ಜನವರಿಯಲ್ಲಿ ಸುಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರೆ ರದ್ದುಗೊಳಿಸಿದ ಜಿಲ್ಲಾಡಳಿತ, ಕಾರಣ?

|

Updated on: Dec 18, 2020 | 1:06 PM

ಜಾತ್ರೆ ರದ್ದಾದ ಬಗ್ಗೆ ಮಠ ಇನ್ನೂ ಸ್ಪಷ್ಟನೆ ನೀಡಿಲ್ಲ. ಜಾತ್ರೆ ನಡೆಸಲು ಅನುಮತಿ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಹಾಗೇ, ಈಗಾಗಲೇ ಜಾತ್ರೆಯ ಅಂಗವಾಗಿ ಸಣ್ಣಪುಟ್ಟ ಸಿದ್ಧತೆಗಳೂ ನಡೆಯುತ್ತಿವೆ.

ಜನವರಿಯಲ್ಲಿ ಸುಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರೆ ರದ್ದುಗೊಳಿಸಿದ ಜಿಲ್ಲಾಡಳಿತ, ಕಾರಣ?
ಪ್ರಾತಿನಿಧಿಕ ಚಿತ್ರ
Follow us on

ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧಿಯಾದ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ ಈ ಬಾರಿ ರದ್ದಾಗಿದೆ. ಜನವರಿ 30ರಂದು ನಡೆಯಬೇಕಿದ್ದ ಜಾತ್ರೆಗೆ ಅನುಮತಿ ನೀಡೋದಿಲ್ಲ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸ್ಪಷ್ಟಪಡಿಸಿದ್ದಾರೆ.

ಕೊರೊನಾ ಭಯ ಕಾರಣ
ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ ಅತ್ಯಂತ ಪ್ರಸಿದ್ಧ ಉತ್ಸವವಾಗಿದ್ದು, ಪ್ರತಿವರ್ಷವೂ 5 ಲಕ್ಷಕ್ಕೂ ಹೆಚ್ಚು ಜನರು ಸೇರುತ್ತಾರೆ. ಆದರೆ ಈ ಬಾರಿ ಕೊರೊನಾ ಸೋಂಕಿನ ಬಿಸಿ ಜಾತ್ರೆಗೂ ತಟ್ಟಿದೆ. ಅಲ್ಲದೆ ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗತ್ತಿರುವುದರಿಂದ ಜಾತ್ರೆಗೆ ಜಿಲ್ಲಾಡಳಿತ ಅನುಮತಿ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಗವಿಮಠದ ಜಾತ್ರೆ ವಿಶೇಷ
ಗವಿಮಠ ಎಂದರೆ ತಕ್ಷಣ ನೆನಪಾಗೋದು ಅಲ್ಲಿನ ರಥೋತ್ಸವ ಹಾಗೂ ದಾಸೋಹ. ಇಲ್ಲಿನ ರಥೋತ್ಸವದ ಜತೆ ಸಾಮಾಜಿಕ ಕಳಕಳಿಯೂ ಮಿಳಿತವಾಗಿರುತ್ತಿತ್ತು. ಪ್ರತಿವರ್ಷವೂ ಲಕ್ಷವೃಕ್ಷೋತ್ಸವ, ರಕ್ತದಾನ, ನೇತ್ರದಾನದಂತಹ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು.

ಕೊಪ್ಪಳ ಗವಿಮಠದ 18 ನೇ ಪಿಠಾಧೀಪತಿ ಅಭಿನವ ಗವಿ ಸಿದ್ದೇಶ್ವರ ಶ್ರೀಗಳು ಜಾತ್ರೆ ಸಮಯದಲ್ಲಿ ಇಂತಹ ಸಾಮಾಜಿಕ ಕಳಕಳಿ ಕಾರ್ಯಕ್ರಮ ಮಾಡಿ ಜನರಲ್ಲಿ ಸಾಮಾಜಿಕ ಅರಿವು ಮೂಡಿಸುತ್ತಿದ್ದರು. ಇದೆಲ್ಲ ವಿಶೇಷತೆ ಕಾರಣದಿಂದಲೇ ಜಾತ್ರೆಗೆ ಸುಮಾರು 5-6 ಲಕ್ಷ ಜನರು ಸೇರುತ್ತಿದ್ದರು. ಆದರೆ ಈ ಬಾರಿ ಜಾತ್ರೆ ನಡೆಯುತ್ತಿಲ್ಲ.

ಒಂದು ತಿಂಗಳ ಸಂಭ್ರಮ
ಕೊಪ್ಪಳ ಗವಿಮಠದ ಜಾತ್ರೆ ಸುಮಾರು 1ತಿಂಗಳು ನಡೆಯುತ್ತಿತ್ತು. ಅಷ್ಟೂ ದಿನ ದಾಸೋಹವೂ ಇರುತ್ತಿತ್ತು. ಈ ವಿಶೇಷ ದಾಸೋಹಕ್ಕಾಗಿ ಸುತ್ತಲಿನ ಜನರು ದವಸ-ಧಾನ್ಯ ನೀಡುತ್ತಿದ್ದರು. ರೊಟ್ಟಿ, ಸಿಹಿತಿಂಡಿಗಳನ್ನೂ ಮಠಕ್ಕೆ ಅರ್ಪಿಸುತ್ತಿದ್ದರು. ಒಟ್ಟಾರೆ ಒಂದು ತಿಂಗಳ ಕಾಲ.. ಉತ್ಸವ-ದಾಸೋಹದ ಸಂಭ್ರಮ ನಿರಂತರವಾಗಿ ಇರುತ್ತಿತ್ತು. ಕಳೆದ ವರ್ಷ ಸುಮಾರು 8 ಲಕ್ಷ ಮಂದಿ ದಾಸೋಹದಲ್ಲಿ ಪ್ರಸಾದ ಸ್ವೀಕರಿಸಿದ್ದರು.

ಇನ್ನು ಪ್ರತಿವರ್ಷವೂ ವಿಶೇಷ ಅತಿಥಿಗಳು ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದರು. ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರೀಡಾಪಟು ಮಾಲತಿ ಹೊಳ್ಳ ಚಾಲನೆ ನೀಡಿದ್ದರೆ, ಎರಡು ವರ್ಷಗಳ ಹಿಂದೆ ವಿದೇಶಿ ದಂಪತಿ ರಥೋತ್ಸವಕ್ಕೆ ಚಾಲನೆ ನೀಡಿ ಗಮನ ಸೆಳೆದಿದ್ದರು. ಈ ಜಾತ್ರೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯನವರೂ ಪಾಲ್ಗೊಂಡಿದ್ದಾರೆ.. ಹಾಗೇ ಅಮಿತ್​ ಶಾ, ರಾಹುಲ್​ ಗಾಂಧಿಯವರೂ ಹಿಂದೊಮ್ಮೆ ಮಠಕ್ಕೆ ಭೇಟಿ ನೀಡಿದ್ದರು.

ಜಾತ್ರೆ ರದ್ದಾದ ಬಗ್ಗೆ ಮಠ ಇನ್ನೂ ಸ್ಪಷ್ಟನೆ ನೀಡಿಲ್ಲ..
ಜಾತ್ರೆ ರದ್ದಾದ ಬಗ್ಗೆ ಮಠ ಇನ್ನೂ ಸ್ಪಷ್ಟನೆ ನೀಡಿಲ್ಲ. ಜಾತ್ರೆ ನಡೆಸಲು ಅನುಮತಿ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಹಾಗೇ, ಈಗಾಗಲೇ ಜಾತ್ರೆಯ ಅಂಗವಾಗಿ ಸಣ್ಣಪುಟ್ಟ ಸಿದ್ಧತೆಗಳೂ ನಡೆಯುತ್ತಿವೆ. ಶ್ರೀಗಳು ದವಸ-ಧಾನ್ಯ ಸಂಗ್ರಹಿಸುವ ಜೋಳಿಗೆ ಕಾರ್ಯಕ್ರಮವೂ ನಡೆದಿದೆ. ಈ ಮಧ್ಯೆ ಜಿಲ್ಲಾಧಿಕಾರಿ ಜಾತ್ರೆ ನಡೆಯೋದೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಮಂಗೋಲಿಯಾದಿಂದ ಮಾಗಡಿ ಕೆರೆಗೆ ಬಂದ ಪಟ್ಟೆ ತಲೆ ಹೆಬ್ಬಾತು

Published On - 1:01 pm, Fri, 18 December 20