ಸಾಮಾಜಿಕ ಜಾಗೃತಿ ಮೂಡಿಸುವ ಕೊಪ್ಪಳ ಗವಿಮಠ ಜಾತ್ರೆಯ ದಿನಾಂಕ​ ಫಿಕ್ಸ್​​: ಈ ಬಾರಿ ವೈಶಿಷ್ಟ್ಯ ಏನು? ಇಲ್ಲಿದೆ ಮಾಹಿತಿ

| Updated By: ವಿವೇಕ ಬಿರಾದಾರ

Updated on: Jan 11, 2025 | 12:32 PM

ಕೊಪ್ಪಳದ ಗವಿಮಠದ ಜಾತ್ರೆ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ, ಸಾಮಾಜಿಕ ಜಾಗೃತಿಯ ಮಹತ್ವದ ವೇದಿಕೆಯಾಗಿದೆ. ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ, ಪ್ರತಿವರ್ಷ ವಿಭಿನ್ನ ಸಾಮಾಜಿಕ ಸಮಸ್ಯೆಗಳ ಕುರಿತು ಜಾಗೃತಿ ಜಾಥಾ ನಡೆಯುತ್ತದೆ. ಈ ವರ್ಷ "ಸಕಲಚೇತನ" ಅಭಿಯಾನದ ಮೂಲಕ ವಿಕಲಚೇತನರ ಕಲ್ಯಾಣಕ್ಕೆ ಒತ್ತು ನೀಡಲಾಗುತ್ತಿದೆ. ಉಚಿತ ಶ್ರವಣ ಸಾಧನ ವಿತರಣೆಯಂತಹ ಉಪಕ್ರಮಗಳು ಜಾತ್ರೆಯ ವಿಶೇಷತೆಯನ್ನು ಹೆಚ್ಚಿಸಿವೆ.

ಸಾಮಾಜಿಕ ಜಾಗೃತಿ ಮೂಡಿಸುವ ಕೊಪ್ಪಳ ಗವಿಮಠ ಜಾತ್ರೆಯ ದಿನಾಂಕ​ ಫಿಕ್ಸ್​​: ಈ ಬಾರಿ ವೈಶಿಷ್ಟ್ಯ ಏನು? ಇಲ್ಲಿದೆ ಮಾಹಿತಿ
ಕೊಪ್ಪಳ ಗವಿಸಿದ್ದೇಶ್ವರ​ ಜಾತ್ರೆ
Follow us on

ಕೊಪ್ಪಳ, ಜನವರಿ 11: ರಾಜ್ಯದ ಅನೇಕ ವಿವಿಧೆಡೆ ಪ್ರತಿನಿತ್ಯ ಹತ್ತಾರು ಕಡೆ ಜಾತ್ರೆಗಳು ನಡೆಯುತ್ತವೆ. ದೇವರ ದರ್ಶನ, ರಥೋತ್ಸವ, ಮನರಂಜನೆ ಕಾರ್ಯಕ್ರಮಗಳಲ್ಲಿ ಬಾಗಿಯಾಗಿ ಲಕ್ಷಾಂತರ ಜನರು ಸಂತಸ ಪಡುತ್ತಾರೆ. ಆದರೆ, ಜಾತ್ರೆಯನ್ನು ಜಾಗೃತಿ ಮೂಡಿಸಲು ಬಳಸಿಕೊಂಡು, ಅರ್ಥಪೂರ್ಣವಾದ ಜಾತ್ರೆಯನ್ನು ಮಾಡುವದು ಕೊಪ್ಪಳದ (Koppal) ಸುಪ್ರಸಿದ್ದ ಗವಿಸಿದ್ದೇಶ್ವರ ಮಠ (Gavisiddeshwara Math). ಕೊಪ್ಪಳ ಗವಿಮಠದ ಜಾತ್ರೆ (Koppal Gavisiddeshwara Math Jatre) ಕೇವಲ ಜನಸ್ತಮೂಹ, ರುಚಿಕಟ್ಟಾದ ಊಟಕ್ಕೆ ಮಾತ್ರ ಹೆಸರುವಾಸಿಯಾಗಿಲ್ಲ, ಸಾಮಾಜಿಕ ಕಳಕಳಿಯಿಂದ ಕೂಡ ಹೆಸರಾಗಿದೆ.

ಪ್ರತಿವರ್ಷ ನಡೆಯುವ ಕೊಪ್ಪಳದ ಸುಪ್ರಸಿದ್ದ ಗವಿಸಿದ್ದೇಶ್ವರ ಮಠದ ಜಾತ್ರೆಯನ್ನು, ದಕ್ಷಿಣ ಭಾರತದ ಕುಂಬಮೇಳ ಅಂತಲೇ ಕರೆಯುತ್ತಾರೆ. ಈ ವರ್ಷ ಜನವರಿ 15 ರಂದು ಗವಿಮಠದ ರಥೋತ್ಸವ ನಡೆಯುತ್ತದೆ. ಜನವರಿ 12 ರಿಂದ ಮಠದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗುತ್ತವೆ.

ನಾಡಿನ ಅನೇಕ ಕಡೆಯಿಂದ ಬರುವ ಭಕ್ತರು ಗವಿಸಿದ್ದೇಶ್ವರ ಮಠದ ಜಾತ್ರೆಯನ್ನು ಕಣ್ತುಂಬಿಕೊಂಡು, ಕೃತಾರ್ಥರಾಗುತ್ತಾರೆ. ಆದರೆ, ಕೇವಲ ಜಾತ್ರೆ ಮಾಡಿ, ರಥ ಎಳೆದು, ಕಾರ್ಯಕ್ರಮಗಳನ್ನು ಆಯೋಜಿಸಿದರೆ ಸಾಲದು, ಜಾತ್ರೆಗಳ ಮುಖಾಂತರ ಅರಿವನ್ನು ಮೂಡಿಸುವ ಮತ್ತು ಸಾಮಾಜಿಕ ಕಳಕಳಿಯನ್ನು ಸಾರುವ ಕೆಲಸವಾಗಬೇಕು ಎಂಬುವುದು ಕೊಪ್ಪಳ ಗವಿಮಠದದ ಪೀಠಾಧಿಪತಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರ (Abhinava Gavisiddeshwara Swamiji) ಕಳಕಳಿಯಾಗಿದೆ. ಹೀಗಾಗಿ ಕಳೆದ ಒಂದು ದಶಕದಿಂದ ಜಾತ್ರೆ ಜೊತೆಗೆ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ. ನಾಡಿನ ಜ್ವಲಂತ ಸಮಸ್ಯೆಗಳ ಪೈಕಿ, ಪ್ರತಿವರ್ಷ ಒಂದೊಂದು ಸಮಸ್ಯೆಗಳನ್ನು ಎತ್ತಿಕೊಂಡು, ಅವುಗಳ ನಿವಾರಣೆಗಾಗಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸುವುದು ಮಠದ ಸಂಪ್ರದಾಯವಾಗಿ ಬೆಳೆದುಕೊಂಡು ಬರುತ್ತಿದೆ.

ಇಂದು (ಜನವರಿ 11) ಮಠದವತಿಯಿಂದ ಜಾಗೃತಿ ಜಾಥಾ ಕಾರ್ಯಕ್ರಮ ನಡೆಸಲಾಯಿತು. ಈ ವರ್ಷ ಸಕಲಚೇತನ ಎಂಬ ಶಿರ್ಷಿಕೆಯಡಿ, ವಿಕಲಚೇತನರ ನಡೆ ಸಕಲಚೇತನದ ಕಡೆ ಎಂಬ ಘೋಷವಾಕ್ಯದೊಂದಿಗೆ ಜಾತ್ರೆ ಹಮ್ಮಿಕೊಂಡಿದ್ದು ವಿಶೇಷವಾಗಿದೆ. ಈ ಜಾಗೃತಿ ಜಾಥಾಕ್ಕೆ ಕೊಪ್ಪಳ ನಗರದ ತಾಲೂಕು ಕ್ರೀಂಡಾಗಣದಲ್ಲಿ ಚಾಲನೆ ನೀಡಲಾಯಿತು. ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ, ಅಧಿಕಾರಿಗಳು, ಜನಪ್ರತಿನಿಧಿಗಳು ಜಾಥಾಕ್ಕೆ ಚಾಲನೆ ನೀಡಿದರು. ನಗರದ ಅನೇಕ ಶಾಲೆಯ ಸಾವಿರಾರು ವಿದ್ಯಾರ್ಥಿಗಳು ಜಾಗೃತಿ ಜಾಥಾದಲ್ಲಿ ಬಾಗಿಯಾಗಿ, ತಾಲೂಕು ಕ್ರೀಡಾಗಂಣದಿಂದ ಮಠದವರಗೆ ನಡೆದ ಜಾಥಾದಲ್ಲಿ ಬಾಗಿಯಾಗಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ಭಕ್ತಾದಿಗಳಿಂದ ತುಂಬಿ ತುಳುಕಿದ ಅಂಜನಾದ್ರಿ ಬೆಟ್ಟ: ಹನುಮ ಮಾಲೆ ವಿಸರ್ಜನೆ

ಏನಿದು ಸಕಲಚೇತನ?

ಈ ವರ್ಷ ಜಾತ್ರೆಯ ಜಾಥಾ ವಿಶೇಷ ಸಕಲಚೇತನ. ಅಂದರೇ ಕೃತಕ ಅಂಗಾಗ ಜೋಡಣೆಯ ಸಂಕಲ್ಪದ ಅಭಿಯಾನವಾಗಿದೆ. ಪೋಲಿಯೋ, ರಸ್ತೆ ಅಪಘಾತ, ಆಕಸ್ಮಿಕ ಘಟನೆಗಳಲ್ಲಿ ಅನೇಕರು ಕೈ, ಕಾಲು ಕಳೆದುಕೊಂಡು ಅಂಗವೈಕಲ್ಯದಿಂದ ಬಳಲುತ್ತಾರೆ. ಅನೇಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೃತಕ ಅಂಗಾಗಗಳನ್ನು ಹಾಕಿಸಿಕೊಳ್ಳಲು ಸಂಕಷ್ಟ ಪಡುತ್ತಾರೆ. ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳಲು ಪರದಾಡುತ್ತಾರೆ. ಇಂತಹವರಿಗೆ ಆಸರೆಯಾಗಲು ಈ ಅಭಿಯಾನವನ್ನು ಮಠದವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಕೃತಕ ಕೈ-ಕಾಲು ಅವಶ್ಯಕತೆ ಇರುವ ಎಲ್ಲರಿಗೂ ಈ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಆ ಮೂಲಕ ಅವರಿಗೆ ಸ್ವಾವಲಂಬಿ ಜೀವನಕ್ಕೆ ಉರುಗೋಲಾಗಲು ಗವಿಮಠ ಸಂಕಲ್ಪ ಮಾಡಿದೆ.

ವಿದ್ಯಾರ್ಥಿಗಳಿಗೆ ಉಚಿತ ಶ್ರವಣ ಸಾಧನ ವಿತರಣೆ ಸಂಕಲ್ಪ

ಇನ್ನು ಅನೇಕ ವಿದ್ಯಾರ್ಥಿಗಲು ಶ್ರವಣ ದೋಷವನ್ನು ಹೊಂದಿದ್ದಾರೆ. ಅದು, ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹಿಂದುಳಿಯಲು ಕಾರಣವಾಗುತ್ತಿದೆ. ಇದನ್ನು ಮನಗಂಡಿರುವ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಈ ವರ್ಷ ಜಾತ್ರೆಯ ಅಂಗವಾಗಿ, ಶ್ರವಣ ದೋಷ ಹೊಂದಿರುವ ವಿದ್ಯಾರ್ಥಿಗಳಲ್ಲಿನ ಶ್ರವಣ ದೋಷ ನಿವಾರಣೆ ಮಾಡಿ, ಅವರ ಕಲಿಕಾ ಮಟ್ಟವನ್ನು ಹೆಚ್ಚಿಸಲು ಉಚಿತ ಶ್ರವಣ ಸಾಧನ ವಿತರಿಸುವ ಸಕಲ್ಪ ಮಾಡಿದ್ದಾರೆ. ಶ್ರವಣ ದೋಷ ಹೊಂದಿರುವ ಎಷ್ಟೇ ವಿದ್ಯಾರ್ಥಿಗಳಿದ್ದರೂ, ಅವರನ್ನು ಗುರುತಿಸಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕೊಪ್ಪಳ ಜಿಲ್ಲಾ ಶಾಖೆಯ ಸಹಯೋಗದೊಂದಿಗೆ, ಉಚಿತ ಶ್ರವಣ ಸಾಧನ ವಿತರಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಜಾತ್ರೆಯಲ್ಲಿ ಜಾಗೃತಿ ಜಾಥಾಗಳೇಕೆ? ಏನು ಸ್ವಾಮೀಜಿಯವರ ಉದ್ದೇಶ

15 ದಿನಗಳ ಕಾಲ ನಡೆಯುವ ಕೊಪ್ಪಳದ ಗವಿಮಠದ ಜಾತ್ರೆಗೆ, ಲಕ್ಷ ಲಕ್ಷ ಜನ ಬರುತ್ತಾರೆ. ಜಾತ್ರೆಗೆ ಬಂದವರು ಭಕ್ತಿ ಜೊತೆ ಅನುಭಾನ, ಜಾಗೃತಿಯನ್ನು ಕೂಡ ತಗೆದುಕೊಂಡು ಮನೆಗೆ ಹೋಗಲಿ ಎಂಬುವುದು ಮಠದ ಉದ್ದೇಶವಾಗಿದೆ. ಹೀಗಾಗಿ 2015 ರಿಂದ ಮಠದ ಜಾತ್ರೆಯಲ್ಲಿ ಪ್ರತಿವರ್ಷ ಒಂದೊಂದು ಪ್ರಮುಖ ವಿಷಯಗಳ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗುತ್ತಿದೆ. 2015 ರಲ್ಲಿ ಮಠದಿಂದ ಮಹಾರಕ್ತದಾನ ಜಾಗೃತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. 2015 ರಿಂದ 2022ರವರಗೆ ನಡೆದ ರಕ್ತದಾನ ಶಿಭಿರದಲ್ಲಿ ಒಟ್ಟು 5050 ಯುನಿಟ್ ರಕ್ತ ಸಂಗ್ರಹವಾಗಿತ್ತು.

2016 ರಲ್ಲಿ ಬಾಲ್ಯ ವಿವಾಹ ತಡೆ ಜಾಗೃತಿ ನಡೆ, 2017 ರಲ್ಲಿ ಜಲ ಸಂರಕ್ಷಣೆ ಜಾಗೃತಿ ಅಭಿಯಾನ, ಜಲದೀಕ್ಷೆ ಕಾರ್ಯಕ್ರಮ, 2018 ರಲ್ಲಿ ಸಶಕ್ತಮನ-ಸಂತೃಪ್ತ ಜೀವನ, 2019ರಲ್ಲಿ ಕೃಪಾದೃಷ್ಟಿ, 2020 ರಲ್ಲಿ ಲಕ್ಷ ವೃಕ್ಷೋತ್ಸವ, 2021-22ರಲ್ಲಿ ಕೊರೊನಾದಿಂದ ಜಾತ್ರೆ ಸರಳವಾಗಿ ನಡೆದಿತ್ತು. ಹೀಗಾಗಿ ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ದಿ ಮಾಡುವುದು, ಕೆರೆ ಅಭಿವೃದ್ಧ ಕಾರ್ಯಕ್ರಮ, ಕ್ಯಾನ್ಸರ್ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 2023ರಲ್ಲಿ ಅಂಗಾಗ ದಾನ ಜಾಗೃತಿ ಜಾಥಾ ನಡೆದರೇ, 2024ರಲ್ಲಿ ಕಾಯಕದೇವೋಭವ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನಾಡಿನ ಅನೇಕ ಕಡೆಯಿಂದ ಬಂದಿದ್ದ ಅನೇಕರು, ಸ್ವಯಂ ಉದ್ಯೋಗವನ್ನು ಮಾಡಿ, ತಾವು ಹೇಗೆ ಜೀವನದಲ್ಲಿ ಯಶಸ್ಸು ಹೊಂದಿದರು ಎಂಬುವುದನ್ನು ತೋರಿಸುವ ಕೆಲಸ ಮಾಡಲಾಯಿತು. ಕಳೆದ ವರ್ಷ ಜಾತ್ರೆಯ ಅಂಗವಾಗಿ ವಿಶೇಷ ಚೇತನರಿಗೆ ಉಚಿತ ಸಾಮೂಹಿಕ ಮದುವೆ ಕೂಡಾ ಮಾಡಿಸಲಾಗಿತ್ತು.

ಜಾತ್ರೆಗೆ ಬರುವ ಭಕ್ತರು, ಸಂತಸದ ಜೊತೆಗೆ ಜೀವನ ಸಾರವನ್ನು ತಿಳಿಯುವ, ಕಲಿಯುವ, ಸಮಾಜಿಕ ಸಮಸ್ಯೆಗಳಿಗೆ ಸ್ಪಂಧಿಸುವ ಗುಣವನ್ನು ಕಲಿಯುವಂತಾಗಲಿ. ಜೊತೆಗೆ ತೊಂದರೆಯಲ್ಲಿರುವವರಿಗೆ ಸಹಾಯ ಮಾಡಿ, ಅವರು ನೆಮ್ಮದಿಯ ಜೀವನ ಕಟ್ಟಿಕೊಳ್ಳಲಿ ಎಂಬ ಉದ್ದೇಶದಿಂದ ಅಭಿವನ ಗವಿಸಿದ್ದೇಶ್ವರ ಸ್ವಾಮೀಜಿ, ಪ್ರತಿವರ್ಷ ಜಾಗೃತಿ ಕಾರ್ಯಕ್ರಮವನ್ನು ವೃಥವನ್ನಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ