ಕೋಲಾರ ನವ ವಧು-ವರ ಹೊಡೆದಾಟ ಕೇಸ್; ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಆಘಾತಕಾರಿ ಅಂಶ

ಕೋಲಾರದಲ್ಲಿ ನವ ವಧು, ವರ ಹೊಡೆದಾಡಿಕೊಂಡು ಮೃತಪಟ್ಟ ಘಟನೆಗೆ ಸಂಬಂಧಿಸಿ ಮರಣೋತ್ತರ ಪರೀಕ್ಷೆಯಲ್ಲಿ ಮತ್ತಷ್ಟು ಅಂಶಗಳು ಬಯಲಾಗಿವೆ. ಸದ್ಯ ಕೋಲಾರ ಜಿಲ್ಲೆ ಕೆಜಿಎಫ್ ಆ್ಯಂಡರ್ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಮೃತ ನವೀನ್ ವಿರುದ್ದ ಕೊಲೆ ಪ್ರಕರಣ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

ಕೋಲಾರ ನವ ವಧು-ವರ ಹೊಡೆದಾಟ ಕೇಸ್; ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಆಘಾತಕಾರಿ ಅಂಶ
ನವೀನ್, ಲಿಖಿತಾಶ್ರೀ
Follow us
| Updated By: ಆಯೇಷಾ ಬಾನು

Updated on:Aug 09, 2024 | 9:59 AM

ಕೋಲಾರ, ಆಗಸ್ಟ್​.09: ಪರಸ್ಪರ ಒಬ್ಬರಿಗೊಬ್ಬರು ಪ್ರೀತಿಸಿ (Love) ಕಷ್ಟಾಪಟ್ಟು ಮನೆಯವರನ್ನೂ ಒಪ್ಪಿಸಿ ಮದುವೆಯಾಗಿದ್ದ ಜೋಡಿ ಮದುವೆಯಾದ ಕೆಲವೇ ಗಂಟೆಗಳಲ್ಲಿ ಹೊಡೆದಾಡಿಕೊಂಡು ಮಸಣ (Death) ಸೇರಿದ್ದಾರೆ. ಈ ಘಟನೆ ಇಡೀ ಕೋಲಾರವನ್ನೇ ಬೆಚ್ಚಿಬೀಳಿಸಿದ್ದು ಇವರ ಸಾವಿಗೆ ನಿಖರ ಕಾರಣ ಮಾತ್ರ ತಿಳಿದು ಬಂದಿಲ್ಲ. ಆದರೆ ಒಂದಿಲ್ಲೊಂದು ಬೆಳವಣಿಗೆಗಳು ನಡೆಯುತ್ತಿವೆ. ನಿನ್ನೆ ಈ ಕೊಲೆಯಲ್ಲಿ ಮೂರನೇ ವ್ಯಕ್ತಿ ಇರುವ ಶಂಕೆ ವ್ಯಕ್ತವಾಗಿತ್ತು. ಇದೀಗ ಮರಣೋತ್ತರ ಪರೀಕ್ಷೆಯಲ್ಲಿ ಮತ್ತಷ್ಟು ಅಂಶಗಳು ಬಯಲಾಗಿವೆ. ಅಲ್ಲದೆ ಜನ ಸೇನೆ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ನವೀನ್ ಗ್ರಾಮ ಪಂಚಾಯಿತಿ ಚುನಾವಣೆಗೂ ಸ್ಪರ್ಧಿಸಿದ್ದರು ಎಂದು ತಿಳಿದು ಬಂದಿದೆ.

ಮದುವೆಗಾಗಿ ಮನೆ ಮುಂದೆ ಹಾಕಿದ್ದ ಚಪ್ಪರ, ಹೂವು ಬಾಡಿಲ್ಲ. ಮದುವೆಗೆಂದು ಬಂದಿದ್ದ ಕುಟುಂಬಸ್ಥರು ವಾಪಾಸ್ ಆಗಿಲ್ಲ. ಆದರೆ ಮುಂಜಾನೆ ಮದುವೆಯಾಗಿ ಅರುಂಧತಿ ನಕ್ಷತ್ರ ನೋಡಿ ಮನೆ ಸೇರಿಕೊಂಡಿದ್ದ ದಂಪತಿ ಸಂಜೆ ಪರಸ್ಪರ ಬಡಿದಾಡಿಕೊಂಡು ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಚಂಬಾರಸನಹಳ್ಳಿ ಗ್ರಾಮದಲ್ಲಿ ಲಿಖಿತಾಶ್ರೀ ಹಾಗೂ ನವೀನ್ ಮೃತಪಟ್ಟಿದ್ದಾರೆ.

ಸಂಜೆ ರೂಮ್​ಗೆ ಹೋಗಿ ಬಾಗಿಲು ಹಾಕಿಕೊಂಡ ದಂಪತಿ ಪರಸ್ಪರ ಹೊಡೆದಾಡಿಕೊಂಡಿದ್ದರು. ಲಿಖಿತಾಶ್ರೀ ಕೆಜಿಎಫ್ ಆಸ್ಪತ್ರೆಯಲ್ಲಿ ಮೊನ್ನೆ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ನವೀನ್ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿನ್ನೆ ಪ್ರಾಣಬಿಟ್ಟಿದ್ದಾರೆ. ಈ ಘಟನೆಯಲ್ಲಿ ದಂಪತಿ ಬಾಳು ಅಂತ್ಯವಾಗಲು ನಿಖರ ಕಾರಣವೇನೆಂಬುವುದು ಪತ್ತೆಯಾಗಿಲ್ಲ. ಆದರೆ ಮೂರನೇ ವ್ಯಕ್ತಿ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸದ್ಯ ನವ ವಧು ವರನ ಮರಣೋತ್ತರ ಪರೀಕ್ಷೆಯಲ್ಲಿ ಕೆಲವು ಅಂಶಗಳು ಬಯಲಾಗಿವೆ.

ಇದನ್ನೂ ಓದಿ: ಕೋಲಾರ ನವದಂಪತಿ ಹೊಡೆದಾಟ ಪ್ರಕರಣ: ಬೇರೆ ಯಾರೋ ಹೊಡೆದಿದ್ದಾರೆಂದು ಆರೋಪಿಸಿದ ಕುಟುಂಬ

ರಣೋತ್ತರ ಪರೀಕ್ಷೆಯಲ್ಲಿ ಮತ್ತಷ್ಟು ಅಂಶಗಳು ಬಯಲು

ಲಿಖಿತಾಶ್ರೀ ಬಲ ಅಂಗೈ ಹಾಗೂ ಕುತ್ತಿಗೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದೆ. ವರ ನವೀನ್ ತಲೆಯ ನೆತ್ತಿಯ ಭಾಗ ಹಾಗೂ ತಲೆಯ ಹಿಂಭಾಗಕ್ಕೆ ಮಚ್ಚಿನಿಂದ ಹೊಡೆದ ಗಾಯಗಳಾಗಿವೆ. ಮೊದಲು ಲಿಖಿತಶ್ರೀ ಮೇಲೆ ಮಚ್ಚಿನಿಂದ ಹಲ್ಲೆ‌ ಮಾಡಿ ನಂತರ ತಾನೂ ತಲೆಗೆ ಮಚ್ಚಿನಿಂದ ಹೊಡೆದುಕೊಂಡಿದ್ದಾನೆ ಎಂಬ ಶಂಕೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ವ್ಯಕ್ತವಾಗಿದೆ. ಲಿಖಿತಶ್ರೀ ನವೀನ್ ಮೇಲೆ ಹಲ್ಲೆ ಮಾಡಿಲ್ಲ ಅನ್ನೋದು ಸ್ಪಷ್ಟವಾಗಿದೆ. ಇಬ್ಬರಿಗೂ ತಲೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆ ಒಬ್ಬರೂ ಪ್ರಜ್ಞಾಹೀನ ಸ್ಥಿತಿ ತಲುಪಿದ್ದರು. ಸದ್ಯ ಕೋಲಾರ ಜಿಲ್ಲೆ ಕೆಜಿಎಫ್ ಆ್ಯಂಡರ್ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ನವೀನ್ ವಿರುದ್ದ ಕೊಲೆ ಪ್ರಕರಣ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

Kolar new bride and groom fight case A shocking fact was revealed in the post-mortem report kannada news

ನವ ದಂಪತಿ ಅಂತ್ಯಸಂಸ್ಕಾರ

ನಿನ್ನೆ ಸಂಜೆ ವಧು ಲಿಖಿತಶ್ರೀ ಹಾಗೂ ವರ ನವೀನ್ ಅಂತ್ಯಸಂಸ್ಕಾರ ಮಾಡಲಾಗಿದೆ. ಕುಟುಂಬಸ್ಥರು ಬೈನೇಹಳ್ಳಿಯಲ್ಲಿ ಲಿಖಿತಶ್ರೀ ಹಾಗೂ ಚಂಬಾರಸನಹಳ್ಳಿ ಗ್ರಾಮದಲ್ಲಿ ನವೀನ್ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದಾರೆ.

ಇನ್ನು ಆಂಡರ್ಸನ್ ಪೇಟೆ ಪೊಲೀಸರು ಈ ಪ್ರಕರಣ ಸಂಬಂಧ ತನಿಖೆ ಆರಂಭಿಸಿದ್ದಾರೆ. ಇಂದು ಪೊಲೀಸರು ನವೀನ್, ಲಿಖಿತಶ್ರೀ ಇಬ್ಬರ ಮೊಬೈಲ್ ಸೀಜ್ ಮಾಡಲಿದ್ದಾರೆ. ಇಬ್ಬರ ಮೊಬೈಲ್ ಕಾಲ್ ಡೀಟೇಲ್ಸ್ ಪರಿಶೀಲನೆ ನಡೆಸಲಾಗುತ್ತೆ. ಘಟನೆಗೂ ಮುನ್ನ ಇಬ್ಬರು ಯಾರ ಜೊತೆಗಾದರೂ ಫೋನ್​ನಲ್ಲಿ ಮಾತನಾಡಿದ್ರ ಅನ್ನೋದರ ಕುರಿತು ತನಿಖೆ ನಡೆಸಲಾಗುತ್ತೆ. ಮದುವೆಗೂ ಮೊದಲು ಎರಡು ಕುಟುಂಬದ ನಡುವೆ ಏನಾದ್ರು ಜಗಳಗಳಿದ್ದವಾ? ನವೀನ್ ಮಾನಸಿಕ ಸ್ಥಿತಿ ಹೇಗಿತ್ತು? ಎಂದು ನವೀನ್ ಸ್ನೇಹಿತರು ಹಾಗೂ ಆಪ್ತರ ವಿಚಾರಣೆ ಮಾಡಿ ಪೊಲೀಸರು ಮಾಹಿತಿ ಕಲೆ ಹಾಕಲಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:46 am, Fri, 9 August 24