
ಕೊಪ್ಪಳ, ಡಿಸೆಂಬರ್ 26: ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತ (Anjanadri Betta). ಅದು ಹನುಮ ಹುಟ್ಟಿದ ಸ್ಥಳ. ಈ ಕ್ಷೇತ್ರಕ್ಕೆ ದೇಶ-ವಿದೇಶದಿಂದ ಭಕ್ತರು ಬರುತ್ತಾರೆ. 575 ಮೆಟ್ಟಿಲೇರಿ ಹನುಮನ ದರ್ಶನ ಪಡೆದು ಪುನೀತರಾಗುತ್ತಾರೆ. ಇದೇ ಹನುಮ ಹುಟ್ಟಿದ ನಾಡು ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಸ್ವಾಮೀಜಿಗಳಿಬ್ಬರು ಗರ್ಭಗುಡಿಯಲ್ಲಿಯೇ ಜಗಳ ಮಾಡಿಕೊಂಡಿದ್ದಾರೆ. ಖಾವಿಧಾರಿಗಳು ಬಾಯಲ್ಲಿ ಕೀಳುಮಟ್ಟದ ಪದ ಪ್ರಯೋಗವಾಗಿದೆ. ಸದ್ಯ ಪ್ರಕರಣ ಗಂಭೀರವಾಗಿದ್ದು, ಎರಡು ದಿನದ ಅವಧಿಯಲ್ಲಿ ಮೂರು ಕೇಸ್ ದಾಖಲಾಗಿವೆ.
ಈ ಅಂಜನಾದ್ರಿ ಪರ್ವತದಲ್ಲಿ ಹನುಮ ಹುಟ್ಟಿದ ಎನ್ನುವ ಪ್ರತೀತಿ ಇದೆ. ಇದೇ ಅಂಜನಾದ್ರಿ ಕಳೆದ ನಾಲ್ಕು ದಿನಗಳಿಂದ ಸಾಕಷ್ಟು ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಸ್ವಾಮೀಜಿಗಳಿಬ್ಬರ ನಡುವಿನ ಗಲಾಟೆ. ಕಳೆದ ನಾಲ್ಕು ದಿನಗಳ ಹಿಂದೆ ಹನುನ ಹುಟ್ಟಿದ ಜಾಗದಲ್ಲಿ ಅರ್ಚಕ ಮಾಹಂತ ವಿದ್ಯಾದಾಸ್ ಬಾಬಾ ಹಾಗೂ ಹಂಪಿಯ ಗೋವಿಂದಾನಂದ ಸರಸ್ವತಿ ಮಧ್ಯೆ ಪೂಜಾ ವಿಚಾರಕ್ಕೆ ಗಲಾಟೆಯಾಗಿತ್ತು. ಮಾತಿಗೆ ಮಾತು ಬೆಳದಿತ್ತು. ಒಂದು ಹಂತಕ್ಕೆ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು.
ಇದನ್ನೂ ಓದಿ: ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಯಾವಾಗ ಅಂಜನಾದ್ರಿಯಲ್ಲಿ ಗಲಾಟೆಯಾಯಿತೋ ಗೋವಿಂದಾನಂದ ಸರಸ್ವತಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ವಿದ್ಯಾದಾಸ್ ಬಾಬಾ ಸೇರಿ 10 ಜನರ ವಿರುದ್ದ ದೂರು ನೀಡಿದ್ದರು. ಇತ್ತ ವಿದ್ಯಾದಾಸ್ ಬಾಬಾ ಕೂಡ ಆನಲೈನ್ನಲ್ಲಿ ದೂರು ದಾಖಲಿಸಿದ್ದರು. ಆದರೆ ಅದು ಅಧಿಕೃತವಾಗಿಲ್ಲ, ಈ ಮಧ್ಯೆ ಮರುದಿನ ಮತ್ತೆ ಪಂಚನಾಮೆಗೆ ಬಂದಾಗ ವಿದ್ಯಾದಾಸ್ ಬಾಬಾ ಬೆಂಬಲಿಗರು, ಗೋವಿಂದಾನಂದ ಸರಸ್ವತಿ ಮೇಲೆ ಹಲ್ಲೆ ಮಾಡಿದ್ದಾರೆ. ತಲೆಗೆ ಹೊಡೆದು ಕಬ್ಬಿಣದ ಪೈಪ್ನಿಂದ ಹಲ್ಲೆಗೆ ಮುಂದಾಗಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಗಂಗಾವತಿ ಗ್ರಾಮೀಣ ಪೊಲೀಸರು ಹಲ್ಲೆಗೆ ಮುಂದಾಗಿದ್ದ ಐವರನ್ನು ಅರೆಸ್ಟ್ ಮಾಡಿದ್ದಾರೆ. ವಿದ್ಯಾದಾಸ್ ಬಾಬಾ ವಿರುದ್ದ ಗೋವಿಂದಾನಂದ ಸರಸ್ವತಿ ಗ್ರಾಮೀಣ ಠಾಣೆಯಲ್ಲಿ ಮತ್ತೊಂದು ದೂರು ದಾಖಲು ಮಾಡಿದ್ದಾರೆ.
ಇನ್ನು ಪಂಚನಾಮೆಗೆ ಹೋದ ಸಂದರ್ಭದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿದ ಆರೋಪದಡಿ ಪೊಲೀಸರು ವಿದ್ಯಾದಾಸ್ ಬಾಬಾ ವಿರುದ್ದ ಸ್ವಯಂ ಪ್ರೇರಿತ ದೂರು ದಾಖಲು ಮಾಡಿದ್ದಾರೆ. ಎರಡು ದಿನದ ಅವಧಿಯಲ್ಲಿ ಒಟ್ಟು ಮೂರು ಕೇಸ್ ದಾಖಲಾಗಿವೆ. ಅರ್ಚಕ ವಿದ್ಯಾದಾಸ್ ಬಾಬಾ ವಿರುದ್ಧ ಮೂರು ಕೇಸ್ ದಾಖಲಾಗಿವೆ.
ಇನ್ನು ಅರ್ಚಕ ಮಹಾಂತ ವಿದ್ಯಾದಾಸ್ ಬಾಬಾ ವಿರುದ್ದ ಎರಡು ದಿನದ ಅವಧಿಯಲ್ಲಿ ಮೂರು ಕೇಸ್ ದಾಖಲಾಗಿದ್ದು, ಪೊಲೀಸರ ನಡೆ ಮೇಲೆ ಅನುಮಾನ ಮೂಡಿದೆ. ಇದುವರೆಗೂ ಅರ್ಚಕ ವಿದ್ಯಾದಾಸ್ ಬಾಬಾ ನೀಡಿದ ದೂರು ದಾಖಲಾಗಿಲ್ಲ, ಆದರೆ ಅಂದು ಗೋವಿಂದಾನಂದ ಸರಸ್ವತಿ ನೀಡಿದ ದೂರು ದಾಖಲಾಗಿದೆ. ಹೀಗಾಗಿ ಈ ಪ್ರಕರಣದ ಹಿಂದೆ ಏನೋ ಇದೆ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಇನ್ನು ಅದಕ್ಕೆ ಕೋರ್ಟ್ ಕೇಸ್ವೊಂದು ಕಾರಣವಾಯಿತಾ ಎನ್ನುವ ಅನುಮಾನವು ವ್ಯಕ್ತವಾಗುತ್ತಿದೆ.
ಕಳೆದ 2018ರಿಂದ ಅರ್ಚಕ ವಿಚಾರವಾಗಿ ಜಿಲ್ಲಾಡಳಿತ ಹಾಗೂ ವಿದ್ಯಾದಾಸ್ ಬಾಬಾ ನಡುವೆ ವ್ಯಾಜ್ಯ ಇದೆ. ಧಾರವಾಡ ಹೈಕೋರ್ಟ್ನಲ್ಲಿ ಕೇಸ್ ನಡೆಯುತ್ತಿದೆ. ಇದೀಗ ಆ ಕೇಸ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅಂಜನಾದ್ರಿಯಲ್ಲಿ ಯಾರು ಪೂಜೆ ಮಾಡಬೇಕು ಎನ್ನುವುದು ಇತ್ಯರ್ಥವಾಗಲಿದೆ. ಆದರೆ, ಮುಂಚೆ ಈ ಘಟನೆಗಳು ನಡೆದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಬೇಕು ಅಂತಲೇ ಕಾಣದ ಕೈಗಳು ವಿವಾದ ಸೃಷ್ಟಿ ಮಾಡತಿದೆಯಾ ಅನ್ನೋ ಅನುಮಾನ ಇದೆ. ಇದೇ ಗೋಂವಿದಾನಂದ ಸರಸ್ವತಿ ಕಿಷ್ಕಿಂಧಾ ಪ್ರದೇಶದಲ್ಲಿ ಬೃಹತ್ ಆಂಜನೇಯನ ಮೂರ್ತಿ ಸ್ಥಾಪನೆ ಮಾಡುವುದಾಗಿ ಹೇಳಿಕೊಂಡು ಓಡಾಡಿದ್ದಾರೆ. ಇಷ್ಟು ದಿನ ಬರಲಾರದ ಗೋವಿಂದಾನಂದ ಸರಸ್ವತಿ ಶ್ರೀ ದಿಢೀರ್ ಪ್ರತ್ಯಕ್ಷವಾಗಿದ್ದು ಏಕೆ ಅನ್ನೋ ಅನುಮಾನ ಹುಟ್ಟಿಕೊಂಡಿದೆ.
ಇದನ್ನೂ ಓದಿ: Koppal: ಹನುಮಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಅಣಿಯಾದ ಅಂಜನಾದ್ರಿ; ಸಿದ್ಧತೆ ಹೇಗಿದೆ?
ಒಟ್ಟಾರೆ ಅಂಜನಾದ್ರಿಯಲ್ಲಿ ತೀರ್ಪು ಬರುವ ಕೆಲವೇ ದಿನಗಳ ಮುಂಚೆ ವಿವಾದ ಸೃಷ್ಟಿಯಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ಇದುವರೆಗೂ ಅಂಜನಾದ್ರಿ ವಿಚಾರವಾಗಿ ಯಾವುದೇ ಮಾಹಿತಿ ನೀಡಿಲ್ಲ. ಮೂರು ಕೇಸ್ ದಾಖಲಾದ ಹಿನ್ನಲೆ ಅರ್ಚಕ ವಿದ್ಯಾದಾಸ್ ಬಾಬಾ ಸದ್ಯ ಅಂಜನಾದ್ರಿಯನ್ನು ತೊರೆದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:02 pm, Fri, 26 December 25