ಕೊಪ್ಪಳ: ಸ್ಯಾಂಡಲವುಡ್ನ ರಾಕಿಂಗ್ ಸ್ಟಾರ್ ಕೆಜಿಎಫ್ನ ರಾಕಿಭಾಯ್ ಅಂತಲೇ ಫೆಮಸ್ ಆಗಿರೋ ನಟ ಯಶ್ (Yash) ಅಭಿವೃದ್ಧಿ ಪಡಿಸಿದ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆ ತುಂಬಿ ಕೋಡಿ ಬಿದ್ದಿದ್ದು, ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕಳೆದ ಹಲವು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ನಿನ್ನೆ ರಾತ್ರಿ ಧರೆಗೆ ಮತ್ತೊಮ್ಮೆ ಅಪ್ಪಳಿಸಿದ್ದರಿಂದ, ಮತ್ತು ನಿರಂತರವಾಗಿ ಸುರಿದ ಮಳೆಯಿಂದಾಗಿ ತಲ್ಲೂರು ಕೆರೆ ಭರ್ತಿಯಾಗಿದೆ. ಹೀಗಾಗಿ ಅಂದು ನಟ ಯಶ್ ಅವರ ಯಶೋಮಾರ್ಗದ ಕನಸು ನನಸಾಗಿದೆ. ಯಾಕೆಂದ್ರೆ ಅಂದು ಈ ಭಾಗದ ರೈತರಿಗೆ ಹಾಗೂ ಜಾನುವಾರಗಳಿಗೆ ನೀರಿನ ಸಮಸ್ಯೆಯಾದಾಗ 2017ರಲ್ಲಿ ಯಶೋಮಾರ್ಗ ಫೌಂಡೇಶನ್‌ನಿಂದ ಕೆರೆಯನ್ನು ಅಭಿವೃದ್ಧಿ ಮಾಡಲಾಗಿತ್ತು. ಅಂದು ಖುದ್ದು ಯಶ್ ಕೊಪ್ಪಳ ಜಿಲ್ಲೆಗೆ ಬಂದು ಕೆರೆಯನ್ನ ಅಭಿವೃದ್ಧಿ ಪಡಿಸೊ ಶಪಥ ಮಾಡಿದ್ದರು. ಅದರಂತೆ ಕೆರೆಯನ್ನ ತಮ್ಮ ಫೌಂಡೇಶನ್ ಮೂಲಕವೆ ಅಭಿವೃದ್ಧಿ ಪಡಿಸಿದ್ದರು. ಅಭಿವೃದ್ದಿ ಪಡಿಸಿದ ನಂತರ ಇದೇ ಮೊದಲ ಬಾರಿಗೆ ಕೆರೆ ಸಂಪೂರ್ಣ ತುಂಬಿ ಕೋಡಿ ಬಿದ್ದಿದೆ.
ಯಶೋಮಾರ್ಗದ ಮಹತ್ವದ ಯೋಜನೆಯಾಗಿದ್ದ ತಲ್ಲೂರು ಕೆರೆಯ ತುಂಬಾ ನೀರು ಬಂದಿದ್ದು, ನೋಡಲು ಸುಂದರಮಯವಾಗಿದ್ದು ಸುತ್ತಮುತ್ತಲಿನ ಜನರಲ್ಲಿ ನೀರಿನ ದಾಹ ತೀರಿ ಮಂದಹಾಸ ಮೂಡಿಸಿದೆ..! 2008 ರಲ್ಲಿ ಈ ಕೆರೆ ಕೋಡಿ ಬಿದ್ದಿತ್ತು. ಅದಾದ ಮೇಲೆ ವಪರಿತ ಬರಗಾಲದಿಂದ ಕೆರೆಯಲ್ಲಿ ನೀರೇ ಇಲ್ಲದಂತಾಗಿತ್ತು. ಸದ್ಯ ಈಗ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಸತತ ಮೂರ್ನಾಲ್ಕು ವರ್ಷಗಳ ಬರದಿಂದ ಸಂಪೂರ್ಣವಾಗಿ 96 ಎಕರೆ ವಿಸ್ತೀರ್ಣದ ತಲ್ಲೂರು ಕೆರೆ ಬತ್ತಿ ಹೋಗಿತ್ತು. ಅಲ್ಲದೇ ಸಂಪೂರ್ಣವಾಗಿ ಹೂಳು ಕೂಡಾ ತುಂಬಿಕೊಂಡಿತ್ತು. ಕೆರೆಯಲ್ಲಿ ತುಂಬಿರುವ ಹೂಳು ತಗೆಯಲು 2017 ಫೆಬ್ರವರಿ ತಿಂಗಳಲ್ಲಿ ಹೂಳು ತಗೆಯಲು ಯಶ್ ದಂಪತಿ ಚಾಲನೆ ನೀಡಿದ್ದರು. ಅಂದು ನೀಡಿದ್ದ ಕೆರೆ ಕಾಯಕಕ್ಕೆ ಈಗ ಸಾರ್ಥಕತೆ ಸಿಕ್ಕಿದೆ. ಇದರಿಂದ ಸುಮಾರು 10 ಕ್ಕೂ ಹೆಚ್ಚು ಗ್ರಾಮದ ರೈತರಿಗೆ ಅನುಕೂಲವಾಗಿದೆ.
ನಟ ಯಶ್ ಮಾಡಿರುವ ಈ ಕಾರ್ಯವನ್ನ ರೈತರು ಕೊಂಡಾಡುತ್ತಿದ್ದು, ಬರದ ನಾಡಿನ ಭಗೀರಥ ಬಂದಂಗ ಬಂದು ನಮ್ಮೂರು ಕೆರೆ ಅಭಿವೃದ್ಧಿ ಪಡಿಸಿದ್ದಾರೆ. ಈ ಬಾರಿ ಮಳೆಯೂ ಚೆನ್ನಾಗಿ ಆಯ್ತು, ಕೆರೆನೂ ತುಂಬಿದೆ ಎಂದು ಗ್ರಾಮಸ್ಥರು ಸಂತಸವನ್ನು ಹಂಚಿಕೊಂಡಿದ್ದಾರೆ. ಯಶೋಮಾರ್ಗದ ಮೂಲಕ ತಲ್ಲೂರು ಕೆರೆಯನ್ನು ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಮಾಡಲಾಗಿದೆ. ರಾಕಿಂಗ್ ಸ್ಟಾರ್ ಯಶ್ರ ಸಮಾಜಿಕ ಕಾರ್ಯಕ್ಕೆ ಇಲ್ಲಿನ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವರದಿ: ದತ್ತಾತ್ರೇಯ ಪಾಟೀಲ್ ಟಿವಿ 9 ಕೊಪ್ಪಳ.