ಕೊಪ್ಪಳ, ಮಾರ್ಚ್.11; ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಆನೆಗೊಂದಿ ಉತ್ಸವವನ್ನು (Anegondi Utsav) ಹಮ್ಮಿಕೊಳ್ಳಲಾಗಿದೆ. ಈ ಭಾಗದ ಇತಿಹಾಸ, ಕಲೆ, ಸಂಸ್ಕ್ರತಿಯನ್ನು ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಪ್ರವಾಸೋಧ್ಯಮ ಇಲಾಖೆ, ಕೊಪ್ಪಳ ಜಿಲ್ಲಾಡಳಿತದಿಂದ ಎರಡು ದಿನಗಳ ಉತ್ಸವನನ್ನು ಅದ್ದೂರಿಯಾಗಿ ನಡೆಸಲಾಗುತ್ತಿದೆ.
ಇಂದು ಮುಂಜಾನೆ ಆನೆಗೊಂದಿಯ ಆಧಿಶಕ್ತಿ ದೇವಸ್ಥಾನದಲ್ಲಿ ಸಾಂಸ್ಕ್ರತಿಕ ಕಲಾತಂಡಗಳ ಮೆರವಣಿಗೆಗೆ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಚಾಲನೆ ನೀಡಿದ್ದಾರೆ. ಇನ್ನು ಸಂಜೆ ಆನೆಗೊಂದಿಯ ಉತ್ಸವ ಮೈದಾನದಲ್ಲಿ ನಡೆಯುವ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕ್ರತಿ ಸಚಿವ ಶಿವರಾಜ್ ತಂಗಡಗಿ ಉದ್ಘಾಟಿಸಲಿದ್ದಾರೆ. ಶಸಾಕ ಜನಾರ್ಧನ ರೆಡ್ಡಿ ಸೇರಿದಂತೆ ಅನೇಕ ಶಾಸಕರು, ಸಂಸದರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಚಿತ್ರನಟ ಧ್ರುವ ಸರ್ಜಾ ಕೂಡಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ರಾತ್ರಿ ಅನೇಕ ಕಲಾವಿದರಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷವಾಗಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಮತ್ತು ಅವರ ತಂಡದಿಂದ ಚಿತ್ರಗೀತೆಗಳ ಗಾಯನದ ಜೊತೆಗೆ ಕಿಷ್ಕಿಂದೆ ಕಾಂಡದ ಕಥಾನಕ ರೂಪದಲ್ಲಿ ಪ್ರದರ್ಶಿಸಲಿದೆ.
ಮಾರ್ಚ್ ಹನ್ನೆರಡರಂದು ಕೂಡಾ ಅನೇಕ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಾರ್ಚ್ ಹನ್ನೆರಡರಂದು ನಟ ಮುರುಳಿ, ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ತಂಡದಿಂದ ಚಿತ್ರಗೀತೆಗಳ ಗಾಯನ ನಡೆಯಲಿದೆ. ಇದರ ಜೊತೆಗೆ ಇನ್ನೊಂದು ವೇದಿಕೆಯಲ್ಲಿ ಕವಿಗೋಷ್ಟಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಕೂಡಾ ಆಯೋಜಿಸಲಾಗಿದೆ. ಸ್ಥಳಿಯ ಕಲಾವಿದರ ಜೊತೆ, ರಾಜ್ಯ ಮಟ್ಟದ ಅನೇಕ ಕಲಾವಿದರು ಎರಡು ದಿನಗಳ ಕಾರ್ಯಕ್ರಮದಲ್ಲಿ ಮನರಂಜನೆಯ ಹೊಳೆಯನ್ನು ಹರಿಸಲಿದ್ದಾರೆ. ಉತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ಕೂಡಾ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ಆನೆಗುಂದಿಯ ನವಬೃಂದಾವನದಲ್ಲಿ ಅಷ್ಟೋತ್ತರ ಪೂಜಾ ಕಾರ್ಯಕ್ಕೆ ಹೈಕೋರ್ಟ್ ಅಸ್ತು: ಭಕ್ತರಲ್ಲಿ ಸಂಭ್ರಮ
ಗಂಗಾವತಿ ತಾಲೂಕಿನ ಆನೆಗೊಂದಿಗೆ ಐತಿಹಾಸಿಕ ಹಿನ್ನೆಲೆಯಿದೆ. ರಾಮಾಯಣದಲ್ಲಿ ಉಲ್ಲೇಖವಾಗಿರುವ ಕಿಷ್ಕಿಂದೆಯ ಭಾಗವಾಗಿರುವ ಆನೆಗೊಂದಿ, ವಾಲಿಯ ರಾಜಧಾನಿಯಾಗಿತ್ತು. ಸೀತೆಯನ್ನು ಹುಡುಕಿಕೊಂಡು ಹೊರಟಿದ್ದ ರಾಮ ಲಕ್ಷ್ಮಣರು, ಇದೇ ಸ್ಥಳದಲ್ಲಿ ಅನೇಕ ತಿಂಗಳ ಕಾಲ ವಾಸವಿದ್ದರು. ವಾಲಿಯನ್ನು ಹತ್ಯೆ ಮಾಡಿದರು. ಜೊತೆಗೆ, ರಾಮನ ಭಂಟ ಹನುಮನ ಜನ್ಮಸ್ಥಳ ಅಂಜನಾದ್ರಿ ಕೂಡಾ ಇರುವುದು ಇದೇ ಆನೆಗೊಂದಿ ಸಮೀಪ. ಐತಿಹಾಸಿಕ ಪಂಪಾ ಸರೋವರ ಸೇರಿದಂತೆ ಅನೇಕ ಐತಿಹಾಸಿಕ ಸ್ಥಳಗಳು ಕೂಡಾ ಇದೇ ಆನೆಗೊಂದಿ ಸುತ್ತಮುತ್ತಲಿವೆ. ತುಂಗಭದ್ರಾ ನದಿ ದಡದಲ್ಲಿರುವ ಆನೆಗೊಂದಿ, ವಿಜಯ ನಗರ ಅರಸರ ಮೊದಲ ರಾಜಧಾನಿಯಾಗಿತ್ತು. ಕೃಷ್ಣದೇವರಾಯನ ಕಾಲದಲ್ಲಿ ಆನೆಗೊಂದಿ ಪ್ರಮುಖ ಪಟ್ಟಣವಾಗಿ ಬೆಳದಿತ್ತು. ಇಂದಿಗೂ ಕೂಡಾ ಆನೆಗೊಂದಿಯಲ್ಲಿ ಕೋಟೆ ಸೇರಿದಂತೆ ಅನೇಕ ಐತಿಹಾಸಿಕ ದೇವಸ್ಥಾನಗಳನ್ನು ಕಾಣಬಹುದಾಗಿದೆ.
ಹಂಪಿ ಉತ್ಸವನ್ನು ಆಚರಣೆ ಆರಂಭಿಸಿದ ನಂತರ, ಆನೆಗೊಂದಿ ಉತ್ಸವನ್ನು ಕೂಡಾ ಆಚರಿಸಲಾಗುತ್ತಿದೆ. ಆದ್ರೆ ಕೊರೊನಾದಿಂದ ಕಳೆದ ಮೂರು ವರ್ಷಗಳಿಂದ ಆನೆಗೊಂದಿ ಉತ್ಸವವನ್ನು ಆಚರಿಸಿರಲಿಲ್ಲಾ. ಈ ಬಾರಿ ಹಂಪಿ ಉತ್ಸವ ಆಚರಣೆ ನಂತರ, ಆನೆಗೊಂದಿ ಉತ್ಸವನ್ನು ಕೂಡಾ ಆಚರಿಸಬೇಕು ಅನ್ನೋ ಆಗ್ರಹವನ್ನು ಸ್ಥಳೀಯರು ಮಾಡಿದ್ದರು. ಹೀಗಾಗಿ ಸರ್ಕಾರ ಆನೆಗೊಂದಿ ಉತ್ಸವಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು. ಇಂದಿನಿಂದ ಎರಡು ದಿನಗಳ ಕಾಲ ಅದ್ದೂರಿಯಾಗಿ ಉತ್ಸವ ನಡೆಸಲು ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಆದ್ರೆ ಕೇವಲ ಉತ್ಸವ ಆಚರಿಸಿದರೆ ಸಾಲದು, ಐತಿಹಾಸಿಕ ಸ್ಥಳಗಳನ್ನು ರಕ್ಷಿಸುವುದರ ಜೊತೆಗೆ ಅವುಗಳ ಪರಿಚಯ, ಇತಿಹಾಸವನ್ನು ತಿಳಿಸುವ ಕೆಲಸವನ್ನು ಮಾಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ