ಶ್ರೀಲಂಕಾದ ಸೀತಾ ದೇವಿ ದೇವಸ್ಥಾನಕ್ಕೆ ಅಂಜನಾದ್ರಿಯಿಂದ ಜಲ, ಮಣ್ಣು, ಸೀರೆ ರವಾನೆ

| Updated By: ವಿವೇಕ ಬಿರಾದಾರ

Updated on: May 13, 2024 | 9:32 AM

ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾದ ಬಳಿಕ ಜಗತ್ತಿನ ವಿವಿಧ ಪ್ರದೇಶಗಳಲ್ಲಿರುವ ರಾಮಾಯಣಕ್ಕೆ ಸಂಬಂಧಿಸಿದ ಕುರುಹುಗಳು ಬೆಳಕಿಗೆ ಬರುತ್ತಿವೆ. ಇದರಲ್ಲಿ ಶ್ರೀಲಂಕಾದಲ್ಲಿರುವ ಸೀತಾ ಮಾತೆಯ ದೇವಲಾಯ ಕೂಡ ಒಂದು. ಸದ್ಯ ಆರ್ಟ್ ​​ಆಫ್​​ ಲಿವಿಂಗ್ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದೆ.

ಕೊಪ್ಪಳ, ಮೇ 13: ಧರ್ಮ ಭೂಮಿ ಅಯೋಧ್ಯೆಯಲ್ಲಿ (Ayodhya) ಭ್ಯವಾದ ಶ್ರೀರಾಮ ಮಂದಿರ (Ram Mandir) ನಿರ್ಮಾಣವಾಗಿದ್ದು, ಇದೇ ವರ್ಷ ಜನವರಿ 22 ರಂದು ದೇವಸ್ಥಾನದಲ್ಲಿ ಬಾಲ ರಾಮನ (Ramlalla) ಪ್ರಾಣ ಪ್ರತಿಷ್ಠಾಪನೆ ನೆರವೇರಿತು. ಇದೀಗ ಶ್ರೀಲಂಕಾದ (Sri Lanka) ಸೀತಾ ಎಲಿಯಾ ಗ್ರಾಮದಲ್ಲಿ ಸೀತಾ ಮಾತೆ ದೇವಾಲಯವಿದ್ದು (Sita Temple), ಆರ್ಟ್ ​ಆಫ್​ ಲಿವಿಂಗ್​ನ ಶ್ರೀ ರವಿಶಂಕರ ಗುರೂಜಿ​​ ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಜೀರ್ಣೋದ್ಧಾರಗೊಂಡ ದೇವಾಲಯ ರವಿವಾರ ಮೇ 19 ರಂದು ಉದ್ಘಾಟನೆಗೊಳ್ಳಲಿದೆ. ಹೀಗಾಗಿ ಈ ದೇವಾಲಯಕ್ಕೆ, ಆಂಜನೇಯನ ಜನ್ಮಸ್ಥಳ ಅಂಜನಾದ್ರಿ (Anjanadri) ಬೆಟ್ಟದಿಂದ ಆಂಜನೇಯನ ಮೂರ್ತಿ, ಜಲ, ಮಣ್ಣು, ಸೀರೆ ಕಳುಹಿಸಲಾಗಿದೆ.

ಸೀತಾ ಮಾತೆ ದೇವಸ್ಥಾನ ಇತಿಹಾಸ

ಶ್ರೀಲಂಕಾದ ನುವಾರಾ ಎಲಿಯಾದಿಂದ ಸ್ವಲ್ಪ ದೂರದಲ್ಲಿರುವ ಸೀತಾ ಎಲಿಯಾ ಗ್ರಾಮದಲ್ಲಿ ಸೀತಾ ದೇವಿ ದೇವಾಸ್ಥಾನವಿದೆ. ಸೀತಾ ದೇವಿ ದೇವಾಲಯವು ಕೇವಲ ಪೂಜಾ ಸ್ಥಳವಲ್ಲ. ಇದು ಲಂಕಾದ ರಾಜ ರಾವಣ ಸೀತಾ ದೇವಿಯನ್ನು ಅಪಹರಿಸಿ, ಇದೇ ಸ್ಥಳದಲ್ಲಿ ಸೆರೆಯಲ್ಲಿಟ್ಟಿದ್ದ ಎಂದು ನಂಬಲಾಗಿದೆ. ಇಲ್ಲಿನ ಜನರ ನಂಬಿಕೆ ಪ್ರಕಾರ ರಾವಣನು ಸೀತಾದೇವಿಯನ್ನು ಅಪಹರಿಸಿ ಅಶೋಕ್ ವಾಟಿಕಾ ಎಂದು ಕರೆಯಲ್ಪಡುವ ಈ ಸ್ಥಳಕ್ಕೆ ಕರೆತಂದನು. ಸೀತಾ ದೇವಿ ಇಲ್ಲಿಯೇ ರಾವಣನ ಸೆರೆಯಲ್ಲಿದ್ದಳು. ತನ್ನನ್ನು ರಕ್ಷಿಸಲು ಪತಿ ಶ್ರೀರಾಮನಗಾಗಿ ಪ್ರಾರ್ಥಿಸುತ್ತಿದ್ದಳು.

ಈ ದೇವಸ್ಥಾನದಲ್ಲಿ ಶ್ರೀರಾಮ, ಸೀತಾ ದೇವಿ, ಲಕ್ಷ್ಮಣ ಮತ್ತು ಹನುಮಂತನ ವಿಗ್ರಹಗಳಿವೆ. ಹನುಮಂತನ ಪಾದದ ಗುರುತುಗಳಿರುವ ಬಂಡೆ ಇದೆ. ಸೀತಾ ದೇವಿ ದೇವಾಲಯವು ಸೀತಾ ನದಿ ಪಕ್ಕದಲ್ಲಿದೆ. ಈ ನದಿಯಲ್ಲಿ ಸೀತಾ ದೇವಿ ಇಂದಿಗೂ ಸ್ನಾನ ಮಾಡುತ್ತಾಳೆ ಮತ್ತು ತನ್ನ ದೈನಂದಿನ ಪ್ರಾರ್ಥನೆಗಳನ್ನು ಸಲ್ಲಿಸುತ್ತಾಳೆ ಎಂದು ನಂಬಲಾಗಿದೆ. ಇದು ಇತಿಹಾಸ ಮತ್ತು ಆಧ್ಯಾತ್ಮಿಕತೆ ಸಮನ್ವಯಗೊಳ್ಳುವ ಸ್ಥಳವಾಗಿದೆ.

ಇದನ್ನೂ ಓದಿ: ಅಂಜನಾದ್ರಿಗೆ ಬರ್ತಿದ್ದೀರಾ? ಹಾಗಾದ್ರೆ ಕ್ಯೂಆರ್ ಕೋಡ್ ಬಳಸಿ ನಾನಾ ಸೌಕರ್ಯದ ಸ್ಥಳಗಳನ್ನು ಸುಲಭವಾಗಿ ಹುಡುಕಿ

ಆದರೆ ಈ ದೇವಾಲಯವು ಸೀತಾ ದೇವಿಗೆ ವಿಶೇಷವಾದ ಸಮರ್ಪಣೆಯಾಗಿದ್ದು, ಜಾಗತಿಕವಾಗಿ ಈ ರೀತಿಯ ಏಕೈಕ ದೇವಾಲಯವಾಗಿದೆ. ಇದು ಭಾರತ ಮತ್ತು ಶ್ರೀಲಂಕಾ ನಡುವಿನ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಬಂಧಗಳನ್ನು ಪ್ರತಿಧ್ವನಿಸುವ, ಶ್ರೀಲಂಕಾದ ಅತ್ಯಂತ ಮಹತ್ವದ ರಾಮಾಯಣ-ಸಂಬಂಧಿತ ತಾಣಗಳಲ್ಲಿ ಒಂದಾಗಿದೆ.

ಅನೇಕ ಭಕ್ತರು ಮತ್ತು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಸೀತಾ ಜಯಂತಿ, ರಾಮನವಮಿ, ಹನುಮಾನ್ ಜಯಂತಿ ಮತ್ತು ರಾಮಾಯಣಕ್ಕೆ ಸಂಬಂಧಿಸಿದ ವಿವಿಧ ಉತ್ಸವಗಳು ಮತ್ತು ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:53 am, Mon, 13 May 24