ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ: ಪೂರ್ವಭಾವಿ ಸಭೆಯಲ್ಲಿ ಸಹಮತ ವ್ಯಕ್ತಪಡಿಸಿದ ಮುಖಂಡರು
ಕೋಲಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮುಖಂಡರಿಂದ ಕೈ ಎತ್ತುವ ಮೂಲಕ ಒಮ್ಮತದ ತೀರ್ಮಾನವಾಗಿದೆ.
ಕೋಲಾರ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರು 2023 ರ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ನಡೆಸುತ್ತಾರೆ ಎಂಬುವುದು ಅನ್ನೂ ಅಧಿಕೃತಗೊಂಡಿಲ್ಲ. ಆದ್ರೆ, ಸಿದ್ದರಾಮಯ್ಯನವರು ಬಾದಾಮಿ ತೊರೆದು ಕೋಲಾರದ (Kolar) ಕ್ಷೇತ್ರದಿಂದ ಕಣಕ್ಕಿಳಿಯುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಇದಕ್ಕೆ ಪೂರಕವೆಂಬಂತೆ ಆಪ್ತ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸಿದ್ದರಾಮಯ್ಯನವರು ಕೋಲಾರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸ್ಥಳೀಯ ನಾಯಕ ಅಭಿಪ್ರಾಯಗಳನ್ನ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
Siddaramaiah: ಕೋಲಾರದಲ್ಲಿ ರಾಜಕೀಯ ಜೀವನದ ಕೊನೆಯ ಪರೀಕ್ಷೆ ಬರೆಯಲಿರುವ ಸಿದ್ದರಾಮಯ್ಯ?
ಹೌದು… ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನವೆಂಬರ್ 13 ರಂದು ಕೋಲಾರಕ್ಕೆ ಭೇಟಿ ನೀಡಿ ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು(ನ.11) ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೋಲಾರದ ಹೊರವಲಯದ ನಂದಿನಿ ಪ್ಯಾಲೇಸ್ ನಲ್ಲಿ ಪೂರ್ವಭಾವಿ ಸಭೆ ನಡೆಸಿದರು. ಈ ಸಭೆಯಲ್ಲಿ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡುವುದರ ಬಗ್ಗೆ ಚರ್ಚೆಯಾಗಿದ್ದು, ಮುಖಂಡರಿಂದ ಸಿದ್ದು ಸ್ಪರ್ಧೆಗೆ ಒಮ್ಮತದ ತೀರ್ಮಾನವಾಗಿದೆ.
ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿದರೆ ಸಹಕಾರ ನೀಡುವುದಾಗಿ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರುಗಳು ಮತ್ತು ಕಾರ್ಯಕರ್ತರು ಕೈ ಮೇಲೆತ್ತಿ ಘೋಷಣೆ ಕೂಗಿ ಸಹಮತ ವ್ಯಕ್ತಪಡಿಸಿದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕ ಕೆ.ಶ್ರೀನಿವಾಸಗೌಡ,ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ ಮಾಜಿ ಶಾಸಕ ಸುಧಾಕರ್ ಸೇರಿದಂತೆ ಅನೇಕ ನಾಯಕರು ಕೈ ಎತ್ತುವ ಮೂಲಕ ಒಪ್ಪಿಗೆ ಸೂಚಿಸಿದರು.
ಅಲ್ಲದೇ ಪೂರ್ವಭಾವಿ ಸಭೆಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಒಮ್ಮತದ ನಿರ್ಧಾರ ಕೈಗೊಂಡಿದ್ದು, ಗೆಲುವಿಗೆ ಶ್ರಮಿಸುವುದಾಗಿ ಘೋಷಿಸಿದರು. ಹಾಗಾದ್ರೆ, ಸಿದ್ದರಾಮಯ್ಯನವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದ ಕಣಕ್ಕಳಿಯುವ ಸಾಧ್ಯತೆಗಳು ಹೆಚ್ಚಾದಂತಿವೆ. ಇದಕ್ಕೆ ಪೂರಕವೆಂಬಂತೆ ರಮೇಶ್ ಕುಮಾರ್ ಸದ್ದಿಲ್ಲದೆ ಎಲ್ಲಾ ಪೂರಕ ಸಿದ್ಧತೆಗಳು ಮಾಡುತ್ತಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಬಾದಾಮಿ ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು.ಆದ್ರೆ, ರಾಜಕೀಯ ಮರುಜನ್ಮ ನೀಡಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲನ್ನು ಅನುಭವಿಸಿದ್ದರು. ಈ ಸಂದರ್ಭದಲ್ಲಿ ಬಾದಾಮಿ ಸಿದ್ದು ಕೈಹಿಡಿದಿತ್ತು. ಗೆಲ್ಲಿಸಿದ ಜನರಿಗಾಗಿ ಸಿದ್ದರಾಮಯ್ಯ ಕ್ಷೇತ್ರಕ್ಕಾಗಿ ಒಂದಿಷ್ಟು ಕೆಲಸವನ್ನು ಮಾಡಿದ್ದರೂ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿರುವ ಕಾರಣಕ್ಕಾಗಿ ಕ್ಷೇತ್ರದ ಕಡೆಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ 2023ರ ಚುನಾವಣೆಯಲ್ಲಿ ಬಾದಾಮಿ ಬಿಟ್ಟು ಬೇರೆ ಕಡೆ ಅಂದ್ರೆ ಬೆಂಗಳೂರಿಗೆ ಹತ್ತಿರವಿರುವ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಯಸಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 7:21 pm, Fri, 11 November 22