ಕೊಪ್ಪಳ: ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ವಸತಿ ಸಹಿತ ದಾಸೋಹ ಕಲ್ಪಿಸುತ್ತಿರುವ ಗವಿಮಠಕ್ಕೆ(Koppal Gavi Mutt) ಇದೀಗ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಗವಿಮಠದಿಂದ ಬರೋಬ್ಬರಿ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ವಸತಿ ನಿಲಯದ ಕಟ್ಟಡ ನಿರ್ಮಾಣಕ್ಕೆ ಗವಿಸಿದ್ದೇಶ್ವರ ಶ್ರೀಗಳು(Gavisiddeshwara Swamiji) ಚಾಲನೆ ನೀಡಿದ್ರು. ಇದೇ ವೇಳೆ ಗವಿಸಿದ್ದೇಶ್ವರ ಶ್ರೀಗಳು ನನ್ನ ಜೋಳಿಗೆಯಿಂದ ಎಷ್ಟು ಸಾಧ್ಯವೋ ಅಷ್ಟು ಹಣ ವಿನಿಯೋಗಿಸಿ ಕಟ್ಟಡ ಕಟ್ಟುವ ಕೆಲಸಕ್ಕೆ ಕೈ ಹಾಕುವುದಾಗಿ ಭಾವುಕರಾಗಿ ಮಾತನಾಡಿದ್ರು. ಇದನ್ನು ಕಂಡ ಸಚಿವರು, ಶಾಸಕರು, ಸರ್ಕಾರ ಅನುದಾನದ ಮಹಾಪೂರ ನೀಡಿತ್ತು. ಇದೀಗ ಭಕ್ತಗಣವೂ ಸಹ ತಮ್ಮ ಕೈಲಾದಷ್ಟು ಹಣವನ್ನು ದೇಣಿಗೆ ರೂಪದಲ್ಲಿ ಮಠಕ್ಕೆ ನೀಡುತ್ತಿದೆ. ಇದರ ನಡುವೆ ಅಮೇರಿಕಾದಿಂದ ಬಂದಿದ್ದ ವಿದ್ಯಾರ್ಥಿನಿ ಗವಿಮಠಕ್ಕೆ 50 ಸಾವಿರ ದೇಣಿಗೆ ನೀಡಿ, ಇತರರಿಗೆ ಮಾದರಿಯಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ದೀಶಾ ಎನ್ನುವ ವಿದ್ಯಾರ್ಥಿನಿ ಅಮೆರಿಕಾದ ಬೋಸ್ಟನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇನ್ನು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಶ್ರೀಗಳು ಕಣ್ಣೀರು ಹಾಕಿದ್ದನ್ನು ಕಂಡ ವಿದ್ಯಾರ್ಥಿನಿ ದೀಶಾ ತನ್ನ ಪೋಷಕರೊಂದಿಗೆ ಆಗಮಿಸಿ ನೆರವು ನೀಡಿದ್ರು. ಇನ್ನು ದೀಶಾ ಅಮೆರಿಕಾದ ಬೋಸ್ಟನ್ ನಲ್ಲಿ ಫಾರ್ಟ್ಟೈಮ್ ಸ್ಕೀಯಿಂಗ್ ತರಬೇತಿ ನೀಡುವ ಕೆಲಸ ನಿರ್ವಹಣೆ ಮಾಡ್ತಾ ಇದ್ದು, ತರಬೇತಿ ನೀಡಿ ಬಂದ ಹಣವನ್ನ ಮಠಕ್ಕೆ ನೀಡಿದ್ದಾರೆ. ಇದನ್ನೂ ಓದಿ: Eknath Shinde ಏಕನಾಥ್ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿ , ಇಂದು ಸಂಜೆ 7.30ಕ್ಕೆ ಪ್ರಮಾಣ ವಚನ ಸ್ವೀಕಾರ
ನಾನು ತುಮಕೂರಿನ ಸಿದ್ದ ಗಂಗೆಯನ್ನು ನೋಡಿದ್ದೆ, ಇದು ಮತ್ತೊಂದು ಸಿದ್ದ ಗಂಗೆಯಾಗ್ತಿದೆ, ನಮ್ಮ ಜಿಲ್ಲೆಯಲ್ಲಿರೋ ಗವಿ ಮಠ ಸ್ವಾಮೀಜಿ ಕೈಗೊಂಡಿರೋ ಕೆಲಸ ಬಹಳ ಒಳ್ಳೆಯ ಕೆಲಸವಾಗಿದೆ. ನಾವು ಚಿಕ್ಕವರಿದ್ದಾಗ ತುಮಕೂರಿನ ಸ್ವಾಮೀಜಿ ಬಗ್ಗೆ ಕೇಳಿದ್ವಿ, ಇದೀಗ ಗವಿ ಮಠ ನೋಡುತ್ತಿದ್ದೇವೆ, ನಾನು ಖುಷಿಯಿಂದ ನನಗಾದ ಸಹಾಯ ಮಾಡಿದ್ದೇನೆ ಎಂದು ವಿದ್ಯಾರ್ಥಿನಿ ದೀಶಾ ಹೇಳಿದ್ದಾರೆ.
ಇದರ ಜೊತೆಗೆ ಯಲಬುರ್ಗಾ ತಾಲೂಕಿನ ಗುತ್ತೂರು ಗ್ರಾಮದ 105 ಜನ ಕೂಲಿ ಕಾರ್ಮಿಕರು
ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಮ್ಮ ಒಂದು ದಿನದ ಕೂಲಿಯನ್ನು ಹಣ ವನ್ನು ಗವಿಮಠಕ್ಕೆ ನೀಡಿದ್ದಾರೆ. ಬರೋಬ್ಬರಿ 53,895/- ರೂಪಾಯಿ ಕೂಲಿ ಹಣವನ್ನು ಶ್ರೀಗಳಿಗೆ ದೇಣಿಗೆಯಾಗಿ ನೀಡಿದ್ದಾರೆ. ಕುಷ್ಟಗಿ ತಾಲೂಕಿನ ನಂದಾಪೂರ ಗ್ರಾಮಸ್ಥರಿಂದಲೂ ಗವಿಮಠದ ವಸತಿ ನಿಲಯಕ್ಕೆ ದೇಣಿಗೆ ಬಂದಿದ್ದು, 20 ಸಾವಿರ ದೇಣಿಗೆ ನೀಡಿ ನಂದಾಪೂರ ಗ್ರಾಮಸ್ಥರು ಮಾನವೀಯತೆ ಮೆರೆದಿದ್ದಾರೆ.