ಜೆಡಿಎಸ್ ಮುಖಂಡನಿಂದ ಬಾಗಲಕೋಟೆ ರಾಮಾರೂಢ ಮಠ ಸ್ವಾಮೀಜಿಗೆ 1 ಕೋಟಿ ರೂ. ವಂಚನೆ

ಪ್ರಕಾಶ್​ ಮುಧೋಳ ಎಂಬುವನು ತಾನು ಎಡಿಜಿಪಿ ಅಂತ ಸುಳ್ಳು ಹೇಳಿ ಬಾಗಲಕೋಟೆ ತಾಲೂಕಿನ ತುಳಸಿಗೇರಿ ಬಳಿ ಇರುವ ರಾಮಾರೂಢ ಮಠದ ಪರಮರಾಮಾರೂಢ ಸ್ವಾಮೀಜಿ ಅವರಿಗೆ ಕರೆ ಮಾಡಿ ನಿನ್ನ ಜೈಲಿಗೆ ಕಳುಹಿಸುತ್ತೇನೆ ಎಂದು ಹೆದರಿಸಿ ಒಂದು ಕೋಟಿ ರೂ. ಪಡೆದಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜೆಡಿಎಸ್ ಮುಖಂಡನಿಂದ ಬಾಗಲಕೋಟೆ ರಾಮಾರೂಢ ಮಠ ಸ್ವಾಮೀಜಿಗೆ 1 ಕೋಟಿ ರೂ. ವಂಚನೆ
ಆರೋಪಿ ಪ್ರಕಾಶ್​ ಮುಧೋಳ
Follow us
| Updated By: ವಿವೇಕ ಬಿರಾದಾರ

Updated on: Sep 28, 2024 | 3:01 PM

ಬಾಗಲಕೋಟೆ, ಸೆಪ್ಟೆಂಬರ್​​ 28: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​ (JDS) ಪಕ್ಷದಿಂದ ರಾಮದುರ್ಗ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಅಭ್ಯರ್ಥಿ ಪ್ರಕಾಶ್ ಮುಧೋಳನನ್ನು ವಂಚನೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಬಾಗಲಕೋಟೆ (Bagalkot) ತಾಲೂಕಿನ ತುಳಸಿಗೇರಿ ಬಳಿ ಇರುವ ರಾಮಾರೂಢ ಮಠದ (Ramarudha Mutt) ಪರಮರಾಮಾರೂಢ ಸ್ವಾಮೀಜಿ (Paramramarudh Swamiji) ಅವರಿಗೆ ಒಂದು ಕೋಟಿ ರೂ. ವಂಚಿಸಿದ್ದಾನೆ.

ಆರೋಪಿ ಪ್ರಕಾಶ ಮುಧೋಳ ಸೆಪ್ಟೆಂಬರ್​ 15 ರಂದು ಬೆಳಗ್ಗೆ 10.30ಕ್ಕೆ ಸುಮಾರಿಗೆ ಸ್ವಾಮೀಜಿಗೆ ಕರೆ ಮಾಡಿ, ತಾನು ಡಿ.ಎಸ್.ಪಿ ಸತೀಶ “ನಿನ್ನ (ಸ್ವಾಮೀಜಿ) ಮೇಲೆ ಗೃಹ ಸಚಿವ ಕಚೇರಿಯಿಂದ ಬೆಂಗಳೂರಿನ ನಮ್ಮ ಕಚೇರಿವರೆಗೆ ಸಾಕಷ್ಟು ದೂರು ಬಂದಿವೆ. ಅವುಗಳನ್ನು ವಿಚಾರಣೆ ಮಾಡಬೇಕು, ಲೇ ಮಗನೇ ಏನು ಈ ರೀತಿ ಮಾಡಿದ್ದೀಯಾ, ಎಂದು ಸ್ವಾಮೀಜಿಗೆ ಅವಾಚ್ಯವಾಗಿ ಬೈದಿದ್ದಾನೆ. ಜೀವನ ಪರ್ಯಂತ ಜೈಲು ಗತಿ ಕಾಣಸ್ತಿವಿ ಹಾಗೂ ಮಠದ ಮಾನ ಮರ್ಯಾದೆ ಹರಾಜು ಮಾಡ್ತಿವಿ” ಎಂದು ಆರೋಪಿ ಸ್ವಾಮೀಜಿಗೆ ಹೆದರಿಸಿದ್ದಾನೆ.

ಬಳಿಕ, “ನಿನ್ನ ಮೇಲಿನ ಕೇಸಗಳನ್ನು ಕ್ಲೋಸ್​ ಮಾಡಲು ನೀನು ನಮ್ಮ ಎಡಿಜಿಪಿ ಸಾಹೇಬರಿಗೆ ಹಣ ಕೊಡದೇ ಇದ್ದರೇ ನಿನ್ನನ್ನು ಖಲಾಸ್​ ಮಾಡುತ್ತೇವೆ” ಎಂದು ಆರೋಪಿ ಸ್ವಾಮೀಜಿ ಬಳಿ ಒಂದು ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.

ನಂತರ, ಮತ್ತೊಂದು ನಂಬರ್​ನಿಂದ ಸ್ವಾಮೀಜಿಗೆ ಕರೆ ಮಾಡಿ, ತಾನು ಎಡಿಜಿಪಿ ಎಂದು ಸುಳ್ಳು ಹೇಳಿ, ಅವಾಚ್ಯವಾಗಿ ಬೈದಾಡಿದ್ದಾನೆ. “ಲೇ ಮಗನ ಹಣವನ್ನು ಕೊಡದಿದ್ದರೆ ನಿನ್ನ ಬಿಡುವುದಿಲ್ಲ, ನಿನ್ನ ಖಲಾಸ್​ ಮಾಡುತ್ತೇವೆ ಮತ್ತು ನಿನ್ನ ಮಠದ ಮಾನ ಮರ್ಯಾದೆ ಹರಾಜ್ ಹಾಕುತ್ತೇವೆ” ಎಂದು ಆರೋಪಿ ಪ್ರಕಾಶ್​ ಮುದೋಳ್ ಸ್ವಾಮೀಜಿಗೆ​ ಹೆದರಿಸಿದ್ದಾನೆ.

ಇದನ್ನೂ ಓದಿ: ವಿವಿಧ ರಾಜ್ಯಗಳ ಪೊಲೀಸರಿಗೆ 122 ಪ್ರಕರಣಗಳಲ್ಲಿ ಬೇಕಾಗಿದ್ದ ಸೈಬರ್​ ಕ್ರಿಮಿನಲ್​ಗಳು ಬೆಂಗಳೂರಿನಲ್ಲಿ ಅರೆಸ್ಟ್

ಇದರಿಂದ ಹೆದರಿದ ಸ್ವಾಮೀಜಿ ಬೇರೆ ಬೇರೆ ಊರಿನ ಮಠದ ಭಕ್ತರಿಂದ ಹಣವನ್ನು ಸಂಗ್ರಹಿಸಿದ್ದಾರೆ. ನಂತರ ಸೆ.16ರ ಮುಂಜಾನೆ 11ಕ್ಕೆ ಬೆಂಗಳೂರು ವಿಧಾನಸೌಧ ಹತ್ತಿರ 61 ಲಕ್ಷ ರೂಪಾಯಿ ಹಣ ಹಾಗೂ ಎರಡು ಖಾಲಿ ಚೆಕ್​ಗಳನ್ನು ಸ್ವಾಮೀಜಿ ಕಡೆಯಿಂದ ಬಂದಿದ್ದ ಶಿವಕುಮಾರ್ ಎಂಬುವರು ಆರೋಪಿಗೆ ನೀಡಿದ್ದಾರೆ. ಅಲ್ಲದೇ ಆರೋಪಿ ಕೆಲ ದಾಖಲಾತಿಗಳಿಗೂ ಸಹಿ ಮಾಡಿಸಿಕೊಂಡಿದ್ದಾನೆ. ಬಳಿಕ, ಉಳಿದ 39ಲಕ್ಷ ರೂ. ಹಣವನ್ನು ಶಿವಕುಮಾರ್​ ಸೆ.20ರ ಮಧ್ಯರಾತ್ರಿ ಹುಬ್ಬಳ್ಳಿಯ ಈದ್ಗಾ ಮೈದಾನದ ಹತ್ತಿರ ನೀಡಿದ್ದಾರೆ. ಒಟ್ಟು 1 ಕೋಟಿ ಹಣವನ್ನು ಆರೋಪಿ ಪ್ರಕಾಶ್​ ಮುಧೋಳ್​ಗೆ ನೀಡಲಾಗಿದೆ ಎಂದು ದೂರಿನಲ್ಲಿ ದಾಖಲಾಗಿದೆ.

ಇಷ್ಟು ಹಣ ಹಣ ಕೊಟ್ಟ ಮೇಲೂ ಆರೋಪಿ ಪ್ರಕಾಶ್​ ಮುಧೋಳ್​ ಹೆಚ್ಚುವರಿ ಹಣಕ್ಕೆಬೇಡಿಕೆ ಇಟ್ಟಿದ್ದಾನೆ. ಆಗ, ಪರಮರಾಮಾರೂಢ ಸ್ವಾಮೀಜಿ ಬಾಗಲಕೋಟೆ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಸ್ವಾಮೀಜಿ ನೀಡಿದ ದೂರಿನ ಆಧಾರದ ಮೇಲೆ ಎಫ್​ಐಆರ್ ದಾಖಲಿಸಿಕೊಂಡ ಸಿಇಎನ್​ ಠಾಣೆ ಪೊಲೀಸರು ಆರೋಪಿಗಾಗಿ ಬಲೆ ಬೀಸಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಪ್ರಕಾಶ್ ‌ಮುಧೋಳನಿಂದ ಪೊಲೀಸರು ಹಣ ವಶಕ್ಕೆ ಪಡೆದಿದ್ದಾರೆ.

ಆರೋಪಿ ಪ್ರಕಾಶ್​ ಮುಧೋಳ ಬಳಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ನಾಯಕ ಈಶ್ವರಪ್ಪ ಅವರ ಜೊತೆಗೆ ತಾನು ಇದ್ದ ಫೋಟೋಗಳಿವೆ. ಇತ್ತೀಚಿಗೆ ಜೆಡಿಎಸ್​ ಯುವ ಘಟಕದ ಅಧ್ಯಕ್ಷ ನಿಖಿಲ ಕುಮಾರಸ್ವಾಮಿ ಬಾಗಲಕೋಟೆಗೆ ಭೇಟಿ ನೀಡಿದ್ದ ವೇಳೆ, ಆರೋಪಿ ಪ್ರಕಾಶ್​ ಮುಧೋಳ ವೇದಿಕೆ ಮೇಲೆ ಕಾಣಿಸಿಕೊಂಡಿದ್ದನು. ಆರೋಪಿ ಈ ಹಿಂದೆಯೂ ಅನೇಕರಿಗೆ ವಿವಿಧ ರೀತಿಯಾಗಿ ವಂಚನೆ ಮಾಡಿದ್ದಾನೆ ಎಂಬ ಆರೋಪವಿದೆ.

ಎಸ್ಪಿ ಅಮರನಾಥ ರೆಡ್ಡಿ, ಎಎಸ್ಪಿಗಳಾದ ಪ್ರಸನ್ನ ದೇಸಾಯಿ, ಮಹಾಂತೇಶ ಜಿದ್ದಿ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆ ಡಿಎಸ್ಪಿ ಎಂ.ಕೆ.ಗಂಗಲ್, ಸಿಪಿಐ ಎಂ.ನಾಗರಡ್ಡಿ ನೇತೃತ್ವದಲ್ಲಿ ಸಿಬ್ಬಂದಿ ಪ್ರಕರಣವನ್ನು ಭೇದಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ