ಕೋಲಾರದಲ್ಲಿ ಹೆಚ್ಚಾದ ನಾಯಿಗಳ ದರ್ಬಾರ್: ರಸ್ತೆಗೆ ಇಳಿಯೋಕೂ ಭಯ, ನಾಯಿಗಳಿಗೊಂದು ಗತಿ ಕಾಣಿಸಿ ಎನ್ನುತ್ತಿರುವ ಜನ

| Updated By: ಸಾಧು ಶ್ರೀನಾಥ್​

Updated on: Nov 08, 2022 | 3:56 PM

ಕೋಲಾರದಲ್ಲಿ ಹಗಲಲ್ಲಾಗಲೀ ರಾತ್ರಿಯಲ್ಲಾಗಲೀ ರಸ್ತೆಯಲ್ಲಿ ಜನರಿಗಿಂತ ನಾಯಿಗಳ ಅಬ್ಬರವೇ ಜೋರಾಗಿರುತ್ತದೆ. ರಸ್ತೆಯಲ್ಲಿ ಜನರು ಓಡಾಡೋದು ಕಷ್ಟ ಆತಂಕದಲ್ಲೇ ಓಡಾಡುವ ಸ್ಥಿತಿ ಇದೆ.

ಕೋಲಾರದಲ್ಲಿ ಹೆಚ್ಚಾದ ನಾಯಿಗಳ ದರ್ಬಾರ್:  ರಸ್ತೆಗೆ ಇಳಿಯೋಕೂ ಭಯ, ನಾಯಿಗಳಿಗೊಂದು ಗತಿ ಕಾಣಿಸಿ ಎನ್ನುತ್ತಿರುವ ಜನ
ಕೋಲಾರದಲ್ಲಿ ಹೆಚ್ಚಾದ ನಾಯಿಗಳ ದರ್ಬಾರ್
Follow us on

ಕೋಲಾರ: ಜಿಲ್ಲೆಯಲ್ಲಿ ಹಗಲಾಗಲೀ ಅಥವಾ ರಾತ್ರಿಯಾಗಲೀ ಜನರು ರಸ್ತೆಯಲ್ಲಿ ಓಡಾಡೋದಕ್ಕೆ ಹೆದರುತ್ತಿದ್ದಾರೆ. ಒಂದು ವೇಳೆ ಧೈರ್ಯ ಮಾಡಿ ಬೀದಿಗಿಳಿದರೆ ಎಲ್ಲಿ ಆಸ್ಪತ್ರೆಗೆ ಹೋಗಿ ಇಂಜೆಕ್ಷನ್​ ಹಾಕಿಸಿಕೊಳ್ಳಬೇಕೋ ಅನ್ನೋ ಭಯದಲ್ಲಿ ಜಿಲ್ಲೆಯ ಜನರು ಭಯದಲ್ಲೇ ಬದುಕುತ್ತಿದ್ದಾರೆ. ಕೋಲಾರ ಸೇರಿದಂತೆ ಜಿಲ್ಲೆಯಾದ್ಯಂತ ಇತ್ತೀಚೆಗೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿ ಹೋಗಿದೆ. ಕೋಲಾರ ನಗರಸಭೆಯ 35 ವಾರ್ಡ್​ಗಳು, ಸೇರಿದಂತೆ ಜಿಲ್ಲೆಯ ಮೂರು ನಗರಸಭೆ, ಮೂರು ಪುರಸಭೆ, ಒಂದು ಪಟ್ಟಣ ಪಂಚಾಯ್ತಿ ಸೇರಿದಂತೆ ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ಬೀದಿಗಳಲ್ಲಿ ಜನರು ಓಡಾಡಲು ಸಾಧ್ಯವಾಗದಷ್ಟರ ಮಟ್ಟಿಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.

ರಸ್ತೆಯಲ್ಲಿ ಓಡಾಡುವ ಜನರನ್ನು ಅಡ್ಡಗಟ್ಟಿ ಹೆದರಿಸುವ ನಾಯಿಗಳು

ಹಗಲಲ್ಲಾಗಲೀ ರಾತ್ರಿಯಲ್ಲಾಗಲೀ ರಸ್ತೆಯಲ್ಲಿ ಜನರಿಗಿಂತ ನಾಯಿಗಳ ಅಬ್ಬರವೇ ಜೋರಾಗಿರುತ್ತದೆ. ರಸ್ತೆಯಲ್ಲಿ ಜನರು ಓಡಾಡೋದು ಕಷ್ಟ ಆತಂಕದಲ್ಲೇ ಓಡಾಡುವ ಸ್ಥಿತಿ ಇದೆ. ಮಕ್ಕಳು ಶಾಲೆ ಹೋಗುವಾಗ, ಮಹಿಳೆಯರು ಕೆಲಸಕ್ಕೆ ಹೋಗುವಾಗ ರಕ್ಕಸ ನಾಯಿಗಳು ಜನರ ಮೇಲೆರಗುತ್ತವೆ, ಬೀದಿಯಲ್ಲೇ ಕಚ್ಚಾಡಿಕೊಂಡು ಜನರ ಮೇಲೆ ಬಂದು ಬೀಳುತ್ತಿವೆ ಕಳೆದ ಒಂದು ವರ್ಷದಿಂದ ಇದೇ ಪರಿಸ್ಥಿತಿ ಇದೆ. ಇನ್ನು ಬೈಕ್​ಗಳಲ್ಲಿ ಹೋಗುವ ಅಥವಾ ಕಾರ್​ಗಳಲ್ಲಿ ಹೋಗುವ ಜನರನ್ನು ಅಡ್ಡಹಾಕಿ ಬೆದರಿಸುತ್ತವೆ. (ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ)

ಮಟನ್​ ಹಾಗೂ ಚಿಕನ್​ ಅಂಗಡಿಗಳ ಬಳಿ ನಾಯಿಗಳ ಬಿಡಾರ

ಇನ್ನು ಹೆಚ್ಚಾಗಿ ಮಟನ್​ ಚಿಕನ್​ ಅಂಗಡಿಗಳು, ನಾನ್​ವೆಜ್​ ಹೋಟೆಲ್​ ಗಳ ಬಳಿಯಂತೂ ನೂರಾರು ನಾಯಿಗಳು ಸದಾ ಬಿಡಾರ ಹೂಡಿರುತ್ತವೆ. ಇಂಥ ರಾಕ್ಷಸ ನಾಯಿಗಳಿಂದ ಪ್ರತಿನಿತ್ಯ ಒಬ್ಬರಲ್ಲಾ ಒಬ್ಬರು ನಾಯಿಯಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕಳೆದ 6 ತಿಂಗಳಲ್ಲಿ ನಾಯಿ ಕಡಿತದಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದವರ ಸಂಖ್ಯ ಸುಮಾರು 100 ಸಂಖ್ಯೆ ದಾಟಿದೆ ಎಂದು ಹೇಳಲಾಗಿದೆ. ಹೀಗೆ ನಾಯಿಗಳಿಂದ ಕಚ್ಚಿಸಿಕೊಂಡವರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚಿದೆ, ಇನ್ನು ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಹಲವು ಬಾರಿ ಜನರು ಸ್ಥಳೀಯ ಸಂಸ್ಥೆಗಳ ಎದುರು ಪ್ರತಿಭಟನೆ ಮಾಡಿದ್ರು ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಅನ್ನೋದು ಕೋಲಾರ ನಗರ ನಿವಾಸಿ ಮುಬಾರಕ್​ ಅವರ ಮಾತು.

ಸಂತಾನಹರಣವೂ ಇಲ್ಲಾ, ಹಿಡಿದು ಬೇರೆಡೆಗೂ ಬಿಡ್ತಿಲ್ಲ

ನಗರ ಪ್ರದೇಶ, ಗ್ರಾಮೀಣ ಭಾಗ ಎಲ್ಲೆಡಯೂ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ, ಯಾವ ವಾರ್ಡ್​ನಲ್ಲಿ ನಾಯಿಗಳ ಹಾವಳಿ ಇಲ್ಲಾ ಯಾವ ಹಳ್ಳಿಯಲ್ಲಿ ಇಲ್ಲ ಎಂದು ಹೇಳುವಂತಿಲ್ಲ, ಎಲ್ಲೆಡೆಯೂ ಬೀದಿ ನಾಯಿಗಳ ಹಾವಳಿ ತಪ್ಪಿಲ್ಲ, ಪ್ರಮುಖವಾಗಿ ಕಳೆದ ಮೂರು ನಾಲ್ಕು ವರ್ಷಗಳಿಂದ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಯಾಗಲೀ, ಅಥವಾ ಬೀದಿ ನಾಯಿಗಳನ್ನು ಹಿಡಿದು ಬೇರೆಡೆ ಬಿಡುವ ಕೆಲಸವಾಗಲಿ ಜಿಲ್ಲೆಯಲ್ಲಿ ನಡೆದಿಲ್ಲಾ ಹಾಗಾಗಿ ಜಿಲ್ಲೆಯಲ್ಲಿ ಸಾವಿರಾರು ನಾಯಿಗಳು ತುಂಬಿ ತುಳುಕುತ್ತಿವೆ, ಅನ್ನೋದು ಜಿಲ್ಲಾಧಿಕಾರಿ ಸೇರಿದಂತೆ ನಗರಸಭೆ ಅಧಿಕಾರಿಗಳ ಮಾತು.

ನಾಯಿ ಹಿಡಿಯಲು ಪ್ರಾಣಿದಯಾ ಸಂಘದವರ ಭಯ

ಇನ್ನು ಮೊದಲೆಲ್ಲಾ ಹೀಗೆ ಬೀದಿನಾಯಿಗಳ ಹಾವಳಿ ಹೆಚ್ಚಾದಾಗ ನಾಯಿಗಳನ್ನು ಹಿಡಿದು ಸಂತಾನಹರಣ, ಕಾಡಿಗೆ ಬಿಡುವುದು ಅಥವಾ ಸಾಯಿಸಲಾಗುತ್ತಿತ್ತು. ನಂತರದ ವರ್ಷಗಳಲ್ಲಿ ನಾಯಿಗಳನ್ನು ಕೊಲ್ಲಬಾರದು ಅಥವಾ ಹಿಂಸೆ ಮಾಡಬಾರದು ಎಂದು ಪ್ರಾಣಿದಯಾ ಸಂಘದವರು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ವಿರುದ್ದ ಪ್ರಕರಣ ದಾಖಲು ಮಾಡುವ ಭಯದಿಂದ ಯಾವುದೇ ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳನ್ನು ಹಿಡಿಯುವ ಗೋಜಿಗೆ ಹೋಗುತ್ತಿಲ್ಲ ಅನ್ನೋದು ಕೆಲವು ಅಧಿಕಾರಿಗಳು ಹೇಳುವ ಮಾತು.

ಒಟ್ಟಾರೆ ಕೋಲಾರದಲ್ಲಿ ರಾಕ್ಷಸರಂತೆ ನಾಯಿಗಳು ಸದಾ ಹೊಂಚುಹಾಕುತ್ತಿದ್ದು ಸಿಕ್ಕ ಸಿಕ್ಕ ಮಹಿಳೆಯರು ಮಕ್ಕಳು, ವೃದ್ದರ ಮೇಲೆ ಎರಗಿ ಕಚ್ಚಿ ಗಾಯಗೊಳಿಸುತ್ತಿದೆ. ಹಾಗಾಗಿ ಕೂಡಲೇ ಸಂಬಂಧಪಟ್ಟವರು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕಿದೆ ಇಲ್ಲವಾದಲ್ಲಿ ರಸ್ತೆಯಲ್ಲಿ ಜನರಿಗಿಂತ ನಾಯಿಗಳೇ ಹೆಚ್ಚಾಗಿ ಜನರು ಮೆನಯಲ್ಲಿ ಬಾಗಿಲು ಹಾಕಿಕೊಂಡು ಕೂರಬೇಕಾದ ಸ್ಥಿತಿ ಎದುರಾಗುತ್ತದೆ.

Published On - 3:10 pm, Tue, 8 November 22