‘ಕೋಲಾರ ಕ್ಷೇತ್ರ’ ಸಂಚಾರಕ್ಕೆ ಮುಂದಾದ ಸಿದ್ದರಾಮಯ್ಯ: ಭಾನುವಾರ ಮಂದಿರ, ಮಸೀದಿ, ಚರ್ಚ್​ಗೆ ಭೇಟಿ

| Updated By: ಆಯೇಷಾ ಬಾನು

Updated on: Nov 12, 2022 | 1:47 PM

ನಾಳೆ ಕೋಲಾರದಲ್ಲಿ ಹಲವು ಕಾರ್ಯಕ್ರಮಗಳ ಮೂಲಕ ನಾಡಿ ಮಿಡಿತ ತಿಳಿಯುವ ಪ್ರಯತ್ನಕ್ಕೆ ಸಿದ್ದರಾಮಯ್ಯ ಇಳಿದಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಮಂದಿರ, ಮಸೀದಿ, ಚರ್ಚ್ ಗೆ ಭೇಟಿ ನೀಡಲಿದ್ದಾರೆ.

‘ಕೋಲಾರ ಕ್ಷೇತ್ರ’ ಸಂಚಾರಕ್ಕೆ ಮುಂದಾದ ಸಿದ್ದರಾಮಯ್ಯ: ಭಾನುವಾರ ಮಂದಿರ, ಮಸೀದಿ, ಚರ್ಚ್​ಗೆ ಭೇಟಿ
ಮಾಜಿ ಸಿಎಂ ಸಿದ್ದರಾಮಯ್ಯ
Follow us on

ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಅವರು 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ(Assembly Election 2023) ಸ್ಪರ್ಧಿಸಲು ತಮ್ಮ ಕ್ಷೇತ್ರವನ್ನು ಇನ್ನೂ ಅಂತಿಮಗೊಳಿಸಿಲ್ಲ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಮಗನಿಗಾಗಿ ವರುಣಾ ಕ್ಷೇತ್ರವನ್ನು ತ್ಯಾಗ ಮಾಡಿ ಚಾಮುಡೇಶ್ವರಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಹೀಗಾಗಿ ಈ ಬಾರಿಯ ಚುನಾವಣೆಗೆ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ಸದ್ಯ ಈಗ ಚುನಾವಣೆಗೆ ಕ್ಷೇತ್ರದ ಹುಡುಕಾಟದಲ್ಲಿರುವ ಸಿದ್ದರಾಮಯ್ಯರಿಗೆ ಕೋಲಾರದ ಹಲವು ಕಾಂಗ್ರೆಸ್ ಮುಖಂಡರು ಸ್ಥಳೀಯ ಮುಖಂಡರು ಕೋಲಾರದಿಂದ ಸ್ಪರ್ಧಿಸಲು ಸಲಹೆ ನೀಡಿದ್ದಾರೆ. ಹಾಗೂ ಕ್ಷೇತ್ರಕ್ಕೆ ಆಹ್ವಾನಿಸಿದ್ದಾರೆ. ಈ ನಿಟ್ಟಿನಲ್ಲಿ ನಾಳೆ ಇಡೀ ದಿನ ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಕ್ಷೇತ್ರ ಸಂಚಾರ ನಡೆಸಲಿದ್ದಾರೆ.

ಕೋಲಾರ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕೆಂಬ ಒತ್ತಾಯ ಮಾಡಿದ್ದಾರೆ. ಹೀಗಾಗಿ ಕೋಲಾರದ ಪರಿಸ್ಥಿತಿ ಸ್ವತಃ ತಿಳಿಯಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ನಾಳೆ ಕೋಲಾರದಲ್ಲಿ ಹಲವು ಕಾರ್ಯಕ್ರಮಗಳ ಮೂಲಕ ನಾಡಿ ಮಿಡಿತ ತಿಳಿಯುವ ಪ್ರಯತ್ನಕ್ಕೆ ಇಳಿದಿದ್ದಾರೆ. ನವೆಂಬರ್ 13ರ ಭಾನುವಾರ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಮಂದಿರ, ಮಸೀದಿ, ಚರ್ಚ್ ಗೆ ಭೇಟಿ ನೀಡಲಿದ್ದಾರೆ. ಭೇಟಿಯ ಕೊನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರ ಜೊತೆ ಚರ್ಚೆ ನಡೆಸಲಿದ್ದಾರೆ. ಅಲ್ಲದೇ ವಿವಿಧ ಸಂಘ ಸಂಸ್ಥೆಗಳ, ಪದಾಧಿಕಾರಿಗಳ ಜೊತೆಗೂ ಚರ್ಚೆ ನಡೆಸಿದ್ದಾರೆ. ನಾಳೆಯ ಭೇಟಿಯ ನಂತರ ಸ್ಪರ್ಧೆ ಬಗ್ಗೆ ಸಿದ್ದರಾಮಯ್ಯ ನಿರ್ಧಾರ ಮಾಡುವ ಸಾಧ್ಯತೆ ಇದೆ.

ನಾಳೆ ಸಿದ್ದರಾಮಯ್ಯ ಭೇಟಿ ನೀಡಲಿರುವ ಸ್ಥಳಗಳು

  • ನಾಳೆ ಶ್ರೀ ಕೋಲಾರಮ್ಮ ದೇವಾಲಯಕ್ಕೆ ಭೇಟಿ
  •  ಮೆಥೋಡಿಸ್ಟ್ ಚರ್ಚ್‌ಗೆ ಭೇಟಿ
  • ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ, ಕಾಲೇಜ್ ಸರ್ಕಲ್
  • ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ, ಇಟಿಸಿಎಂ ವೃತ್ತ
  • ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ
  • ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾಲಾರ್ಪಣೆ, ಬಂಗಾರಪೇಟೆ ವೃತ್ತ
  • ಕನಕ ಮಂದಿರಕ್ಕೆ ಭೇಟಿ
  • ಯೋಗಿ ಶ್ರೀ ನಾರಾಯಣ ಯತೀಂದ್ರ ಪ್ರತಿಮೆಗೆ ಮಾಲಾರ್ಪಣೆ
  • ದರ್ಗಾಕ್ಕೆ ಭೇಟಿ, ಕ್ಲಾಕ್‌ ಟವರ್
  • ನರಸಾಪುರ ಕೆರೆ ವೀಕ್ಷಣೆ
  • ಶ್ರೀ ಆಂಜನೇಯ ದೇವಾಲಯಕ್ಕೆ ಭೇಟಿ, ಕುರುಬರಹಳ್ಳಿ ಗೇಟ್, ವೇಮಗಲ್‌ ರಸ್ತೆ
  • ಸೀತೆ ಬೆಟ್ಟದಲ್ಲಿ ಪೂಜಾ ಕಾರ್ಯಕ್ರಮ
  • ದಿವಂಗತ ಬೈರೇಗೌಡ ಸಮಾಧಿ ಸ್ಥಳಕ್ಕೆ ಭೇಟಿ, ಗರುಡಾಪಾಳ್ಯ
  • ಕಾಂಗ್ರೆಸ್ ಪಕ್ಷದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ, ಪದಾಧಿಕಾರಿಗಳ ಚರ್ಚೆ

ಕೋಲಾರದಲ್ಲಿ ಸಮೀಕ್ಷೆ ನಡೆಸಲು ಸಿದ್ದರಾಮಯ್ಯ ಅವರು 2 ಖಾಸಗಿ ಏಜೆನ್ಸಿಗಳನ್ನು ನೇಮಿಸಿಕೊಂಡಿದ್ದರು. ಎರಡೂ ಏಜೆನ್ಸಿಗಳು ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಅವರ ಗೆಲ್ಲುವ ಸಾಧ್ಯತೆಗಳು ಶೇ. 56 ಮತ್ತು ಶೇ. 60 ಎಂದು ವರದಿ ನೀಡಿದ್ದವು.

Published On - 1:47 pm, Sat, 12 November 22