ಬೆಂಗಳೂರು, ಆಗಸ್ಟ್ 16: ನೆರೆಯ ಬಾಂಗ್ಲಾದೇಶದ ರಾಜಕೀಯ ಪ್ರಕ್ಷುಬದ್ಧತೆ ಕೋಲಾರದ ಟೊಮೆಟೊ ಬೆಳೆಗಾರರ ಮೇಲೆ ಪರಿಣಾಮ ಬೀರಿದೆ. ಪಶ್ಚಿಮ ಬಂಗಾಳದ ವ್ಯಾಪಾರಿಗಳು ಬಾಂಗ್ಲಾದೇಶಕ್ಕೆ ಟೊಮೆಟೊ ರಫ್ತು ಮಾಡಲು ಸಾಧ್ಯವಾಗದ ಕಾರಣ ಬೆಲೆ ಕುಸಿದಿದೆ. ಕೋಲಾರದ ರೈತರು ಟೊಮೆಟೊ ಬೆಲೆ ಕುಸಿತದ ಹೊಡೆತ ಎದುರಿಸುವಂತಾಗಿದೆ.
ಬಾಂಗ್ಲಾದೇಶದಲ್ಲಿ ಅಶಾಂತಿ ಆರಂಭವಾಗುವ ಮುನ್ನ ಮೊದಲ ದರ್ಜೆಯ ಟೊಮೆಟೊ ಬಾಕ್ಸ್ (ಅಂದಾಜು 15 ಕೆಜಿ) ಸುಮಾರು 1,100 ರಿಂದ 1,200 ರೂ.ಗೆ ಮಾರಾಟವಾಗುತ್ತಿತ್ತು. ಈಗ 350 ರಿಂದ 480 ರೂ.ಗೆ ಮಾರಾಟವಾಗುತ್ತಿದೆ. ಕೋಲಾರ ಎಪಿಎಂಸಿಯಲ್ಲಿ ಹದಿನೈದು ದಿನಗಳ ಹಿಂದೆ ಕೆಜಿಗೆ 40 ರೂಪಾಯಿ ಇದ್ದ ಟೊಮೆಟೊ ಬೆಲೆ ಈಗ 12 ರೂಪಾಯಿಗೆ ಕುಸಿದಿದೆ. ಕೋಲಾರ ಎಪಿಎಂಸಿಯಲ್ಲಿ ಸಗಟು ದರ ಬಾಕ್ಸ್ಗೆ 100 ರಿಂದ 400 ರೂ. ಇದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ತಿಳಿಸಿದೆ. ಪಶ್ಚಿಮ ಬಂಗಾಳದ ವ್ಯಾಪಾರಿಗಳು ಟೊಮೆಟೊ ಖರೀದಿಯನ್ನು ಸುಮಾರು ಶೇ 50 ರಷ್ಟು ಕಡಿತಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ಆಗಸ್ಟ್ ಮೊದಲ ವಾರದ ಮೊದಲು ಕೋಲಾರದಿಂದ ಪಶ್ಚಿಮ ಬಂಗಾಳಕ್ಕೆ ಪ್ರತಿದಿನ ಸುಮಾರು 40 ರಿಂದ 50 ಟ್ರಕ್‌ಗಳಷ್ಟು ಟೊಮೆಟೊ ಸಾಗಣೆಯಾಗುತ್ತಿತ್ತು. ಈಗ, ಅದು 20 ಟ್ರಕ್‌ಗಳಿಗೆ ಇಳಿಕೆಯಾಗಿದೆ ಎಂದು ಕೋಲಾರ ಎಪಿಎಂಸಿ ಕಾರ್ಯದರ್ಶಿ ಕಿರಣ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ವ್ಯಾಪಾರಿಗಳು ಸ್ಥಳೀಯ ಬಳಕೆಗಾಗಿ ಮತ್ತು ಬಾಂಗ್ಲಾದೇಶಕ್ಕೆ ರಫ್ತು ಮಾಡಲು ಕೋಲಾರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ (ಎಪಿಎಂಸಿ) ಮೊದಲ ದರ್ಜೆಯ ಟೊಮೆಟೊಗಳನ್ನು ಖರೀದಿಸುತ್ತಿದ್ದರು. ಕೋಲಾರ ಎಪಿಎಂಸಿಯು ದೇಶದ ಟೊಮೇಟೊದ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ.
ಕರ್ನಾಟಕದ ಮಾರುಕಟ್ಟೆಯಲ್ಲಿ ಕೂಡ ಟೊಮೆಟೊ ಚಿಲ್ಲರೆ ಬೆಲೆಯಲ್ಲಿ ಇಳಿಕೆಯಾಗಿದೆ. ಸದ್ಯ ರಾಜ್ಯಾದ್ಯಂತ ಟೊಮೆಟೊ ಕೆಜಿಗೆ 16 ರಿಂದ 20 ರೂ.ವರೆಗೆ ಮಾರಾಟವಾಗುತ್ತಿದೆ ಎಂದು ವರದಿ ತಿಳಿಸಿದೆ.
ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ, ಕೋಲಾರದ ಟೊಮೆಟೊಗಳಿಗೆ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಜಿಲ್ಲೆಯಲ್ಲಿ ಸುಮಾರು 4,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಟೊಮೆಟೊವನ್ನು ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವಾರು ಮಾರುಕಟ್ಟೆಗಳಿಗೆ ಸರಬರಾಜು ಮಾಡಲಾಗುತ್ತದೆ.
ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತ ಕೇರಳಕ್ಕೆ ಟೊಮೆಟೊ ಮಾರಾಟದ ಮೇಲೆ ಪರಿಣಾಮ ಬೀರಿದೆ. ಇದು ಕೂಡ ಬೆಲೆ ಕುಸಿತಕ್ಕೆ ಒಂದು ಕಾರಣ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿಗಳು.
ಇದನ್ನೂ ಓದಿ: ಕೋಲಾರ ನವ ವಧು-ವರ ಹೊಡೆದಾಟ ಕೇಸ್; ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಆಘಾತಕಾರಿ ಅಂಶ
ಉತ್ತಮ ಮುಂಗಾರು ಮಳೆ ನಮಗೆ ಒಳ್ಳೆಯ ಇಳುವರಿ ದೊರೆಯಲಿದೆ ಹಾಗೂ ಹೆಚ್ಚಿನ ಬೆಲೆಗೆ ಮಾರಾಟವಾಗಬಹುದು ಎಂಬ ನಿರೀಕ್ಷೆ ಮೂಡಿಸಿತ್ತು. ಆದರೆ, ವಯನಾಡ್ ಭೂಕುಸಿತದ ಬೆನ್ನಲ್ಲೇ ಬೆಲೆ ಕುಸಿತ ಪ್ರಾರಂಭವಾಯಿತು ಎಂದು ರೈತರೊಬ್ಬರು ಹೇಳಿದ್ದಾರೆ.
ಮಹಾರಾಷ್ಟ್ರ, ತಮಿಳುನಾಡು ಹಾಗೂ ಇತರೆ ರಾಜ್ಯಗಳ ರೈತರು ಕೂಡ ಈ ವರ್ಷ ಉತ್ತಮ ಪ್ರಮಾಣದಲ್ಲಿ ಟೊಮೆಟೊ ಬೆಳೆಯುತ್ತಿರುವುದರಿಂದ ಕೋಲಾರದ ಟೊಮೇಟೊ ಬೆಲೆ ಮತ್ತಷ್ಟು ಕುಸಿಯಬಹುದು ಎಂದು ಸ್ಥಳೀಯ ರೈತರು ಹಾಗೂ ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ