ಬಂಧಿತ ಆರೋಪಿಗಳು
ಕೋಲಾರ, ಅ.04: ಬೆಂಗಳೂರು ಉತ್ತರ
ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಫೇಲಾಗಿದ್ದವರು, ಕೆಲವೇ ನಿಮಿಷಗಳಲ್ಲಿ ಪಾಸಾಗಿದ್ದಾರೆ. 15 ರಿಂದ 20 ಸಾವಿರ ರೂಪಾಯಿ ಖರ್ಚು ಮಾಡಿದರೆ ಸಾಕು, ಫೇಲಾಗಿದ್ದವರೂ ಕೂಡ ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ನಲ್ಲಿ ಪಾಸ್ ಎಂದು ನಮೂದಾಗುತ್ತಿದ್ದು, ಇದರ ಹಿಂದೆ ಬಹುದೊಡ್ಡ ಜಾಲವಿರಬಹುದೆಂದು ಶಂಕಿಸಿದ ಬೆಂಗಳೂರು ಉತ್ತರ ವಿವಿ ಮೌಲ್ಯಮಾಪನ ಕುಲಸಚಿವ ತಿಪ್ಪೇಸ್ವಾಮಿ ಅವರು ಬೆಂಗಳೂರು ಗ್ರಾಮಾಂತರ ವಿಭಾಗದ ವಿಜಯಪುರದಲ್ಲಿ ದೂರು ದಾಖಲು ಮಾಡಿದ್ದರು.
ವಿಜಯಪುರ ಪೊಲಿಸರು ಈ ಪ್ರಕರಣವನ್ನು ಕೋಲಾರದ ಸೆನ್ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರು. ನಂತರ ಸೆನ್ ಪೊಲೀಸ್ ಠಾಣಾ ಪೊಲೀಸರು ತನಿಖೆ ನಡೆಸಿ ವಿವಿಯ ಜಾಲದ ಅಕ್ರಮದಲ್ಲಿ ತೊಡಗಿದ್ದ ಕೋಲಾರದ ಎಂ.ಎನ್.ಜಿ ಪದವಿ ಪೂರ್ವ ಕಾಲೇಜು ಮತ್ತು ಸ್ಮಾರ್ಟ್ ಡಿಗ್ರಿ ಕಾಲೇಜಿನ ಟ್ರಸ್ಟಿಗಳಾದ ಗಿರೀಶ್, ಸಂದೇಶ್ ಹಾಗೂ ಇದೇ ಕಾಲೇಜಿನ ಮೀಡಿಯೇಟರ್ ಕಮ್ ವಿದ್ಯಾರ್ಥಿ ಸೂರ್ಯ ಎಂಬುವವರನ್ನು ಬಂಧಿಸಿದ್ದಾರೆ.
ಇನ್ನು ಪ್ರಕರಣದಲ್ಲಿ ಉತ್ತರ ವಿಶ್ವ ವಿದ್ಯಾಲಯದ ಸಿಬ್ಬಂದಿಯ ಸಹಕಾರವಿಲ್ಲದೆ ವೆಬ್ ಸೈಟನ್ನು ಈ ಮಟ್ಟಿಗೆ ಬಳಸಿಕೊಳ್ಳುವುದು ಅಸಾಧ್ಯ. ಹಾಗಾಗಿ ಇದರಲ್ಲಿ ಭಾಗಿಯಾಗಿರುವವರ ಜಾಲದ ಬಗ್ಗೆ ಮತ್ತಷ್ಟು ತನಿಖೆ ಚುರುಕುಗೊಂಡಿದೆ. ಈ ಅಕ್ರಮ ಎಸಗಿ ಹಲವು ಪೇಲ್ ಆಗಿದ್ದ ವಿದ್ಯಾರ್ಥಿಗಳು ಪಾಸ್ ಆಗಿರುವಂತೆ ವೆಬ್ಸೈಟ್ನಲ್ಲಿ ನಮೂದಿಸಿದ್ದು, ಅವರನ್ನು ಮರು ಪರಿಶೀಲನೆ ನಡೆಸುವಂತೆ ತಿಳಿಸಲಾಗಿದೆ.
ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಯುಯುಸಿಎಂಎಸ್ ವೆಬ್ಸೈಟ್ನ್ನು ಕೆಲವು ಖಾಸಗಿ ಕಾಲೇಜಿನವರು ದುರುಪಯೋಗ ಪಡಿಸಿಕೊಂಡಿದ್ದಾರೆ. ವೆಬ್ ಸೈಟ್ಗಳ ಲಾಗಿನ್ ಪಾಸ್ ವಾರ್ಡ್ಗಳನ್ನು ರಿಸೇಟ್ ಮಾಡಿ, ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಹಲವು ಕಾಲೇಜುಗಳಲ್ಲಿ ಫೇಲ್ ಆಗಿರುವ ವಿದ್ಯಾರ್ಥಿಗಳನ್ನ ವಿವರಗಳನ್ನು ಪಡೆದಿದ್ದಾರೆ. ಫೇಲಾದವರನ್ನ ದೂರವಾಣಿ ಮೂಲಕ ಸಂಪರ್ಕಿಸಿ ಪಾಸ್ ಮಾಡಿಸುವುದಾಗಿ ಹೇಳಿ, ಅವರಿಂದ 15 ರಿಂದ 20 ಸಾವಿರ ರೂಪಾಯಿ ಹಣವನ್ನು ಯುಪಿಐ ಮತ್ತು ನಗದು ಮೂಲಕ ಪಡೆದುಕೊಂಡಿದ್ದಾರೆ.
ಯುಯುಸಿಎಂಎಸ್ ಜಾಲತಾಣವನ್ನು ದುರುಪಯೋಗ ಮಾಡಿ, ಫೇಲ್ ಆದ ವಿದ್ಯಾರ್ಥಿಗಳನ್ನು ಪಾಸ್ ಮಾಡಿಸಿರುವುದು ಬೆಳಕಿಗೆ ಬಂದಿದ್ದು, ಪೊಲೀಸರು ಈಗಾಗಲೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕೃತ್ಯಕ್ಕೆ ವಿಶ್ವವಿದ್ಯಾಲಯದ ಕೆಲವು ಸಿಬ್ಬಂದಿ ಸಾಥ್ ಕೊಟ್ಟಿದ್ದಾರೆ ಎನ್ನುವ ಆರೋಪವೂ ಇದೆ.
ಒಟ್ಟಾರೆ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದಲ್ಲಿ ಈ ರೀತಿಯ ಅಕ್ರಮಗಳು, ಅವ್ಯವಹಾರಗಳು ಕೇಳಿ ಬರುತ್ತಲೇ ಇದ್ದು, ಸದ್ಯ ವಿದ್ಯಾರ್ಥಿಗಳ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದ್ದವರನ್ನು ಪತ್ತೆ ಹಚ್ಚಿರುವ ಪೊಲೀಸರು, ಇನ್ನಷ್ಟು ಅಕ್ರಮಗಳನ್ನ ಬಯಲಿಗೆಳೆಯಬೇಕು ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರ ಒತ್ತಾಯವಾಗಿದೆ.