Alarming News: ಆತಂಕಕಾರಿ ಬೆಳವಣಿಗೆ -ವಿಷವಾಗುತ್ತಿದೆ ಟೊಮ್ಯಾಟೊ, ಹಣ ಗಳಿಸುವ ಧಾವಂತದಲ್ಲಿ ರೈತರು ಏನ್ಮಾಡ್ತಿದಾರೆ ನೋಡಿ

| Updated By: ಸಾಧು ಶ್ರೀನಾಥ್​

Updated on: Jul 15, 2023 | 9:38 AM

ಹೆಚ್ಚಿನ ಬೆಲೆಯ ಲಾಭ ಪಡೆಯಲು ರೈತರು ಅಗತ್ಯಕ್ಕಿಂತ ಹೆಚ್ಚಿನ ಕೀಟನಾಶಕ ಬಳಸುತ್ತಿದ್ದಾರೆ. ಇದು ತಾತ್ಕಾಲಿಕವಾಗಿ ರೈತರಿಗೆ ಪರಿಹಾರ ಅನ್ನಿಸಿದರೂ ಮಾರುಕಟ್ಟೆಗಳಲ್ಲಿ ತರಕಾರಿ, ಹಣ್ಣುಗಳನ್ನು ಬಳಸುವ ಗ್ರಾಹಕರಿಗೆ ಮಾತ್ರ ಇದು ವಿಷವಾಗಿ ಪರಿಣಮಿಸೋದರಲ್ಲಿ ಅನುಮಾನವಿಲ್ಲ - ಶಿವಾನಂದ ಹೊಂಗಲ್, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ

Alarming News: ಆತಂಕಕಾರಿ ಬೆಳವಣಿಗೆ -ವಿಷವಾಗುತ್ತಿದೆ ಟೊಮ್ಯಾಟೊ, ಹಣ ಗಳಿಸುವ ಧಾವಂತದಲ್ಲಿ ರೈತರು ಏನ್ಮಾಡ್ತಿದಾರೆ ನೋಡಿ
ವಿಷಾಗುತ್ತಿದೆ ಟೊಮ್ಯಾಟೊ, ಹಣ ಗಳಿಸುವ ಧಾವಂತದಲ್ಲಿ ರೈತರು ಏನ್ಮಾಡ್ತಿದಾರೆ ನೋಡಿ
Follow us on

ಈಗಂತೂ ಎಲ್ಲಿ ನೋಡಿದರಲ್ಲಿ ಕೆಂಪು ಚಿನ್ನ, ಕಿಚನ್ ಕ್ವೀನ್ ಟೊಮ್ಯಾಟೋದ್ದೇ ಮಾತು! ಟೊಮ್ಯಾಟೋ ಖರೀದಿ ಮಾಡುವ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿಯಾದರೆ ಟೊಮ್ಯಾಟೊ ಬೆಳೆದ ರೈತರಿಗೆ ಬೆಲೆ ಏರಿಕೆಯ (tomato price) ಲಾಭ ಪಡೆಯುವ ಧಾವಂತ… ಇವೆರಡರ ನಡುವೆ ಟೊಮ್ಯಾಟೋ ಖರೀದಿ ಮಾಡುವ ಗ್ರಾಹಕರಿಗೆ ಕಿಚನ್ ಕ್ವೀನ್​ ವಿಷವಾಗುತ್ತಿದ್ಯಾ ಅನ್ನೋ ಆತಂಕ ವಿಜ್ಞಾನಿಗಳಲ್ಲಿ ಮೂಡತೊಡಗಿದೆ. ಹೌದು ಟೊಮ್ಯಾಟೊ ಬೆಳೆಗೆ ಬಂಗಾರದ ಬೆಲೆ ಬಂದಿರುವ ಹಿನ್ನೆಲೆಯಲ್ಲಿ ಕೀಟಗಳಿಂದ ಬೆಳೆ ರಕ್ಷಿಸಿಕೊಳ್ಳಲು ಮುಂದಾಗಿರುವ ರೈತರು (kolar farmers) ಅಧಿಕ ಪ್ರಮಾಣದಲ್ಲಿ ಕೀಟನಾಶಕಗಳನ್ನು (pesticides) ಬಳಸುತ್ತಿರುವುದು ಆತಂಕಕಾರಿ ಬೆಳೆವಣಿಗೆಯಾಗಿದೆ. ಅಕಾಲಿಕ ಮಳೆ, ಹವಾಮಾನ ಬದಲಾವಣೆ ಹಾಗೂ ಅತಿಯಾದ ಕೀಟ ಬಾಧೆಯಿಂದಾಗಿ ಟೊಮ್ಯಾಟೊ ಇಳುವರಿ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ.

ರೈತರು ತಾವು ಬೆಳೆದ ಟೊಮ್ಯಾಟೊ ಮಾರುಕಟ್ಟೆಗೆ ಬರುವ ಪ್ರಮಾಣ ಶೇ. 60ರಷ್ಟು ಇಳಿಮುಖವಾಗಿದೆ. ಅಲ್ಲದೆ ಭಾರಿ ಮಳೆಯಿಂದಾಗಿ ಉತ್ತರ ಭಾರತದಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ಟೊಮ್ಯಾಟೊ ಇಳುವರಿ ಬಂದಿಲ್ಲ. ಇದರಿಂದಾಗಿ ಟೊಮ್ಯಾಟೋ ಭಾರಿ ಪ್ರಮಾಣದ ಬೇಡಿಕೆ ಸೃಷ್ಟಿಯಾಗಿದ್ದರೂ ಇಳುವರಿ ಮಾತ್ರ ತೀರಾ ಕಡಿಮೆಯಿದೆ. ಈ ಕಾರಣದಿಂದಾಗಿ ಟೊಮ್ಯಾಟೊ ಬೆಳೆ ಗಗನಮುಖಿಯಾಗಿದೆ.

ಈ ಹಿನ್ನೆಲೆಯಲ್ಲಿ ಟೊಮ್ಯಾಟೊ ಬೆಳೆದಿರುವ ರೈತರು ಬೆಳೆ ರಕ್ಷಿಸಿಕೊಳ್ಳಲು ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದ್ದು, ಕೀಟಗಳಿಂದ ಬೆಳೆ ರಕ್ಷಿಸಿಕೊಳ್ಳಲು ಸಾವಯವ ವಿಧಾನಗಳ ಬದಲಿಗೆ ಮಿತಿ ಮೀರಿ ಕೀಟನಾಶಕಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ರೈತರು ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತಿರುವ ಹಿನ್ನೆಲೆ ಬೆಳೆ ರಕ್ಷಿಸಿಕೊಳ್ಳಲು ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದ ಕೀಟನಾಶಕಗಳ ಬಳಕೆಗೆ ಮುಂದಾಗಿದ್ದಾರೆ ಇದು ರೈತರ ತೋಟಗಳಿಗೆ ಹಾಗೂ ಅದನ್ನು ಬಳಸುವ ಗ್ರಾಹಕರಿಗೂ ಹಾನಿಕಾರಕ ಅನ್ನೋದು ಶಿವಾನಂದ ಹೊಂಗಲ್, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಅವರ ಮಾತು.

ಇನ್ನು ಸತತ ನಷ್ಟದಿಂದಾಗಿ ಹೈರಾಣಾಗಿರುವ ರೈತರು ಮಿತಿ ಮೀರಿದ ಕೀಟನಾಶಕ ಬಳಕೆ ಮಾಡಲು ರಸಗೊಬ್ಬರ ಮಾರಾಟಗಾರರು ಪ್ರೇರೇಪಿಸುತ್ತಿದ್ದಾರೆ. ಬೆಳೆ ರಕ್ಷಣೆ ಮಾಡಿಕೊಳ್ಳಲು ರೈತರನ್ನು ಬೆಳೆ ರಕ್ಷಣೆಗೆ ಹೆಚ್ಚು ಹೆಚ್ಚು ಕೀಟನಾಶಕ ಬಳಕೆಗೆ ರೈತರನ್ನು ಪ್ರೋತ್ಸಾಹಿಸುತ್ತಿದ್ದು, ಹೊಸ ಹೊಸ ರಾಸಾಯನಿಕಗಳನ್ನು ರೈತರಿಗೆ ನೀಡುತ್ತಿದ್ದಾರೆ. ಪರಿಣಾಮ ತಮ್ಮ ಬೆಳೆಗಳನ್ನ ರೋಗ ಭಾದೆ ಹಾಗೂ ಕೀಟಗಳಿಂದ ರಕ್ಷಿಸಿಕೊಳ್ಳಲು ರೈತರು ಕ್ರಿಮಿನಾಶಕಗಳನ್ನ ಬಳಸುತ್ತಿದ್ದಾರೆ.

ತರಕಾರಿ ಬೆಳೆಗಳಿಗೆ ಬರುವ ರೋಗಗಳ ತಡೆಗೆ ಸಿಂಪಡಣೆ ಮಾಡುವ ರಾಸಾಯನಿಕ ಅಂಶಗಳು ತರಕಾರಿಗಳ ಮೇಲೆ ಕನಿಷ್ಠ 5-7 ದಿನಗಳವರೆಗೆ ಇರುತ್ತವೆ. ಆದ್ರೆ ರೈತರು ಇಂದು ಸಿಂಪಡಣೆ ಮಾಡಿ ನಂತರ ತಾವು ಬೆಳೆದ ಫಸಲನ್ನ ನೇರವಾಗಿ ಮಾರುಕಟ್ಟೆಗೆ ತರುತ್ತಾರೆ, ರೈತರು ಯಾವುದೆ ಫಸಲು ಕೊಯ್ಲಿಗೆ ಒಂದೆರೆಡು ದಿನಗಳಿರುವಾಗ ಕೀಟನಾಶಕ ಸಿಂಪಡಿಸುವುದು ಸರಿಯಲ್ಲ.

ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುವುದರ ಜೊತೆಗೆ ಕ್ರಿಮಿನಾಶಕಗಳು ನೇರವಾಗಿ ಗ್ರಾಹಕರ ಹೊಟ್ಟೆ ಸೇರುತ್ತಿದೆ. ಕೀಟನಾಶಕಗಳಲ್ಲಿನ ಅಂಶಗಳು ಟೊಮ್ಯಾಟೋ ಹಣ್ಣಿನ ಒಳ ಹಾಗೂ ಹೊರ ಭಾಗದಲ್ಲಿ ಕನಿಷ್ಠ 7-15 ದಿನಗಳವರೆಗೆ ಇರುತ್ತವೆ. ಹಣ್ಣುಗಳನ್ನು ತೊಳೆದರೂ ರಾಸಾಯನಿಕಗಳು ಹಣ್ಣಿನ ಒಳಭಾಗದಲ್ಲಿರುತ್ತವೆ. ಆದ್ರೆ ಬೆಳೆ ರಕ್ಷಣೆ ಮಾಡಿಕೊಳ್ಳಲು ರೈತರು ಬೇರೆ ದಾರಿ ಇಲ್ಲದೆ ನಾವು ಔಷಧ ಸಂಪಡಣೆ ಮಾಡಲೇಬೇಕು ಅನ್ನೋದು ರೈತರನ ಮಾತು.

ಒಟ್ಟಾರೆ 15 ಕೆಜಿ ಟೊಮ್ಯಾಟೋ ಬಾಕ್ಸ್ 2000 ರೂ.ಗಳ ಗಡಿ ದಾಟಿದೆ, ಆದರೆ ಹೆಚ್ಚಿನ ಬೆಲೆಯ ಲಾಭ ಪಡೆಯಲು ರೈತರು ಅಗತ್ಯಕ್ಕಿಂತ ಹೆಚ್ಚಿನ ಕೀಟನಾಶಕ ಬಳಸುತ್ತಿದ್ದಾರೆ. ಇದು ತಾತ್ಕಾಲಿಕವಾಗಿ ರೈತರಿಗೆ ಪರಿಹಾರ ಅನ್ನಿಸಿದರೂ ಮಾರುಕಟ್ಟೆಗಳಲ್ಲಿ ತರಕಾರಿ ಹಾಗೂ ಹಣ್ಣುಗಳನ್ನು ಬಳಸುವ ಗ್ರಾಹಕರಿಗೆ ಮಾತ್ರ ಇದು ವಿಷವಾಗಿ ಪರಿಣಮಿಸೋದರಲ್ಲಿ ಅನುಮಾನವಿಲ್ಲ.

ಕೋಲಾರ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:28 am, Sat, 15 July 23