ಕೊಪ್ಪಳ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಘೋಷಿಸಿರುವ ಐದು ಗ್ಯಾರಂಟಿಗಳ(Congress guarantee) ಅನುಷ್ಠಾನಕ್ಕೆ ಹಣಕಾಸು ಹೊಂದಾಣಿಕೆ ಜತೆಗೆ ಅರ್ಹ ಫಲಾನುಭವಿಗಳ ಆಯ್ಕೆ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಗ್ಯಾರಂಟಿಗಳನ್ನು ಹೇಗೆಲ್ಲ ಜಾರಿಗೆ ತರಬೇಕು ಎನ್ನುವ ಮಾರ್ಗಸೂಚಿಗಳನ್ನು ತಯಾರಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಅಧಿಕಾರಕ್ಕೆ ಬಂದರೆ 200 ಯೂನಿಟ್ ಉಚಿತ ಎಂದು ಕಾಂಗ್ರೆಸ್ ಹೇಳಿತ್ತು. ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕೆಲ ಜನರು ವಿದ್ಯುತ್ ಬಿಲ್ (ಛ) ಕಟ್ಟುವುದಿಲ್ಲ ಎಂದು ಲೈನ್ಮ್ಯಾನ್ಗಳ ಜತೆ ಜಗಳಕ್ಕೆ ಇಳಿದಿದ್ದಾರೆ. ಇಷ್ಟು ದಿನ ಬರೀ ತರಾಟೆ, ಮಾತಿನಲ್ಲಿ ನಡೆಯುತ್ತಿದ್ದ ಜಗಳ ಇದೀಗ ಹಲ್ಲೆ ಮಾಡುವ ಮಟ್ಟಕ್ಕೆ ಹೋಗಿದೆ.
ಹೌದು… ಕೊಪ್ಪಳದ ಕುಕನಪಲ್ಲಿ ಗ್ರಾಮದಲ್ಲಿ ವಿದ್ಯುತ್ ಬಿಲ್ ವಸೂಲಿಗೆ ಬಂದ ಲೈನ್ಮ್ಯಾನ್ ಮೇಲೆ ವ್ಯಕ್ತಿಯೊಬ್ಬ ಅವಾಚ್ಯ ಶಬ್ದದಿಂದ ನಿಂದಿಸಿದ್ದಲ್ಲದೆ, ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ. ಚಂದ್ರಶೇಖರ್ ಹಿರೇಮಠ ಅವರದ್ದು ಆರು ತಿಂಗಳ 9990 ರೂಪಾಯಿ ವಿದ್ಯುತ್ ಬಿಲ್ ಬಾಕಿ ಇತ್ತು. ಈ ಹಿನ್ನಲೆಯಲ್ಲಿ ಬಾಕಿ ತುಂಬುವಂತೆ ಹೇಳಲು ಮಂಜುನಾಥ್, ಚಂದ್ರಶೇಖರ್ ಅವರ ಮನೆಗೆ ಹೋಗಿದ್ದ. ಈ ವೇಳೆ ಚಂದ್ರಶೇಖರ್ ನಾನು ಬಾಕಿ ತುಂಬಲ್ಲ ಎಂದಿದ್ದಾನೆ. ಅದೆಲ್ಲ ಆಗಲ್ಲ ಬಾಕಿ ತುಂಬಲೇಬೇಕೆಂದು ಲೈನಮ್ಯಾನ್ ಮಂಜುನಾಥ ಹೇಳಿದ್ದಾನೆ. ಬಳಿಕ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಏಕಾಏಕಿ ಚಂದ್ರಶೇಖರ್ ಲೈನ್ಮ್ಯಾನ್ ಮಂಜುನಾಥನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾನೆ. ಮಂಜುನಾಥ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದ್ದು, ಹಲ್ಲೆ ನಡೆಸಿದ ಚಂದ್ರಶೇಖರಯ್ಯ ವಿರುದ್ಧ ಮಂಜುನಾಥ್ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ ಆರೋಪಿ ಚಂದ್ರಶೇಖರ್ ವಿರುದ್ಧ ಕ್ರಮಕ್ಕೆ ಜೆಸ್ಕಾಂ ಸಿಬ್ಬಂದಿ ಆಗ್ರಹಿಸಿದ್ದಾರೆ.
ಇದೇ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಜಮಾಪುರ ಗ್ರಾಮದ ಗ್ರಾಮಸ್ಥರು ಮೊನ್ನೇ ಅಷ್ಟೇ ಕರೆಂಟ್ ಬಿಲ್ ಕಟ್ಟಲ್ಲವೆಂದು ಹೇಳಿದ್ದರು. ಬಿಲ್ ಬೇಕಾದರೆ ಕಾಂಗ್ರೆಸ್ ಸರ್ಕಾರ ಬಂದಿದೆ ಅವರ ಬಳಿಯೆ ತಗೆದುಕೋ ಹಾಗೂ ಬೇಕಾದರೆ ಕಮರ್ಷಿಯಲ್ ಮೀಟರ್ಗೆ ಮಾತ್ರ ಬಿಲ್ ಕೇಳು ಎಂದು ಲೈನ್ಮ್ಯಾನ್ಗೆ ಹೇಳಿದ್ದರು. ಅಲ್ಲದೇ ನಮ್ಮ ತಂಟೆಗೆ ಬರದಂತೆ ಬಿಲ್ ಕಲೆಕ್ಟರ್ಗೆ ಗಾಮಸ್ಥರು ಎಚ್ಚರಿಕೆ ನೀಡಿದ್ದರು.
ಕೊಪ್ಪಳ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ