ಆ ಇಬ್ಬರು ಅಣ್ಣ-ತಂಗಿಯರ ಬದುಕು ಕತ್ತಲಾಗಿ ಹಲವು ವರ್ಷಗಳೇ ಕಳೆದು ಹೋಗಿತ್ತು. ನಂಬಿದವರು, ಕೈ ಹಿಡಿದವರು, ಒಡಹುಟ್ಟಿದವರು, ಹೆತ್ತವರು, ಎಲ್ಲರೂ ಇವರನ್ನು ಬಿಟ್ಟು ಬಹುದೂರ ಹೋಗಿದ್ದರು. ಆದರೆ, ಅದೊಂದು ಸಂಘದ ಮಾನವೀಯ ಮನಸ್ಸು, ಆ ಕತ್ತಲಾಗಿದ್ದ ಬದುಕಲ್ಲ ವಾತ್ಸಲ್ಯಭರಿತ ಪ್ರೀತಿ ತೋರಿಸಿದ್ದಾರೆ, ಬದುಕು ಕತ್ತಲಾದರೂ ಬಾಳಿಗೊಂದು ನೆಲೆ ಕಲ್ಪಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ..
ವಯಸ್ಸಾದ ವೃದ್ದರು, ಕಣ್ಣು ಕಾಣದ ಸ್ಥಿತಿಯ ಅಣ್ಣ ತಂಗಿ..!
ಕೋಲಾರ ತಾಲ್ಲೂಕು ದಿಂಬ ಗ್ರಾಮದಲ್ಲಿ ನಾರಾಯಣಪ್ಪ ಹಾಗೂ ವೆಂಕಟಮ್ಮ ಎಂಬ ಇಬ್ಬರು ಕಣ್ಣು ಕಾಣದ ವಿಕಲಾಂಗರು ಜೀವನ ನಡೆಸುತ್ತಿದ್ದಾರೆ. ಇಬ್ಬರಿಗೂ ವಯಸ್ಸಾಗಿದೆ, ಇಬ್ಬರ ಪರಿಸ್ಥಿತಿಯೂ ತುಂಬಾ ಕಷ್ಟಕರ ಬದುಕು, ನಾರಾಯಣಪ್ಪರನ್ನು ಮದುವೆಯಾಗಿದ್ದ ಹೆಂಡತಿ ಬಿಟ್ಟು ಹೋದರೆ, ವೆಂಕಟಮ್ಮರನ್ನು ಕಟ್ಟುಕೊಂಡಿದ್ದ ಗಂಡ ಬಿಟ್ಟು ಹೋಗಿದ್ದ ಕೊನೆಗೆ ನಿನಗೆ ನಾನು, ನನಗೆ ನೀನು ಎಂದು ಅಣ್ಣ ತಂಗಿ ಇಬ್ಬರು ತಮ್ಮ ಹುಟ್ಟಿದ ಮನೆಯಲ್ಲೇ ಜೀವನ ಸಾಗಿಸುತ್ತಿದ್ದರು, ಕಣ್ಣು ಕಾಣದ ಈ ಅಣ್ಣ ತಂಗಿಯ ಪರಿಸ್ಥಿತಿಯನ್ನು ಕಂಡು ಹಲವಾರು ಜನರು ಅಯ್ಯೋ ಪಾಪ ಎಂದು ಮರುಕ ವ್ಯಕ್ತಪಡಿಸಿರಬಹುದು ಆದರೆ ಅವರ ನೆರವಿಗೆ ಬಂದಿದ್ದ ಮಾತ್ರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘ (Shri Kshetra Dharmasthala Rural Development Project -SKDRDP).
ಮರುಕ ವ್ಯಕ್ತಪಡಿಸಿ ಸುಮ್ಮನಾಗದೆ ಬದುಕಿಗೆ ಬೆಳಕಾದರು..!
ಇವರ ಈ ದಯಾನೀಯ ಪರಿಸ್ಥಿತಿಯನ್ನು ಕಂಡು ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘ ಇವರಿಗೆ ಕಳೆದ ಏಳು ವರ್ಷಗಳಿಂದ ಮಾಸಿಕ ಒಂದು ಸಾವಿರ ರೂಪಾಯಿ ವೇತನ ನೀಡುತ್ತಿತ್ತಾ ಬಂದಿತ್ತು, ಈನಡುವೆ ಕಳೆದ ಎರಡು ತಿಂಗಳಿಂದ ಸುರಿದ ನಿರಂತರ ಮಳೆಯಿಂದಾಗಿ ಇವರಿಬ್ಬರು ವಾಸವಿದ್ದ ಮನೆ ಸಂಪೂರ್ಣವಾಗಿ ಕುಸಿದು ಬಿದ್ದು ಇಬ್ಬರೂ ಆ ಮುರುಕಲು ಮನೆಯಲ್ಲೇ ವಾಸ ಮಾಡುತ್ತಿದ್ದರು ಇಂಥ ಪರಿಸ್ಥಿತಿಯನ್ನು ಕಂಡ ಅದೇ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದವರು ತಮ್ಮ ಸಂಘದ ವಾತ್ಸಲ್ಯ ಯೋಜನೆಯಡಿ ಒಂದು ಲಕ್ಷ ರೂಪಾಯಿ ವ್ಯಚ್ಚದಲ್ಲಿ ಅವರಿಗೆ ಒಂದು ಪುಟ್ಟ ಮನೆಯನ್ನು ನಿರ್ಮಾಣ ಮಾಡಿಕೊಡುವ ಮೂಲಕ ಸಂಕಷ್ಟದಲ್ಲಿದ್ದ ವಿಕಲಾಂಗ ಅಣ್ಣ ತಂಗಿಯ ಬದುಕಿಗೆ ನೆರವಾಗಿದ್ದಾರೆ.
ಹರಕಲು ಮನೆಯಲ್ಲಿ ಮಳೆಬಂದಾಗ ಸಂಕಷ್ಟದ ಸ್ಥಿತಿ ಹೇಳಿಕೊಂಡು ಕಣ್ಣೀರು..!
ಇನ್ನು ಕಳೆದ ಹತ್ತು ಹದಿನೈದು ವರ್ಷಗಳಿಂದಲೂ ಈ ಇಬ್ಬರು ಅಣ್ಣ ನಾರಾಯಣಪ್ಪ ಹಾಗೂ ತಂಗಿ ವೆಂಕಟಮ್ಮ ಇಬ್ಬರೇ ತಮ್ಮ ಮನೆಯಲ್ಲಿ ವಾಸವಿದ್ದರು ಆದರೆ ನಾರಾಯಣಪ್ಪಗೆ ಕಣ್ಣು ಸಂಪೂರ್ಣವಾಗಿ ಕಾಣಿಸುವುದಿಲ್ಲ,ಆದರೆ ತಂಗಿ ವೆಂಕಟಮ್ಮರಿಗೆ ಅಲ್ಪ ಸ್ವಲ್ಪ ಕಣ್ಣು ಕಾಣಿಸುತ್ತಿತ್ತು ಹೀಗೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಸರ್ಕಾರದಿಂದ ಬರುವ ಪಿಂಚಣೆಯಲ್ಲಿ ಜೀವನ ನಡೆಸುತ್ತಿದ್ದರು ಆದರೆ ಕಳೆದ ಏಳು ವರ್ಷಗಳಿಂದ ಇಬ್ಬರಿಗೂ ಕಣ್ಣು ಸಂಪೂರ್ಣವಾಗಿ ಕಾಣದಂತಾಗಿತ್ತು, ಆದರೂ ಹೇಗೋ ಜೀವನ ನಡೆಸುತ್ತಿದ್ದರು ಈವೇಳೆ ಧರ್ಮಸ್ಥಳ ಸಂಘ ಮಾಸಿಕ ತಲಾ ಸಾವಿರ ರೂಪಾಯಿ ನೀಡುತ್ತಿತ್ತು, ಆದರೆ ಈಗ ಮಳೆಯಿಂದ ಮನೆ ಸಂಪೂರ್ಣವಾಗಿ ಕುಸಿದು ಬಿದ್ದ ಪರಿಣಾಮ ಬದುಕು ಮೂರಾಬಟ್ಟೆಯಾಗಿತ್ತು.
ಆದರೆ ಇದನ್ನು ಅರಿತ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘ ಮನೆ ನಿರ್ಮಾಣ ಮಾಡಿಕೊಟ್ಟರೆ, ಸ್ಥಳೀಯ ಗ್ರಾಮ ಪಂಚಾಯ್ತಿ ಶೌಚಾಲಯ ನಿರ್ಮಾಣ ಮಾಡಿ ಕೊಟ್ಟಿದೆ, ಇನ್ನು ಸಿಎಂಆರ್ ಮಂಡಿ ಮಾಲೀಕರಾದ ಶ್ರೀನಾಥ್ ಅವರು ಮನೆ ಸೋಲಾರ್ ದೀಪದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಈಮೂಲಕ ಸಂಷ್ಟದ ಬದುಕು ಸವೆಸುತ್ತಿದ್ದ ಇಬ್ಬರೂ ವೃದ್ದ ವಿಕಲಾಂಗ ಅಣ್ಣ ತಂಗಿಗೆ ಮಾನವೀಯ ಮನಸ್ಸಿನಿಂದ ಎಲ್ಲರೂ ಕೈಜೋಡಿಸಿ ಸೂರು ಕಲ್ಪಿಸಿಕೊಟ್ಟಿದ್ದಾರೆ, ಸದ್ಯ ಕಣ್ಣು ಕಾಣದಿದ್ದರೂ ಸದ್ಯ ತಮ್ಮ ಪರಿಸ್ಥಿತಿನಿಯನ್ನು ಕಂಡು ನೆರವು ನೀಡಿದ ಧರ್ಮಸ್ಥಳ ಸಂಘಕ್ಕೆ ನಾರಾಯಣಪ್ಪ ಹಾಗೂ ವೆಂಕಟಮ್ಮ ಕಣ್ಣೀರಾಕುವ ಮೂಲಕ ಕೃತಜ್ನತೆ ಅರ್ಪಿಸಿದ್ದಾರೆ.
ಒಟ್ಟಾರೆ ಕಣ್ಣಿಲ್ಲ ಬದುಕು ಕತ್ತಲಾಗಿದೆ ಎಂದು ಸಂಕಷ್ಟದ ಜೀವನ ನಡೆಸುತ್ತಿದ್ದ ಅಣ್ಣ ತಂಗಿಯ ನೆರವಿಗೆ ನಿಂತ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದ ಕಾರ್ಯ ನಿಜಕ್ಕೂ ಶ್ಲಾಘನೀಯ, ನಮಗೆ ಯಾರೂ ಇಲ್ಲಾ, ಎಲ್ಲರೂ ನಮ್ಮ ಕೈಬಿಟ್ಟಿದ್ದಾರೆ ಎಂದುಕೊಂಡಿದ್ದವರ ಕೈ ಹಿಡಿದು ತಮ್ಮ ವಾತ್ಸಲ್ಯದ ಮೂಲಕ ಅಂದರ ಬದುಕಿಗೂ ಸೂರು ಕಲ್ಪಿಸಿ ತಮ್ಮ ಮಾನವೀಯ ಹೃದಯವನ್ನು ತೋರಿಸಿದ್ದಾರೆ. (ವರದಿ : ರಾಜೇಂದ್ರ ಸಿಂಹ)