ಕೋಲಾರ, ಜುಲೈ 20: ಮೂರು ತಿಂಗಳ ಹಿಂದೆ ಅಂದರೆ ಮೇ 1 ರಂದು ಅಪಘಾತವೆಂದು (accident) ಬಿಂಬಿಸಿ ಕೊಲೆ ಮಾಡಲಾಗಿದ್ದ ಪ್ರಕರಣವನ್ನು ಸರ್ಜಾಪುರ ಪೊಲೀಸರು ಬೇಧಿಸಿದ್ದಾರೆ ಎಂದು ಕೋಲಾರ ಜಿಲ್ಲಾ ರಕ್ಷಣಾಧಿಕಾರಿ ನಾರಾಯಣ ತಿಳಿಸಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ (srinivaspur) ತಾಲೂಕಿನ ಕುರಮಾಕನಹಳ್ಳಿ ಗ್ರಾಮ ಬಳಿ ಅಪಘಾತವೆಂದು ಬಿಂಬಿಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಸರ್ಜಾಪುರ ಪೊಲೀಸರು ಪ್ರಕರಣ ಬೇಧಿಸಿ ಆರೋಪಿಗಳನ್ನು (paramour) ಬಂಧಿಸಿದ್ದಾರೆ. ಹೌದು ಮೂಲತಃ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಕದಿರಿ ತಾಲ್ಲೂಕಿನ ಬೊಮ್ಮಿರೆಡ್ಡಿಪಲ್ಲಿ ಗ್ರಾಮದ ದಂಪತಿಗಳಾಗಿದ್ದ (Couple) ಪವನ್ ಕುಮಾರ್ ಹಾಗೂ ಪಾರ್ವತಿ ಇಬ್ಬರೂ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು.
ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ವಿದ್ಯಾಭ್ಯಾಸ ಹಾಗೂ ಚೆನ್ನಾಗಿ ಬದುಕಬೇಕು ಎಂಬ ನಿಟ್ಟಿನಲ್ಲಿ ಆಂಧ್ರಪ್ರದೇಶದಿಂದ ಬೆಂಗಳೂರಿನ ಹೊರವಲಯದ ಸರ್ಜಾಪುರಕ್ಕೆ (sarjapur) ಬಂದು ನೆಲೆಸಿದ್ದರು. ಪವನ್ ಕುಮಾರ್ ಖಾಸಗಿ ಶಾಲೆಯೊಂದರಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ಪತ್ನಿ ಪಾರ್ವತಿ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು.
ಇಬ್ಬರೂ ದುಡಿದು ಮಕ್ಕಳನ್ನು ಶಾಲೆಗೆ ಸೇರಿಸಿ ನೆಮ್ಮದಿಯಾಗಿ ಸಂಸಾರ ಸಾಗುತ್ತಿದ್ದರು. ಈ ಸಂದರ್ಭದಲ್ಲಿ ವೃತ್ತಿಯಲ್ಲಿ ಚಾಲಕನೇ ಆಗಿದ್ದ ಯಲ್ಲಪ್ಪ ಎಂಬಾತ, ಪವನ ಕುಮಾರ್ ಸಂಸಾರದಲ್ಲಿ ದುಷ್ಟನಾಗಿ ಆಗಮಿಸಿ ಸಂಸಾರದಲ್ಲಿ ಹುಳಿ ಹಿಂಡಿದ್ದಾನೆ.
ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವ ವೇಳೆ ಪಾರ್ವತಿಯನ್ನು ಬುಟ್ಟಿಗೆ ಹಾಕಿಕೊಂಡು ಅವಳ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದಾನೆ. ಅಲ್ಲಿಂದ ಸಂಸಾರದಲ್ಲಿ ಬಿರುಕು ಶುರುವಾಗಿ ಕೊನೆಗೆ ಗಂಡನನ್ನು ಬಿಟ್ಟು ಪಾರ್ವತಿ ಆಂಧ್ರಪ್ರದೇಶದ ಮದನಪಲ್ಲಿ ಸೇರಿಕೊಂಡಳು. ಪವನ್ ಕುಮಾರ್ ಮಕ್ಕಳ ಭವಿಷ್ಯದಿಂದ ಸರ್ಜಾಪುರ ಶಾಲೆಯಲ್ಲಿಯೇ ಚಾಲಕನಾಗಿ ಕೆಲಸ ಮುಂದುವರೆಸಿದ್ದನು.
ಇದನ್ನೂ ಓದಿ: ಹೆಂಡತಿಯ ಅನೈತಿಕ ಸಂಬಂಧದಿಂದ ಮನನೊಂದ ಗಂಡ; ಸಾವಿನ ಆಡಿಯೋ ರೆಕಾರ್ಡ್ ಮಾಡಿ ಆತ್ಮಹತ್ಯೆಗೆ ಶರಣು
ಇನ್ನು ಪವನ್ ಕುಮಾರ್ ಯಾವತ್ತಾದರೂ ತಮಗೆ ತೊಡಕು ಆಗಬಹುದೆಂದು ಯಲ್ಲಪ್ಪ ಮತ್ತು ಪಾರ್ವತಿ ಭಾವಿಸಿ, ಪ್ಲಾನ್ ಮಾಡಿ ಪವನ್ ಕುಮಾರನನ್ನು ಕೊಲೆ ಮಾಡಿ ಅಪಘಾತವೆಂದು ಬಿಂಬಿಸಿದ್ದರು. ಪವನ್ ಕುಮಾರನನ್ನು ಮದನಪಲ್ಲಿ ಕಡೆ ಹೋಗುತ್ತಿದ್ದೇನೆ, ನಿನ್ನನ್ನು ಬಿಡುತ್ತೇನೆ ಬಾ ಎಂದು ಯಲ್ಲಪ್ಪ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕುರಮಾಕನಹಳ್ಳಿ ಗ್ರಾಮ ಬಳಿ ಅಪಘಾತದ ರೀತಿಯಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ.
ಶ್ರೀನಿವಾಸಪುರ ಪೊಲೀಸರು ಅಪರಿಚಿತ ಶವವೆಂದು ಪರಿಗಣಿಸಿ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದರು. ಇನ್ನು ಗಂಡನ ಸಾವಿನ ಬಗ್ಗೆ ಮಾಹಿತಿ ತಿಳಿದಿದ್ದ ಪತ್ನಿ ಪಾರ್ವತಿ ಗಂಡ ಕಾಣೆಯಾಗಿರುವ ಬಗ್ಗೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಇದರ ಬಗ್ಗೆ ಅನುಮಾನಗೊಂಡ ಮೃತ ಪವನ್ ಕುಮಾರ್ ಸಹೋದರಿ ತಮ್ಮ ಕಡೆಯಿಂದ ಇನ್ನೊಂದು ದೂರು ನೀಡುತ್ತಾರೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಕೊಲೆ ಮಾಡಿದ್ದ ಆರೋಪಿ ಯಲ್ಲಪ್ಪ ಹಾಗೂ ಪವನ್ ಕುಮಾರ್ ಪತ್ನಿ ಪಾರ್ವತಿಗೆ ಚಳಿ ಬಿಡಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಸುಮಾರು ಮೂರು ತಿಂಗಳ ನಂತರ ಅಪಘಾತ ಪ್ರಕರಣಕ್ಕೆ ಮರು ಜೀವ ಬಂದಿದೆ ಎಂದು ನಾರಾಯಣ್ ಎಸ್ಪಿ, ಕೋಲಾರ ಅವರು ತಿಳಿಸಿದ್ದಾರೆ.
ಕೋಲಾರ ಜಿಲ್ಲಾ ವರದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ