- Kannada News Photo gallery Thousands Witness Hanuman Mala Visarjana at Anjanadri Hill at Kopala, Karnataka news in kannada
ಭಕ್ತಾದಿಗಳಿಂದ ತುಂಬಿ ತುಳುಕಿದ ಅಂಜನಾದ್ರಿ ಬೆಟ್ಟ: ಹನುಮ ಮಾಲೆ ವಿಸರ್ಜನೆ
ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲೆ ವಿಸರ್ಜನೆ ಸಮಾರಂಭದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಹನುಮನ ಆರಾಧನೆಯ ಭಕ್ತಿಯನ್ನು ಪ್ರದರ್ಶಿಸಿದ ಈ ಕಾರ್ಯಕ್ರಮವು ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಯಿತು. ಭಕ್ತರು ಆಂಜನೇಯ ದೇವರ ದರ್ಶನ ಪಡೆದು ತಮ್ಮ ಮಾಲೆಗಳನ್ನು ವಿಸರ್ಜಿಸಿದರು. ಜಿಲ್ಲಾಡಳಿತವು ಉತ್ತಮ ವ್ಯವಸ್ಥೆ ಕಲ್ಪಿಸಿತ್ತು.
Updated on: Dec 13, 2024 | 7:24 PM

ಅಂಜನಾದ್ರಿ, ರಾಮನ ಭಂಟ ಹನುಮನ ಜನ್ಮಸ್ಥಳ ಅಂತಲೇ ಪ್ರಸಿದ್ದಿಯಾಗಿದೆ. ಹನುಮ ಮಾಲೆ ಧರಿಸಿ, ವೃತ ಆಚರಿಸಿದ್ರೆ ಇಷ್ಟಾರ್ಥ ಸಿದ್ದಿಯಾಗುತ್ತವೆ ಅನ್ನೋ ನಂಬಿಕೆ ಹನುಮ ಭಕ್ತರದಲ್ಲಿದೆ. ಅಂಜನಾದ್ರಿಗೆ ಇಂದು ಹನುಮಮಾಲೆ ವಿಸರ್ಜಿಸಲಿಕ್ಕೆ ದೇಶದ ವಿವಿಧ ಮೂಲೆಗಳಿಂದ ಸಾವಿರಾರು ಹನುಮ ಭಕ್ತರು ಆಗಮಿಸಿದ್ದರು. ಇಡೀ ಅಂಜನಾದ್ರಿ ಇಂದು ಹನುಮ ಭಕ್ತರಿಂದ ತುಂಬಿ ತುಳುಕುತ್ತಿತ್ತು. ಮತ್ತೊಂದಡೆ ನಡೆದ ಸಂಕೀರ್ತನಾ ಯಾತ್ರೆ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟದ ಮೇಲಿರುವ ಆಂಜನೇಯ ದೇವಸ್ಥಾನ, ಹನುಮ ಭಕ್ತರ ಆರಾಧ್ಯ ಕೇಂದ್ರವಾಗಿದೆ. ಪ್ರತಿವರ್ಷ ಹನುಮ ಮಾಲೆ ವಿಸರ್ಜನೆಗೆ ನಾಡಿನ ವಿವಿಧಡೆಯಿಂದ ಸಾವಿರಾರು ಹನುಮ ಭಕ್ತರು ಅಂಜನಾದ್ರಿಗೆ ಬರುತ್ತಾರೆ. ಮಾರ್ಗಶಿರ ಶುದ್ದ ತ್ರಯೋದಶಿಯಂದು ಸಂಕಲ್ಪ ಮಾಡಿ ಮಾಲೆಯನ್ನು ಧರಿಸಿ ವೃತವನ್ನು ಆಚರಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಆಂಜನೇಯನ ಭಕ್ತರಲ್ಲಿದೆ. ಹೀಗಾಗಿ ಅನೇಕ ದಿನಗಳ ಹಿಂದೆಯೇ ಮಾಲೆ ಧರಿಸಿದ್ದ ಸಾವಿರಾರು ಮಾಲಾಧಾರಿಗಳು ಅಂಜನಾದ್ರಿಗೆ ಬಂದು ಆಂಜನೇಯನ ದರ್ಶನ ಪಡೆದು ಮಾಲೆಯನ್ನು ವಿಸರ್ಜನೆ ಮಾಡಿದ್ದಾರೆ.

ನಿನ್ನೆ ಸಂಜೆಯಿಂದಲೇ ಅಂಜನಾದ್ರಿಗೆ ಬರುತ್ತಿರುವ ಮಾಲಾಧಾರಿಗಳು, ಮಧ್ಯರಾತ್ರಿಯಿಂದಲೇ ಬೆಟ್ಟವನ್ನು ಹತ್ತಿ ಆಂಜನೇಯನ ದರ್ಶನ ಪಡೆದರು. ಕರ್ನಾಟಕ ಮಾತ್ರವಲ್ಲ, ದೇಶದ ವಿವಿಧ ಮೂಲೆಗಳಿಂದ ಮಾಲಾಧಾರಿಗಳು ಬಂದಿದ್ದು ವಿಶೇಷವಾಗಿತ್ತು. ಮಾಲೆ ವಿಸರ್ಜನೆಗೆ ಬರುವ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಇನ್ನು ಅಂಜನಾದ್ರಿ ಬೆಟ್ಟದಲ್ಲಿ ಕೆಲ ಮಾಲಾಧಾರಿಗಳು ನಟ ದರ್ಶನ ಭಾವಚಿತ್ರ ಹಿಡಿದು ಬಂದಿದ್ದು ವಿಶೇಷವಾಗಿತ್ತು. ಯಾದಗಿರಿಯಿಂದ ಬಂದಿದ್ದ ರಾಘವೇಂದ್ರ ಎಂಬ ಅಭಿಮಾನ, ದರ್ಶನ್ಗೆ ಒಳ್ಳೆಯದಾಗಲಿ ಅಂತ ಪ್ರಾರ್ಥಿಸಿದ್ದಾಗಿ ಹೇಳಿದ್ದಾರೆ.

ಗಂಗಾವತಿ ಪಟ್ಟಣದಲ್ಲಿ ಹನುಮ ಮಾಲೆ ವಿಸರ್ಜನೆ ಅಂಗನವಾಗಿ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ವತಿಯಿಂದ ಸಂಕೀರ್ತನಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಗಂಗಾವತಿ ನಗರದ ಎಪಿಎಂಸಿಯಿಂದ ಅಂಬೇಡ್ಕರ್ ಸರ್ಕಲ್ ವರಗೆ ನಡೆದ ಸಂಕೀರ್ತನಾ ಯಾತ್ರೆಯಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಸೇರಿದಂತೆ ಸಾವಿರಾರು ಮಾಲಾಧಾರಿಗಳು, ಹನುಮ ಭಕ್ತರು ಭಾಗಿಯಾಗಿದ್ದರು. ಇನ್ನು ಸಂಕೀರ್ತನಾ ಯಾತ್ರೆ ಹಿಂದೂ-ಮುಸ್ಲಿಂ ಭಾವೈಕ್ಯೆತೆಗೆ ಸಾಕ್ಷಿಯಾಗಿತ್ತು. ಹನುಮ ಭಕ್ತರು ಗಾಂಧಿ ವೃತ್ತದ ಬಳಿ ಬರ್ತಿದ್ದಂತೆ ಕೆಲ ಮುಸ್ಲಿಂ ಬಾಂಧವರು, ಪುಷ್ಪವೃಷ್ಟಿ ಮಾಡಿದ್ದಾರೆ.

ಹನುಮನ ಜನ್ಮಸ್ಥಳ ಅಂಜನಾದ್ರಿಗೆ ನಾಡಿನ ಹಲವೆಡೆಯಿಂದ ಬಂದಿದ್ದ ಹನುಮ ಮಾಲಾಧಾರಿಗಳು ಮತ್ತು ಭಕ್ತರು, ಆಂಜನೇಯನ ದರ್ಶನ ಪಡೆದು ಪುನಿತರಾದರು. ಮತ್ತೊಂದಡೆ ಜಿಲ್ಲಾಡಳಿತ ಮತ್ತು ಪೊಲೀಸರು ಅಹಿತಕರ ಘಟನೆಗಳು ನಡೆಯದಂತೆ ಕೈಗೊಂಡ ಕ್ರಮಗಳು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.



















