
ಕೊಪ್ಪಳ, ಡಿಸೆಂಬರ್ 24: ಇಂದಿನ ಕಾಲದಲ್ಲಿ ಕೈಕಾಲು ನೆಟ್ಟಗಿದ್ದರೂ ಕೆಲವರು ದುಡಿದು ತಿನ್ನಲು ಹಿಂದೆ ಮುಂದೆ ನೋಡುತ್ತಾರೆ. ಹೀಗಿರುವಾಗ ಕೊಪ್ಪಳದ (Koppal) ಓರ್ವ ಕೃಷಿಕ ಒಂದು ಕಾಲು ಕಳೆದುಕೊಂಡಿದ್ದರೂ ಕುಗ್ಗದೆ, 12 ಎಕರೆ ಭೂಮಿಯನ್ನು ಉತ್ತಿ ಬಿತ್ತಿ ಲಕ್ಷಾಂತರ ರೂ. ಗಳಿಸಿದ್ದಾರೆ. ಟೊಮೇಟೊ, ಬದನೆ ಸೇರಿ ಹಲವು ತರಕಾರಿಗಳ ಜೊತೆಗೆ ಬೀಜೋತ್ಪಾದನೆಯಲ್ಲಿ ತೊಡಗಿರುವ ಅವರು, ಯುವ ಕೃಷಿಕರಿಗೆ ಸ್ಫೂರ್ತಿಯಾಗಿದ್ದಾರೆ.
ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಹಿರೇಅರಳಿಹಳ್ಳಿ ಗ್ರಾಮದ ರಾಮಣ್ಣ ಸಂಕಷ್ಟವನ್ನು ಶಕ್ತಿಯಾಗಿ ಪರಿವರ್ತಿಸಿಕೊಂಡ ಅಪರೂಪದ ಕೃಷಿಕ. 12 ವರ್ಷಗಳ ಹಿಂದೆ ನಡೆದ ಬೈಕ್ ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡರೂ, ಬದುಕಿನ ಓಟದಲ್ಲಿ ಹಿಂದೆ ಬೀಳದೆ ಸಾಧನೆಗೈದಿದ್ದಾರೆ. ಸ್ಥಳೀಯವಾಗಿ ಸಿಗುವ ಕೃತಕ ಕಾಲು ಅಳವಡಿಸಿಕೊಂಡು, ತಮ್ಮ ಜಮೀನಿನಲ್ಲಿ ಯಂತ್ರೋಪಕರಣಗಳ ನೆರವಿನಿಂದ ಕೃಷಿ ಮಾಡುತ್ತಿರುವ ರಾಮಣ್ಣ, ದೈಹಿಕ ಅಸಮರ್ಥತೆಯನ್ನು ಅಸ್ತ್ರವನ್ನಾಗಿಸಿಕೊಂಡಿದ್ದಾರೆ.
ಟೊಮೇಟೊ, ಬದನೆ, ಮೆಣಸಿನಕಾಯಿ, ಸೌತೆ ಸೇರಿದಂತೆ ತರಕಾರಿ ಬೆಳೆಗಳ ಜೊತೆಗೆ ಬೀಜೋತ್ಪಾದನೆಯಲ್ಲಿ ತೊಡಗಿರುವ ಅವರು, ಇದೇ ವರ್ಷದಲ್ಲಿ ಕೇವಲ ಟೊಮೇಟೊ ಬೀಜೋತ್ಪಾದನೆಯಿಂದ ಸುಮಾರು 9 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ. ಬೆಳಗಿನ ಜಾವದಿಂದಲೇ ಹೊಲಕ್ಕೆ ಕಾಲಿಡುವ ರಾಮಣ್ಣ, ಡಿಸೇಲ್ ಎಂಜಿನ್‌ಗೆ ಜೋಡಿಸಿದ ಯಂತ್ರಗಳ ಮೂಲಕ ಅಂತರಬೇಸಾಯ, ಕಳೆ ನಿಯಂತ್ರಣ, ನೀರು ಹರಿಸುವುದು, ಔಷಧ ಸಿಂಪಡಣೆ ಸೇರಿದಂತೆ ಎಲ್ಲಾ ಕೃಷಿ ಚಟುವಟಿಕೆಗಳನ್ನು ಸ್ವತಃ ನಿರ್ವಹಿಸುತ್ತಾರೆ.
ಭೂಮಿತಾಯಿ ಮೇಲೆ ನಂಬಿಕೆ ಇದ್ದರೆ ಆಕೆ ನಮ್ಮ ಕೈಹಿಡಿಯುತ್ತದೆ ಎನ್ನುವ ಅವರು, ಕೃಷಿಯಲ್ಲಿಯೇ ಸಂತಸ ಕಾಣುತ್ತಾರೆ. ಕಾಲು ಕಳೆದುಕೊಂಡ ಬಳಿಕವೂ ದುಡಿಮೆಯಿಂದ ಹಿಂದೆ ಸರಿಯದ ರಾಮಣ್ಣರನ್ನು ಕೆಲವರು ವ್ಯಂಗ್ಯವಾಡಿ ನಗಿದ ಘಟನೆಗಳೂ ಇವೆ. ಆದರೆ ಅದೇ ವ್ಯಂಗ್ಯ ಇಂದು ಅವರಿಗೆ ಪ್ರೇರಣೆಯಾಗಿದೆ. ಪತ್ನಿಯ ಸಂಪೂರ್ಣ ಸಹಕಾರ ಹಾಗೂ ತಮ್ಮ ಅಚಲ ಪರಿಶ್ರಮದಿಂದ ರಾಮಣ್ಣ ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದು, ಸಮಾಜವೂ ಅವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.