ಕೋಲಾರ, ಡಿ.18: ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಿದ ಪ್ರಕರಣ ಸಂಬಂಧ ಕೋಲಾರದ (Kolar) ಮಾಲೂರು ತಾಲೂಕಿನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಚಿತ್ರಕಲಾ ಶಿಕ್ಷಕನ ಬಂಧನ ಖಂಡಿಸಿ ಸ್ವತಃ ವಿದ್ಯಾರ್ಥಿಗಳೇ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆಯಿಂದಲೇ ವಸತಿ ಶಾಲೆಯಲ್ಲಿ ಮಕ್ಕಳು ಪ್ರತಿಭಟನೆ ಆರಂಭಿಸಿದ್ದು, ಶಿಕ್ಷಕ ಮುನಿಯಪ್ಪ ವಿರುದ್ಧದ ಪ್ರಕರಣವನ್ನು ವಾಪಸ್ ಪಡೆಯುವಂತೆ ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ಕೂಡಲೆ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸುವಂತೆ ಒತ್ತಾಯಿಸುತ್ತಿರುವ ವಿದ್ಯಾರ್ಥಿಗಳು, ಊಟ ತಿಂಡಿ ಬಿಟ್ಟು ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಯಲುವಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಕ್ಲೀನ್ ಮಾಡಿಸಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಇದರ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿ ಟಿವಿ9ನ ‘ಹೇಗಿದೆ ನಮ್ ಶಾಲೆ’ ಎಂಬ ಅಭಿಯಾನದಲ್ಲಿ ವರದಿ ಬಿತ್ತರಿಸಲಾಗಿತ್ತು.
ಇದನ್ನೂ ಓದಿ: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಗೆ ಕಿರುಕುಳ: ಬೆತ್ತಲೆ ವಿಡಿಯೋ ಚಿತ್ರೀಕರಣ, ವಿದ್ಯಾರ್ಥಿನಿ ಆರೋಪ
ಇದರ ಬೆನ್ನಲ್ಲೇ ವಸತಿ ಶಾಲೆಗೆ ಭೇಟಿ ನೀಡಿದ್ದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್, ಪರಿಶೀಲನೆ ನಡೆಸಿದ್ದರು. ಬಳಿಕ ಮಾತನಾಡಿದ್ದ ಅವರು, ಶೌಚಾಲಯ ಕ್ಲೀನ್ ಮಾಡಿಸಿದವರನ್ನು ಅಮಾನತು ಮಾಡುತ್ತೇವೆ ಎಂದಿದ್ದರು. ಅದರಂತೆ, ವಸತಿ ಶಾಲೆಯ ನಾಲ್ವರು ಸಿಬ್ಬಂದಿಯನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಅಮಾನತು ಮಾಡಿದ್ದರು. ಬಳಿಕ ಪ್ರಾಂಶುಪಾಲೆ ಭಾರತಮ್ಮ ಮತ್ತು ಚಿತ್ರಕಲಾ ಶಿಕ್ಷಕ ಮುನಿಯಪ್ಪ ಅವರನ್ನು ಬಂಧಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ