ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ತುಂಗಭದ್ರಾ ನದಿ ಹರಿಯುವ ಪಾತ್ರದಲ್ಲಿ ಅನೇಕ ನಡುಗಡ್ಡೆಗಳಿವೆ. ಅನೇಕ ಐತಿಹಾಸಿಕ ಸ್ಥಳಗಳು ಇವೆ. ಐತಿಹಾಸಿಕ ಸ್ಥಳಗಳು ಜಲಾವೃತಗೊಂಡಿದ್ದರೆ, ನಡುಗೆಡ್ಡೆಯಲ್ಲಿರುವ ಜನರಿಗೆ ಇದೀಗ ಸಂಕಷ್ಟ ಆರಂಭವಾಗಿದೆ. ಹೌದು ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿಯಿರೋ ಐತಿಹಾಸಿಕ ಋಷ್ಯಮುಖ ಪರ್ವತದಲ್ಲಿ ಹರಿದಾಸ್ ಬಾಬಾ, ಆನಂದಗಿರಿ ಬಾಬಾ ಸೇರಿ ನಾಲ್ವರು ವಾಸವಾಗಿದ್ದಾರೆ. ಪರ್ವತದಲ್ಲಿರುವ ರಾಮ, ಸೀತೆ, ಆಂಜನೇಯ ದೇವರ ದೇವಸ್ಥಾನಗಳಿಗೆ ಪೂಜೆ ಸಲ್ಲಿಸುವ ಇವರೆಲ್ಲಾ ಪರ್ವತದಲ್ಲಿಯೇ ವಾಸವಿದ್ದಾರೆ. ಆದರೆ ಇದೀಗ ಇಡೀ ಪರ್ವತವನ್ನು ತುಂಗಭದ್ರಾ ನದಿ ನೀರು ಆವರಿಸಿಕೊಂಡಿದೆ. ಹೀಗಾಗಿ ನಡುಗಡ್ಡೆಯಲ್ಲಿರುವ ನಾಲ್ವರಿಗೆ ಆತಂಕ ಆರಂಭವಾಗಿದೆ. ನೀರಿನ ಪ್ರಮಾಣ ಇನ್ನು ಹೆಚ್ಚಾದ್ರೆ ರುಷ್ಯಮುಖ ಪರ್ವತಕ್ಕೆ ನೀರು ನುಗ್ಗುವ ಆತಂಕ ಎದುರಾಗಿದೆ. ಸದ್ಯ ತಮಗೆ ಯಾವುದೇ ಸಮಸ್ಯೆ ಇಲ್ಲ. ಎರಡು ತಿಂಗಳಿಗೆ ಆಗುವಷ್ಟು ನಮ್ಮಲ್ಲಿ ದವಸ ಧಾನ್ಯಗಳು ಇವೆ. ನಾವು ಇಲ್ಲಿಯೇ ಸುರಕ್ಷಿತವಾಗಿದ್ದೇವೆ ಅಂತ ನಡುಗಡ್ಡೆಯಲ್ಲಿರುವ ಬಾಬಾಗಳು ಹೇಳುತ್ತಿದ್ದಾರೆ. ಆದರೆ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಅವರು ಹೊರಗೆ ಬರೋದು ಕಷ್ಟವಾಗಲಿದೆ.