ಕೊಪ್ಪಳ, ಅಕ್ಟೋಬರ್ 31: ಕರ್ನಾಟಕದಲ್ಲಿ ವಕ್ಫ್ (Waqf) ಆಸ್ತಿ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ವಕ್ಫ್ ವಿವಾದ ಕೊಪ್ಪಳ (Koppal) ಜಿಲ್ಲೆಗೂ ಕಾಲಿಟ್ಟಿದೆ. ಕೊಪ್ಪಳ ಜಿಲ್ಲೆಯ ರೈತರ (Farmers) ಮತ್ತು ಸರ್ಕಾರ ಕಚೇರಿಯ ಜಾಗದ ಪಹಣಿಯಲ್ಲಿ ವಕ್ಫ್ ಬೋರ್ಡ್ ಎಂದು ನಮೂದಾಗಿದೆ. ಕುಕನೂರು ಪಟ್ಟಣದಲ್ಲಿರುವ ಪಟ್ಟಣ ಪಂಚಾಯತ್ ಕಚೇರಿಯ 13 ಗುಂಟೆ ಜಾಗ ವಕ್ಫ್ಗೆ ಸೇರಿದೆ ಅಂತ ಪಹಣಿಯಲ್ಲಿ ನಮೂದಾಗಿದೆ.
ಕೊಪ್ಪಳ ವಿಭಾಗಾಧಿಕಾರಿ ಆದೇಶ ಅನ್ವಯ ಕುಕನೂರ ಉಪ ತಹಶಿಲ್ದಾರ್ 2019ರಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಹೆಸರಿನಲ್ಲಿರುವ ಸರ್ವೇ ನಂಬರ್ 54ರ 13 ಗುಂಟೆ ಜಾಗದ ಪಹಣಿಯಲ್ಲಿ ವಕ್ಫ್ ಬೋರ್ಡ್ ನಮೂದಿಸಿದ್ದಾರೆ.
ಕೊಪ್ಪಳ ತಾಲೂಕಿನ ಕವಲೂರು, ಹೂವಿನಾಳ ಕುಕನೂರು, ಯಲಬುರ್ಗಾ ತಾಲೂಕಿನ ಹಲವು ರೈತರ ಜಮೀನು ಪಹಣಿಯ ಕಾಲಂ 11ರಲ್ಲಿ ವಕ್ಫ್ ಬೋರ್ಡ್ ಅಂತ ಹೆಸರು ನಮೂದಾಗಿದೆ. ಅನೇಕ ರೈತರಿಗೆ ನೋಟಿಸ್ ನೀಡದೆ 2021ರಲ್ಲಿ ಪಹಣಿಯಲ್ಲಿ ವಕ್ಫ್ ಬೋರ್ಡ್ ಅಂತ ನಮೂದಾಗಿದೆ. ವಕ್ಫ್ ಬೋರ್ಡ್ 2023ರಲ್ಲಿ ಅನೇಕ ರೈತರಿಗೆ ನೋಟಿಸ್ ನೀಡಿದೆ. ತಮ್ಮ ಮೂಲ ದಾಖಲೆಗಳನ್ನು ಹಾಜರುಪಡಿಸುವಂತೆ ಹೇಳಿದೆ.
ವಕ್ಫ್ ವಿವಾದ ಹೆಚ್ಚಾಗುತ್ತಿದ್ದಂತೆ ರೈತರು ತಮ್ಮ ಪಹಣಿ ಪರಿಶೀಲಿಸಿದಾಗ ವಿಚಾರ ಬೆಳಕಿಗೆ ಬಂದಿದೆ. ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಉಲ್ಲೇಖಿಸಿದ್ದನ್ನು ಕಂಡು ರೈತರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: ರೈತರನ್ನು ಟೆಂಟ್ನಲ್ಲಿ ಕೂರಿಸಿದವರನ್ನು ಜೈಲಿನಲ್ಲಿ ಕೂರಿಸೋಣ ಎಂದ ಜೋಶಿ
ರೈತರ ಭೂಮಿ ವಕ್ಫ್ಗೆ ಸೇರಿಸಿದ್ದಾರೆಂಬುದು ಸುಳ್ಳು, ಅರೆಬರೆ ಸುದ್ದಿ. ಹಿಂದಿನ ಬಿಜೆಪಿ ಅವಧಿಯಲ್ಲಿ ವಕ್ಫ್ ವಿಚಾರದಲ್ಲಿ ನೋಟಿಸ್ ನೀಡಲಾಗಿದೆ. ರೈತರ ಜಮೀನುಗಳನ್ನು ವಕ್ಫ್ ಬೋರ್ಡ್ ಕಿತ್ತುಕೊಳ್ಳಲು ಸಾಧ್ಯವಿಲ್ಲ. ವಕ್ಫ್ ಆಸ್ತಿ ಬಗ್ಗೆ ಇರುವ ಗೊಂದಲವನ್ನು ನಿವಾರಣೆ ಮಾಡುತ್ತೇವೆ. ದಾನ ಮಾಡಿರುವ ಭೂಮಿ ವಕ್ಫ್ ಬೋರ್ಡ್ಗೆ ಸೇರಿರುತ್ತೆ. ಕೆಲವು ಧಾರ್ಮಿಕ ಕೇಂದ್ರಗಳು ಸಹ ವಕ್ಫ್ ಆಸ್ತಿಗೆ ಸೇರಿಕೊಳ್ಳುತ್ತವೆ. ಈ ಸಂಬಂಧ ಈಗಾಗಲೇ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಈ ವಿಚಾರದಲ್ಲಿ ಬಿಜೆಪಿಯವರು ಮುಸ್ಲಿಮರ ಹೆಸರನ್ನು ತಂದಿದ್ದಾರೆ. ಹಿಂದೂ, ಮುಸ್ಲಿಮರ ನಡುವೆ ದ್ವೇಷ ಮೂಡಿಸುವುದೇ ಬಿಜೆಪಿ ಉದ್ದೇಶ. ಕಾಂಗ್ರೆಸ್ ದೇಶ ಮತ್ತು ರಾಜ್ಯದಲ್ಲಿ ಭೂಸುಧಾರಣೆ ಕಾಯ್ದೆ ಜಾರಿ ಮಾಡಿದೆ. ಹಿಂದೆ ಕಾಂಗ್ರೆಸ್ ಸರ್ಕಾರ ರೈತರಿಗೆ ಜಮೀನ್ದಾರರಿಂದ ಭೂಮಿ ಕೊಡಿಸಿದೆ. ಯಾರು ಕೂಡ ರಾಜ್ಯದ ರೈತರಿಗೆ ಮೋಸ ಮಾಡಲು ಸಾಧ್ಯವಿಲ್ಲ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:32 am, Thu, 31 October 24