
ಕೊಪ್ಪಳ, ನವೆಂಬರ್ 17: ಕೊಪ್ಪಳ (Koppal) ಜಿಲ್ಲೆ ಯಲಬುರ್ಗಾ ತಾಲೂಕಿನ ಮದ್ಲೂರ ಗ್ರಾಮದ ಬಳಿ 39 ವರ್ಷದ ಮಹಿಳೆ ಮೇಲೆ ಭಾನುವಾರ ಸಂಜೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಹೊಸಪೇಟೆಯಿಂದ ಕುಷ್ಟಗಿಗೆ ಪರಿಚದವರ ಬಳಿ ಹಣ ತಗೆದುಕೊಂಡು ಹೋಗಲು ಮಹಿಳೆ ಬಂದಿದ್ದರು. ಆದರೆ ಅಲ್ಲಿಂದ ಆ ಮಹಿಳೆಯನ್ನು ಕರೆದುಕೊಂಡ ಹೋದ ನಾಲ್ವರು ಕಿರಾತಕರು, ಮತ್ತು ಬರಿಸುವ ಜ್ಯೂಸ್ ಕುಡಿಸಿ ಅತ್ಯಾಚಾರ ಎಸಗಿದ್ದಾರೆ. ಘಟನೆಯಲ್ಲಿ ಅಸ್ವಸ್ಥಗೊಂಡ ಮಹಿಳೆಯನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸರವಗೋಳ ಭೇಟಿ ನೀಡಿದ್ದಾರೆ. ತಡರಾತ್ರಿ ಮಹಿಳೆ ಕೊಟ್ಟ ದೂರಿನನ್ವಯ ಲಕ್ಷ್ಮಣ ಎಂಬಾತ ಸೇರಿ ನಾಲ್ವರ ವಿರುದ್ದ ದೂರು ದಾಖಲಾಗಿತ್ತು. ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ನಾಲ್ವರು ಕಾಮುಕರನ್ನು ಯಲಬುರ್ಗಾ ಪೊಲೀಸರು ಬಂಧಿಸಿದ್ದಾರೆ. ಪರಿಚಿತರೇ ಆಗಿದ್ದ ಲಕ್ಷ್ಮಣ ಸೇರಿ ನಾಲ್ವರ ವಿರುದ್ದ ಸಂತ್ರಸ್ತ ಮಹಿಳೆ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕುಷ್ಟಗಿ ಹಾಗೂ ಮದ್ಲೂರ ಸೀಮಾದ ಪಾಳು ಬಿದ್ದ ಮನೆಯಲ್ಲಿ ಯಾವುದೋ ತರಹದ ಜ್ಯೂಸ್ ಕುಡಿಸಿ ಅತ್ಯಾಚಾರ ಎಸಗಿದ್ದಾರೆಂದು ದೂರು ನೀಡಿದ್ದಾರೆ.
ದೂರು ದಾಖಲಾದ ಬಳಿಕ ಕೊಪ್ಪಳ ಎಸ್ಪಿ ಮೂರು ತಂಡಗಳನ್ನು ರಚನೆ ಮಾಡಿದ್ದರು. ಕೆಲವೇ ಗಂಟೆಗಳಲ್ಲಿ ಆರೋಪಿಗಳಾದ ಲಕ್ಷ್ಮಣ, ಬಸವರಾಜ್, ಶಿವಕುಮಾರ್ ಹಾಗೂ ಭೀಮಪ್ಪರನ್ನು ಪೊಲೀಸರು ಬಂದಿಸಿದ್ದಾರೆ. ಲಕ್ಷ್ಮಣ ಹಾಗೂ ಬಸವರಾಜ್ ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಗ್ರಾಮದವರು. ಭೀಮಪ್ಪ ಹಾಗೂ ಶಶಿಕುಮಾರ್ ಯಲಬುರ್ಗಾ ತಾಲೂಕಿನ ಹನುಮಾಪೂರ ಗ್ರಾಮದವರು ಎನ್ನಲಾಗಿದೆ.
ಗ್ಯಾಂಗ್ ರೇಪ್ ಸುತ್ತ ಹಲವು ಅನುಮಾನಗಳೂ ಹುಟ್ಟಿಕೊಂಡಿವೆ. ಮಹಿಳೆ ಹೊಸಪೇಟೆಯಿಂದ ಕುಷ್ಟಗಿಗೆ ಯಾಕೆ ಬಂದರು? ಅಲ್ಲಿಂದ ಯಲಬುರ್ಗಾ ತಾಲೂಕಿಗೆ ಕರೆತಂದಿದ್ದು ಯಾಕೆ ಎಂಬ ಅನುಮಾನ ಹುಟ್ಟಿಕೊಂಡಿದೆ. ಕೀಚಕರು ರೋಣ ತಾಲೂಕಿನಿಂದ ಕುಷ್ಟಗಿಗೆ ಬಂದಿದ್ದು ಯಾಕೆ ಎಂಬುದೂ ಯಕ್ಷ ಪ್ರಶ್ನೆಯಾಗಿದೆ. ಸಂತ್ರಸ್ತ ಮಹಿಳೆ ಹೋಮ್ ಗಾರ್ಡ್ ಆಗಿ ಕೆಲಸ ಮಾಡತಿದ್ದರು ಎನ್ನಲಾಗಿದೆ. ಸಂತ್ರಸ್ತ ಮಹಿಳೆಯ ಬೂಟು, ಮೈಮೇಲೆ ಇರೋ ಬಟ್ಟೆ ಹೋಮ್ ಗಾರ್ಡ್ ಎಂಬುದಕ್ಕೆ ಸಾಕ್ಷ್ಯ ನೀಡಿವೆ. ಹೀಗಾಗಿ ಹೋಮ್ ಗಾರ್ಡ್ ಆಗಿ ಕೆಲಸಕ್ಕೆ ಬಂದ ಮಹಿಳೆ ಮೇಲೆ ಕಿರಾತಕರು ಅತ್ಯಾಚಾರ ಮಾಡಿದ್ದಾರಾ ಎಂಬ ಅನುಮಾನವೂ ಇದೆ. ಆದರೆ, ಸಂತ್ರಸ್ತ ಮಹಿಳೆ ಹೋಮ್ ಗಾರ್ಡ್ ಅಲ್ಲ. ಹೋಮ್ ಗಾರ್ಡ್ ಕೆಲಸಕ್ಕೆ ಸೇರಲು ತಯಾರಿ ನಡೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಸಂತ್ರಸ್ತ ಮಹಿಳೆಯ ಪತಿಗೆ ಇದ್ಯಾವ ವಿಷಯವೂ ಗೊತ್ತೇ ಇಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಒಬ್ಬನನ್ನೇ ಮದುವೆಯಾಗಿದ್ದ ಶಿರಸಿಯ ಅಕ್ಕ-ತಂಗಿ! ಭೀಕರವಾಗಿ ಕೊಲೆಯಾದ ಎರಡನೇ ಹೆಂಡತಿ
ಒಟ್ಟಾರೆಯಾಗಿ, ಯಲಬುರ್ಗಾದಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ಹಲವು ಅನುಮಾನ ಹುಟ್ಟು ಹಾಕಿದೆ. ಸದ್ಯ ಸಂತ್ರಸ್ತ ಮಹಿಳೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.