿ ಬೆಲೆ ಕುಸಿದಿದೆ. ಹದಿನೈದು ಕೆಜಿ ತೂಗುವ ಒಂದು ಬಾಕ್ಸ್ ಟೊಮೆಟೋ ಕೇವಲ 100ರಿಂದ 200 ರೂಪಾಯಿಗೆ ಮಾರಾಟವಾಗುತ್ತಿದೆ. ಹಾಗಾಗಿ ಟೊಮೆಟೊ ಬೆಳೆದ ರೈತರು ಮಳೆಯ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾವೇ ತಮ್ಮ ಕೈಯಾರೆ ಕಷ್ಟಪಟ್ಟು ಬೆಳೆದಿದ್ದ ಟೊಮೆಟೊಗಳನ್ನು ಬೀದಿಗೆ ತಂದು ಸುರಿಯುವ ಸ್ಥಿತಿ ಬಂದೊದಗಿದೆ ಎನ್ನುತ್ತಿದ್ದಾರೆ ಟೊಮ್ಯಾಟೋ ಬೆಳೆಗಾರ ರಾಮಯ್ಯ.

ಒಟ್ಟಾರೆ ತಾನು ಮಾಡದ ತಪ್ಪಿಗೆ ತನಗೆ ಶಿಕ್ಷೆ ಎನ್ನುವಂತೆ ರಾಜ್ಯದ ಹಾಗೂ ದೇಶದ ಹಲವೆಡೆ ವರುಣನ ಆರ್ಭಟಕ್ಕೆ ಕೋಲಾರದ ರೈತರು ಬೆಲೆ ತೆರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಟೊಮ್ಯಾಟೋ ಸೀಸನ್​ನಲ್ಲಿ ಒಳ್ಳೆಯ ಬೆಲೆ ಸಿಗುತ್ತದೆ ಎಂದು ಕಷ್ಟಪಟ್ಟು ಬೆಳೆದಿದ್ದ ಟೊಮೆಟೊವನ್ನು ರೈತರು ತಮ್ಮ ಕೈಯಾರೆ ತಾವೇ ಬೀದಿಗೆ ಸುರಿಯುವ ಸ್ಥಿತಿ ಬಂದಿದೆ.