ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದಲ್ಲಿ ಕಾಣೋ ಏಕಶಿಲಾ ಬೆಟ್ಟ ಜಿಲ್ಲೆಯ ಬೃಹತ್ ಹಾಗೂ ಐತಿಹಾಸಿಕ ಹಿನ್ನೆಲೆವುಳ್ಳ ಬೆಟ್ಟ ಅನ್ನೋ ಖ್ಯಾತಿ ಹೊಂದಿದೆ. ಇದನ್ನ ವೃಷಭಾದ್ರಿ ಬೆಟ್ಟ ಎಂದು ಕರೆಯಲಾಗುತ್ತದೆ. ಇಲ್ಲಿ ಸೀತಾಮಾತೆ ವನವಾಸಕ್ಕೆ ಬಂದಿದ್ದಾಗ ವಾಸವಿದ್ದಳು ಅನ್ನೋ ಐತಿಹ್ಯವಿದೆ. ರಾಮಾಯಣ ಮಹಾಭಾರತದ ಕುರುಹುಗಳು ಇಲ್ಲಿವೆ. ಪುರಾಣ ಪ್ರಸಿದ್ಧ ದೇವಾಲಯಗಳು ಬೆಟ್ಟದ ತಪ್ಪಲಿನಲ್ಲಿವೆ. ಜೊತೆಗೆ ಬೆಟ್ಟದ ಸುತ್ತಲೂ 30 ಗ್ರಾಮಗಳು ಹಾಗೂ ಸಾವಿರಾರು ಸಂಖ್ಯೆಯ ಪ್ರಾಣಿ ಪಕ್ಷಿಗಳು ಬೆಟ್ಟವನ್ನೇ ನಂಬಿ ತಮ್ಮದೇ ಆದ ಸುಂದರ ಬದುಕು ಕಟ್ಟಿಕೊಂಡಿವೆ. ಆದ್ರೆ ಇಂಥಾ ಬೆಟ್ಟದಲ್ಲಿ ರಾಜ್ಯ ಸರ್ಕಾರ ಕೃತಕ ಮರಳು ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿದ್ದು, ಇದಕ್ಕೆ ಸ್ಥಳೀಯವಾಗಿ ಸಾಕಷ್ಟು ವಿರೋಧಗಳು ವ್ಯಕ್ತವಾಗ್ತಿವೆ. ಟೆಂಡರ್ ಮೂಲಕ ದೇವರಾಯ ಸಮುದ್ರದ ಸರ್ವೆ ನಂ.199ರಲ್ಲಿ 50 ಎಕರೆಗೂ ಹೆಚ್ಚು ಪ್ರದೇಶವನ್ನ ವಿವಿಧ ಕಂಪನಿಗಳಿಗೆ ಗುತ್ತಿಗೆ ನೀಡಲು ಮುಂದಾಗಿದೆ.
ಇನ್ನು ಜಿಲ್ಲೆಯಲ್ಲಿ ಹೀಗಾಗಲೇ ಮರಳು, ಕಲ್ಲು ಗಣಿಗಾರಿಕೆಯಿಂದ ಅಪಾರ ಪ್ರಮಾಣದ ಪ್ರಕೃತಿ ಸಂಪತ್ತು ಅವನತಿಯತ್ತ ಸಾಗಿದೆ. ಇಂಥಾ ಪರಿಸ್ಥಿತಿಯಲ್ಲಿ ಕ್ರಶರ್ ಅಥವಾ ಎಂ. ಸ್ಯಾಂಡ್ ಘಟಕ ಸ್ಥಾಪನೆಗೆ ಅನುಮತಿ ನೀಡೋ ಮೂಲಕ ಈ ಗ್ರಾಮಗಳ ಪಾಲಿಗೆ ಮರಣ ಶಾಸನ ಬರೆಯಲು ಮುಂದಾಗಿದೆ. ಇದು ಸುತ್ತಮುತ್ತಲ ಹತ್ತಾರು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯರ ಅಭಿಪ್ರಾಯ ಸಂಗ್ರಹಿಸದೇ ಸರ್ಕಾರ ತೆಗೆದುಕೊಂಡಿರೋ ಈ ಕ್ರಮಕೈಗೊಳ್ಳಲಾಗಿದ್ಯಂತೆ. ಹೀಗಾಗಿ ಪರಿಸರ ಹೋರಾಟ ಸಮಿತಿ ಕ್ರಶರ್‌ಗೆ ಅನುಮತಿ ನೀಡದಂತೆ ಕೋರ್ಟ್ ಮೊರೆಹೋಗಿದೆ.
ಒಟ್ನಲ್ಲಿ ಮರಳು, ಕಲ್ಲು ಗಣಿಗಾರಿಕೆಯಿಂದ ಕೋಲಾರ ಜಿಲ್ಲೆಯಲ್ಲಿರೋ ಪ್ರಕೃತಿ ಸಂಪತ್ತಿಗೆ ಉಳಿಗಾಲವಿರೋದಿಲ್ಲ. ಇನ್ನಾದ್ರು ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಗ್ರಾಮಗಳನ್ನ ಗಣಿಗಾರಿಕೆಯಿಂದ ರಕ್ಷಿಸೋ ಕೆಲ್ಸ ಮಾಡ್ಬೇಕಿದೆ.
ಇದನ್ನೂ ಓದಿ: ಮದುವೆಯ ವಯಸ್ಸು ಮೀರುತ್ತಿದ್ದರೂ ಅಡೆತಡೆ ನಿಂತಿಲ್ಲವೇ; ಸಮಸ್ಯೆ ನಿವಾರಣೆಗೆ ಸರಳ ಮಾರ್ಗಗಳು ಇಲ್ಲಿವೆ