ಕೋಲಾರ: ಕೋಲಾರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಸ್ಪರ್ಧೆ ಮಾಡ್ತಾರೆ ಅನ್ನೋ ವಿಚಾರ ಮುನ್ನಲೆಗೆ ಬರುತ್ತಿದ್ದಂತೆ ಕೋಲಾರ(Kolar) ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಕೋಲಾರ ಕ್ಷೇತ್ರದಲ್ಲಿನ ರಾಜಕೀಯ ಲೆಕ್ಕಾಚಾರಗಳು ಬದಲಾಗಿವೆ. ಈ ನಿಟ್ಟಿನಲ್ಲಿ ಪಕ್ಷೇತರವಾಗಿ ರಾಜಕೀಯ ಮಾಡುತ್ತಿದ್ದ ವರ್ತೂರ್ ಪ್ರಕಾಶ್(Varthur Prakash) ಕಳೆದ ವಿಧಾನ ಪರಿಷತ್ ಚುನಾವಣೆ ಸಮಯದಲ್ಲಿ ಬಿಜೆಪಿ(BJP) ಪಕ್ಷ ಸೇರ್ಪಡೆಯಾದ ನಂತರ ಕೋಲಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಬಿಂಬಿತವಾಗಿ ಈಗ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಸಿದ್ದರಾಮಯ್ಯ 2023ರ ವಿಧಾನಸಭಾ ಚುನಾವಣೆಗೆ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ವರ್ಧೆ ಮಾಡುತ್ತಾರೆ ಅನ್ನೋ ವಿಚಾರಗಳು ಗಟ್ಟಿಯಾಗುತ್ತಿದ್ದಂತೆ ಅದಕ್ಕೆ ಪೂರಕ ಎಂಬಂತೆ ಸಿದ್ದರಾಮಯ್ಯ ನವೆಂಬರ್-13 ರಂದು ಕೋಲಾರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಅಬ್ಬರ ಪ್ರವಾಸ ಮಾಡಿ ಹೋಗಿದ್ದಾರೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯಗೆ ಬಿಜೆಪಿಯಿಂದ ಪ್ರಭಲ ಪ್ರತಿಸ್ವರ್ಧೆ ನೀಡುವ ಹಾಗೂ ಕುರುಬ ಸಮುದಾಯದ ಅಭ್ಯರ್ಥಿ ಎನ್ನುವ ಕಾರಣಕ್ಕೆ ವರ್ತೂರ್ ಪ್ರಕಾಶ್ರನ್ನು ಬಿಜೆಪಿ ಕಣಕ್ಕಿಳಿಸುತ್ತದೆ ಅನ್ನೋದು ಬಹುತೇಕ ಖಚಿತವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೋಲಾರ ಕ್ಷೇತ್ರದಲ್ಲಿ ಬಿಡುವಿಲ್ಲದ ಪ್ರವಾಸ ಮಾಡುತ್ತಿರುವ ವರ್ತೂರ್ ಪ್ರಕಾಶ್ ಈಗ ತಮ್ಮ ಹುಟ್ಟುಹಬ್ಬದ ಹೆಸರಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಡಿಸೆಂಬರ್-20 ರಂದು ವರ್ತೂರ್ ಪ್ರಕಾಶ್ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಬೃಹತ್ ವೇದಿಕೆ ಕಾರ್ಯಕ್ರಮ ಹಾಗೂ ಸುಮಾರು 50 ಸಾವಿರ ಜನರನ್ನು ಸೇರಿಸಿ ತಮ್ಮ ಬೆಂಬಲಿಗರ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದಾರೆ.
ಇದನ್ನೂ ಓದಿ: Congress Bus Yatra: ಕಾಂಗ್ರೆಸ್ ನಾಯಕರ ಬಸ್ ಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಮೂಲಕ ಬಿಜೆಪಿ ಕೌಂಟರ್
ಇನ್ನು ಶಕ್ತಿಪ್ರದರ್ಶನದ ಹೆಸರಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿರುವ ವರ್ತೂರ್ ಪ್ರಕಾಶ್ ಕಾರ್ಯಕ್ರಮಕ್ಕೆ ಬರುವ ತಮ್ಮ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ ಸಿದ್ದವಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 40 ರಿಂದ 50 ಸಾವಿರ ಜನರು ಸೇರುವ ನಿರೀಕ್ಷೆ ಇದ್ದು ಅದಕ್ಕಾಗಿಯೇ ಸುಮಾರು 5 ಟನ್ ಚಿಕನ್ ಬಿರಿಯಾನಿ ಮಾಡಿಸಿ ಕಾರ್ಯಕರ್ತರಿಗೆ ಉಣಬಡಿಸಲಿದ್ದಾರೆ. ಅದರ ಜೊತೆಗೆ ಸುಮಾರು 5000 ಜನರಿಗೆ ಸಸ್ಯಹಾರಿ ಊಟ ಸಿದ್ದಮಾಡಿದ್ದಾರೆ. ಇನ್ನು ಬಿರಿಯಾನಿ ಸಿದ್ದಮಾಡಲು ಸುಮಾರು 150 ಜನ ಬಾಣಸಿಗರು ಒಂದು ದಿನ ಮುಂಚಿತವಾಗಿಯೇ ಬೇಕಾದ ಸಿದ್ದತೆಗಳನ್ನು ಮಾಡಿಕೊಂಡಿದ್ದು ಭರ್ಜರಿ ಬಿರಿಯಾಸಿ ಬೇಯಿಸಿದ್ದಾರೆ.
ಇನ್ನು ವರ್ತೂರ್ ಪ್ರಕಾಶ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ನಂತರ ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಒಂದು ರೀತಿಯ ಬಲ ಬಂದಂತಾಗಿದೆ. ಹಾಗಾಗಿ ಕೋಲಾರ ಕ್ಷೇತ್ರದಲ್ಲಿ ಕೇಸರಿ ಬಾವುಟಗಳು ರಾರಾಜಿಸುತ್ತಿವೆ ಈ ನಿಟ್ಟಿನಲ್ಲಿ ವರ್ತೂರ್ ಪ್ರಕಾಶ್ ಬೆನ್ನಿಗೆ ನಿಂತಿರುವ ಜಿಲ್ಲಾಉಸ್ತುವಾರಿ ಸಚಿವ ಮುನಿರತ್ನ ಹಾಗೂ ಸಚಿವ ಸುಧಾಕರ್ ಇಬ್ಬರೂ ವರ್ತೂರ್ ಪ್ರಕಾಶ್ ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ವರ್ತೂರ್ ಪ್ರಕಾಶ್ ಅವರನ್ನು ಪಕ್ಷಕ್ಕೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಚಿವ ಮುನಿರತ್ನ, ಸುಧಾಕರ್ ಹಾಗೂ ಸಂಸದ ಮುನಿಸ್ವಾಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾವಿರಾರು ಜನ ಕಾರ್ಯಕರ್ತರ ಎದುರಲ್ಲಿ ವರ್ತೂರ್ ಪ್ರಕಾಶ್ ಅವರಿಗೆ ಶುಭಹಾರೈಸಿದ್ದಾರೆ.
ವರ್ತೂರ್ ಪ್ರಕಾಶ್ ಅಂದರೆ ಒಂದು ರೀತಿಯ ಆಕರ್ಶಣೆ ಹಾಗಾಗಿ ಅವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಹಲವು ಆಕರ್ಶಣೆಗಳು ಕಂಡು ಬಂದವು, ವರ್ತೂರ್ ಪ್ರಕಾಶ್ಗಾಗಿ ಅವರ ಅಭಿಮಾನಿಯೊಬ್ಬ ಉಡುಗೊರೆಯಾಗಿ ನೀಡಲು ಟಗರೊಂದನ್ನು ತಂದಿದ್ದಾರೆ. ಜೊತೆಗೆ ಬೃಹತ್ ಸೇಬಿನ ಹಾರವನ್ನು ಅವರ ಅಭಿಮಾನಿಗಳು ಸಿದ್ದಮಾಡಿದ್ದಾರೆ. ಇದರ ಜೊತೆಗೆ ವೇದಿಕೆ ಬಳಿಯಲ್ಲಿ ವರ್ತೂರ್ ಪ್ರಕಾಶ್ ಹಾಗೂ ಸಚಿವರು ಸಂಸದರುಗಳ ಬೃಹತ್ ಕಟೌಟ್ಗಳು ರಾರಾಜಿಸುತ್ತಿವೆ. ಇನ್ನು ವರ್ತೂರ್ ಪ್ರಕಾಶ್ ಅವರ 56ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ 56 ಕೆಜಿ ಕೇಕ್ ಸಿದ್ದಮಾಡಲಾಗಿದೆ. ಜೊತೆಗೆ ವರ್ತೂರ್ ಪ್ರಕಾಶ್ ಯುವ ಸೇನೆ ಕಾರ್ಯಕರ್ತರು ರಕ್ತದಾನ ಶಿಬಿರ ಮಾಡುವ ಮೂಲಕ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿ ಗಮನ ಸೆಳೆಯುತ್ತಿದ್ದಾರೆ.
ಇದನ್ನೂ ಓದಿ: ಸಂಸತ್ನಲ್ಲಿ ಇಂದು ರಾಗಿ ದೋಸೆ, ಜೋಳದ ರೊಟ್ಟಿ, ಕಾಳು ಪಲ್ಯ ಸೇರಿದಂತೆ 19 ಬಗೆಯ ಸಿರಿಧಾನ್ಯ ಊಟ
ನಾನು ಮತ್ತು ಮುನಿರತ್ನ ಕೋಲಾರದಲ್ಲಿ 15 ದಿನದ ಮುಂಚೆಯೇ ಹೊಸ ವರ್ಷ ಆಚರಣೆ ಮಾಡುತ್ತಿದ್ದೇವೆ. ಈವರೆಗೆ ಬೇರೆಯವರ ಹವಾ, ಇನ್ಮುಂದೆ ವರ್ತೂರು ಪ್ರಕಾಶ್ ಹವಾ ಎಂದು ಆರೋಗ್ಯ ಇಲಾಖೆ ಸಚಿವ ಸುಧಾಕರ್ ಸಿನಿಮಾ ಡೈಲಾಗ್ ಹೊಡೆದಿದ್ದಾರೆ. ರಾಜಕೀಯದಲ್ಲಿ ನನ್ನ ಮಾತು ಸುಳ್ಳಾಗಿಲ್ಲ. ನೂರಕ್ಕೆ ನೂರರಷ್ಟು ವರ್ತೂರ್ ಪ್ರಕಾಶ್ ಶಾಸಕರಾಗುತ್ತಾರೆ. ಕೋಲಾರ ಮುಖಂಡರು ವರ್ತೂರು ಪ್ರಕಾಶ್ ಜೊತೆ ಇದ್ದಾರೆ ಎಂದು ವರ್ತೂರ್ ಪ್ರಕಾಶ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಸಚಿವ ಸುಧಾಕರ್ ಹೇಳಿಕೆ ನೀಡಿದ್ರು.
ಇನ್ನು ಇದೇ ವೇಳೆ ಸಚಿವ ಮುನಿರತ್ನ ಮಾತನಾಡಿ, ಈ ಕಾರ್ಯಕ್ರಮ ನೋಡುತ್ತಿದ್ದರೆ ಯುಗಾದಿಗೆ ಹೊಸ ಶಾಸಕರನ್ನ ನೀವು ನೀಡುತ್ತಿರಿ ಎಂದೆನಿಸುತ್ತೆ. ಆ ಹೊಸ ಶಾಸಕರು ಯಾರು ಎಂದರೆ ವರ್ತೂರ್ ಪ್ರಕಾಶ್. ವರ್ತೂರ್ ಅವರಂತಹ ಒಳ್ಳೆ ಗುಣ ಇರುವವರು ನಮಗೆ ಸಿಗುವುದು ಕಷ್ಟ, ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯನೋ ಯುಗಾದಿಗೆ ವರ್ತೂರ್ ಶಾಸಕರಾಗುವುದು ಖಚಿತ. ಅವರ ಮುಂದಿನ ಭವಿಷ್ಯಕ್ಕೆ ಏನೂ ಬೇಕೋ ಅದನ್ನ ನೋಡಿಕೊಳ್ಳುವುದು ಸುಧಾಕರ್ ಹಾಗೂ ನನ್ನ ಜವಾಬ್ದಾರಿ. ಮುಂದಿನ ರಾಜಕೀಯಕ್ಕೂ ಶುಭಾಶಯ ಕೋರಲು ಇಲ್ಲಿ ಬಂದಿದ್ದೇವೆ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:39 pm, Tue, 20 December 22