ಕೊಪ್ಪಳ: ಹಳ್ಳಿ ಅಂದ್ಮೇಲೆ ಕಿರಾಣಿ ಅಂಗ್ಡಿ ಮುಂದೆ ಕೂತು ಹರಟೆ ಹೊಡೆಯೋದು. ಬಾಯ್ತುಂಬ ಗುಟ್ಕಾ ತುಂಬ್ಕೊಂಡು ಪಿಚ ಪಿಚ ಉಗೀತಾ ಮಾತಾಡೋದು. ಎಣ್ಣೆ ಹೊಡ್ಕೊಂಡು ಸಿಕ್ಕ ಸಿಕ್ಕಲ್ಲಿ ಪಾಚ್ಕೊಳ್ಳೋ ದೃಶ್ಯಗಳು ಕಾಮನ್ ಅನ್ಸುತ್ತೆ. ಆದ್ರೆ ಈ ಊರಲ್ಲಿ ಗುಟ್ಕಾನೂ ಇಲ್ಲ, ಎಣ್ಣೆಯೂ ಇಲ್ಲ. ಯಾರು ಕೂಡ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತೇ ಇಲ್ಲ.
ಕೊಪ್ಪಳ ತಾಲೂಕಿನ ಹನುಮಹಳ್ಳಿ ಸುಮಾರು ಎರಡು ಸಾವಿರ ಜನರಿರೋ ಗ್ರಾಮ. ಆದ್ರೆ ನೀವ್ ನಂಬ್ತೀರೋ ಇಲ್ವೋ ಗೊತ್ತಿಲ್ಲ ಈ ಊರಲ್ಲಿ ಇದುವರೆಗೆ ಒಂದೇ ಒಂದು ಎಫ್ಐಆರ್ ದಾಖಲಾಗಿಲ್ಲ. ಸಣ್ಣ ಪುಟ್ಟ ಜಗಳವಾದ್ರೂ ಗ್ರಾಮದ ಹಿರಿಯರೇ ಬಗೆಹರಿಸುತ್ತಾರೆ. ಹೀಗಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತುವ ಪ್ರಸಂಗವೇ ಬಂದಿಲ್ವಂತೆ. ಇನ್ನು ಊರಲ್ಲಿ ಒಂದೇ ಒಂದು ಹೋಟೆಲ್ ಕೂಡ ಇಲ್ಲ. ಮದ್ಯ ಮತ್ತು ಗುಟ್ಕಾ ಮಾರಾಟವನ್ನ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ರಸ್ತೇಲಿ ಯುವಕ ಯುವತಿಯರು ಮೊಬೈಲ್ನಲ್ಲಿ ಕಚ್ಕೊಂಡಿದ್ರೆ ಹಿರಿಯರೇ ಕಿವಿಹಿಂಡಿ ಬುದ್ಧಿ ಹೇಳ್ತಾರೆ.
ಮದ್ಯ ಮಾರಾಟ ನಿಷೇಧ ಮಾಡಿರೋದು ಒಂದ್ಕಡೆಯಾದ್ರೆ. ಗ್ರಾಮಕ್ಕೆ ಯಾರೂ ಕೂಡ ಮದ್ಯಪಾನ ಮಾಡಿ ಬರುವಂತೆಯೂ ಇಲ್ಲ ಅನ್ನೋ ನಿಯಮವಿದೆ. ಒಂದ್ವೇಳೆ ಎಣ್ಣೆ ಮತ್ತಲ್ಲಿ ಊರಿಗೆ ಬಂದ್ರೆ ಅಂಥವರಿಗೆ ದಂಡ ಹಾಕಲಾಗುತ್ತೆ. ಕೆಲವರು ಒಂದು ಸಾವಿರದಿಂದ ಎರಡು ಸಾವಿರದವರೆಗೆ ದಂಡ ಹಾಕಿಸಿಕೊಂಡ ಉದಾಹರಣೆಯೂ ಇದೆ.
ಒಟ್ನಲ್ಲಿ, ರಾಜ್ಯದಲ್ಲಿ ಗುಟ್ಕಾ ಮೇಲಾಗಲಿ, ಮದ್ಯ ಮಾರಾಟದ ಮೇಲಾಗಲಿ ನಿಷೇಧ ಇಲ್ಲ. ಆದ್ರೆ ಕೊಪ್ಪಳದ ಹನುಮಹಳ್ಳಿ ಜನ ತಾವೇ ಕೆಲವೊಂದು ನಿಯಮ ರೂಪಿಸಿಕೊಂಡು ಅವುಗಳಿಂದ ದೂರವಿದ್ದಾರೆ. ಆಧುನಿಕ ಯುಗದಲ್ಲೂ ಇಂಥಾದೊಂದು ಗ್ರಾಮ ಇದೆ ಅಂತ ನಂಬೋಕೆ ಕಷ್ಟವಾದ್ರೂ ಇದು ನಿಜ.