ಭತ್ತದ ನಾಡು ಗಂಗಾವತಿ ಕಡೆಯಿಂದ ಸೃಷ್ಟಿಯಾಗಿದೆ ಹೈ ಪ್ರೋಟಿನ್ ಭತ್ತ! ಏನಿದರ ಪೋಷಕಾಂಶ ವಿವರ?

High Protein paddy: ತುಂಗಭದ್ರ ಅಚ್ಚುಕಟ್ಟು ವ್ಯಾಪ್ತಿಯ ಗಂಗಾವತಿ ಭಾಗದಲ್ಲಿ ಬೆಳೆಯುವ ಭತ್ತದ ಅಕ್ಕಿಗೆ ರಾಜ್ಯಾದ್ಯಂತ ‌ಭಾರಿ ಬೇಡಿಕೆ ಇದೆ. ಇದೀಗ ಕೊಪ್ಪಳದ ಗಂಗಾವತಿ ತಾಲೂಕಿನ ಹಣವಾಳ ಗ್ರಾಮದ ರೈತ ವೀರೇಶಪ್ಪ ಎನ್ನುವರು ಹೆಚ್ಚು ಪೋಷಕಾಂಶ ಉಳ್ಳ ಮತ್ತೊಂದು ಭತ್ತ ತಳಿಯನ್ನು ಬೆಳೆಯುತ್ತಿದ್ದಾರೆ.

ಭತ್ತದ ನಾಡು ಗಂಗಾವತಿ ಕಡೆಯಿಂದ ಸೃಷ್ಟಿಯಾಗಿದೆ ಹೈ ಪ್ರೋಟಿನ್ ಭತ್ತ! ಏನಿದರ ಪೋಷಕಾಂಶ ವಿವರ?
ಭತ್ತದ ನಾಡು ಗಂಗಾವತಿಯಲ್ಲಿ ಹೈ ಪ್ರೋಟಿನ್ ಭತ್ತ ಸೃಷ್ಟಿ!
Edited By:

Updated on: Jan 27, 2023 | 12:51 PM

ಅದು ರಾಜ್ಯದ ಭತ್ತದ ನಾಡು ಎಂದು ಪ್ರಸಿದ್ದಿ ಪಡೆದಿರುವ ಭೂಭಾಗ.. ಇದೀಗ, ಭತ್ತದ ನಾಡು ಎಂಬ ಖ್ಯಾತಿಯ ಗಂಗಾವತಿಯಿಂದ ಮತ್ತೊಂದು ಭತ್ತದ ತಳಿ ಪರಿಚಯಿಸಲಾಗಿದೆ.‌ ಹೆಚ್ಚು ಪೋಷಕಾಂಶ ಹೊಂದಿರೋ ಈ ತಳಿಯ ಹೆಸರೇ ಹೈಪ್ರೋಟಿನ್ ಭತ್ತ (High Protein- a variety of paddy). ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ. ಕೊಪ್ಪಳ ಜಿಲ್ಲೆಯ ಗಂಗಾವತಿ ಎಂದರೆ ಸಾಕು ಸದ್ಯ ಎಲ್ಲರಿಗೂ ನೆನಪಿಗೆ ಬರೋದು ಅಂಜನಾದ್ರಿ ಬೆಟ್ಟ. ಆದ್ರೆ ಕಳೆದ 5 ದಶಕದಿಂದ ಗಂಗಾವತಿ ಭತ್ತದ ನಾಡು ಎಂದೇ ಖ್ಯಾತಿ ಪಡೆದಿದ್ದು, ತುಂಗಭದ್ರ ಅಚ್ಚುಕಟ್ಟು ವ್ಯಾಪ್ತಿಯ ಗಂಗಾವತಿ ಭಾಗದಲ್ಲಿ ಬೆಳೆಯುವ ಭತ್ತದ ಅಕ್ಕಿಗೆ ರಾಜ್ಯಾದ್ಯಂತ ‌ಭಾರಿ ಬೇಡಿಕೆ ಇದೆ. ಇದೀಗ ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ ಸಂಶೋಧನೆ ಗಂಗಾವತಿ (Agriculture Research Center in Gangavathi) ಮುಡಿಗೆ ಮತ್ತೊಂದು ಗರಿ ಏರಿಸಿದೆ. ಹೌದು, ಹೆಚ್ಚು ಪೋಷಕಾಂಶ ಉಳ್ಳ ಈ ಭತ್ತ ಸದ್ಯ ಎಲ್ಲರಿಗೂ ಪರಿಚಯವಾಗುತ್ತಿದೆ. ಕೊಪ್ಪಳದ ಗಂಗಾವತಿ ತಾಲೂಕಿನ ಹಣವಾಳ ಗ್ರಾಮದ ರೈತ (Farmer) ವೀರೇಶಪ್ಪ ಎನ್ನುವರು ಈ ಭತ್ತವನ್ನು ಬೆಳೆಯುತ್ತಿದ್ದಾರೆ. ಹೈಪ್ರೋಟಿನ್ ಭತ್ತ ಸೋನಾ ಮಸೂರಿಗಿಂತ ಸ್ವಲ್ಪ ದಪ್ಪ ಇದ್ದು, ಇದರ ಅಕ್ಕಿ ಹೆಚ್ಚು ಬಿಳಿ‌ ಇರುತ್ತೆ.‌ ಸೋನಾ ಮಸೂರಿಗೆ ಹೋಲಿಕೆ ಮಾಡಿದ್ರೆ ಒಂದಷ್ಟು ಕಡಿಮೆ ಇಳುವರಿ ಬರುವ ಈ ತಳಿ ಎಕರೆಗೆ 30 ರಿಂದ 35 ಚೀಲ ಬೆಳೆಯ ಬಹುದಂತೆ. ಆದರೆ, ಕಡಿಮೆ ಖರ್ಚಿನಲ್ಲಿ ಈ ಭತ್ತ ಬೆಳೆಯಬಹುದು. ಜೊತೆಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ ಎನ್ನುತ್ತಾರೆ ಹೈಪ್ರೋಟಿನ್ ಭತ್ತ ಬೆಳೆದ ರೈತ ವೀರೇಶಪ್ಪ ಹುಚ್ಚನಗೌಡ್ರು.

ಗಂಗಾವತಿ ಕೃಷಿ ಸಂಶೋಧನಾ ಸಂಸ್ಥೆ ‌ಮೂರು‌ ವರ್ಷದ ನಿರಂತರ ಸಂಶೋಧನೆಯಿಂದ ಹೈಪ್ರೋಟಿನ್ ಹೊಸ ತಳಿ ಪರಿಚಯಿಸಿದೆ. ಈ ಹಿಂದೆ ಗಂಗಾವತಿ ಸೋನಾ, ಗಂಗಾವತಿ ಎಮರ್ಜೆನ್ಸಿ, ಜಿಎನ್‌ವಿ,‌ ತುಂಗಭದ್ರಾ ಸೋನಾ ಸೇರಿದಂತೆ ವಿವಿಧ ತಳಿಯನ್ನು ಕೃಷಿ ಜಗತ್ತಿಗೆ ಪರಿಚಯಿಸಿದ್ದಾರೆ. ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ ತಜ್ಞರು ಈ ಬಾರಿ ‌ಜನರ ಬೇಡಿಕೆಗೆ ಅನುಗುಣವಾಗಿ ಹೈಪ್ರೋಟೀನ್ ಭತ್ತದ ತಳಿ ಪರಿಚಯ ಮಾಡಿದೆ.

ಬೇರೆ ಬೇರೆ ತಳಿಗಳನ್ನು ಬಳಸಿ ಮಾಡಿ ಹಚ್ಚಿನ ಪ್ರೋಟಿನ್ ಅಂಶವಿರುವ ಹೈಪ್ರೋಟಿನ್ ಭತ್ತ ಅಭಿವೃದ್ಧಿ ಪಡಿಸಲಾಗಿದೆ. ವಾಣಿಜ್ಯ ಬೆಳೆ ಸೋನಾ ಮಸೂರಿಗಿಂತ ಹೆಚ್ಚಿನ ಪ್ರೋಟಿನ್ ಅಂಶ ಹೊಂದಿರುವ ನೂತನ ತಳಿಯ ಭತ್ತ ಆರೋಗ್ಯದಾಯಕವಾಗಿದೆ. ರೈತರು ಜಮೀನಿನಲ್ಲಿ ಬೆಳೆಯುತ್ತಿದ್ದಾರೆ ಎಂದು ಡಾ. ಮಹಾಂತ ಶಿವಯೋಗಯ್ಯ ಕೆ – ವಿಜ್ಞಾನಿ ತಳಿ ಶಾಸ್ತ್ರ, ಕೃಷಿ ಸಂಶೋಧನಾ ಕೇಂದ್ರ, ಗಂಗಾವತಿ ಅವರು ವಿವರಿಸಿದ್ದಾರೆ.

 

ಈ ಭತ್ತದ ಅಕ್ಕಿಯಲ್ಲಿ ಜಿಂಕ್, ಐರನ್, ಹೈಪ್ರೋಟಿನ್ ಅಂಶಗಳು ಹೇರಳವಾಗಿವೆ. ನೂತನ ತಳಿಯನ್ನು ಈಗಾಗಲೇ ವಿರೇಶಪ್ಪ ಹುಚ್ಚನಗೌಡ ಅವರ ಹೊಲದಲ್ಲಿ ಬೆಳೆಯಲಾಗಿದ್ದು, ಈ ತಳಿಯ ಅಕ್ಕಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಕೂಡ ಇದೆ.

ವರದಿ: ದತ್ತಾತ್ರೇಯ ಪಾಟೀಲ್, ಟಿವಿ 9, ಕೊಪ್ಪಳ