ಕೊಪ್ಪಳ, ಮೇ 11: ಆ ರೈತರಿಗೆ ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಹೋಗಿದೆ. ಬರಗಾಲದಲ್ಲಿ ನೀರನ್ನು ಅಮೃತದಂತೆ ಕಾಪಾಡಿಕೊಂಡು ರೈತರು ಬಾಳೆ (Banana Farming) ಬೆಳದಿದ್ದರು. ಆದರೆ ಬಿರುಗಾಳಿ ಹೊಡೆತಕ್ಕೆ ಬಾಳೆ ಗಿಡಗಳು ಬಾಗಿದ್ದು, ಹಣ್ಣಾಗುವ ಮೊದಲೇ ಬಾಳೆ ಗೊನೆಗಳು ಹಾಳಾಗಿ ಹೋಗಿವೆ. ಕಳೆದ ಎರಡು ದಿನಗಳಿಂದ ಕೊಪ್ಪಳ (Koppal) ಜಿಲ್ಲೆಯಲ್ಲಿ ಬಾರಿ ಬಿರುಗಾಳಿಗೆ ಲಕ್ಷಾಂತರ ಮೌಲ್ಯದ ಬಾಳೆ ಹಾಳಾಗಿ ಹೋಗಿದೆ. ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ದೊಡ್ಡ ಸಂಕಷ್ಟ ಎದುರಾಗಿದೆ.
ರಾಜ್ಯದಲ್ಲಿ ಬೀಕರ ಬರಗಾಲದಿಂದ ಈ ವರ್ಷ ರೈತರು ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿದರೂ ಕೂಡಾ ಬೆಳೆ ಬಾರದೇ ಇರುವುದರಿಂದ ರೈತರು ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದಾರೆ. ಆದರೆ, ಇಂತಹ ಸಂಕಷ್ಟದ ಸಮಯದಲ್ಲಿ ಕೂಡಾ ಮತ್ತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಕಿಲೋ ಮೀಟರ್ ದೂರಗಟ್ಟಲೆ ಪಂಪಸೆಟ್ಗಳ ಮೂಲಕ ನೀರು ತಂದು ಬಾಳೆ ಬೆಳದಿದ್ದ ರೈತರಿಗೆ ಇದೀಗ ಮತ್ತೆ ಸಂಕಷ್ಟ ಎದುರಾಗಿದೆ. ಕಳೆದ ಎರಡು ದಿನಗಳಿಂದ ಕೊಪ್ಪಳ ಜಿಲ್ಲೆಯ ಡಂಬರಳ್ಳಿ, ಗಂಗಾವತಿ ತಾಲೂಕಿನ ಆನೆಗೊಂದಿ ಸೇರಿದಂತೆ ಹಲವಡೆ ಬಾರಿ ಬಿರುಗಾಳಿ ಬೀಸಿದ್ದು, ಗಾಳಿಗೆ ಬಾಳೆ ಗಿಡಗಳು ನೆಲಕ್ಕುರುಳಿವೆ.
ವಾರದ ಹಿಂದೆ ಬೀಸಿದ್ದ ಬಿರುಗಾಳಿಗೆ ಕೆಲ ಬಾಳೆ ಗಿಡಗಳು ಹಾಳಾಗಿ ಹೋಗಿದ್ದವು. ಆದ್ರೆ ಕಳೆದ ಎರಡು ದಿನಗಳಿಂದ ದೊಡ್ಡ ಮಟ್ಟದ ಬಿರುಗಾಳಿ ಬೀಸಿದ್ದು ಬಹುತೇಕ ಗಿಡಗಳು ನೆಲಕ್ಕಚ್ಚಿವೆ. ಡಂಬರಳ್ಳಿ ಗ್ರಾಮದ ಬಸವರೆಡ್ಡಿ ಕರಡ್ಡಿ, ಹನಮಂತ ರೆಡ್ಡಿ ಸೇರಿದಂತೆ ಅನೇಕ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಯಾಲಕ್ಕಿ ಬಾಳೆ ಬೆಳದಿದ್ದರು. ಬರಗಾಲದಲ್ಲಿ ಕೂಡಾ ದೂರದಿಂದ ನೀರನ್ನು ತಂದು ಮಕ್ಕಳಂತೆ ಬಾಳೆ ಗಿಡಗಳನ್ನು ಜೋಪಾನ ಮಾಡಿದ್ದರು. ಭೂಮಿ ತಾಯಿ ಕೂಡಾ ರೈತನ ಶ್ರಮಕ್ಕೆ ಪ್ರತಿಫಲ ನೀಡಿದ್ದಳು. ಉತ್ತಮ ಬಾಳೆ ಗೊನೆಗಳಾಗಿದ್ದವು. ಇನ್ನೊಂದು ಹದಿನೈದು ದಿನ ಕಳೆದದ್ದರೆ ಬಾಳೆ ಕಟಾವಿಗೆ ಬರ್ತಿತ್ತು. ಆದ್ರೆ ಎರಡು ದಿನದಿಂದ ಬೀಸಿದ ಬಿರುಗಾಳಿಗೆ ಬಾಳೆ ಗಿಡಗಳು ಸಂಪೂರ್ಣವಾಗಿ ನೆಲಕ್ಕಚ್ಚಿವೆ.
ಒಂದು ಎಕರೆಯಲ್ಲಿ ಬಾಳೆ ಬೆಳೆಯಲು ಸಾಮಾನ್ಯ ಎರಡರಿಂದ ಮೂರು ಲಕ್ಷ ರೂಪಾಯಿ ಖರ್ಚಾಗುತ್ತದೆ. ಒಂದು ಎಕರೆಯಲ್ಲಿ ಬಾಳೆ ಚನ್ನಾಗಿ ಬಂದರೆ, ಏಳರಿಂದ ಎಂಟು ಲಕ್ಷ ರೂಪಾಯಿವರಗೆ ಆದಾಯ ಬರುತ್ತದೆ. ಆದರೆ ಈ ಬಾರಿ ಆದಾಯ ಬರೋದು ದೂರದ ಮಾತಾಯ್ತು, ಮಾಡಿದ ಖರ್ಚು ಕೂಡಾ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಬಾಳೆ ಬೆಳದಿದ್ದ ರೈತರಿಗೆ ಇದೀಗ ಮಾಡಿದ ಸಾಲವನ್ನು ತೀರಿಸೋದು ಹೇಗೆ ಅನ್ನೋ ದೊಡ್ಡ ಚಿಂತೆ ಕಾಡಲು ಆರಂಭಿಸಿದೆ. ಇನ್ನು ಬಾಳೆ ಗಿಡಗಳು ನೆಲಕ್ಕಚ್ಚಿದ್ದರಿಂದ, ಗಿಡಗಳನ್ನು ಕಡಿದು, ಭೂಮಿಯನ್ನು ಸ್ವಚ್ಚಗೊಳಿಸಲು ಮತ್ತೆ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಹೈಟೆನ್ಷನ್ ವಿದ್ಯುತ್ ವೈಯರ್ ತಗುಲಿ ವ್ಯಕ್ತಿ ಸಾವು; ವಿಂಡ್ ಪವರ್ ಕಂಪನಿ ವಿರುದ್ದ ಆಕ್ರೋಶ
ಲಕ್ಷಾಂತರ ರೂಪಾಯಿ ಆಧಾಯದ ನಿರೀಕ್ಷೆ ಇಟ್ಟುಕೊಂಡು ಸಾಲ ಮಾಡಿ ಬಾಳೆ ಬೆಳದಿದ್ದ ರೈತರು ಬಿರುಗಾಳಿ ಹೊಡೆತಕ್ಕೆ ಕಂಗಾಲಾಗಿದ್ದಾರೆ. ಹೀಗಾಗಿ ಮಾಡಿದ ಸಾಲವನ್ನು ತೀರಿಸೋದು ಹೇಗೆ ಅನ್ನೋ ಚಿಂತೆ ರೈತರನ್ನು ಕಾಡುತ್ತಿದೆ. ಹೀಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಜಮೀನಿಗೆ ಬೇಟಿ ನೀಡಿ, ರೈತರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಕೆಲಸ ಮಾಡಬೇಕಿದೆ. ಆ ಮೂಲಕ ಸಂಕಷ್ಟದಲ್ಲಿರುವ ಅನ್ನದಾತರ ಕೈ ಹಿಡಿಯುವ ಕೆಲಸವನ್ನು ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ