ಕನಕದಾಸ, ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ, ಕೆಂಪೇಗೌಡರ ಪುತ್ಥಳಿ ಅನಾವರಣ ಹಿಂದಿದೆಯಾ ರಾಜಕೀಯ ಸೂತ್ರ…?
ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಕಾಮಗಾರಿಗಳ ಜೊತೆ ಜೊತೆಗೆ ಮತ ಬೇಟೆಗೂ ಮುಂದಾಗಿದ್ದಾರೆ. ಮುಂಬರೋ ಚುನಾವಣೆಗೆ ಪಾಂಚಜನ್ಯ ಮೊಳಗಿಸಿದ್ರಾ ಮೋದಿ...? ಕೆಂಪೇಗೌಡರ ಪುಚ್ಥಳಿ ಅನಾವರಣ ಹಿಂದಿದೆಯಾ ರಾಜಕೀಯ ಸೂತ್ರ...?
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಇನ್ನೇನು ಐದಾರು ತಿಂಗಳು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ,ಪ್ರಧಾನಿ ನರೇಂದ್ರ ಮೋದಿ(Narendra Modi) ಅವರನ್ನು ಪದೇ-ಪದೇ ಕರ್ನಾಟಕಕ್ಕೆ ಕರೆಯಿಸಿ ವಿವಿಧ ಆಯಾಮಗಳಲ್ಲಿ ಮತಗಳ ಕ್ರೂಢೀಕರಣಕ್ಕೆ ಮುಂದಾಗಿದೆ. ಅಭಿವೃದ್ಧಿ ಕಾಮಗಾರಿಗಳ ಜೊತೆ ಜೊತೆಗೆ ಮತ ಬೇಟೆಗೂ ಮೋದಿಯವರನ್ನು ಅಖಾಡಕ್ಕಿಳಿಸಿದೆ.
ಹೌದು.. ಜೂನ್ನಲ್ಲಿ ಕರ್ನಾಟಕಕ್ಕೆ ಬಂದು ಹೋಗಿದ್ದ ನರೇಂದ್ರ ಮೋದಿ 4 ತಿಂಗಳ ಬಳಿಕ ಮತ್ತೆ ಬೆಂಗಳೂರಿಗೆ ಬಂದಿದ್ದಾರೆ. ಚುನಾವಣೆ ಹೊತ್ತಲ್ಲೇ ಮೋದಿ ರಾಜ್ಯ ಭೇಟಿ ಕಮಲ ಪಾಳಯದಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದು, ಮೋದಿ ಆಗಮನ ಕೇಸರಿ ಪಾಳಯದಲ್ಲಿ ಹೊಸ ಸಂಚಲನ ಮೂಡಿಸಿದೆ.
Kanakadasa Statue: ವಿಧಾನ ಸೌಧದಲ್ಲಿ ಕನಕದಾಸ ಪುತ್ಥಳಿಗೆ ಪ್ರಧಾನಿ ಪುಷ್ಪಾರ್ಚನೆ
ಮೋದಿ ಎಂಟ್ರಿ.. ರಾಜಕೀಯ ತಂತ್ರ
ಚುನಾವಣೆ ಸಮೀಪಿಸುತ್ತಿದ್ದಂತೆಯೇ ಆಡಳಿತ ಪಕ್ಷ ಬಿಜೆಪಿಯಿಂದ ಜಾತಿ ಸಮೀಕರಣ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಮೂಲಕವೇ ಜಾತಿ ಜಾಲ ಹೆಣೆಯಲು ಮುಂದಾದ ಬಿಜೆಪಿ, ಪ್ರಬಲ ಸಮುದಾಯವನ್ನು ತನ್ನತ್ತ ಸೆಳೆಯಲು ಖುದ್ದು ಪ್ರಧಾನಿಯನ್ನೇ ಅಖಾಡಕ್ಕೆ ಇಳಿಸಿದೆ. ಅಭಿವೃದ್ಧಿ ಕಾಮಗಾರಿಗಳ ಜೊತೆ ಜೊತೆಗೆ ಮತ ಬೇಟೆಗೂ ಪ್ಲಾನ್ ಮಾಡಲಾಗಿದ್ದು, ಶಕ್ತಿ ಕೇಂದ್ರ ವಿಧಾನ ಸೌಧದಿಂದಲೇ ಮತಬೇಟೆ ಆರಂಭವಾಗಿದೆ.
ಕುರುಬ, ವಾಲ್ಮೀಕಿ ಸಮುದಾಯಗಳ ಗಮನಸೆಳೆದ ಮೋದಿ
ಯೆಸ್…ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಕನಕದಾಸ ಹಾಗೂ ವಾಲ್ಮೀಕಿ ಮೂರ್ತಿಗಳಿಗೆ ಪುಷ್ಪಾರ್ಚನೆ ಮಾಡುವುದು ಇರಲಿಲ್ಲ. ಆದ್ರೆ, ಈ ಎರಡು ರಾಜ್ಯದಲ್ಲಿ ಪ್ರಬಲ ಸಮುದಾಯಗಳು ಆಗಿದ್ದು, ಅಲ್ಲದೇ ಇಂದು(ನ.11) ಕನಕದಾಸರ ಜಯಂತಿ ಇರುವುದರಿಂದ ಈ ಅವಕಾಶವನ್ನು ಉಪಯೋಗಿಸಿಕೊಳ್ಳಲು ಶಾಸಕರ ಭವನದಲ್ಲಿರುವ ಕನಕದಾಸ ಹಾಗೂ ವಾಲ್ಮೀಕಿ ಪುತ್ಥಳಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಸಹ ನಿಗದಿ ಮಾಡಲಾಯ್ತು. ಅದರಂತೆ ಮೋದಿ ಇಂದು ವಿಧಾನಸೌಧದ ಪಕ್ಕದ ಶಾಸಕರ ಭವನದಲ್ಲಿರುವ ಕನಕದಾಸ ಪುತ್ಥಳಿಗೆ ಗೌರವ ಸಲ್ಲಿಸಿದ ಬಳಿಕ ವಾಲ್ಮಿಕಿ ಪುತ್ತಳಿಗೆ ಪುಷ್ಪಾರ್ಚನೆ ಮಾಡಿದರು. ಈ ಮೂಲಕ ಕುರುಬ ಹಾಗೂ ವಾಲ್ಮೀಕಿ ಸಮುದಾಯಗಳ ಗಮನಸೆಳೆದರು.
ಒಬಿಸಿ ಮೇಲೆ ಬಿಜೆಪಿ ಕಣ್ಣು
ಖುದ್ದು ನರೇಂದ್ರ ಮೋದಿಯ ಮೂಲಕವೇ ಕನಕದಾಸರಿಗೆ ಗೌರವ ಸಲ್ಲಿಸುವ ಮೂಲಕ ಬಿಜೆಪಿ ಸಿದ್ದರಾಂಯ್ಯನವರಿಗೆ ಟಕ್ಕರ್ ಕೊಟ್ಟಿದೆ. ಅತ್ತ ಕಾಂಗ್ರೆಸ್ ನ ಬಳಿ ಸಿದ್ದರಾಮಯ್ಯರಂತಹ ಬಹುದೊಡ್ಡ ಒಬಿಸಿ ನಾಯಕರಿದ್ದಾರೆ. ಇತ್ತ ರಾಜ್ಯ ಬಿಜೆಪಿ ಬಳಿ ಸಂಪೂರ್ಣ ಕರ್ನಾಟಕ ಹಾಗೂ ಸಮುದಾಯ ಒಪ್ಪಿಕೊಳ್ಳುವ ಒಬಿಸಿ ನಾಯಕರಿಲ್ಲ. ಬದಲಾಗಿ ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೂಲಕವೇ ಒಬಿಸಿ ಸಂದೇಶ ರವಾನಿಸಿದ್ದಾರೆ.
ನರೇಂದ್ರ ಮೋದಿ ಸಹ ಹಿಂದುಳಿದ ವರ್ಗಕ್ಕೆ ಸೇರಿದ ಬಹುದೊಡ್ಡ ರಾಜಕೀಯ ನಾಯಕ. ಬಿಜೆಪಿ ಪದೇಪದೇ ಹಿಂದುಳಿದವರಿಗೆ ಪಕ್ಷದ ಕೊಡುಗೆ ಬಗ್ಗೆ ಹೇಳುವಾಗ ಮೋದಿ ವಿಷಯ ಪ್ರಸ್ತಾಪಿಸುತ್ತದೆ. ಅಲ್ಲದೇ ಕೇಂದ್ರ ಸಚಿವ ಸಂಪುಟದಲ್ಲಿ ಅತಿ ಹೆಚ್ಚು ಮಂದಿ ಹಿಂದುಳಿದ ವರ್ಗದ ಸಚಿವರೇ ಇದಾರೆ ಎಂಬುದು ಸಹ ಬಿಜೆಪಿಗೆ ಬಲ ತಂದುಕೊಡುವ ವಿಚಾರ. ಹೀಗಾಗಿ ಹಿಂದುಳಿದ ವರ್ಗಗಳ ನಾಯಕರಾಗಿರುವ ಮೋದಿ ಮೂಲಕವೇ ಬಿಜೆಪಿ ಸಂದೇಶ ಕೊಡಲು ಮುಂದಾಗಿದ್ದು, ಈ ಮೂಲಕ ಒಬಿಸಿ ಸಮುದಾಯದ ಮತವನ್ನ ತನ್ನತ್ತ ಸೆಳೆಯಲು ಬಿಜೆಪಿ ರಣತಂತ್ರ ರೂಪಿಸಿದೆ.
ಕುರುಬ ಸಮುದಾಯ ಹಿಂದುಳಿದ ವರ್ಗಗಳ ಬಹುದೊಡ್ಡ ಸಮುದಾಯ. ಒಟ್ಟು ಶೇಕಡ 34ರಷ್ಟಿರುವ ಹಿಂದುಳಿದ ವರ್ಗಗಳ ಪೈಕಿ ಶೇಕಡ 8ರಷ್ಟು ಕುರುಬ ಸಮುದಾಯವಿದೆ. ಹಿಂದುಳಿದ ವರ್ಗಗಳ ಪೈಕಿ ಬಹುದೊಡ್ಡ ವರ್ಗವನ್ನ ಒಲೈಸಲು ಬಿಜೆಪಿ ಪ್ಲಾನ್ ಮಾಡಿದಂತಿದೆ.
ವಾಲ್ಮೀಕಿ ಅಸ್ತ್ರ ಪ್ರಯೋಗ
ವಾಲ್ಮಿಕಿ ಪುತ್ತಳಿಗೆ ಗೌರವಿಸುವ ಮೂಲಕ ಎಸ್ ಟಿ ಸಮುದಾಯ ಒಲೈಕೆಗೆ ಬಿಜೆಪಿ ಪ್ಲಾನ್ ಆಗಿದೆ. ಇದಕ್ಕೆ ಪೂರಕವೆಂಬಂತೆ ಮಹರ್ಷಿ ವಾಲ್ಮಿಕಿ ಪುತ್ತಳಿಗೆ ಸಹ ನರೇಂದ್ರ ಮೋದಿ ಪುಷ್ಪಾರ್ಚನೆ ಮಾಡಿದ್ದಾರೆ. ಕಾರ್ಯಕ್ರದಲ್ಲಿ ಇದು ಇರಲಿಲ್ಲವಾದರೂ ಕೊನೆಗಳಿಗೆಯಲ್ಲಿ ಬದಲಾವಣೆ ಮಾಡಲಾಯ್ತು. ಇತ್ತಿಚೆಗಷ್ಟೇ ಎಸ್ಸಿ ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದ ರಾಜ್ಯ ಬಿಜೆಪಿ ಸರ್ಕಾರ, ಇದನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ವಾಲ್ಮೀಕಿ ಅಸ್ತ್ರ ಪ್ರಯೋಗಿಸಿದೆ. ಎರಡು ದಶಕಗಳಿಂದ ಇದ್ದ ಎಸ್ಟಿ ಮೀಸಲಾತಿ ಹೆಚ್ಚಳ ಬೇಡಿಕೆಯನ್ನು ಈಗ ಬಿಜೆಪಿ ಈಡೇರಿಸಿದೆ. ಇದರೊಂದಿಗೆ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳವನ್ನೇ ಚುನಾವಣೆ ಬಂಡವಾಳ ಮಾಡಿಕೊಳ್ಳಲು ಬಿಜೆಪಿ ದಾಳ ಉರುಳಿಸಿದೆ.
ಒಕ್ಕಲಿಗರ ಮತ ಸೆಳೆಯಲು ತಂತ್ರ
ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಬಿಜೆಪಿ ಇನ್ನಿಲ್ಲದ ತಂತ್ರಗಾರಿಕೆ ಮಾಡುತ್ತಿದೆ. ಈಗಾಗಲೇ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಿ ಕಾಂಗ್ರೆಸ್ ಮತಬ್ಯಾಂಕ್‌ಗೆ ಪೆಟ್ಟುಕೊಡಲು ನಿರ್ಧರಿಸಿದೆ. ಇದೀಗ ಹಳೇ ಮೈಸೂರು ಭಾಗದಲ್ಲಿ ಪ್ರಬಲವಾಗಿರುವ ಒಕ್ಕಲಿಗರ ಮತಸೆಳೆಯಲು ನಾಡಪ್ರಭು ಕೆಂಪೇಗೌಡರ ಕಾರ್ಡ್ ಪ್ಲೇ ಮಾಡುತ್ತಿದೆ. ತನ್ನ ಮಹತ್ವಾಕಾಂಕ್ಷೆಯ ಮಿಷನ್ ದಕ್ಷಿಣ್ ಗುರಿಸಾಧಿಸಲು ಪ್ರಗತಿಯ ಪ್ರತಿಮೆ ಅಸ್ತ್ರವನ್ನು ಪ್ರಯೋಗಿಸಿದೆ.
ರಾಜ್ಯ ಬಿಜೆಪಿಯಲ್ಲಿ ರಣೋತ್ಸಾಹ
ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿ ಹಲವು ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಿಂದ ರಾಜ್ಯ ಕೈಪಾಳಯದಲ್ಲಿ ನವೋತ್ಸಾಹ ಬಂದಿತ್ತು. ಚುನಾವಣೆ ಪ್ರಚಾರಕ್ಕೆ ಬೂಸ್ಟರ್ ಡೋಸ್ ಸಿಕ್ಕಂತಾಗಿತ್ತು. ಇದೀಗ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದು ಹೋಗಿರುವುದು ಕಮಲ ಪಾಳಯದಲ್ಲಿ ಮಿಂಚು ಹರಿಸಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:36 pm, Fri, 11 November 22