ಕೊಪ್ಪಳ, ಆಗಸ್ಟ್ 11: ಕೊಪ್ಪಳ (Koppal) ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ (Tungabhadra Dam) 19 ನಂಬರ್ ಗೇಟ್‌ನ ಚೈನ್ ಲಿಂಕ್ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ತುಂಡಾಗಿದೆ. ಇದರಿಂದಾಗಿ 1 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಜಲಾಶಯದಿಂದ ನದಿಗೆ ಹರಿದು ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ರಾತ್ರೋರಾತ್ರಿ ಶಾಸಕ ರಾಘವೇಂದ್ರ ಹಿಟ್ನಾಳ್, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿವರಾಜ್ ತಂಗಡಗಿ, ಜಲಾಶಯದ ಕುರಿತು ಅಧಿಕಾರಿಗಳ ಬಳಿ ಮಾಹಿತಿ ಪಡೆದಿದ್ದೇನೆ. ಒಳಹರಿವು ಹೆಚ್ಚಿರುವುದರಿಂದ ಕೆಳಗಿಳಿದು ಕೆಲಸ ಮಾಡಲು ಆಗಲ್ಲ. ಸದ್ಯ ಒಂದು ಲಕ್ಷ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. 20 ಅಡಿಯಷ್ಟು ನೀರು ಖಾಲಿಯಾದರೆ ಮಾತ್ರ ಸಮಸ್ಯೆ ಬಗ್ಗೆ ಗೊತ್ತಾಗಲಿದೆ. ಹೀಗಾಗಿ ಡ್ಯಾಂನಲ್ಲಿರುವ ನೀರು ಖಾಲಿ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೇಳಿದರು.
2.35 ಲಕ್ಷ ಕ್ಯೂಸೆಕ್ ನೀರು ಬಿಟ್ಟರೂ ಯಾವುದೇ ತೊಂದರೆ ಆಗಲ್ಲ. 2.50 ಲಕ್ಷ ಕ್ಯೂಸೆಕ್ ದಾಟಿದರೆ ತೊಂದರೆ ಆಗುತ್ತದೆ. ಘಟನೆ ಬಗ್ಗೆ ಸಿಎಂ ಮತ್ತು ಡಿಸಿಎಂಗೆ ಮಾಹಿತಿ ನೀಡಲಾಗುತ್ತಿದೆ. ಬೆಂಗಳೂರು, ಹೈದರಾಬಾದ್, ಚೆನ್ನೈನಿಂದ ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸಲಿವೆ ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಸದ್ಯಕ್ಕೆ ಗೇಟ್‌ನ ರಿಪೇರಿ ಕಷ್ಟ ಎನ್ನಲಾಗಿದೆ. ಹೀಗಾಗಿ ಡ್ಯಾಂನಲ್ಲಿ ಒತ್ತಡ ಕಡಿಮೆ ಮಾಡಲು ಇತರ ಗೇಟ್‌ಗಳಿಂದ ಒಂದು ಲಕ್ಷ ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಜನರು ನದಿ ಕಡೆ ಹೋಗದಂತೆ ಡಂಗುರ ಸಾರಲಾಗುತ್ತಿದೆ ಎಂದು ಹೇಳಿದರು.
ಇದನ್ನು ಓದಿ: ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದ ನೀರು: ನಡುಗಡ್ಡೆಯಲ್ಲಿರುವವರ ಎದೆಬಡಿತ ಹೆಚ್ಚಳ
ಒಟ್ಟು 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 105 ಟಿಎಂಸಿ ನೀರು ಸಂಗ್ರಹವಾಗಿದೆ. ಸದ್ಯ ಡ್ಯಾಂಗೆ 30 ಸಾವಿರ ಕ್ಯೂಸೆಕ್ ನೀರು ಒಳಹರಿವು ಇದೆ. ಹೀಗಾಗಿ ಡ್ಯಾಂನ 32 ಗೇಟ್ ಪೈಕಿ 28 ಗೇಟ್ಗಳನ್ನು ತೆರಯಲಾಗಿದೆ.
ತುಂಗಭದ್ರಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಕಂಪ್ಲಿ ಪಟ್ಟಣದ ಜನರಲ್ಲಿ ಆತಂಕ ಶುರುವಾಗಿದೆ. ಏಕಾಏಕಿ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಕಂಪ್ಲಿ ಸೇತುವೆ ಬಳಿ ಪೊಲೀಸ್ ಬಂದೋಬಸ್ಥ ನಿಯೋಜಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:44 am, Sun, 11 August 24