ಕೊಪ್ಪಳ: ಕನಕಗಿರಿ ತಾಲ್ಲೂಕಿನ ಹುಲಿಹೈದರ್ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು ಇಬ್ಬರು ಮೃತಪಟ್ಟಿದ್ದಾರೆ. ಯಂಕಪ್ಪ ತಳವಾರ (60), ಭಾಷಾಸಾಬ್ (22) ಮೃತಪಟ್ಟಿದ್ದಾರೆ. ಆರು ಮಂದಿ ಗಾಯಗೊಂಡಿದ್ದಾರೆ. ಧರ್ಮಣ್ಣ ಹರಿಜನ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿಯ ಗೆಳೆತನದ ಕಾರಣಕ್ಕೆ ಘರ್ಷಣೆ ನಡೆದಿದೆ ಎಂದು ಹೇಳಲಾಗುತ್ತಿದೆ. ನಿಖರ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಗ್ರಾಮದಲ್ಲಿ ಸಿಆರ್ಪಿಸಿ 144ನೇ ವಿಧಿಯ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ನಿಷೇಧಾಜ್ಞೆಯು ಆಗಸ್ಟ್ 20ರವರೆಗೆ ಜಾರಿಯಲ್ಲಿರುತ್ತದೆ ಎಂದು ಕೊಪ್ಪಳ ಉಪವಿಭಾಗಾಧಿಕಾರಿ ಬಸವಣ್ಣಪ್ಪ ಕಲ್ಲಶೆಟ್ಟಿ ಆದೇಶದಲ್ಲಿ ತಿಳಿಸಿದ್ದಾರೆ. ಗ್ರಾಮದ ಸುತ್ತಮುತ್ತ 2 ಕಿಮೀ ವ್ಯಾಪ್ತಿಯಲ್ಲಿ ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ, ತಹಶೀಲ್ದಾರ್ ಧನಂಜಯ ಮಾಲಗತ್ತಿ ಗ್ರಾಮದಲ್ಲಿಯೇ ಬೀಡುಬಿಟ್ಟಿದ್ದು, 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಘರ್ಷಣೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಧರ್ಮಣ್ಣ ಅವರನ್ನು ಪ್ರಸ್ತುತ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಿಂಸಾಚಾರ ಖಂಡಿಸಿ ಮುಸ್ಲಿಂ ಮಹಿಳೆಯರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಹೂ ತರಲು ಹೋಗಿದ್ದಾಗ ನಮ್ಮ ಹುಡುಗನಿಗೆ ಹೊಡೆದರು ಎಂದು ಹೇಳಿದ ಮಹಿಳೆಯರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ಮಾಜಿ ಸಚಿವ ಶಿವರಾಜ್ ತಂಗಡಗಿ ಆಪ್ತ ಹನುಮೇಶ್ ನಾಯಕ ಈ ಘಟನೆಗೆ ಕಾರಣ ಎಂದು ದೂರಿದರು.
ಆರ್ಟಿಐ ಕಾಯ್ದೆಯ ಅಡಿ ಮಾಹಿತಿ ಕೇಳಿದ್ದಕ್ಕೆ ಕೊಲೆಯಾಗಿದ್ದ ವಿದ್ಯಾರ್ಥಿ ಯಲ್ಲಾಲಿಂಗ ಹತ್ಯೆಯ ಆರೋಪ ಹೊತ್ತಿರುವ ಹನುಮೇಶ್ ನಾಯಕ್ ಸದ್ಯ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ. ಗಲಾಟೆಯ ನಂತರ ಗ್ರಾಮದಲ್ಲಿ ಬೂದಿಮುಚ್ಚಿದ ಕೆಂಡದಂಥ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ.
ಮುಂಜಾನೆ 9 ಗಂಟೆಯ ವೇಳೆಯಲ್ಲಿ ಗಲಭೆ ನಡೆದಿದ್ದು, ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್, ಟಾಟಾ ಏಸ್ ಸೇರಿದಂತೆ ಹಲವು ವಾಹನಗಳನ್ನು ಜಖಂ ಮಾಡಲಾಗಿದೆ. ಬೈಕ್ಗಳ ಮೇಲೆ ಕಲ್ಲು ಎತ್ತಿಹಾಕಲಾಗಿದೆ.
ಗಲಾಟೆಗೆ ತಿರುಗಿದ ಮಾತಿನ ಚಕಮಕಿ: ಎಸ್ಪಿ
ಹುಲಿಹೈದರ್ ಗ್ರಾಮದ ಗಲಾಟೆ ಕುರಿತು ಕೊಪ್ಪಳದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಪ್ರತಿಕ್ರಿಯಿಸಿದರು. ಯಂಕಪ್ಪ ಹಾಗೂ ಬಾಷಾವಲಿ ಇಬ್ಬರು ಮೃತಪಟ್ಟಿದ್ದಾರೆ. ಪ್ರಸ್ತುತ ಗ್ರಾಮದಲ್ಲಿ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪ್ರಸ್ತುತ ಗ್ರಾಮದಲ್ಲಿ 8 ಜನ ಪೊಲೀಸ್ ಅಧಿಕಾರಿಗಳು, 70ಕ್ಕೂ ಅಧಿಕ ಸಿಬ್ಬಂದಿ, ಹಾಗೂ ಕೆಎಸ್ಆರ್ಪಿ ತುಕಡಿ ನಿಯೋಜಿಸಲಾಗಿದೆ. ಗಲಾಟೆ ಏಕೆ ನಡೆಯಿತು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಶಾಲೆಗಳಿಗೆ ರಜೆ
ಹುಲಿಹೈದರ್ ಗ್ರಾಮದಲ್ಲಿ 2 ಗುಂಪುಗಳ ಮಾರಾಮಾರಿಯ ನಂತರ ಗ್ರಾಮದಲ್ಲಿ ಬಿಗುವಿನ ವಾತಾವರಣ ನೆಲೆಸಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಶಾಲೆಗಳಿಗೆ ರಜೆ ಘೋಷಿಸಿದರು. ಮಕ್ಕಳನ್ನು ಸ್ವತಃ ಮನೆಗಳಿಗೆ ತಲುಪಿಸಿ ಬಂದರು.
Published On - 1:46 pm, Thu, 11 August 22